
ಬೆಂಗಳೂರು(ಫೆ.12): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಕೋರ್ ತಂಡ ಖರೀದಿಸಲು ಆರ್‌ಸಿಬಿ ಆಸಕ್ತಿ ತೋರಲಿಲ್ಲ, ಕನಿಷ್ಠ ಮ್ಯಾಚ್ ಗೆಲ್ಲಿಸೋ ಆಟಗಾರರನ್ನೂ ಖರೀದಿಸಲಿಲ್ಲ. ಆರಂಭಿಕ ಹಂತದಲ್ಲಿ ದುಬಾರಿ ಮೊತ್ತ ಚೆಲ್ಲಿದ ಆರ್‌ಸಿಬಿ ಇದೀಗ ಕೈಕೈ ಹಿಸುಕಿಕೊಳ್ಳುತ್ತಿದೆ. ಇದೀಗ ಇಬ್ಬರು ಯುವ ಕ್ರಿಕೆಟಿಗರನ್ನು ಆರ್‌ಸಿಬಿ ತಂಡಕ್ಕೆ ಸೇರಿಸಿಕೊಂಡಿದೆ.
ಪಶ್ಚಿಮ ಬಂಗಾಳದ ಶೆಹಬಾಜ್ ಅಹಮ್ಮದ್ ಮತ್ತೆ ರಾಯಲ್ ಚಾಲೆಂಜರ್ಸ್ ತಂಡ ಸೇರಿಕೊಂಡಿದ್ದಾರೆ. 30 ಲಕ್ಷ ರೂಪಾಯಿ ಮೂಲ ಬೆಲೆಯ ಶೆಹಬಾಜ್ ಅಹಮ್ಮದ್‌ಗೆ 2.4 ಕೋಟಿ ರೂಪಾಯಿ ನೀಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿ ಮಾಡಿದೆ.
IPL Auction 2022 ಜೋಶ್ ಹೇಜಲ್‌ವುಡ್ ಖರೀದಿಸಿದ ಆರ್‌ಸಿಬಿ, 7.75 ಕೋಟಿ ರೂಗೆ ಸೋಲ್ಡ್!
2020ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಶೆಹಬಾಜ್ ಅಹಮ್ಮದ್ 13 ಪಂದ್ಯಗಳನ್ನಾಡಿದ್ದಾರೆ. 9 ವಿಕೆಟ್ ಕಬಳಿಸಿರುವ ಶಹಬಾಜ್ ಅಹಮ್ಮದ್ ಬ್ಯಾಟಿಂಗ್‌ನಲ್ಲಿ 60 ರನ್ ಸಿಡಿಸಿದ್ದಾರೆ.
ದಿನೇಶ್ ಕಾರ್ತಿಕ್‌ಗೆ ಬ್ಯಾಕ್ ಅಪ್ ವಿಕೆಟ್ ಕೀಪರ್ ಆಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅನೂಜ್ ರಾವತ್ ಖರೀದಿ ಮಾಡಿದೆ. 20 ಲಕ್ಷ ರೂಪಾಯಿ ಮೂಲ ಬೆಲೆಯ ಅನೂಜ್ ರಾವತ್‌ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 3.40 ಕೋಟಿ ರುಪಾಯಿ ನೀಡಿದೆ. ಉತ್ತರಖಂಡದ ಕ್ರಿಕೆಟಿಗ ಅನೂಜ್ ರಾವತ್ ಕಳೆದ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ಮೂಲಕ ಪದಾರ್ಪಣೆ ಮಾಡಿದ್ದಾರೆ.
IPL Auction 2022 ಆರ್‌ಸಿಬಿ ತಂಡಕ್ಕೆ ದಿನೇಶ್ ಕಾರ್ತಿಕ್, 5.50 ಕೋಟಿ ರೂಗೆ ಸೇಲ್!
ಕಳೆದ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಆಕಾಶ್ ದೀಪ್ ಖರೀದಿಸಿದೆ. 20 ಲಕ್ಷ ಮೂಲ ಬೆಲೆಯಲ್ಲಿ ಆರ್‌ಸಿಬಿ ಆಕಾಶ್ ದೀಪ್ ಖರೀದಿ ಮಾಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಖರೀದಿ:
ಫಾಫ್ ಡುಪ್ಲೆಸಿಸ್: 7 ಕೋಟಿ ರೂಪಾಯಿ
ಹರ್ಷಲ್ ಪಟೇಲ್ : 10.75 ಕೋಟಿ ರೂಪಾಯಿ
ವಾನಿಂದು ಹಸರಂಗ : 10.75 ಕೋಟಿ ರೂಪಾಯಿ
ದಿನೇಶ್ ಕಾರ್ತಿಕ್ : 5.50 ಕೋಟಿ ರೂಪಾಯಿ
ಜೋಶ್ ಹೆಜಲ್‌ವುಡ್ : 7.75 ಕೋಟಿ ರೂಪಾಯಿ
ಶೆಹಬಾಜ್ ಅಹಮ್ಮದ್ : 2.40 ಕೋಟಿ ರುಪಾಯಿ
ಆಕಾಶ್ ದೀಪ್ : 20 ಲಕ್ಷ ರೂಪಾಯಿ
ಅನೂಜ್ ರಾವತ್ :3.40 ಕೋಟಿ ರುಪಾಯಿ
ಚೆನ್ನೈ ಸೂಪರ್ ಕಿಂಗ್ಸ್ ಭಾಗವಾಗಿದ್ದ ಫಾಫ್ ಡುಪ್ಲೆಸಿಸ್ ಈ ಬಾರಿ ರಾಯಲ್ ಚಾಲೆಂಜರ್ಸ್ ಪರ ಕಣಕ್ಕಿಳಿಯಲಿದ್ದಾರೆ. ಎಬಿಡಿ ವಿದಾಯದ ಬಳಿಕ ಇದೀಗ ಮತ್ತೊರ್ವ ಸೌತ್ ಆಫ್ರಿಕಾದ ಅನುಭವಿ ಆಟಗಾರನ್ನು ಆರ್‌ಸಿಬಿ ಖರೀದಿಸಿದೆ. ಈ ಮೂಲಕ ಆರಂಭಿಕರ ಸ್ಲಾಟ್ ಮತ್ತಷ್ಟು ಗಟ್ಟಿಗೊಳಿಸಿದೆ. ಐಪಿಎಲ್ ಟೂರ್ನಿಯಲ್ಲಿ 100 ಪಂದ್ಯಗಳನ್ನಾಡಿರುವ ಫಾಫ್ ಡುಪ್ಲೆಸಿಸ್2,935 ರನ್ ಸಿಡಿಸಿದ್ದಾರೆ. 22 ಅರ್ಧಶತಕ ಸಿಡಿಸಿದ್ದಾರೆ. 96 ರನ್ ಡುಪ್ಲೆಸಿಸ್ ವೈಯುಕ್ತಿ ಗರಿಷ್ಠ ಮೊತ್ತವಾಗಿದೆ. 2021ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಟ್ರೋಫಿ ಗೆಲುವಿನಲ್ಲಿ ಫಾಫ್ ಡುಪ್ಲೆಸಿಸ್ ಪ್ರಮುಖ ಪಾತ್ರ ನಿರ್ವಹಿಸಿದ್ದರು. 16 ಪಂದ್ಯಗಳಿಂದ 633 ರನ್ ಸಿಡಿಸಿದ್ದರು. ಇದರಲ್ಲಿ 6 ಅರ್ಧಶತಕಗಳು ಸೇರಿವೆ. ಅತ್ಯುತ್ತಮ ಫಾರ್ಮ್‌ನಲ್ಲಿದ್ದ ಫಾಪ್ ಡುಪ್ಲೆಸಿಸ್ ಇದೀಗ ಆರ್‌ಸಿಬಿ ಪರ ಅಬ್ಬರಿಸಲು ರೆಡಿಯಾಗಿದ್ದಾರೆ. 2012ರಿಂದ ಐಪಿಎಲ್ ಟೂರ್ನಿಯಲ್ಲಿ ಸಕ್ರಿಯರಾಗಿರುವ ಫಾಫ್ ಡುಪ್ಲೆಸಿಸ್, 2021ರಲ್ಲಿ ಅತ್ಯುತ್ತಮ ಐಪಿಎಲ್ ಆವೃತ್ತಿಯನ್ನಾಗಿಸಿದ್ದಾರೆ.
ಟಿ20 ಮಾದರಿಯಲ್ಲಿ ನಂಬರ್ 1 ಸ್ಪಿನ್ನರ್ ಎನಿಸಿಕೊಂಡಿರುವ ವಾನಿಂದು ಹಸರಂಗ ಆಯ್ಕೆಗೆ ಅಪಸ್ವರ ಕೇಳಿಬಂದಿದೆ. 10.75 ಕೋಟಿ ರೂಪಾಯಿ ನೀಡಿ ವಾನಿಂದು ಖರೀದಿ ದುಬಾರಿಯಾಗಿದೆ. ಇದಕ್ಕಿಂತ ತಂಡದಿಂದ ಕೈಬಿಟ್ಟಿದ್ದ ಯಜುವೇಂದ್ರ ಚಹಾಲ್ ಖರೀದಿ ಉತ್ತಮವಾಗಿತ್ತು ಅನ್ನೋ ಆಭಿಪ್ರಾಯ ವ್ಯಕ್ತವಾಗಿದೆ. ಒಟ್ಟಾರೆ ಆರ್‌ಸಿಬಿ ಖರೀದಿ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಆರ್‌ಸಿಬಿ ಒಬ್ಬನೇ ಒಬ್ಬ ಕನ್ನಡಿಗ ಆಟಗಾರನ ಖರೀದಿಸಿಲ್ಲ ಅನ್ನೋ ಬೇಸರ ಒಂದೆಡೆಯಾದರೆ, ಖರೀದಿಸಿರುವ ಆಟಗಾರರ ಪೈಕಿ ಒಬ್ಬನೇ ಒಬ್ಬ ಮ್ಯಾಚ್ ವಿನ್ನರ್ ಇಲ್ಲ ಅನ್ನೋ ಬೇಸರ ಮತ್ತೊಂದೆಡೆಯಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.