IPL Auction 2022 : ಮೊದಲ ದಿನದ ಹರಾಜಿನ ಬಳಿಕ, RCB ಟೀಮ್ ಹೇಗೆ ಕಾಣ್ತಿದೆ?

By Suvarna News  |  First Published Feb 13, 2022, 12:08 PM IST

ಮೊದಲ ದಿನದ ಆರ್ ಸಿಬಿ ತಂಡದ ನೀರಸ ಹರಾಜು
ಬೌಲಿಂಗ್ ವಿಭಾಗದ ಬಗ್ಗೆ ಹೆಚ್ಚಿನ ನಿರೀಕ್ಷೆ
ಯಾವ ಸ್ಥಾನದಲ್ಲಿ ಯಾರು ಫಿಟ್ ಆಗ್ತಾರೆ


ಬೆಂಗಳೂರು (ಫೆ. 13): ಎಬಿಡಿ ವಿಲಿಯರ್ಸ್ (ABD) ನಿವೃತ್ತಿ, ಕಳೆದ ಕೆಲವು ವರ್ಷಗಳಲ್ಲಿ ಆರ್ ಸಿಬಿ ತಂಡದ ಪ್ರಮುಖ ಆಟಗಾರರಾಗಿದ್ದ ದೇವದತ್ ಪಡಿಕ್ಕಲ್ (Devdutt Padikkal), ಯಜುವೇಂದ್ರ ಚಾಹಲ್ (Yazuvendra Chahal), ವಾಷಿಂಗ್ಟನ್ ಸುಂದರ್ (Washington Sunder) ಅನ್ನು ಹರಾಜಿನಲ್ಲಿ ಬೇರೆ ತಂಡಕ್ಕೆ ಬಿಟ್ಟುಕೊಟ್ಟಿರುವ ಆರ್ ಸಿಬಿ (RCB) ಮುಂದಿನ ಐಪಿಎಲ್ (IPL) ಟೂರ್ನಿಗಳಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವ ಕುತೂಹಲ ಎಲ್ಲರಲ್ಲಿದೆ. ಹರಾಜಿನ ಮೊದಲ ದಿನ ಆರ್ ಸಿಬಿ ತಂಡದ ಸೆಲೆಕ್ಷನ್ ಬಗ್ಗೆ ಬಹುತೇಕ ಅಭಿಮಾನಿಗಳು ಅಸಮಾಧಾನ ಹೊಂದಿರುವುದಕ್ಕೆ ಕಾರಣ, ಸ್ಥಳೀಯ ಆಟಗಾರರಿಗೆ ತಂಡ ಮಣೆ ಹಾಕದೇ ಇರುವುದು. ಆದರೆ, ಟೀಮ್ ಮ್ಯಾನೇಜ್ ಮೆಂಟ್ ಮಾತ್ರ ಸ್ಪಷ್ಟ ಯೋಚನೆಯಲ್ಲಿ ತಂಡವನ್ನು ಆಯ್ಕೆ ಮಾಡುತ್ತಿರುವುದಾಗಿ ಹೇಳಿದೆ.

ಭಾನುವಾರ ಐಪಿಎಲ್ ಹರಾಜಿನ 2ನೇ ದಿನ. ಆರ್ ಸಿಬಿ ತಂಡ ತನ್ನ ಕೆಲವೊಂದು ಗ್ಯಾಪ್ ಗಳನ್ನು ತುಂಬಲು ಹೆಚ್ಚಾಗಿ ಗಮನ ನೀಡಲಿದೆ. ಇನ್ನೂ ಕನಿಷ್ಠ 8 ಪ್ಲೇಯರ್ ಗಳನ್ನು ಆರ್ ಸಿಬಿ ಆಯ್ಕೆ ಮಾಡಬೇಕಿದ್ದರೂ ಬಜೆಟ್ ಮಾತ್ರ ಬಹಳ ಕಡಿಮೆ ಇದೆ. ಈಗಾಗಲೇ 10 ಜನ ಪ್ಲೇಯರ್ ಗಾಗಿ 80.75 ಕೋಟಿ ಖರ್ಚು ಮಾಡಿರುವ ಆರ್ ಸಿಬಿ ತಂಡ ಇನ್ನು 8 ಜನ ಪ್ಲೇಯರ್ ಆಯ್ಕೆಗಾಗಿ 9.25 ಕೋಟಿ ರೂಪಾಯಿ ಹೊಂದಿದೆ. ಇದರಲ್ಲಿ ಯಾವೆಲ್ಲಾ ಪ್ಲೇಯರ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎನ್ನುವ ಕುತೂಹಲ ಎಲ್ಲರಲ್ಲಿದೆ.

IPL Auction 2022 Live: ಮೆಗಾ ಹರಾಜಿನ 2ನೇ ದಿನ, ಯಾರಿಗೆ ಸಿಹಿ, ಯಾರಿಗೆ ಕಹಿ?
ತಂಡದಲ್ಲಿ ತುಂಬಿರುವ ಜವಾಬ್ದಾರಿ: ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಗ್ಲೆನ್ ಮ್ಯಾಕ್ಸ್ ವೆಲ್ (Glenn Maxwell) ಅವರನ್ನು ರಿಟೇನ್ ಮಾಡಿಕೊಂಡಿದ್ದ ಆರ್ ಸಿಬಿ ಮೊದಲ ದಿನದ ಆರಂಭದಲ್ಲಿಯೇ ಮೂರು ವಿದೇಶಿ ಆಟಗಾರರನ್ನು ಸೆಳೆಯುವಲ್ಲಿ ಯಶ ಕಂಡಿತ್ತು. ಈ ಮೂರೂ ಪ್ಲೇಯರ್ ಗಳನ್ನು ಮೊದಲ ಅವಧಿಯಲ್ಲಿಯೇ ಆಯ್ಕೆ ಮಾಡಿಕೊಳ್ಳುವ ಮೂಲಕ ವಿದೇಶಿ ಪ್ಲೇಯರ್ ಗಳ ಕೋಟಾವನ್ನು ಭರ್ತಿ ಮಾಡಿತ್ತು. ಫಾಫ್ ಡು ಪ್ಲೆಸಿಸ್  ( Faf du Plessis) ಬಹುತೇಕವಾಗಿ ಇನ್ನಿಂಗ್ಸ್ ಆರಂಭಿಸುವುದು ಮಾತ್ರವಲ್ಲ, ತಂಡದ ಹೊಸ ನಾಯಕರಾಗಿಯೂ ನೇಮಕವಾಗುವ ಸಾಧ್ಯತೆ ಇದೆ. ವಿಶ್ವ ನಂ.1 ಸ್ಪಿನ್ನರ್ ಶ್ರೀಲಂಕಾದ ವಾನಿಂದು ಹಸರಂಗ (Wanindu Hasaranga) ತಂಡದ ಪ್ರಮುಖ ಮಣಿಕಟ್ಟಿನ ಸ್ಪಿನ್ನರ್ ಆಗಿರಲಿದ್ದು, ಮಧ್ಯಮ ಓವರ್ ಗಳ ದಾಳಿಯಲ್ಲಿ ಪ್ರಮುಖ ಪಾತ್ರ ನಿಭಾಯಿಸಲಿದ್ದಾರೆ. ಅಗ್ರ ವಿದೇಶಿ ಬೌಲರ್ ನ ಆಯ್ಕೆಯಲ್ಲಿ ಯಾವಾಗಲೂ ಎಡವಿರುವ ಆರ್ ಸಿಬಿ ಈ ಬಾರಿ ಫಿಟ್ ಬೌಲರ್ ಜೋಸ್ ಹ್ಯಾಸಲ್ ವುಡ್ ಅವರನ್ನು ಆಯ್ಕೆ ಮಾಡುವ ಮೂಲಕ ಗಮನಸೆಳೆದಿದೆ. ತಂಡದ ವೇಗದ ಬೌಲಿಂಗ್ ವಿಭಾಗವನ್ನು ಜೋಸ್ ಹ್ಯಾಸಲ್ ವುಡ್ (Josh Hazlewood)ಮುನ್ನಡೆಸಲಿದ್ದಾರೆ.

ಈ ಮೂವರನ್ನು ಖರೀದಿ ಮಾಡಲು ಆರ್ ಸಿಬಿ 25.5 ಕೋಟಿ ರೂಪಾಯಿ ವ್ಯಯ ಮಾಡಿದೆ. ಇದು ಆರ್ ಸಿಬಿಗೆ ಲಾಭವೋ? ನಷ್ಟವೋ ? ಎನ್ನುವುದು ಟೂರ್ನಿಯ ಬಳಿಕ ನಿರ್ಧಾರವಾಗಲಿದೆ. ಅನುಭವಿ ದಿನೇಶ್ ಕಾರ್ತಿಕ್ (Dinesh Karthik) ಅವರನ್ನು ಫಿನಿಶರ್ ರೋಲ್ (ವಿಕೆಟ್ ಕೀಪಿಂಗ್ ಇನ್ನೊಂದು ಆಯ್ಕೆ) ನಿಭಾಯಿಸಲಿ ಆಯ್ಕೆ ಮಾಡಿದ ಹಾಗೆ ಕಾಣುತ್ತಿದೆ. ಇನ್ನೊಂದೆಡೆ ತಂಡದಲ್ಲಿಯೇ ಇದ್ದ ವೇಗಿ ಹರ್ಷಲ್ ಪಟೇಲ್ ಅವರ ಖರೀದಿಗೆ 10.75 ಕೋಟಿ ರೂಪಾಯಿ ಖರ್ಚು ಮಾಡಿದ್ದು ಆರ್ ಸಿಬಿಯ ಬಜೆಟ್ ಗೆ ದೊಡ್ಡ ಹೊಡೆತ ನೀಡಿದೆ. ಮೇಲ್ನೋಟಕ್ಕೆ ಗಮನಿಸಿದರೆ, ಆರ್ ಸಿಬಿಯ ಬೌಲಿಂಗ್ ವಿಭಾಗ ಬಹುತೇಕ ಸದೃಢವಾಗಿ ಕಾಣುತ್ತಿದೆ.

IPL Auction 2022 : ಈ ಟೀಮ್ ಕಟ್ಕೊಂಡು IPL ಗೆಲ್ಲೋಕೆ ಆಗಲ್ಲ, ಕರ್ನಾಟಕ ಪ್ಲೇಯರ್ ಕಡೆಗಣಿಸಿದ RCB ವಿರುದ್ಧ ಫ್ಯಾನ್ಸ್ ಗರಂ
ತುಂಬಬೇಕಾಗಿರುವ ಜವಾಬ್ದಾರಿ: ಭಾನುವಾರದ ಹರಾಜಿನಲ್ಲಿ ಆರ್ ಸಿಬಿಯ ಆಯ್ಕೆ ಎಚ್ಚರಿಕೆಯಿಂದ ಇದ್ದಲ್ಲಿ, ಐಪಿಎಲ್ ಟೂರ್ನಿಯಲ್ಲಿ ಡಾರ್ಕ್ ಹಾರ್ಸ್ ಟೀಮ್ ಆಗುವುದು ಖಚಿತ. ಲಖನೌ ಸೂಪರ್ ಜೈಂಟ್ಸ್ ಬಳಿಕ ಐಪಿಎಲ್ ಹರಾಜಿನಲ್ಲಿ ಕನಿಷ್ಠ ಬಜೆಟ್ ಹೊಂದಿರುವ ತಂಡ ಆರ್ ಸಿಬಿ ಈಗ ಯುವ ದೇಶೀಯ ಬ್ಯಾಟ್ಸ್ ಮನ್ ಗಳ ಆಯ್ಕೆಯ ಬಗ್ಗೆ ಗಮನ ನೀಡಲಿದೆ. ಮಧ್ಯಮ ಕ್ರಮಾಂಕದಲ್ಲಿ ಆರ್ ಸಿಬಿ ತಂಡದಲ್ಲಿ ಒಬ್ಬ ಯುವ ದೇಶೀಯ ಬ್ಯಾಟ್ಸ್ ಮನ್ ನ ಅಗತ್ಯ ಎದ್ದು ಕಾಣುತ್ತಿದೆ. ಅದರೊಂದಿಗೆ ಶಾಬಾಜ್ ಅಹ್ಮದ್ ಅವರೊಂದಿಗೆ ಉತ್ತಮ ಪೈಪೋಟಿ ನೀಡುವ ಭಾರತೀಯ ಸ್ಪಿನ್ನರ್ ಕೂಡ ಅಗತ್ಯವಿದೆ. ಈ ನಿಟ್ಟಿನಲ್ಲಿ ತಂಡ ಗಮನ ನೀಡಿ ಪ್ಲೇಯರ್ ಗಳನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.

ಸಂಭಾವ್ಯ ಪ್ಲೇಯಿಂಗ್ ಇಲೆವೆನ್ : ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಅನುಜ್ ರಾವತ್/ದೇಶೀಯ ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್, ಗ್ಲೆನ್ ಮ್ಯಾಕ್ಸ್ ವೆಲ್, ಭಾರತೀಕ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್, ದಿನೇಶ್ ಕಾರ್ತಿಕ್ (ವಿ.ಕೀ), ವಾನಿಂದು ಹಸರಂಗ, ಶಾಬಾಜ್ ಅಹ್ಮದ್/ಭಾರತೀಯ ಆಫ್ ಸ್ಪಿನ್ನರ್, ಹರ್ಷಲ್ ಪಟೇಲ್, ಮೊಹಮದ್ ಸಿರಾಜ್, ಜೋಶ್ ಹ್ಯಾಸಲ್ ವುಡ್

Tap to resize

Latest Videos

click me!