
ಬೆಂಗಳೂರು(ನ.28): ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ರೋಹಿತ್ ಶರ್ಮಾ ಅವರ ಮರುನೇಮಕ ಅಧಿಕೃತವಾಗಿದೆ. ಕಳೆದ ಮೂರು ಐಪಿಎಲ್ ಸೀಸನ್ಗಳಲ್ಲಿ ತಂಡದ ನಿರಾಶಾದಾಯಕ ಪ್ರದರ್ಶನ ಮತ್ತು ಹಾರ್ದಿಕ್ ಪಾಂಡ್ಯ ನಾಯಕನಾಗಿ ಬಂದ ಬಳಿಕ ಡ್ರೆಸ್ಸಿಂಗ್ ರೂಮ್ನಲ್ಲಿ ಉಂಟಾದ ನಂಬಿಕೆಯ ಕೊರತೆ ರೋಹಿತ್ ಅವರನ್ನು ಮತ್ತೆ ನಾಯಕನನ್ನಾಗಿ ಆಯ್ಕೆ ಮಾಡಲು ಪ್ರಮುಖ ಕಾರಣಗಳಾಗಿವೆ ಎಂದು ವರದಿಯಾಗಿದೆ.
ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ನಿಂದ ಪಂಜಾಬ್ ಕಿಂಗ್ಸ್ಗೆ ತೆರಳುವ ನಿರ್ಧಾರ ಅಧಿಕೃತವಾಗುವ ಮೊದಲೇ, ರೋಹಿತ್ ಶರ್ಮಾ ಅವರಿಗೆ ಮತ್ತೆ ನಾಯಕತ್ವ ನೀಡಲು ಫ್ರಾಂಚೈಸಿ ತೀರ್ಮಾನಿಸಿತ್ತು ಎನ್ನಲಾಗಿದೆ. ಈ ನಿರ್ಧಾರವನ್ನು ಈ ವರ್ಷದ ಅಕ್ಟೋಬರ್ ಮೊದಲ ವಾರದಲ್ಲೇ ತೆಗೆದುಕೊಳ್ಳಲಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮುಂದಿನ ನಾಯಕನ ಆಯ್ಕೆ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಈ ವರ್ಷದ ಟಿ20 ವಿಶ್ವಕಪ್ ಗೆದ್ದ ಭಾರತ ತಂಡವನ್ನು ಮುನ್ನಡೆಸಿದ್ದ ಸೂರ್ಯಕುಮಾರ್ ಯಾದವ್ ಅವರ ಹೆಸರನ್ನು ಪರಿಗಣಿಸಲಿಲ್ಲ. ಭಾರತದ ಟಿ20 ತಂಡದ ಉಪನಾಯಕ ತಿಲಕ್ ವರ್ಮಾ ಅಥವಾ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನೂ ನಾಯಕತ್ವಕ್ಕೆ ಆಯ್ಕೆ ಮಾಡಲಿಲ್ಲ.
ಸೂರ್ಯಕುಮಾರ್ ಯಾದವ್ ಅವರನ್ನು ನಾಯಕತ್ವಕ್ಕೆ ಪರಿಗಣಿಸದಿರುವ ಕಾರಣ ಫ್ರಾಂಚೈಸಿಗೆ ಮಾತ್ರ ತಿಳಿದಿದೆ ಎಂದು ವರದಿ ಹೇಳುತ್ತದೆ. ತಿಲಕ್ ವರ್ಮಾ ಅವರನ್ನು ಇನ್ನೂ ನಾಯಕತ್ವದ ಜವಾಬ್ದಾರಿ ವಹಿಸಿಕೊಳ್ಳುವ ಹಂತಕ್ಕೆ ಬಂದಿಲ್ಲದ ಆಟಗಾರನಾಗಿ ನೋಡಲಾಗುತ್ತಿದೆ. ಅವರನ್ನು ಭವಿಷ್ಯದ ನಾಯಕನಾಗಿ ಬೆಳೆಸುವ ಹಂತದಲ್ಲಿದ್ದಾರೆ ಎನ್ನಲಾಗಿದೆ. ಆದರೆ ಜಸ್ಪ್ರೀತ್ ಬುಮ್ರಾ ವಿಚಾರದಲ್ಲಿ ಪ್ರಶ್ನೆ ಮತ್ತಷ್ಟು ಕುತೂಹಲ ಮೂಡಿಸುತ್ತದೆ. ಮುಂಬೈ ಇಂಡಿಯನ್ಸ್ ತಂಡದ ಅತ್ಯಂತ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿರುವ ಬುಮ್ರಾ ನಾಯಕತ್ವದ ಗುಂಪಿನಲ್ಲಿ ಸ್ಥಾನ ಪಡೆಯದಿರುವುದು ಗಮನ ಸೆಳೆದಿದೆ.
ಮುಂಬೈ ಇಂಡಿಯನ್ಸ್ ತಂಡದಲ್ಲಿ ಅಧಿಕೃತ ಉಪನಾಯಕನಿಲ್ಲ. ನಾಯಕ ಲಭ್ಯವಿಲ್ಲದ ಸಂದರ್ಭದಲ್ಲಿ ತಂಡವನ್ನು ಮುನ್ನಡೆಸಲು ಹಿರಿಯ ಆಟಗಾರನ ಅಗತ್ಯವಿದೆ. ಕಳೆದ ಸೀಸನ್ನಲ್ಲಿ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಬುಮ್ರಾ ತಲಾ ಕೆಲವು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು.
2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಜಸ್ಪ್ರೀತ್ ಬುಮ್ರಾ ಅವರನ್ನು ₹18 ಕೋಟಿ ನೀಡಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಉಳಿಸಿಕೊಳ್ಳಲಾಗಿತ್ತು. ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಮಾತ್ರ ಫ್ರಾಂಚೈಸಿಯಲ್ಲಿ ಮುಂದುವರಿಯಲು ತಮ್ಮ ಸಂಭಾವನೆಯಲ್ಲಿ ಕಡಿತ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಬುಮ್ರಾಗೆ ನಾಯಕತ್ವದ ಗುಂಪಿನಲ್ಲಿ ಸ್ಥಾನ ಸಿಗಬಹುದೆಂಬ ನಿರೀಕ್ಷೆ ಇತ್ತು. ಆದರೆ ಮುಂಬೈ ಇಂಡಿಯನ್ಸ್ ತಂಡವು ಅವರನ್ನು ನಾಯಕನನ್ನಾಗಿ ಮಾಡುವ ಬದಲು, ರೋಹಿತ್ ಶರ್ಮಾ ಅವರ ಉಪನಾಯಕನಾಗಿ ಜವಾಬ್ದಾರಿ ವಹಿಸಿಕೊಳ್ಳುವಂತೆ ಕೇಳಿಕೊಂಡಿತ್ತು.
ರೋಹಿತ್ ಅವರನ್ನು ನಾಯಕನಾಗಿ ಆಯ್ಕೆ ಮಾಡುವ ನಿರ್ಧಾರ ಈಗಾಗಲೇ ಆಗಿದ್ದರಿಂದ, ಫ್ರಾಂಚೈಸಿಯ ಉನ್ನತ ಆಡಳಿತ ಮಂಡಳಿ ಅಕ್ಟೋಬರ್ ಮೊದಲ ವಾರದಲ್ಲಿ ಬುಮ್ರಾ ಅವರನ್ನು ಸಂಪರ್ಕಿಸಿ ಉಪನಾಯಕನ ಆಫರ್ ನೀಡಿತ್ತು ಎನ್ನಲಾಗಿದೆ. ಆದರೆ ಬುಮ್ರಾ ಈ ಆಫರ್ ಅನ್ನು ವಿನಯಪೂರ್ವಕವಾಗಿ ನಿರಾಕರಿಸಿದ್ದಾರೆ. ಅದಕ್ಕೆ ಅವರು ನೀಡಿದ ಕಾರಣಗಳು ಏನು ಎಂಬುದು ಸ್ಪಷ್ಟವಾಗಿಲ್ಲ.
2013ರಲ್ಲಿ ಕೇವಲ 19 ವರ್ಷದವರಾಗಿದ್ದಾಗ ಬುಮ್ರಾ ಮುಂಬೈ ಇಂಡಿಯನ್ಸ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಅವರ ವಿಭಿನ್ನ ಬೌಲಿಂಗ್ ಆಕ್ಷನ್ ಆರಂಭದಲ್ಲೇ ಗಮನ ಸೆಳೆದಿತ್ತು. ಇದುವರೆಗೆ ಆಡಿರುವ 14 ಐಪಿಎಲ್ ಸೀಸನ್ಗಳಲ್ಲಿ ಬುಮ್ರಾ 187 ವಿಕೆಟ್ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡದ ಅತ್ಯಂತ ಮಹತ್ವದ ಆಟಗಾರರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.
ರೋಹಿತ್ ಶರ್ಮಾ ಅವರ ಆಟಗಾರರನ್ನು ನಿರ್ವಹಿಸುವ ಕೌಶಲ್ಯ ಮತ್ತು ನಾಯಕತ್ವದ ಗುಣಗಳು ಈಗಾಗಲೇ ಗುರುತಿಸಲ್ಪಟ್ಟಿವೆ. ಹೀಗಾಗಿ ಅವರು ಕನಿಷ್ಠ ಎರಡು ವರ್ಷಗಳ ಕಾಲ ಅಥವಾ ಅದಕ್ಕಿಂತಲೂ ಹೆಚ್ಚು ಸಮಯ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.
ಇನ್ನೊಂದೆಡೆ, ಬುಮ್ರಾ ಡಿಸೆಂಬರ್ ಆರಂಭದಲ್ಲಿ 32ನೇ ವಯಸ್ಸಿಗೆ ಕಾಲಿಡಲಿದ್ದಾರೆ. ಮುಂಬೈ ಇಂಡಿಯನ್ಸ್ ತಂಡವನ್ನು ಪೂರ್ಣ ಪ್ರಮಾಣದಲ್ಲಿ ಮುನ್ನಡೆಸಲು ಇದು ಅವರ ಅತ್ಯುತ್ತಮ ಅವಕಾಶವಾಗಿರಬಹುದಿತ್ತು. ಬಹುಶಃ ಕೊನೆಯ ಅವಕಾಶವೂ ಆಗಿರಬಹುದು ಎಂಬ ಅಭಿಪ್ರಾಯವೂ ವರದಿಯಲ್ಲಿ ವ್ಯಕ್ತವಾಗಿದೆ. ಫ್ರಾಂಚೈಸಿಯ ಉನ್ನತ ಆಡಳಿತ ಮಂಡಳಿ ನಾಯಕತ್ವದ ಗುಂಪಿನಲ್ಲಿ ಬುಮ್ರಾಗೆ ಸ್ಥಾನ ನೀಡದೆ ಇರುವುದರಿಂದ, ಮುಂದಿನ 2028ರ ಐಪಿಎಲ್ ಸೀಸನ್ಗೂ ಮುನ್ನ ನಡೆಯಲಿರುವ ಮೆಗಾ ಹರಾಜಿಗೂ ಮುನ್ನ ಬೇರೆ ತಂಡ ಸೇರುತ್ತಾರೋ ಅಥವಾ ಮುಂಬಥ ತಂಡದಲ್ಲೇ ಮುಂದುವರೆಯುತ್ತಾರೋ ಕಾದು ನೋಡಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.