
ಮುಂಬೈ(ಅ.30): ಮುಂಬರುವ 2027ರ ಐಪಿಎಲ್ ಟೂರ್ನಿಯಲ್ಲಿ ಶತಾಯಗತಾಯ ಕಪ್ ಗೆಲ್ಲಲೇಬೇಕು ಎಂದು ಪಣ ತೊಟ್ಟಿರುವ ಮುಂಬೈ ಇಂಡಿಯನ್ಸ್ ತಂಡವು ತನ್ನ ಕೋಚಿಂಗ್ ಸ್ಟಾಫ್ ವಿಚಾರದಲ್ಲಿ ಮತ್ತೊಮ್ಮೆ ಮೇಜರ್ ಸರ್ಜರಿ ಮಾಡಿದೆ. ಈ ಹಿಂದೆ ಕೋಚ್ ಆಗಿದ್ದ ಮಹೇಲಾ ಜಯವರ್ಧನೆ ಅವರು ತಮ್ಮ ಹೆಡ್ ಕೋಚ್ ಸ್ಥಾನದಿಂದ ಕೆಳಗಿಳಿದಿದ್ದರು. ಇದೀಗ ಸಹಾಯಕ ಕೋಚ್ಗಳು ತಮ್ಮ ಸ್ಥಾನವನ್ನು ತೆರವು ಮಾಡಿದ್ದಾರೆ. ಭಾರತದ ಮಾಜಿ ಆರಂಭಿಕ ಬ್ಯಾಟರ್ ರಾಬಿನ್ ಉತ್ತಪ್ಪ ಅವರನ್ನು ತಂಡದ ನೂತನ ಬ್ಯಾಟಿಂಗ್ ಕೋಚ್ ಆಗಿ ನೇಮಕ ಮಾಡಿರುವುದಾಗಿ ಫ್ರಾಂಚೈಸಿ ಶುಕ್ರವಾರ ಘೋಷಿಸಿದೆ.
ಈ ಹಿಂದೆ ತಂಡದ ಬ್ಯಾಟಿಂಗ್ ಕೋಚ್ ಆಗಿದ್ದ ಕೀರನ್ ಪೊಲಾರ್ಡ್, ಇದೀಗ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಶ್ರೀಲಂಕಾದ ಮಾಜಿ ಆಟಗಾರ ಮಹೇಲಾ ಜಯವರ್ಧನೆ ಅವರ ನಿರ್ಗಮನದ ಬಳಿಕ ಪೊಲಾರ್ಡ್ಗೆ ಈ ಜವಾಬ್ದಾರಿ ನೀಡಲಾಗಿದೆ. ಐಪಿಎಲ್ 2026ರಲ್ಲಿ ಮುಂಬೈ ಇಂಡಿಯನ್ಸ್ ತಂಡವು 14 ಪಂದ್ಯಗಳಲ್ಲಿ ಕೇವಲ ನಾಲ್ಕು ಗೆಲುವು ದಾಖಲಿಸಿ, ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನಕ್ಕೆ ಕುಸಿದಿತ್ತು. ಈ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ತಂಡದ ಆಡಳಿತ ಮಂಡಳಿ ಕೋಚಿಂಗ್ ವಿಭಾಗದಲ್ಲಿ ಮಹತ್ವದ ಬದಲಾವಣೆಗಳಿಗೆ ಮುಂದಾಗಿದೆ. ಅದರ ಭಾಗವಾಗಿ ಪೊಲಾರ್ಡ್ ಅವರಿಂದ ಬ್ಯಾಟಿಂಗ್ ಕೋಚ್ ಜವಾಬ್ದಾರಿಯನ್ನು ಉತ್ತಪ್ಪ ವಹಿಸಿಕೊಳ್ಳಲಿದ್ದಾರೆ.
ರಾಬಿನ್ ಉತ್ತಪ್ಪ ಅವರನ್ನು ಸ್ವಾಗತಿಸಿರುವ ಮುಂಬೈ ಇಂಡಿಯನ್ಸ್, ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದೆ. "ನಮ್ಮ ಮೊದಲ ಋತುವಿನ ಭಾಗವಾಗಿದ್ದ ಆಟಗಾರ, ಅಪಾರ ಅನುಭವದೊಂದಿಗೆ ಮತ್ತೆ ತಂಡಕ್ಕೆ ಮರಳಿದ್ದಾರೆ! ರಾಬಿನ್ ಆಟದ ಬಗ್ಗೆ ಆಳವಾದ ತಿಳುವಳಿಕೆ ಹೊಂದಿದ್ದಾರೆ. ಉತ್ತಮ ಸಂವಹನ ಕೌಶಲ್ಯ ಮತ್ತು ಯುವ ಆಟಗಾರರಿಗೆ ಮಾರ್ಗದರ್ಶನ ನೀಡುವ ಸ್ಪಷ್ಟತೆ ಅವರಲ್ಲಿದೆ. ಪಲ್ಟನ್ಗೆ ಮರಳಿ ಸ್ವಾಗತ, ರಾಬಿನ್! ನಮ್ಮ ಹೊಸ ಬ್ಯಾಟಿಂಗ್ ಕೋಚ್" ಎಂದು ಫ್ರಾಂಚೈಸಿ ಬರೆದುಕೊಂಡಿದೆ.
ಹೊಸ ಮುಖ್ಯ ಕೋಚ್ ಕೀರನ್ ಪೊಲಾರ್ಡ್ ನೇತೃತ್ವದಲ್ಲಿ ಮುಂಬೈ ಇಂಡಿಯನ್ಸ್ ತನ್ನ ಕೋಚಿಂಗ್ ತಂಡಕ್ಕೆ ಹಲವು ಪ್ರಮುಖರನ್ನು ನೇಮಿಸಿದೆ.
ಬ್ಯಾಟಿಂಗ್ ಕೋಚ್: ರಾಬಿನ್ ಉತ್ತಪ್ಪ
ಬೌಲಿಂಗ್ ಕೋಚ್: ಮಿಚೆಲ್ ಮೆಕ್ಲೆನಗನ್
ಫೀಲ್ಡಿಂಗ್ ಕೋಚ್: ಟಿ. ದಿಲೀಪ್
ಡೆವಲಪ್ಮೆಂಟ್ ಬೌಲಿಂಗ್ ಕೋಚ್: ಧವಳ್ ಕುಲಕರ್ಣಿ
ಮುಖ್ಯ ಕೋಚ್: ಕೀರನ್ ಪೊಲಾರ್ಡ್
ಈ ನೇಮಕಾತಿಗಳಿಗೂ ಮುನ್ನ ಗುರುವಾರ ತಂಡದ ಬೌಲಿಂಗ್ ಕೋಚ್ಗಳಾಗಿದ್ದ ಲಸಿತ್ ಮಾಲಿಂಗ ಮತ್ತು ಪರಾಸ್ ಮಾಂಬ್ರೆ ಹಾಗೂ ಫೀಲ್ಡಿಂಗ್ ಕೋಚ್ ಕಾರ್ಲ್ ಹಾಪ್ಕಿನ್ಸ್ ಪುರುಷರ ತಂಡದ ಕೋಚಿಂಗ್ ವಿಭಾಗದಿಂದ ನಿರ್ಗಮಿಸಲಿದ್ದಾರೆ ಎಂದು ಫ್ರಾಂಚೈಸಿ ಪ್ರಕಟಿಸಿತ್ತು. ಮುಂಬೈ ಇಂಡಿಯನ್ಸ್ ತಂಡದ ಹಳೆಯ ಆಟಗಾರರು ಮತ್ತು ಅಂತಾರಾಷ್ಟ್ರೀಯ ಮಟ್ಟದ ಕೋಚಿಂಗ್ ಅನುಭವ ಹೊಂದಿರುವವರನ್ನು ಒಳಗೊಂಡ ಹೊಸ ತಂಡವನ್ನು ರೂಪಿಸಲಾಗಿದೆ. ಮುಂಬರುವ ಐಪಿಎಲ್ ಋತುವಿಗೆ ಬಲಿಷ್ಠ ಸಹಾಯಕ ಸಿಬ್ಬಂದಿಗಳನ್ನು ಸಿದ್ಧಪಡಿಸುವುದು ಫ್ರಾಂಚೈಸಿಯ ಉದ್ದೇಶವಾಗಿದೆ.
2007ರಲ್ಲಿ ನಡೆದ ಚೊಚ್ಚಲ ಐಸಿಸಿ ಪುರುಷರ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯರಾಗಿದ್ದ ರಾಬಿನ್ ಉತ್ತಪ್ಪ, ಇದೀಗ ತಾವು ಆಡಿದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ ಕೋಚ್ ಆಗಿ ಮರಳಿದ್ದಾರೆ. 2008ರಲ್ಲಿ ನಡೆದ ಐಪಿಎಲ್ನ ಮೊದಲ ಆವೃತ್ತಿಯಲ್ಲಿ ಉತ್ತಪ್ಪ ಮುಂಬೈ ತಂಡದ ಪರ ಆಡಿದ್ದರು. ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಆರು ಫ್ರಾಂಚೈಸಿಗಳನ್ನು ಪ್ರತಿನಿಧಿಸಿರುವ ಅವರು, ಒಟ್ಟು 177 ಪಂದ್ಯಗಳಲ್ಲಿ 4,411 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 130.50 ಆಗಿದ್ದು, 24 ಅರ್ಧಶತಕಗಳನ್ನು ಸಿಡಿಸಿದ್ದಾರೆ.
2014ರ ಐಪಿಎಲ್ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಪರ 660 ರನ್ ಗಳಿಸಿದ್ದ ಉತ್ತಪ್ಪ ಆ ಋತುವಿನ ಆರೆಂಜ್ ಕ್ಯಾಪ್ ಗೆದ್ದಿದ್ದರು. ಆ ವರ್ಷ ಕೆಕೆಆರ್ ಪ್ರಶಸ್ತಿ ಗೆಲ್ಲುವಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದರು. ಇದಲ್ಲದೆ, 2021ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಐಪಿಎಲ್ ಪ್ರಶಸ್ತಿ ಗೆದ್ದಿದ್ದರು. 2022ರ ಸೆಪ್ಟೆಂಬರ್ನಲ್ಲಿ ಅವರು ಐಪಿಎಲ್ಗೆ ನಿವೃತ್ತಿ ಘೋಷಿಸಿದ್ದರು.
ನ್ಯೂಜಿಲೆಂಡ್ನ ಮಾಜಿ ವೇಗದ ಬೌಲರ್ ಮಿಚೆಲ್ ಮೆಕ್ಲೆನಗನ್ ಮತ್ತೆ ಮುಂಬೈ ಇಂಡಿಯನ್ಸ್ ತಂಡದೊಂದಿಗೆ ಕೈಜೋಡಿಸಿದ್ದಾರೆ. 2015ರಿಂದ 2020ರವರೆಗೆ ಅವರು ಮುಂಬೈ ತಂಡದ ಪರ ಆಡಿದ್ದರು. ಈ ಅವಧಿಯಲ್ಲಿ ಮುಂಬೈ ಇಂಡಿಯನ್ಸ್ 2015, 2017, 2019 ಮತ್ತು 2020ರಲ್ಲಿ ಐಪಿಎಲ್ ಪ್ರಶಸ್ತಿ ಗೆದ್ದಾಗ ಮೆಕ್ಲೆನಗನ್ ತಂಡದ ಭಾಗವಾಗಿದ್ದರು. ಇದೀಗ ಬೌಲಿಂಗ್ ಕೋಚ್ ಆಗಿ ತಂಡದ ಬೌಲಿಂಗ್ ವಿಭಾಗದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ಭಾರತ ಪುರುಷರ ಕ್ರಿಕೆಟ್ ತಂಡದ ಕೋಚಿಂಗ್ ವಿಭಾಗದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿರುವ ಟಿ. ದಿಲೀಪ್ ಈಗ ಮುಂಬೈ ಇಂಡಿಯನ್ಸ್ ತಂಡದ ಫೀಲ್ಡಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ. ಭಾರತ ತಂಡವು 2024 ಮತ್ತು 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಹಾಗೂ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಾಗ ದಿಲೀಪ್ ಕೋಚಿಂಗ್ ತಂಡದ ಭಾಗವಾಗಿದ್ದರು. ಅವರ ಅನುಭವವು ಮುಂಬೈ ತಂಡದ ಫೀಲ್ಡಿಂಗ್ ಗುಣಮಟ್ಟ ಮತ್ತು ಪಂದ್ಯಗಳ ಸಿದ್ಧತೆಯನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ.
ಮುಂಬೈ ಇಂಡಿಯನ್ಸ್ ಪರ 2013 ಮತ್ತು 2020ರಲ್ಲಿ ಐಪಿಎಲ್ ಪ್ರಶಸ್ತಿ ಗೆದ್ದಿರುವ ಧವಳ್ ಕುಲಕರ್ಣಿ ಮತ್ತೆ ತಂಡಕ್ಕೆ ಮರಳಿದ್ದಾರೆ. ಅವರು 2008ರಿಂದ 2013ರವರೆಗೆ ಹಾಗೂ 2020-21ರಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸಿದ್ದರು. ಡೆವಲಪ್ಮೆಂಟ್ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿರುವ ಧವಳ್ ಕುಲಕರ್ಣಿ, ಯುವ ಭಾರತೀಯ ವೇಗದ ಬೌಲರ್ಗಳನ್ನು ಬೆಳೆಸುವ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ವರ್ಷಪೂರ್ತಿ ಫ್ರಾಂಚೈಸಿಯ ಪ್ರತಿಭಾನ್ವಿತ ಬೌಲರ್ಗಳ ಅಭಿವೃದ್ಧಿ ಕಾರ್ಯಕ್ರಮಕ್ಕೆ ಅವರು ನೆರವಾಗಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.