IPL 2026: ಪಿಚ್‌, ಫ್ಲಡ್‌ಲೈಟ್‌ ವಿಚಾರವಾಗಿ ಬಿಗ್‌ ಚೇಂಜ್‌ ಮಾಡಿದ ಬಿಸಿಸಿಐ, ಇನ್ನು ಹೀಗೆ ಮಾಡಲು ಸಾಧ್ಯವಿಲ್ಲ

Published : Mar 12, 2026, 08:47 PM IST
MS Dhoni - CSK IPL 2026

ಸಾರಾಂಶ

ಐಪಿಎಲ್ 2026 ಆರಂಭಕ್ಕೂ ಮುನ್ನ, ಬಿಸಿಸಿಐ ತಂಡಗಳ ತರಬೇತಿಗಾಗಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ನಿಯಮದ ಪ್ರಕಾರ, ಒಂದು ತಂಡ ಬಳಸಿದ ಅಭ್ಯಾಸದ ಪಿಚ್ ಅನ್ನು ಮತ್ತೊಂದು ತಂಡ ಬಳಸುವಂತಿಲ್ಲ ಮತ್ತು ಮುಖ್ಯ ಮೈದಾನದಲ್ಲಿ ಅಭ್ಯಾಸ ಪಂದ್ಯಗಳನ್ನು ಆಡುವುದನ್ನು ನಿಷೇಧಿಸಲಾಗಿದೆ. 

ಮುಂಬೈ (ಮಾ.12): ಬಹುನಿರೀಕ್ಷಿತ ಐಪಿಎಲ್ 2026ರ ಮಹಾಸಮರಕ್ಕೆ ದಿನಗಣನೆ ಆರಂಭವಾಗಿದೆ. ಮಾರ್ಚ್ 28ರಿಂದ ಕ್ರಿಕೆಟ್ ಹಬ್ಬಕ್ಕೆ ಅದ್ಧೂರಿ ಚಾಲನೆ ಸಿಗಲಿದೆ. ಈಗಾಗಲೇ ಮೊದಲ ಹಂತದ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಹತ್ತು ತಂಡಗಳು ಕಣಕ್ಕಿಳಿಯಲು ಸಜ್ಜಾಗಿವೆ. ಆದರೆ, ಟೂರ್ನಿ ಆರಂಭಕ್ಕೂ ಮುನ್ನವೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ತಂಡಗಳ ತರಬೇತಿ ಮತ್ತು ಪಿಚ್ ಬಳಕೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ.

ಬಿಸಿಸಿಐ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಯ ಪ್ರಕಾರ, ಅಭ್ಯಾಸದ ಅವಧಿಯಲ್ಲಿ ಒಂದು ತಂಡವು ಬಳಸಿದ ಪಿಚ್ ಅನ್ನು ಮತ್ತೊಂದು ತಂಡ ಬಳಸುವಂತಿಲ್ಲ. ಅಂದರೆ, ಒಂದು ತಂಡವು ಒಂದು ಪಿಚ್‌ನಲ್ಲಿ ತರಬೇತಿ ಪಡೆದರೆ, ನಂತರ ಬರುವ ಅಥವಾ ಅದೇ ಸಮಯದಲ್ಲಿ ಅಭ್ಯಾಸ ಮಾಡುವ ಇನ್ನೊಂದು ತಂಡಕ್ಕೆ ಪ್ರತ್ಯೇಕವಾದ ಹೊಸ ಪಿಚ್ ನೀಡಬೇಕು. ಈ ನಿಯಮವು 'ಥ್ರೋ ಡೌನ್' ಅಭ್ಯಾಸಕ್ಕೂ ಅನ್ವಯಿಸುತ್ತದೆ. ಒಂದು ವೇಳೆ ಒಂದು ತಂಡವು ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಅಭ್ಯಾಸ ಮುಗಿಸಿದರೂ ಸಹ, ಆ ಪಿಚ್ ಅನ್ನು ಮುಂದಿನ ತಂಡಕ್ಕೆ ಬಳಸಲು ಅವಕಾಶವಿರುವುದಿಲ್ಲ.

ಮುಖ್ಯ ಮೈದಾನದಲ್ಲಿ ಅಭ್ಯಾಸ ಪಂದ್ಯಗಳಿಗೆ ನಿಷೇಧ

ಹೊಸ ಸೀಸನ್‌ಗಾಗಿ ಕ್ರೀಡಾಂಗಣದ ಮುಖ್ಯ ಪಿಚ್‌ಗಳನ್ನು ಸಿದ್ಧಪಡಿಸುವ ಕೆಲಸ ನಡೆಯುತ್ತಿರುವುದರಿಂದ, ಯಾವುದೇ ತಂಡವು ಮುಖ್ಯ ಪಿಚ್‌ನಲ್ಲಿ ಅಭ್ಯಾಸ ಪಂದ್ಯಗಳನ್ನು ಆಡುವಂತಿಲ್ಲ. ಫ್ರಾಂಚೈಸಿಗಳು ಅಭ್ಯಾಸ ಪಂದ್ಯಗಳನ್ನು ಆಡಲು ಬಯಸಿದರೆ, ಆಯಾ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಬಳಿ ಪರ್ಯಾಯ ಮೈದಾನಗಳನ್ನು ಕೋರಬಹುದು. ಅಲ್ಲದೆ, ಫ್ಲಡ್‌ಲೈಟ್‌ಗಳ ಅಡಿಯಲ್ಲಿ ನಡೆಸುವ ಅಭ್ಯಾಸ ಪಂದ್ಯಗಳ ಅವಧಿ 3.5 ಗಂಟೆಗಳಿಗಿಂತ ಹೆಚ್ಚಿರಬಾರದು ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

ತರಬೇತಿ ಶಿಬಿರ ಮತ್ತು ಸೌಲಭ್ಯಗಳು

ಪ್ರತಿ ತಂಡಕ್ಕೂ ಗರಿಷ್ಠ ಎರಡು ಅಭ್ಯಾಸ ಪಂದ್ಯಗಳನ್ನು ಆಡಲು ಮಾತ್ರ ಅನುಮತಿ ನೀಡಲಾಗಿದ್ದು, ಇದಕ್ಕಾಗಿ ಫ್ರಾಂಚೈಸಿಗಳು ಬಿಸಿಸಿಐನಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಎದುರಾಳಿ ತಂಡಗಳ ಅಭ್ಯಾಸದ ವೇಳೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಜವಾಬ್ದಾರಿಯನ್ನು ಆಯಾ 'ಹೋಮ್ ಫ್ರಾಂಚೈಸಿ'ಗಳಿಗೆ ನೀಡಲಾಗಿದೆ. ಒಂದು ವೇಳೆ ಅಭ್ಯಾಸದ ವೇಳೆ ತಂಡಗಳ ನಡುವೆ ಪಿಚ್ ಅಥವಾ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಯಾವುದೇ ವಿವಾದ ಉಂಟಾದರೆ ಬಿಸಿಸಿಐ ನೇರವಾಗಿ ಮಧ್ಯಪ್ರವೇಶಿಸಿ ಕ್ರಮ ಕೈಗೊಳ್ಳಲಿದೆ.

ಮಾರ್ಚ್ 28ರಿಂದ ಏಪ್ರಿಲ್ 12ರವರೆಗೆ ಮೊದಲ ಹಂತದ 20 ಪಂದ್ಯಗಳು ನಡೆಯಲಿದ್ದು, ಕೆಲ ರಾಜ್ಯಗಳ ಚುನಾವಣೆಯ ದಿನಾಂಕಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ವೇಳಾಪಟ್ಟಿಯನ್ನು ಪ್ರಕಟಿಸಲು ಬಿಸಿಸಿಐ ನಿರ್ಧರಿಸಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಎಂಜಿನಿಯರಿಂಗ್ ಬಿಟ್ಟು ಮೈಕ್ ಹಿಡಿದ ಸಂಜನಾ: ಈಗ ಪ್ರತಿ ಶೋಗೆ ₹40 ಲಕ್ಷ ಚಾರ್ಜ್‌!
ಸಂಜು ಸ್ಯಾಮ್ಸನ್ ಅಲ್ಲ, ಈತನಿಗೆ ಸರಣಿಶ್ರೇಷ್ಠ ಪ್ರಶಸ್ತಿ ಸಿಗಬೇಕಿತ್ತು: ಎಬಿ ಡಿವಿಲಿಯರ್ಸ್ ಹೀಗಂದಿದ್ದೇಕೆ?