ಚಿನ್ನಸ್ವಾಮಿ ಸ್ಟೇಡಿಯಂನಲ್ಲಿಂದು ಅಪರೂಪದ ದಾಖಲೆ ಬರೆಯಲು ವಿರಾಟ್ ಕೊಹ್ಲಿ ರೆಡಿ

RCB ಮತ್ತು GT ನಡುವಿನ ಪಂದ್ಯದಲ್ಲಿ ಕೊಹ್ಲಿ 24 ರನ್ ಗಳಿಸಿದರೆ ಟಿ20 ಕ್ರಿಕೆಟ್‌ನಲ್ಲಿ 13,000 ರನ್ ಗಳಿಸಿದ ಮೊದಲ ಭಾರತೀಯ ಆಟಗಾರ ಎನಿಸಿಕೊಳ್ಳಲಿದ್ದಾರೆ. ಅಲ್ಲದೆ, ಅತಿವೇಗವಾಗಿ ಈ ಸಾಧನೆ ಮಾಡಿದ ವಿಶ್ವದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಲಿದ್ದಾರೆ.


ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ ನಡುವಿನ ಐಪಿಎಲ್ 2025ರ 14ನೇ ಪಂದ್ಯ ಏಪ್ರಿಲ್ 2 ರಂದು ನಡೆಯಲಿದೆ. ಈ ಪಂದ್ಯದಲ್ಲಿ ಎಲ್ಲರ ಕಣ್ಣು ಕಿಂಗ್ ಕೊಹ್ಲಿ ಮೇಲಿರಲಿದೆ. ವಿರಾಟ್ ಮೊದಲ 2 ಪಂದ್ಯಗಳಲ್ಲಿ ಉತ್ತಮ ಲಯದಲ್ಲಿ ಕಾಣಿಸಿಕೊಂಡಿದ್ದಾರೆ. ಕೋಲ್ಕತಾ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಅರ್ಧ ಶತಕವನ್ನೂ ಗಳಿಸಿದ್ದರು. ಇದೀಗ ತವರಿನಲ್ಲಿ ಗುಜರಾತ್ ಎದುರು ನಡೆಯುವ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆಯಲು ರೆಡಿಯಾಗಿದ್ದಾರೆ. 

ಹೌದು, ವಿರಾಟ್ ಕೊಹ್ಲಿ ಇದುವರೆಗೂ ಒಟ್ಟು 401 ಟಿ20 ಪಂದ್ಯಗಳನ್ನು ಆಡಿದ್ದಾರೆ ಮತ್ತು ಈ ಅವಧಿಯಲ್ಲಿ ಅವರು ಹಲವು ದೊಡ್ಡ ಸಾಧನೆಗಳನ್ನು ಮಾಡಿದ್ದಾರೆ. ಈ ಫಾರ್ಮೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ವಿರಾಟ್ ಎರಡನೇ ಸ್ಥಾನದಲ್ಲಿದ್ದಾರೆ. ಗುಜರಾತ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಕಣ್ಣು ಒಂದು ದೊಡ್ಡ ದಾಖಲೆಯ ಮೇಲೆ ಇರಲಿದೆ.

Latest Videos

24 ರನ್ ಗಳಿಸಿದರೆ ಕೊಹ್ಲಿ ಹೊಸ ಇತಿಹಾಸ ಸೃಷ್ಟಿ

ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಟಿ20 ಫಾರ್ಮೆಟ್‌ನಲ್ಲಿ ಇದುವರೆಗೆ 401 ಪಂದ್ಯಗಳಲ್ಲಿ 41.58 ಸರಾಸರಿಯಲ್ಲಿ 12976 ರನ್ ಗಳಿಸಿದ್ದಾರೆ. ಕೊಹ್ಲಿ ಬ್ಯಾಟ್‌ನಿಂದ ಈ ಸಮಯದಲ್ಲಿ 9 ಶತಕ ಮತ್ತು 98 ಅರ್ಧ ಶತಕಗಳು ಸಿಡಿದಿವೆ. ಈ ಫಾರ್ಮೆಟ್‌ನಲ್ಲಿ ವಿರಾಟ್ ಅವರ ಗರಿಷ್ಠ ವೈಯಕ್ತಿಕ ಸ್ಕೋರ್ 122* ರನ್. ಒಂದು ವೇಳೆ ವಿರಾಟ್ ಗುಜರಾತ್ ವಿರುದ್ಧದ ಪಂದ್ಯದಲ್ಲಿ 24 ರನ್ ಗಳಿಸಿದರೆ, ಕ್ರಿಕೆಟ್ ಇತಿಹಾಸದಲ್ಲಿ 13,000 ಟಿ20 ರನ್ ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಳ್ಳಲಿದ್ದಾರೆ. ಅಲ್ಲದೆ, ಈ ಸಾಧನೆ ಮಾಡಿದ ಜಗತ್ತಿನ ಐದನೇ ಆಟಗಾರ ಕೂಡಾ ಆಗಲಿದ್ದಾರೆ.

ಅತಿವೇಗವಾಗಿ 13,000 ರನ್ ಗಡಿ ತಲುಪಿದ ವಿಶ್ವದ ಎರಡನೇ ಆಟಗಾರ

ಗುಜರಾತ್ ಟೈಟನ್ಸ್ ವಿರುದ್ಧ 24 ರನ್ ಗಳಿಸಿದ ತಕ್ಷಣ ವಿರಾಟ್ ಕೊಹ್ಲಿ ಟಿ20ಯಲ್ಲಿ ಅತಿ ವೇಗವಾಗಿ 13,000 ರನ್ ತಲುಪಿದ ಎರಡನೇ ಬ್ಯಾಟ್ಸ್‌ಮನ್ ಆಗಲಿದ್ದಾರೆ. ವಿರಾಟ್ ಗಿಂತ ಮುಂದೆ ವೆಸ್ಟ್ ಇಂಡೀಸ್‌ನ ಮಾಜಿ ಸ್ಪೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಇದ್ದಾರೆ, ಅವರು 381 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಕೊಹ್ಲಿ ಇದುವರೆಗೆ ಒಟ್ಟು 383 ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ, ಅಂದರೆ ಗೇಲ್ ಅವರಿಗಿಂತ 2 ಇನ್ನಿಂಗ್ಸ್ ಮುಂದಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿ ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್ ಅಲೆಕ್ಸ್ ಹೇಲ್ಸ್ ಇದ್ದಾರೆ. ಅವರು 474 ಇನ್ನಿಂಗ್ಸ್‌ಗಳ ನಂತರ 13 ಸಾವಿರ ರನ್ ಗಡಿ ದಾಟಿದ್ದಾರೆ. ಇವರಲ್ಲದೆ ಪಾಕಿಸ್ತಾನದ ಮಾಜಿ ಆಟಗಾರ ಶೋಯೆಬ್ ಮಲಿಕ್ 487 ಮತ್ತು ವೆಸ್ಟ್ ಇಂಡೀಸ್‌ನ ಮಾಜಿ ಬ್ಯಾಟ್ಸ್‌ಮನ್ ಕೀರನ್ ಪೊಲಾರ್ಡ್ 594 ಇನ್ನಿಂಗ್ಸ್‌ಗಳಲ್ಲಿ 13 ಸಾವಿರ ರನ್ ತಲುಪಿದ್ದಾರೆ.

ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿಯ 18 ವರ್ಷಗಳ ವೃತ್ತಿ ಜೀವನ:

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿಯೂ ವಿರಾಟ್ ಕೊಹ್ಲಿ ಬ್ಯಾಟ್ ಸಖತ್ ಸದ್ದು ಮಾಡಿದೆ. 2008 ಅಂದರೆ ಮೊದಲ ಸೀಸನ್‌ನಿಂದಲೂ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರಿಗಾಗಿ ಆಡುತ್ತಿದ್ದಾರೆ. ಅವರು ತಮ್ಮ ವೃತ್ತಿ ಜೀವನದ 18ನೇ ಸೀಸನ್ ಆಡುತ್ತಿದ್ದಾರೆ. ವಿರಾಟ್ ಒಟ್ಟು 254 ಐಪಿಎಲ್ ಪಂದ್ಯಗಳ 246 ಇನ್ನಿಂಗ್ಸ್‌ಗಳಲ್ಲಿ 38.91 ಸರಾಸರಿಯಲ್ಲಿ 8094 ರನ್ ಗಳಿಸಿದ್ದಾರೆ. ಫಟಾಫಟ್ ಕ್ರಿಕೆಟ್‌ನಲ್ಲಿ ಕಿಂಗ್ ಹೆಸರಿನಲ್ಲಿ 8 ಶತಕ ಮತ್ತು 56 ಅರ್ಧ ಶತಕಗಳಿವೆ. ಅವರು ಈ ಲೀಗ್‌ನಲ್ಲಿ 276 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಅಷ್ಟೇ ಅಲ್ಲ, ಕೊಹ್ಲಿ 4 ವಿಕೆಟ್‌ಗಳನ್ನು ಕೂಡಾ ಪಡೆದಿದ್ದಾರೆ.

18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಮೊದಲೆರಡು ಪಂದ್ಯಗಳನ್ನಾಡಿ ಒಂದು ಅರ್ಧಶತಕ ಸಹಿತ 90 ರನ್ ಸಿಡಿಸಿದ್ದಾರೆ. ಇಂದು ತವರಿನಲ್ಲಿ ವಿರಾಟ್ ಕೊಹ್ಲಿ ದೊಡ್ಡ ಇನ್ನಿಂಗ್ಸ್ ಆಡುವ ವಿಶ್ವಾಸದಲ್ಲಿದ್ದಾರೆ.

click me!