
ಬೆಂಗಳೂರು: ಮುಂಬರುವ 2025 ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸುವವರು ಯಾರು ಎನ್ನುವ ಕುತೂಹಲಕ್ಕೆ ಇಂದು ತೆರೆ ಬಿದ್ದಿದೆ. ಮಧ್ಯಪ್ರದೇಶ ಮೂಲದ ಪ್ರತಿಭಾನ್ವಿತ ಬ್ಯಾಟರ್ ರಜತ್ ಪಾಟೀದಾರ್ ಆರ್‌ಸಿಬಿ ತಂಡದ ನೂತನ ನಾಯಕರಾಗಿ ನೇಮಕವಾಗಿದ್ದಾರೆ. ಇದರ ಬೆನ್ನಲ್ಲೇ ಆರ್‌ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮಹತ್ವದ ಅಪ್‌ಡೇಟ್ ನೀಡಿದ್ದಾರೆ.
ಹೌದು, ಈ ಕುರಿತಂತೆ ಆರ್‌ಸಿಬಿ ಫ್ರಾಂಚೈಸಿ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಅಕೌಂಟ್‌ಗಳಿಂದ ವಿಡಿಯೋ ಬಿಡುಗಡೆ ಮಾಡಿದೆ. ಇದರಲ್ಲಿ ವಿರಾಟ್ ಕೊಹ್ಲಿ,'ರಜತ್ ಪಾಟೀದಾರ್ ಆರ್‌ಸಿಬಿ ತಂಡದ ನಾಯಕರಾಗಿದ್ದಾರೆ. ನಾಯಕರಾದ ರಜತ್ ಅವರಿಗೆ ಮೊದಲಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನೀವು ಆರ್‌ಸಿಬಿ ತಂಡದ ಜತೆಗೆ ಆಡಿದ ಆಟ ಬೆಳೆದುಬಂದ ರೀತಿ ನಿಜಕ್ಕೂ ಆರ್‌ಸಿಬಿ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಸಿಗುವಂತೆ ಮಾಡಿದೆ. ನೀವು ಆರ್‌ಸಿಬಿ ತಂಡದ ನಾಯಕರಾಗುವುದಕ್ಕೆ ಅರ್ಹವಾದ ವ್ಯಕ್ತಿ' ಎಂದು ಹೇಳಿದ್ದಾರೆ.
ಆರ್‌ಸಿಬಿ ತಂಡಕ್ಕೆ ಹೊಸ ಕ್ಯಾಪ್ಟನ್ ಘೋಷಣೆ! ಇನ್ನಾದ್ರೂ ಐಪಿಎಲ್ ಕಪ್ ಗೆಲ್ಲುತ್ತಾ ಬೆಂಗಳೂರು?
ಮಾತು ಮುಂದುವರೆಸಿದ ಕೊಹ್ಲಿ, 'ನಾನು ಸೇರಿದಂತೆ ಇಡೀ ತಂಡ ನಿಮ್ಮ ಜತೆಗೆ ನಿಲ್ಲಲಿದೆ. ಖಂಡಿತವಾಗಿಯೂ ನಾಯಕರಾದ ಮೇಲೆ ನಿಮ್ಮ ಜವಾಬ್ದಾರಿ ಹೆಚ್ಚಿರಲಿದೆ. ನಾನು ಅದನ್ನು ಈ ಹಿಂದೆ ನಿಭಾಯಿಸಿದ್ದೇನೆ. ಇದು ನಿಮಗೆ ಸಿಕ್ಕ ದೊಡ್ಡ ಗೌರವ ಎಂದು ಭಾವಿಸುತ್ತೇನೆ. ನಾನು ರಜತ್ ಅವರು ಐಪಿಎಲ್, ಭಾರತ ಹಾಗೂ ಅವರ ರಾಜ್ಯ ತಂಡಕ್ಕಾಗಿ ಆಡುತ್ತಾ ಬಂದಿದ್ದನ್ನು ನೋಡಿದ್ದೇನೆ. ಅವರಿಗೆ ಒಳ್ಳೆಯದಾಗಲಿ. ಹಾಗೂ ಇದೇ ವೇಳೆ ಅಭಿಮಾನಿಗಳು ಕೂಡಾ ರಜತ್ ಪಾಟೀದಾರ್‌ಗೆ ಸಂಪೂರ್ಣವಾದ ಬೆಂಬಲವನ್ನು ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಏಷ್ಯಾದಲ್ಲಿ ಹಾಗೂ ಇಂಗ್ಲೆಂಡ್ ವಿರುದ್ಧ ಅಪರೂಪದ ದಾಖಲೆ ಬರೆದ ವಿರಾಟ್ ಕೊಹ್ಲಿ!
ರಜತ್ ಪಾಟೀದಾರ್‌ಗೆ ಈ ಹಿಂದೆ ಮಧ್ಯಪ್ರದೇಶ ಕ್ರಿಕೆಟ್ ತಂಡವನ್ನು ನಾಯಕನಾಗಿ ಮುನ್ನಡೆಸಿದ ಅನುಭವವಿದೆ. ಇದೀಗ ಇದೇ ಮೊದಲ ಬಾರಿಗೆ ಪಾಟೀದಾರ್ ಐಪಿಎಲ್‌ನಲ್ಲಿ ನಾಯಕರಾಗಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಆರ್‌ಸಿಬಿಗೆ ಚೊಚ್ಚಲ ಕಪ್ ಗೆಲ್ಲಿಸಿಕೊಡಬೇಕಾದ ಗುರುತರವಾದ ಜವಾಬ್ದಾರಿ ರಜತ್ ಪಾಟೀದಾರ್ ಅವರ ಮೇಲಿದೆ.
ಚೊಚ್ಚಲ ಆವೃತ್ತಿಯ ಐಪಿಎಲ್ ನಿಂದಲೂ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಾ ಬಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು 17 ಆವೃತ್ತಿಗಳ ಪೈಕಿ ಒಮ್ಮೆಯೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಮೂರು ಬಾರಿ ಫೈನಲ್ ಪ್ರವೇಶಿಸಿದ್ದೇ ಇಲ್ಲಿಯವರೆಗಿನ ಶ್ರೇಷ್ಠ ಸಾಧನೆ ಎನಿಸಿಕೊಂಡಿದೆ. ಇನ್ನು ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸಿತ್ತಾದರೂ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ಎದುರು ಮುಗ್ಗರಿಸುವ ಮೂಲಕ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
ಈ ಹಿಂದಿನ ಆರ್‌ಸಿಬಿ ನಾಯಕರು ಯಾರ್ಯಾರು?
2008- ರಾಹುಲ್ ದ್ರಾವಿಡ್
2009- ಕೆವಿನ್ ಪೀಟರ್‌ಸನ್
2009-10- ಅನಿಲ್ ಕುಂಬ್ಳೆ
2011-12- ಡೇನಿಯಲ್ ವೆಟೋರಿ
2017- ಶೇನ್ ವಾಟ್ಸನ್(ಹಂಗಾಮಿ)
2013-21- ವಿರಾಟ್ ಕೊಹ್ಲಿ
2022-24- ಫಾಫ್ ಡು ಪ್ಲೆಸಿಸ್
2025- ರಜತ್ ಪಾಟೀದಾರ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.