ಈ ಸಾರಿಯಾದ್ರೂ ಆರ್‌ಸಿಬಿ ಕಪ್ ಗೆಲ್ಲುತ್ತೆ ಅಂದುಕೊಂಡ್ರೆ ಐಪಿಎಲ್ಲೇ ಕ್ಯಾನ್ಸಲ್ ಆಗೋದಾ?

Published : May 10, 2025, 03:43 PM IST
ಈ ಸಾರಿಯಾದ್ರೂ ಆರ್‌ಸಿಬಿ ಕಪ್ ಗೆಲ್ಲುತ್ತೆ ಅಂದುಕೊಂಡ್ರೆ ಐಪಿಎಲ್ಲೇ ಕ್ಯಾನ್ಸಲ್ ಆಗೋದಾ?

ಸಾರಾಂಶ

ಭಾರತ-ಪಾಕಿಸ್ತಾನ ಯುದ್ಧ ಭೀತಿಯಿಂದಾಗಿ 2025ರ ಐಪಿಎಲ್ ಟೂರ್ನಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಆರ್‌ಸಿಬಿ ಅಭಿಮಾನಿಗಳಿಗೆ ಕಪ್ ಗೆಲ್ಲುವ ಕನಸು ಕಮರಿಹೋಗುವ ಸಾಧ್ಯತೆ ಇದೆ. ಕೋವಿಡ್ ಸಂದರ್ಭದಲ್ಲೂ ಐಪಿಎಲ್ ಟೂರ್ನಿ ಸ್ಥಗಿತಗೊಂಡಿತ್ತು.

ಬೆಂಗಳೂರು: ಭಾರತ ಹಾಗೂ ಪಾಕಿಸ್ತಾನ ನಡುವಿನ ಯುದ್ದಾತಂಕದ ಭೀತಿಯ ನಡುವಿನಲ್ಲೇ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ದಿಢೀರ್ ಸ್ಥಗಿತಗೊಳಿಸಿದೆ. ಜಗತ್ತಿನ ಶ್ರೀಮಂತ ಟಿ20 ಕ್ರಿಕೆಟ್ ಲೀಗ್ ಎಂದೇ ಕರೆಸಿಕೊಳ್ಳುವ ಐಪಿಎಲ್ ಟೂರ್ನಿಯಲ್ಲಿ ಭಾರತೀಯ ಆಟಗಾರರು ಮಾತ್ರವಲ್ಲದೇ, ಜಗತ್ತಿನ ನಾನಾ ಮೂಲೆಯ ತಾರಾ ಆಟಗಾರರು ಪಾಲ್ಗೊಂಡಿದ್ದರು. ಇನ್ನು ಆಟಗಾರರು ಹಾಗೂ ಪಂದ್ಯ ನೋಡಲು ಬರುವ ಪ್ರೇಕ್ಷಕರಿಗೆ ತೊಂದರೆಯಾಗಬಾರದು ಎನ್ನುವ ಮುನ್ನೆಚ್ಚರಿಕಾ ಕ್ರಮವಾಗಿ ಬಿಸಿಸಿಐ, ತಾತ್ಕಾಲಿಕವಾಗಿ 2025ನೇ ಸಾಲಿನ ಐಪಿಎಲ್ ಟೂರ್ನಿಗೆ ಬ್ರೇಕ್ ಹಾಕಿದೆ.

ಗುರುವಾರ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯ ಅರ್ಧಕ್ಕೇ ಮೊಟಕುಗೊಂಡ ಬಳಿಕ, ಟೂರ್ನಿಯ ಭವಿಷ್ಯದ ಬಗ್ಗೆ ಪ್ರಶ್ನೆ ಎದ್ದಿದ್ದವು. ಲೀಗ್‌ನ ಇನ್ನುಳಿದ ಪಂದ್ಯಗಳನ್ನು ಸ್ಥಗಿತಗೊಳಿಸುವ ಬಗ್ಗೆ ವರದಿಯಾಗಿದ್ದವು. ಶುಕ್ರವಾರ ಈ ಬಗ್ಗೆ ಅಧಿಕೃತ ಪ್ರಕಟನೆ ಹೊರಡಿಸಿರುವ ಐಪಿಎಲ್, 'ತಕ್ಷಣಕ್ಕೆ ಜಾರಿ ಬರುವಂತೆ ಐಪಿಎಲ್‌ನ ಮುಂದಿನ ಎಲ್ಲಾ ಪಂದ್ಯಗಳನ್ನು ಒಂದು ವಾರ ಕಾಲ ಸ್ಥಗಿತಗೊಳಿಸಲಾಗಿದೆ' ಎಂದು ತಿಳಿಸಿದೆ.

ಇನ್ನು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅದ್ಭುತ ಪ್ರದರ್ಶನ ತೋರುವ ಮೂಲಕ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆಡಿದ 11 ಪಂದ್ಯಗಳ ಪೈಕಿ 8 ಗೆಲುವು ಹಾಗೂ ಮೂರು ಸೋಲು ಸಹಿತ 16 ಅಂಕಗಳನ್ನು ಪಡೆಯುವ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಕಾಯ್ದುಕೊಂಡಿತ್ತು. 

ಆರ್‌ಸಿಬಿ ತಂಡದ ಸಾಂಘಿಕ ಪ್ರದರ್ಶನ ಗಮನಿಸಿದ ಅಭಿಮಾನಿಗಳಿಗೆ ಕೊನೆಗೂ 17 ವರ್ಷಗಳ ಕಾಯುವಿಕೆಯ ಬಳಿಕ 18ನೇ ವರ್ಷದಲ್ಲಿ ಆರ್‌ಸಿಬಿ ಕಪ್ ಗೆಲ್ಲುವ ಕ್ಷಣ ಬಂದೇ  ಬಿಟ್ಟಿತ್ತು ಎಂದು ಆಸೆಗಣ್ಣಿನಿಂದ ನೋಡುತ್ತಿದ್ದರು. ಈ ಸಲ ಕಪ್ ಆರ್‌ಸಿಬಿದೇ ಎನ್ನುವ ಘೋಷವಾಕ್ಯ ಇನ್ನೇನು ನನಸಾಗಿಯೇ ಹೋಯಿತು ಎನ್ನುವಂತಿರಬೇಕಾದರೇ ಯುದ್ದ ಭೀತಿಯಿಂದಾಗಿ ಐಪಿಎಲ್ ಟೂರ್ನಿ ದಿಢೀರ್ ಸ್ಥಗಿತಗೊಂಡಿದೆ.

ಈ ಸಲ ಕಪ್ ಗೆಲ್ಲುತ್ತಾ ಆರ್‌ಸಿಬಿ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಈ ವರ್ಷದ ಪ್ರದರ್ಶನ ನೋಡಿದ್ರೆ ಎಂತಹವರಿಗಾದರೂ ಆರ್‌ಸಿಬಿ ಕಪ್ ಗೆಲ್ಲುತ್ತೆ ಅಂತ ಆತ್ಮವಿಶ್ವಾಸದಿಂದ ಹೇಳುತ್ತಾರೆ. ಚೆನ್ನೈ ಮಾಜಿ ಕ್ರಿಕೆಟಿಗ ಹಾಗೂ ಆರ್‌ಸಿಬಿ ಕಟು ಟೀಕಾಕಾರ ಅಂಬಟಿ ರಾಯುಡು ಕೂಡಾ ಈ ಸಲ ಆರ್‌ಸಿಬಿ ತಂಡದ ಪ್ರದರ್ಶನ ಗಮನಿಸಿದ್ರೆ ಖಂಡಿತ ಕಪ್ ಗೆಲ್ಲುತ್ತೆ ಅಂತ ಹೇಳಿದ್ರು, ಸದ್ಯದಲ್ಲೇ ಒಂದು ವೇಳೆ ಟೂರ್ನಿ ಪುನರಾರಂಭಗೊಂಡರೆ ಆರ್‌ಸಿಬಿ ಇದೇ ಲಯವನ್ನು ಮುಂದುವರೆಸಿದ್ರೆ ಮೊದಲ ಕಪ್ ತಮ್ಮದಾಗಿಸಿಕೊಳ್ಳಬಹುದು. ಟೂರ್ನಿ ಎರಡು-ಮೂರು ತಿಂಗಳು ಮುಂದೆ ಹೋದ್ರೆ ಆರ್‌ಸಿಬಿ ಇದೇ ಹುರುಪಿನಲ್ಲಿ ಆಡುತ್ತಾ ಅನ್ನೋದೇ ಸದ್ಯಕ್ಕಿರುವ ಕುತೂಹಲವಾಗಿದೆ.

ಕೋವಿಡ್‌ನಲ್ಲೂ ಸ್ಥಗಿತಗೊಂಡಿದ್ದ ಐಪಿಎಲ್

ಐಪಿಎಲ್ ಅರ್ಧಕ್ಕೇ ಸ್ಥಗಿತಗೊಳ್ಳುವುದು ಇದೇ ಮೊದಲೇನಲ್ಲ. 2021ರಲ್ಲಿ ಕೋವಿಡ್ ನಿಂದಾಗಿ ಹಲವು ತಿಂಗಳುಗಳ ಕಾಲ ಟೂರ್ನಿಯನ್ನು ಮೊಟಕುಗೊಳಿಸಲಾಗಿತ್ತು. ಏ.9ರಂದು ಆರಂಭಗೊಂಡಿದ್ದ ಟೂರ್ನಿ, ಕೋವಿಡ್ ಪ್ರಕರಣ ಹೆಚ್ಚಳದಿಂದಾಗಿ ಮೇ 2ರಂದು ಸ್ಥಗಿತಗೊಳಿಸಲಾಗಿತ್ತು. ಬಳಿಕ ಉಳಿದ ಪಂದ್ಯಗಳನ್ನು ಸೆಪ್ಟೆಂಬರ್ 19ರಿಂದ ಯುಎಇ ದೇಶದ ಮೂರು ಕ್ರೀಡಾಂಗಳಲ್ಲಿ ನಡೆಸಲಾಗಿತ್ತು.

ಬಿಸಿಸಿಐ ಮುಂದಿರುವ ಆಯ್ಕೆಗಳೇನು?
ಪರಿಸ್ಥಿತಿ ಸುಧಾರಿಸಿದ ಬಳಿಕ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿ, ಆಯಾಯ ನಗರಗಳಲ್ಲೇ ಪಂದ್ಯಗಳನ್ನು
ಮುಂದುವರಿಸ ಬಹುದು.
2. ದೇಶದ ಉತ್ತರ ಭಾಗದ ರಾಜ್ಯಗಳಲ್ಲಿ ಸದ್ಯ ಪಂದ್ಯ ನಡೆಸುವುದು ಸೂಕ್ತವಲ್ಲದ ಕಾರಣ ಬೆಂಗಳೂರು, ಚೆನ್ನೈ ಸೇರಿದಂತೆ ದಕ್ಷಿಣ ಭಾರತದ ನಗರಗಳಲ್ಲಿ ಪಂದ್ಯಗಳನ್ನು ಆಡಿಸಬಹುದು.
3. ಯುದ್ಧ ಪರಿಸ್ಥಿತಿ ಸದ್ಯಕ್ಕೆ ಸರಿ ಹೋಗದಿದ್ದರೆ ಟೂರ್ನಿಯ ಉಳಿದ ಪಂದ್ಯಗಳನ್ನು ಬೇರೆ ದೇಶದಲ್ಲಿ ಆಯೋಜಿಸ ಬಹುದು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌
ಕುಲ್ದೀಪ್-ಪ್ರಸಿದ್ದ್ ಮಾರಕ ದಾಳಿ; ಏಕದಿನ ಸರಣಿ ಗೆಲ್ಲಲು ಭಾರತಕ್ಕೆ ಸ್ಪರ್ಧಾತ್ಮಕ ಗುರಿ