ಮುಂಬೈ ಇಂಡಿಯನ್ಸ್ ಆಟಗಾರ ತಿಲಕ್ ವರ್ಮಾ ಲಖನೌ ವಿರುದ್ಧ ರಿಟೈರ್ಡ್ ಔಟ್ ಆದರು. ರಿಟೈರ್ಡ್ ಔಟ್ ಮತ್ತು ರಿಟೈರ್ಡ್ ಹರ್ಟ್ ನಡುವಿನ ವ್ಯತ್ಯಾಸವನ್ನು ಇಲ್ಲಿ ತಿಳಿಸಲಾಗಿದೆ.
ಬೆಂಗಳೂರು: ಮುಂಬೈ ಇಂಡಿಯನ್ಸ್ ಕ್ರಿಕೆಟ್ ತಂಡದ ಬ್ಯಾಟರ್ ತಿಲಕ್ ವರ್ಮಾ, ಲಖನೌ ಸೂಪರ್ ಜೈಂಟ್ಸ್ ಎದುರಿನ ಪಂದ್ಯದ ವೇಳೆಯಲ್ಲಿ ಸ್ಪೋಟಕ ಬ್ಯಾಟಿಂಗ್ ಮಾಡಲು ವೈಫಲ್ಯ ಅನುಭವಿಸಿದ್ದರಿಂದ ರಿಟೈರ್ ಔಟ್ ಆಗಿ ಹೊರೆನಡೆದರು. ಇದು ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಬೃಹತ್ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಕೊನೆಯಲ್ಲಿ ಸ್ಪೋಟಕವಾಗಿ ರನ್ ಗಳಿಸುವ ಅಗತ್ಯವಿತ್ತು. ಆದರೆ ತಿಲಕ್ ವರ್ಮಾ ರನ್ ಗಳಿಸಲು ಪರದಾಡಿದ್ದರಿಂದ ರಿಟೈರ್ಡ್ ಔಟ್ ಆಗಿ ಪೆವಿಲಿಯನ್‌ಗೆ ವಾಪಾಸ್ಸಾದರು.
ತಿಲಕ್ ವರ್ಮಾ 23 ಎಸೆತಗಳನ್ನು ಎದುರಿಸಿ ಕೇವಲ 25 ರನ್ ಗಳಿಸಲಷ್ಟೇ ಶಕ್ತರಾದರು. ಇದರಲ್ಲಿ ಕೇವಲ ಎರಡು ಬೌಂಡರಿ ಬಾರಿಸಲಷ್ಟೇ ಶಕ್ತವಾದವು. ಅವರ ಮಂದಗತಿಯ ಬ್ಯಾಟಿಂಗ್ ನೋಡಿದ ಮುಂಬೈ ಇಂಡಿಯನ್ಸ್ ತಂಡವು ತಿಲಕ್ ವರ್ಮಾ ಅವರನ್ನು 19ನೇ ಓವರ್‌ನಲ್ಲಿ ರೀಟೈರ್ಡ್ ಔಟ್ ರೂಲ್ಸ್ ಬಳಸಿತು. ಇದರ ಬಳಿಕ ಅವರ ಸ್ಥಾನಕ್ಕೆ ಮಿಚೆಲ್ ಸ್ಯಾಂಟ್ನರ್ ಕ್ರೀಸ್‌ಗಿಳಿದರಾದರೂ, ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಆದರೆ ತುಂಬಾ ಮಂದಿಗೆ ರಿಟೈರ್ಡ್ ಹರ್ಟ್ ಹಾಗೂ ರಿಟೈರ್ಡ್ ಔಟ್‌ಗೂ ಇರೋ ವ್ಯತ್ಯಾಸವೇನು ಎನ್ನುವುದರ ಬಗ್ಗೆ ತುಂಬಾ ಗೊಂದಲವಿದೆ. ಬನ್ನಿ ನಾವಿಂದು ಈ ಗೊಂದಲವನ್ನು ಪರಿಹರಿಸುತ್ತೇವೆ.
ಇದನ್ನೂ ಓದಿ: ಐಪಿಎಲ್‌ನಲ್ಲಿ ಯಾರೂ ಮಾಡದ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ!
ರಿಟೈರ್ಡ್ ಔಟ್ ಅಂದ್ರೇನು?
ಕ್ರಿಕೆಟ್‌ನಲ್ಲಿ ಒಂದು ವೇಳೆ ಆಟಗಾರ ಔಟ್ ಆಗದೇ ಸ್ವಯಂ ಇಚ್ಛೆಯಿಂದ ಅಥವಾ ಕ್ಯಾಪ್ಟನ್ ನಿರ್ದೇಶನದ ಮೇರೆಗೆ ಮೈದಾನ ತೊರೆದರೆ ಅದನ್ನು ರಿಟೈರ್ಡ್ ಔಟ್ ಎಂದು ಕರೆಯಲಾಗುತ್ತದೆ. ಇದು ಕ್ರಿಕೆಟ್ ರಣತಂತ್ರದ ಭಾಗವಾಗಿರುತ್ತದೆ. ಹೀಗಾದಲ್ಲಿ ಆಟಗಾರ ಆ ಇನ್ನಿಂಗ್ಸ್‌ನಲ್ಲಿ ಮತ್ತೊಮ್ಮೆ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ. ಸ್ಕೋರ್ ಬೋರ್ಡ್‌ನಲ್ಲಿ ಆ ಆಟಗಾರನನ್ನು ಔಟ್ ಎಂದೇ ಬಿಂಬಿಸಲಾಗುತ್ತದೆ.
ರಿಟೈರ್ಡ್ ಹರ್ಟ್ ಅಂದ್ರೇನು?
ಕ್ರಿಕೆಟ್ ಆಡುವಾಗ ಆಟಗಾರ ಗಾಯಕ್ಕೆ ಒಳಗಾಗಿ, ಅನಾರೋಗ್ಯದ ಸಮಸ್ಯೆಯಿಂದ ಅಥವಾ ಇನ್ಯಾವುದೇ ತುರ್ತು ಕಾರಣದಿಂದ ಮೈದಾನ ತೊರೆದರೆ ಆಗ ಅದನ್ನು ರಿಟೈರ್ಡ್ ಹರ್ಟ್ ಎಂದು ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ಬ್ಯಾಟರ್, ಅಂಪೈರ್‌ಗೆ ತಮ್ಮ ನೈಜ ಪರಿಸ್ಥಿತಿಯನ್ನು ತಿಳಿಸಿ ಡ್ರೆಸ್ಸಿಂಗ್ ರೂಂಗೆ ವಾಪಾಸ್ಸಾಗಬಹುದು. ಆದರೆ ಇದರಲ್ಲಿನ ಒಂದು ಪ್ರಯೋಜನವೇನೆಂದರೆ ರಿಟೈರ್ಡ್ ಹರ್ಟ್ ಆದ ಆಟಗಾರ ಮತ್ತೆ ವಿಕೆಟ್ ಪತನದ ಬಳಿಕ ತಂಡಕ್ಕೆ ಅಗತ್ಯವಿದ್ದರೇ ಬ್ಯಾಟಿಂಗ್ ಮಾಡಲು ಮೈದಾನಕ್ಕಿಳಿಯಲು ಅವಕಾಶವಿದೆ.
ಇದನ್ನೂ ಓದಿ: ₹27 ಕೋಟಿ ವೀರ ರಿಷಭ್ ಪಂತ್ 4 ಪಂದ್ಯದಲ್ಲಿ ಗಳಿಸಿದ್ದು ಕೇವಲ 19 ರನ್!
ಸಿಂಪಲ್ ಆಗಿ ಹೇಳಬೇಕೆಂದರೆ ರಿಟೈರ್ಡ್ ಹರ್ಟ್ ಆದ ಆಟಗಾರ ಡ್ರೆಸ್ಸಿಂಗ್ ರೂಂಗೆ ಹೋದ ಬಳಿಕವೂ ಅನಿವಾರ್ಯವಿದ್ದರೇ ಮತ್ತೆ ಆ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಲು ಇಳಿಯಬಹುದು. ಆದರೆ ರಿಟೈರ್ಡ್ ಔಟ್ ಆಗಿ ಪೆವಿಲಿಯನ್ ಸೇರಿದ ಆಟಗಾರ ಅಧಿಕೃತವಾಗಿ ಔಟ್ ಎಂದೇ ತೀರ್ಮಾನವಾಗಲಿದ್ದು, ಮತ್ತೆ ಬ್ಯಾಟಿಂಗ್ ಮಾಡಲಿಳಿಯಲು ಸಾಧ್ಯವಿಲ್ಲ.