
ಬೆಂಗಳೂರು(ಮೇ.17) ಹವಾಮಾನ ಇಲಾಖೆ ವರದಿಯಂತೆ ಬೆಂಗಳೂರಿನಲ್ಲಿ ಮಳೆಯಾಗುತ್ತಿದೆ. ಅದರಲ್ಲೂ ಚಿನ್ನಸ್ವಾಮೀ ಕ್ರೀಡಾಂಗಣ ಹಾಗೂ ಸುತ್ತ ಮುತ್ತಲಿನ ಪ್ರದೇಶದಲ್ಲಿ ಮಳೆಯಾಗುತ್ತಿರುವ ಕಾರಣ ಇದೀಗ ಬಹು ನಿರೀಕ್ಷಿತ ಆರ್‌ಸಿಬಿ ಕೆಕೆಆರ್ ನಡುವಿನ ಪಂದ್ಯದ ಟಾಸ್ ವಿಳಂಬವಾಗಿದೆ. ಬೆಂಗಳೂರಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಟಾಸ್ ಮತ್ತಷ್ಟು ವಿಳಂಬಬವಾಗುವ ಸಾಧ್ಯತೆ ಇದೆ. ಕ್ರೀಡಾಂಗಣ ಭರ್ತಿಯಾಗಿದ್ದು, ಅಭಿಮಾನಿಗಳು ಮಳೆ ನಿಲ್ಲಲು ಪ್ರಾರ್ಥಿಸುತ್ತಿದ್ದಾರೆ.
ಬೆಂಗಳೂರು ಮಳೆ ನಿಂತರೆ ಪಂದ್ಯ ಆರಂಭ
ಬೆಂಗಳೂರಿನಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಮಳೆ ನಿಂತರೆ ತಕ್ಷಣವೇ ಪಂದ್ಯ ಪುನರ್ ಆರಂಭಗೊಳ್ಳಲಿದೆ. ಸದ್ಯ ಹೆಚ್ಚಿನ ಸಮಯ ವ್ಯರ್ಥವಾಗಿಲ್ಲ. ಹೀಗಾಗಿ ಯಾವುದೇ ಓವರ್ ಕಡಿತವಿಲ್ಲದೆ ಪಂದ್ಯ ಆರಂಭಗೊಳ್ಳಲಿದೆ. ಆದರೆ ಮಳೆ ನಿಲ್ಲಲು ಇದೀಗ ಕಾಯಬೇಕಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಬ್ ಏರ್ ಸಿಸ್ಟಮ್ ಇರುವ ಕಾರಣ ಪಂದ್ಯ ನಿಂತ ತಕ್ಷಣವೇ ಪಂದ್ಯಕ್ಕೆ ಮೈದಾನ ಸಜ್ಜುಗೊಳ್ಳಲಿದೆ.
ಕೊಹ್ಲಿಗೆ ಗೌರವ ಸೂಚಿಸಲು ಅಭಿಮಾನಿಗಳ ತಯಾರಿ
ವಿರಾಟ್ ಕೊಹ್ಲಿ ಟೆಸ್ಟ್ ಮಾದರಿಗೆ ದಿಢೀರ್ ವಿದಾಯ ಘೋಷಿಸಿ ಅಚ್ಚರಿ ಮೂಡಿಸಿದ್ದರು. ಕೊಹ್ಲಿ ನಿರ್ಧಾರ ಅಭಿಮಾನಿಗಳಿಗೆ ಬೇಸರ ತಂದಿತ್ತು. ಕೊಹ್ಲಿ ಟೆಸ್ಟ್ ನಿವೃತ್ತಿ ಘೋಷಿಸಿದ ಬಳಿಕ ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ. ಹೀಗಾಗಿ ಅಭಿಮಾನಿಗಳು ವಿರಾಟ್ ಕೊಹ್ಲಿ ಟೆಸ್ಟ್ ಜರ್ಸಿಯಲ್ಲಿ ಕಾಣಿಸಿಕೊಂಡಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಲವು ಅಭಿಮಾನಿಗಳು ಕೊಹ್ಲಿ ಟೆಸ್ಟ್ ಜರ್ಸಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಕೊಹ್ಲಿಗೆ ಗೌರವ ಸೂಚಿಸಲು ಮುಂಜಾಗಿದ್ದಾರೆ.
ಐಪಿಎಲ್ 2025 ಪುನರ್ ಆರಂಭ ಪಂದ್ಯಕ್ಕೆ ಮಳೆ ಅಡ್ಡಿ
ಐಪಿಎಲ್ 2025 ಟೂರ್ನಿ ಭಾರತ ಹಾಗೂ ಪಾಕಿಸ್ತಾನ ಗಡಿ ಸಂಘರ್ಷದಿಂದ ಸ್ಥಗಿತಗೊಂಡಿತ್ತು. ಪಾಕಿಸ್ತಾನ ಭಾರತದ ಮೇಲೆ ಡ್ರೋನ್ ಹಾಗೂ ಕ್ಷಿಪಣಿ ದಾಳಿಯ ವಿಫಲ ಪ್ರಯತ್ನ ನಡೆಸಿತ್ತು. ಹೀಗಾಗಿ ಆಟಾಗಾರರು, ಪ್ರೇಕ್ಷಕರು ಸೇರಿದಂತೆ ಇತರ ಸುರಕ್ಷತಾ ಕಾರಣಗಳಿಂದ ಐಪಿಎಲ್ ಪಂದ್ಯ ಮುಂದೂಡಿಕೆ ಮಾಡಲಾಗಿತ್ತು. ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಐಪಿಎಲ್ ಹೊಸ ವೇಳಾಪಟ್ಟಿ ಪ್ರಕಟಗೊಂಡಿತ್ತು. ಇದರಂತೆ ಮೇ.17 ರಿಂದ ಪಂದ್ಯ ಪುನರ್ ಆರಂಬಗೊಂಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.