ಆರ್‌ಸಿಬಿ vs ಸಿಎಸ್‌ಕೆ: ಬೆಂಗಳೂರಿನಲ್ಲಿಂದು ಧೋನಿ-ಕೊಹ್ಲಿ ಕೊನೆ ಮುಖಾಮುಖಿ?

Published : May 03, 2025, 08:45 AM ISTUpdated : May 03, 2025, 08:53 AM IST
ಆರ್‌ಸಿಬಿ vs ಸಿಎಸ್‌ಕೆ: ಬೆಂಗಳೂರಿನಲ್ಲಿಂದು ಧೋನಿ-ಕೊಹ್ಲಿ ಕೊನೆ ಮುಖಾಮುಖಿ?

ಸಾರಾಂಶ

ಐಪಿಎಲ್‌ನಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವೆ ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರೋಚಕ ಪಂದ್ಯ ನಡೆಯಲಿದೆ. ಪ್ಲೇ-ಆಫ್ ಹಂತಕ್ಕೆ ತಲುಪಲು ಆರ್‌ಸಿಬಿಗೆ ಗೆಲುವು ಮುಖ್ಯವಾಗಿದ್ದರೆ, ಚೆನ್ನೈ ಈಗಾಗಲೇ ಪ್ಲೇ-ಆಫ್‌ನಿಂದ ಹೊರಬಿದ್ದಿದೆ. ಈ ಪಂದ್ಯವು ಕೊಹ್ಲಿ ಮತ್ತು ಧೋನಿ ನಡುವಿನ ಕೊನೆಯ ಮುಖಾಮುಖಿಯಾಗುವ ಸಾಧ್ಯತೆಯಿದೆ.

ಬೆಂಗಳೂರು: ಐಪಿಎಲ್‌ನ ಬಹುನಿರೀಕ್ಷಿತ ಪಂದ್ಯಕ್ಕೆ ಶನಿವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣ ಸಾಕ್ಷಿಯಾಗಲಿದೆ. ಸಾಂಪ್ರದಾಯಿಕ ಎದುರಾಳಿಗಳಾದ ಆರ್‌ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪರಸ್ಪರ ಸೆಣಸಾಡಲಿವೆ. 5 ಬಾರಿ ಚಾಂಪಿಯನ್ ಚೆನ್ನೈ ಈಗಾಗಲೇ ಪ್ಲೇ-ಆಫ್ ರೇಸ್‌ನಿಂದ ಹೊರಬಿದ್ದಿದ್ದರೂ, ಅಭಿಮಾನಿಗಳಲ್ಲಿ ಪಂದ್ಯದ ಕ್ರೇಜ್ ಕಮ್ಮಿಯಾಗಿಲ್ಲ.

ಉಭಯ ತಂಡಗಳು ಬದ್ಧವೈರಿಗಳು ಎನಿಸಿಕೊಂಡರೂ ಈ ಬಾರಿ ಐಪಿಎಲ್‌ನಲ್ಲಿ ಎರಡೂ ತಂಡಗಳ ಪ್ರದರ್ಶನ ಭಿನ್ನ, ಆರ್‌ಸಿಬಿ ಆಡಿರುವ 10 ಪಂದ್ಯಗಳ ಪೈಕಿ 7ರಲ್ಲಿ ಗೆದ್ದಿದ್ದು, ಪ್ಲೇ-ಆಫ್‌ನ ಸನಿಹಲ್ಲಿದೆ. ಚೆನ್ನೈ ವಿರುದ್ಧ ಗೆದ್ದರೆ ತಂಡ ನಾಕೌಟ್ ಸ್ಥಾನ ಬಹುತೇಕ ಖಚಿತಪಡಿಸಿಕೊಳ್ಳಲಿದೆ. ಮತ್ತೊಂದೆಡೆ ಚೆನ್ನೈನ ಪ್ರದರ್ಶನ ಹೀನಾಯವಾಗಿದೆ. ಆಡಿರುವ 10 ಪಂದ್ಯಗಳ ಪೈಕಿ ಕೇವಲ 2ರಲ್ಲಿ ಗೆದ್ದಿದ್ದು, 8 ಪಂದ್ಯಗಳಲ್ಲಿ ಸೋತು ಸುಣ್ಣವಾಗಿದೆ.

ರೋಚಕ ಪೈಪೋಟಿ ನಿರೀಕ್ಷೆ: ಆರ್‌ಸಿಬಿ ಎಲ್ಲಾ ವಿಭಾಗದಲ್ಲಿ ಬಲಿಷ್ಠವಾಗಿ, ಚೆನ್ನೈ ಎಲ್ಲಾ ವಿಭಾಗದಲ್ಲೂ ವಿಫಲವಾಗಿದ್ದರೂ ಈ ಮುಖಾಮುಖಿಯಲ್ಲಿ ರೋಚಕ ಪೈಪೋಟಿ ಕಂಡುಬರುವ ಸಾಧ್ಯತೆಯಿದೆ. ಕಳೆದ 5 ಪಂದ್ಯಗಳಲ್ಲಿ 4 ಅರ್ಧಶತಕ ಬಾರಿಸಿ, ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಮುಂಚೂಣಿಯಲ್ಲಿ ವಿರಾಟ್ ಕೊಹ್ಲಿ ಮತ್ತೆ ಅಬ್ಬರಿಸಲು ಕಾಯುತ್ತಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಹೇಜಲ್‌ವುಡ್, ಭುವನೇಶ್ವರ್ ಮಾರಕ ದಾಳಿ ಎದುರಾಳಿಗಳಲ್ಲಿ ಭೀತಿ ಹುಟ್ಟಿಸುವಂತಿದೆ.

ಧೋನಿ-ಕೊಹ್ಲಿ ಕೊನೆ ಬಾರಿ ಮುಖಾಮುಖಿ?
ಕೊಹ್ಲಿ ಹಾಗೂ ಧೋನಿ ವಿಶ್ವ ಕ್ರಿಕೆಟ್‌ನ ಐಕಾನ್‌ಗಳು. ಇಬ್ಬರನ್ನು ಮೈದಾನದಲ್ಲಿ ನೋಡಲು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಆದರೆ ಶನಿವಾರದ ಪಂದ್ಯ ಇಬ್ಬರ ಪಾಲಿನ ಕೊನೆ ಮುಖಾಮುಖಿಯಾಗುವ ಸಾಧ್ಯತೆ ಇದೆ. ಧೋನಿ ಯಾವಾಗ ನಿವೃತ್ತಿಯಾಗಲಿದ್ದಾರೆ ಎಂಬುದು ಇನ್ನೂ ನಿಗೂಢವಾಗಿದ್ದರೂ, ಮುಂದಿನ ಬಾರಿ ಅವರ ಆಡವುದಿಲ್ಲ ಎಂದೇ ಹೇಳಲಾಗುತ್ತಿದೆ.

ಪುಟಿದೇಳುತ್ತಾ ಸಿಎಸ್‌ಕೆ?: ಎಂ.ಎಸ್.ಧೋನಿ ನಾಯಕತ್ವದ ಚೆನ್ನೈ ಈ ಬಾರಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಹಲವು ಹಿರಿಯರಿಗೆ ಮಣೆ ಹಾಕಿ ಕೈಸುಟ್ಟುಕೊಂಡಿರುವ ತಂಡ, ಸದ್ಯ ಯುವ ಪ್ರತಿಭೆಗಳಾದ ಆಯುಶ್ ಮಾಥ್ರೆ, ಸ್ಯಾಮ್ ಕರನ್, ಶೇಕ್ ರಶೀದ್, ಡೆವಾಲ್ಡ್ ಬ್ರೆವಿಸ್‌ರನ್ನು ಆಡಿಸುತ್ತಿದೆ. ಇನ್ನು, ಧೋನಿ ಬ್ಯಾಟ್‌ನಿಂದ ಒಂದೆರಡು ಸಿಕ್ಸ‌ರ್‌ಗಳಾದರೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಡಿಯಬಹುದೇ ಎಂಬ ಕುತೂಹಲವಿದೆ. ಮಹೇಂದ್ರ ಸಿಂಗ್ ಧೋನಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 13 ಐಪಿಎಲ್ ಪಂದ್ಯಗಳನ್ನಾಡಿ 81.5ರ ಬ್ಯಾಟಿಂಗ್ ಸರಾಸರಿಯಲ್ಲಿ 181.11ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದ್ದಾರೆ. ಹೀಗಾಗಿ ಮತ್ತೊಮ್ಮೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಧೋನಿ ಅಬ್ಬರಿಸಿದರೂ ಅಚ್ಚರಿಯೇನಿಲ್ಲ.

ಪಂದ್ಯಕ್ಕೆ ಮಳೆ ಭೀತಿ!
ಬೆಂಗಳೂರಿನಲ್ಲಿ ಕೆಲ ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಶುಕ್ರವಾರ ಅಭ್ಯಾಸ ಶಿಬಿರಕ್ಕೂ ಮಳೆ ಅಡ್ಡಿಪಡಿಸಿತ್ತು. ಶನಿವಾರ ಕೂಡಾ ನಗರದಲ್ಲಿ ಮಳೆ ಮುನ್ಸೂಚನೆಯಿದ್ದು, ಪಂದ್ಯಕ್ಕೆ ಅಡ್ಡಿಪಡಿಸುವ ಸಾಧ್ಯತೆಯಿದೆ.

ಸಂಭಾವ್ಯ ಆಟಗಾರರ ಪಟ್ಟಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಿಲ್ ಸಾಲ್ಟ್/ಜೆಕೊಬ್ ಬೆಥೆಲ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟೀದಾರ್(ನಾಯಕ), ಜಿತೇಶ್ ಶರ್ಮಾ(ವಿಕೆಟ್ ಕೀಪರ್), ಟಿಮ್ ಡೇವಿಡ್, ರೊಮ್ಯಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜೋಶ್ ಹೇಜಲ್‌ವುಡ್, ಸುಯಾನ್ಸ್ ಶರ್ಮಾ.

ಚೆನ್ನೈ ಸೂಪರ್ ಕಿಂಗ್ಸ್‌: ಶೇಖ್ ರಶೀದ್, ಆಯುಷ್ ಮಾಥ್ರೆ, ಸ್ಯಾಮ್ ಕರ್ರನ್, ರವೀಂದ್ರ ಜಡೇಜಾ, ಡೆವಾಲ್ಡ್ ಬ್ರೆವೀಸ್, ಶಿವಂ ದುಬೆ, ದೀಪಕ್ ಹೂಡಾ, ಎಂ ಎಸ್ ಧೋನಿ(ನಾಯಕ&ವಿಕೆಟ್ ಕೀಪರ್), ಮಥೀಶ್ ಪತಿರಣ, ನೂರ್ ಅಹಮದ್, ಖಲೀಲ್ ಅಹಮದ್, ಅನ್ಸೂಲ್ ಕಂಬೋಜ್. 

ಪಂದ್ಯ ಆರಂಭ: ಸಂಜೆ 7.30
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್. ಜಿಯೋ ಹಾಟ್‌ಸ್ಟಾರ್

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

20 ಮ್ಯಾಚ್ ಬಳಿಕ ಕೊನೆಗೂ ಟಾಸ್ ಗೆದ್ದ ಭಾರತ! ದಕ್ಷಿಣ ಆಫ್ರಿಕಾ ತಂಡದಲ್ಲಿ 2 ಬದಲಾವಣೆ!
ಭಾರತ ಎದುರಿನ 3ನೇ ಏಕದಿನ ಪಂದ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾಗೆ ಬಿಗ್ ಶಾಕ್! 2 ಸ್ಟಾರ್ ಆಟಗಾರರು ಔಟ್!