
ಬೆಂಗಳೂರು: 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಾಯಕನಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸುವವರು ಯಾರು ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ಫಾಫ್ ಡು ಪ್ಲೆಸಿಸ್ ಅವರಿಂದ ತೆರವಾದ ಸ್ಥಾನಕ್ಕೆ ಇದೀಗ ಮಧ್ಯಪ್ರದೇಶ ಮೂಲದ ಪ್ರತಿಭಾನ್ವಿತ ಬ್ಯಾಟರ್ ರಜತ್ ಪಾಟೀದಾರ್ ಅವರಿಗೆ ಪಟ್ಟಾಭೀಷೇಕವಾಗಿದೆ. ಹೌದು, 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಜತ್ ಪಾಟೀದಾರ್ ಆರ್‌ಸಿಬಿ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ಆರ್‌ಸಿಬಿ ನೂತನ ನಾಯಕನ ಹೆಸರು ಘೋಷಣೆ ಮಾಡುತ್ತಿದ್ದಂತೆಯೇ ಸ್ಪೋಟಕ ಬ್ಯಾಟರ್ ರಜತ್ ಪಾಟೀದಾರ್ ಖಡಕ್ ಸಂದೇಶ ರವಾನಿಸಿದ್ದಾರೆ.
'ಸಾಕಷ್ಟು ದಿಗ್ಗಜರು ಆರ್‌ಸಿಬಿ ತಂಡದ ನಾಯಕರಾಗಿದ್ದಾರೆ. ಈ ಬಾರಿ ನನ್ನನ್ನು ನಾಯಕನನ್ನಾಗಿ ಆಯ್ಕೆ ಮಾಡಿದ್ದು ನನಗೆ ಸಿಕ್ಕ ದೊಡ್ಡ ಗೌರವ ಎಂದು ಭಾವಿಸುತ್ತೇನೆ. ನನ್ನ ನಾಯಕತ್ವದ ಶೈಲಿ ಕೊಂಚ ವಿಭಿನ್ನವಾಗಿರಲಿದೆ. ನಾನು ಶಾಂತಚಿತ್ತವಾಗಿರುತ್ತೇನೆ ಹಾಗೂ ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ತಂಡಕ್ಕೆ ಏನು ಬೇಕು ಏನು ಬೇಡ ಎನ್ನುವುದನ್ನು ಅರ್ಥಮಾಡಿಕೊಂಡು ತಂಡವನ್ನು ಮುನ್ನಡೆಸುತ್ತೇನೆ' ಎಂದು ರಜತ್ ಪಾಟೀದಾರ್ ಹೇಳಿದ್ದಾರೆ.
RCB ನೂತನ ನಾಯಕನ ಘೋಷಣೆ ಬೆನ್ನಲ್ಲೇ ಮಹತ್ವದ ಅಪ್‌ಡೇಟ್ ಕೊಟ್ಟ ವಿರಾಟ್ ಕೊಹ್ಲಿ!
ನಾವು ಯಾವುದನ್ನು ಹೆಚ್ಚು ಎಕ್ಸ್‌ಪ್ರೆಸ್ ಮಾಡೊಲ್ಲ ಹಾಗೆಯೇ ಒತ್ತಡದ ಸಂದರ್ಭಗಳಲ್ಲಿ ಗಾಬರಿಯಾಗುವುದಿಲ್ಲ. ಇದೇ ನನ್ನ ಶಕ್ತಿ ಎಂದು ಭಾವಿಸುತ್ತೇನೆ. ನಮ್ಮ ತಂಡದಲ್ಲಿ ಸಾಕಷ್ಟು ಅನುಭವಿ ನಾಯಕರಿದ್ದಾರೆ. ಅವರೆಲ್ಲರ ಸಲಹೆಗಳನ್ನು ಅಳವಡಿಸಿಕೊಳ್ಳುವುದರಿಂದ ನನ್ನ ನಾಯಕತ್ವಕ್ಕೆ ಅನುಕೂಲವಾಗಲಿದೆ ಎಂದು ಭಾವಿಸುತ್ತೇನೆ. ಆರ್‌ಸಿಬಿ ಫ್ರಾಂಚೈಸಿ ಕಳೆದ ಮೂರ್ನಾಲ್ಕು ವರ್ಷದಿಂದ ನನ್ನ ಮೇಲೆ ಸಾಕಷ್ಟು ನಂಬಿಕೆ ಹಾಗೂ ಪ್ರೀತಿಯನ್ನಿಟ್ಟು ನಾಯಕರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಪಾಟೀದಾರ್ ಹೇಳಿದ್ದಾರೆ.
ಆರ್‌ಸಿಬಿಯೊಂದಿಗಿನ ನನ್ನ ಪ್ರಯಾಣ ಸಾಕಷ್ಟು ಸ್ಮರಣೀಯವಾಗಿದೆ. ಈ ಪ್ರಯಾಣದಲ್ಲಿ ನಾನು ಸಾಕಷ್ಟು ಏರಿಳಿತಗಳನ್ನು ಅನುಭವಿಸಿದ್ದೇನೆ. ನಾನು 2021ರಲ್ಲಿ ಆರ್‌ಸಿಬಿ ತಂಡವನ್ನು ಕೂಡಿಕೊಂಡೆ. ಆದರೆ ಮರು ವರ್ಷ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ನನ್ನನ್ನು ಯಾರೂ ಖರೀದಿಸಲಿಲ್ಲ. ಆಗ ನನಗೆ ಮತ್ತೊಂದು ಅವಕಾಶ ಸಿಗುತ್ತೋ ಇಲ್ಲವೋ ಎಂದು ಒಂದು ಸ್ವಲ್ಪ ಎಮೋಷನಲ್ ಆಗಿದ್ದೆ. ಆದರೆ ನನಗೆ ಬದಲಿ ಆಟಗಾರನ ರೂಪದಲ್ಲಿ ಮತ್ತೊಮ್ಮೆ ಆರ್‌ಸಿಬಿ ತಂಡ ಕೂಡಿಕೊಳ್ಳುವ ಅವಕಾಶ ಒದಗಿ ಬಂತು. ನನಗೆ ಹೀಗೆ ಅವಕಾಶ ಸಿಕ್ಕಿದೆ ಎಂದರೆ ಮುಂದೆ ಇನ್ನೂ ಅವಕಾಶ ಸಿಕ್ಕೆ ಸಿಗುತ್ತದೆ ಎಂದು ಆಗಲೇ ಅಂದುಕೊಂಡೆ. ನನಗೆ ಎರಡನೇ ಅವಕಾಶ ನೀಡಿದ್ದಕ್ಕಾಗಿ ನಾನು ಫ್ರಾಂಚೈಸಿಗೆ ಧನ್ಯವಾದಗಳನ್ನು ಹೇಳುತ್ತೇನೆ.
ಆರ್‌ಸಿಬಿ ತಂಡಕ್ಕೆ ಹೊಸ ಕ್ಯಾಪ್ಟನ್ ಘೋಷಣೆ! ಇನ್ನಾದ್ರೂ ಐಪಿಎಲ್ ಕಪ್ ಗೆಲ್ಲುತ್ತಾ ಬೆಂಗಳೂರು?
2023ರಲ್ಲಿ ಗಾಯಗೊಂಡು ಸಂಪೂರ್ಣ ಐಪಿಎಲ್‌ನಿಂದ ಹೊರಬಿದ್ದಾಗ ಆರ್‌ಸಿಬಿ ಅಭಿಮಾನಿಗಳು ನನ್ನನ್ನು ಸಪೋರ್ಟ್ ಮಾಡಿದ ರೀತಿಯನ್ನು ಮರೆಯಲು ಸಾಧ್ಯವಿಲ್ಲ. ನಂಬಿಕೆ ನನ್ನ ದೊಡ್ಡ ಶಕ್ತಿ. ಕಳೆದ ವರ್ಷ ನಮ್ಮ ತಂಡ ಕಪ್ ಮಾಡಿದ ರೀತಿ ನನ್ನ ಪಾಲಿನ ಒಳ್ಳೆಯ ಕ್ಷಣಗಳಲ್ಲಿ ಒಂದು. ಇದಾದ ಬಳಿಕ ನಾನು ಆರ್‌ಸಿಬಿ ತಂಡದ ರೀಟೈನ್ ಆಟಗಾರ ಎನಿಸಿಕೊಂಡೆ. ರೀಟೈನ್ ಆಟಗಾರರಾಗುವುದು ದೊಡ್ಡ ವಿಚಾರ. ಇಷ್ಟು ದೊಡ್ಡ ಫ್ರಾಂಚೈಸಿ ಕೇವಲ ಮೂರು ಆಟಗಾರರನ್ನು ರೀಟೈನ್ ಮಾಡಿಕೊಂಡಿತು. ಆ ಪೈಕಿ ನಾನು ಒಬ್ಬ ಆಗಿದ್ದು ದೊಡ್ಡ ಗೌರವವೇ ಸರಿ. ಇದೀಗ ನನಗೆ ಮತ್ತೊಂದು ದೊಡ್ಡ ರೋಲ್ ಸಿಕ್ಕಿದೆ. ಇದಕ್ಕಾಗಿ ನಾನು ತುಂಬಾ ಖುಷಿಯಾಗಿದ್ದೇನೆ ಹಾಗೂ ಮುಂಬರುವ ಐಪಿಎಲ್‌ಗೆ ರೆಡಿ ಎನ್ನುವ ಸ್ಪಷ್ಟ ಸಂದೇಶವನ್ನು ರಜತ್ ಪಾಟೀದಾರ್ ನೀಡಿದ್ದಾರೆ.
18ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಮುಂಬರುವ ಮಾರ್ಚ್ 21ರಿಂದ ಆರಂಭವಾಗಲಿದೆ. ರಜತ್ ಪಾಟೀದಾರ್ ನಾಯಕತ್ವದಲ್ಲಿ ಆರ್‌ಸಿಬಿ ತಂಡವು ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.