ಹಲವು ಶಾಕ್‌ಗಳ ನಡುವೆ ಆರ್‌ಸಿಬಿಗೆ ಗುಡ್‌ ನ್ಯೂಸ್; ತಂಡ ಕೂಡಿಕೊಂಡ ಬಲಿಷ್ಠ ಆಟಗಾರ!

Published : May 15, 2025, 12:02 PM IST
ಹಲವು ಶಾಕ್‌ಗಳ ನಡುವೆ ಆರ್‌ಸಿಬಿಗೆ ಗುಡ್‌ ನ್ಯೂಸ್; ತಂಡ ಕೂಡಿಕೊಂಡ ಬಲಿಷ್ಠ ಆಟಗಾರ!

ಸಾರಾಂಶ

ಐಪಿಎಲ್ ಮೇ ೧೭ರಿಂದ ಪುನರಾರಂಭವಾಗಲಿದ್ದು, ಆರ್‌ಸಿಬಿ ಮತ್ತು ಕೆಕೆಆರ್ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಗಾಯಗೊಂಡಿದ್ದ ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಚೇತರಿಸಿಕೊಂಡಿದ್ದು ತಂಡಕ್ಕೆ ಲಭ್ಯರಿದ್ದಾರೆ. ಪಾಟೀದಾರ್ ನಾಯಕತ್ವದಲ್ಲಿ ಆರ್‌ಸಿಬಿ ಉತ್ತಮ ಪ್ರದರ್ಶನ ತೋರಿದ್ದು, ಪ್ಲೇ ಆಫ್‌ಗೆ ತಲುಪಲು ಹತ್ತಿರದಲ್ಲಿದೆ. ವಿದೇಶಿ ಆಟಗಾರರ ಲಭ್ಯತೆ ಅನುಮಾನದ ನಡುವೆ ಪಾಟೀದಾರ್ ಆಗಮನ ತಂಡದ ಬಲ ಹೆಚ್ಚಿಸಲಿದೆ.

ಬೆಂಗಳೂರು: ಬಹುನಿರೀಕ್ಷಿತ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಭಾರತ-ಪಾಕ್ ಯುದ್ದ ಭೀತಿಯ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿತ್ತು. ಇದೀಗ ಮೇ 17ರಿಂದ ಟೂರ್ನಿಯು ಪುನರಾರಂಭಗೊಳ್ಳಲಿದೆ. ಐಪಿಎಲ್ ಟೂರ್ನಿಯ ಪುನರಾರಂಭ ಪಂದ್ಯದ ಮೊದಲ ಮುಖಾಮುಖಿಯಲ್ಲಿ ಬಲಿಷ್ಠ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈಗಾಗಲೇ ಹಲವು ವಿದೇಶಿ ಆಟಗಾರರು ಭಾರತ ತೊರೆದಿದ್ದು, ಕೆಲವು ಆಟಗಾರರು ವಾಪಾಸ್ ಐಪಿಎಲ್ ಆಡಲು ಭಾರತಕ್ಕೆ ಬರುವುದು ಅನುಮಾನ ಎನ್ನುವಂತ ಮಾತುಗಳು ಕೇಳಿ ಬಂದಿವೆ. ಇದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿತ್ತು. ಇದೆಲ್ಲದರ ನಡುವೆ ಆರ್‌ಸಿಬಿ ತಂಡದ ಪಾಲಿಗೆ ಗುಡ್‌ ನ್ಯೂಸ್ ಸಿಕ್ಕಿದೆ. 

ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟೀದಾರ್, ಗಾಯದಿಂದ ಚೇತರಿಸಿಕೊಂಡಿದ್ದು, ತಂಡದ ಆಯ್ಕೆಗೆ ಲಭ್ಯವಿದ್ದಾರೆ ಎಂದು ವರದಿಯಾಗಿದೆ. ಸ್ಪೋಟಕ ಬ್ಯಾಟರ್ ಆಗಿರುವ ರಜತ್ ಪಾಟೀದಾರ್, ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಪಂದ್ಯದ ವೇಳೆ ಕ್ಷೇತ್ರರಕ್ಷಣೆ ಮಾಡುವ ಸಂದರ್ಭದಲ್ಲಿ ಗಾಯಗೊಂಡಿದ್ದರು. ಪಾಟೀದಾರ್ ಅವರಿಗಾದ ಗಾಯದ ಪರಿಣಾಮ ಅವರು ಇನ್ನುಳಿದ ಐಪಿಎಲ್‌ ಪಂದ್ಯಗಳಿಂದಲೇ ಹೊರಬೀಳಲಿದ್ದಾರೆ ಎನ್ನುವಂತಹ ಮಾತುಗಳು ಕೇಳಿ ಬಂದಿದ್ದವು. ಆದರೆ ಇದೀಗ ಪಾಟೀದಾರ್ ಕುರಿತಂತೆ ಮಹತ್ವದ ಅಪ್‌ಡೇಡ್ ಹೊರಬಿದ್ದಿದ್ದು, ಕ್ಯಾಪ್ಟನ್ ಆರ್‌ಸಿಬಿ ತಂಡ ಕೂಡಿಕೊಂಡಿದ್ದಾರೆ. ಆದರೆ ಕೋಲ್ಕತಾ ನೈಟ್ ರೈಡರ್ಸ್ ಎದುರು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುತ್ತಾರೆಯೋ ಇಲ್ಲವೋ ಎನ್ನುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಅದ್ಭುತವಾಗಿದೆ ರಜತ್ ಪಾಟೀದಾರ್ ಪ್ರದರ್ಶನ:
ಪ್ರಸಕ್ತ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರದರ್ಶನ ಅದ್ಭುತವಾಗಿದೆ. ರಜತ್ ಪಾಟೀದಾರ್ ನೇತೃತ್ವದಲ್ಲಿ ಆರ್‌ಸಿಬಿ ತಂಡವು 11 ಪಂದ್ಯಗಳನ್ನಾಡಿ 8 ಗೆಲುವು ಹಾಗೂ 3 ಸೋಲು ಸಹಿತ 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆರ್‌ಸಿಬಿ ತಂಡವು ಪ್ಲೇ ಆಫ್‌ಗೇರಬೇಕಿದ್ದರೆ ಇನ್ನುಳಿದ ಮೂರು ಪಂದ್ಯಗಳ ಪೈಕಿ ಕನಿಷ್ಠ ಒಂದು ಪಂದ್ಯ ಗೆದ್ದರೂ ಅಧಿಕೃತವಾಗಿ ಪ್ಲೇ ಆಫ್‌ಗೇರಲಿದೆ. ಇನ್ನು ಎರಡು ಪಂದ್ಯ ಗೆದ್ದರೇ ಆರ್‌ಸಿಬಿ ಟಾಪ್ 2 ಪಟ್ಟಿಯೊಳಗೆ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲಿದೆ. ಆರ್‌ಸಿಬಿ ತಂಡದ ಅದ್ಭುತ ಪ್ರದರ್ಶನದ ಹಿಂದೆ ಪಾಟೀದಾರ್ ಅವರ ನಾಯಕತ್ವದ ರೀತಿ ಪ್ರಮುಖ ಪಾತ್ರವಹಿಸಿದೆ. ಇನ್ನು ಪಾಟೀದಾರ್ ಈ ಆವೃತ್ತಿಯ ಐಪಿಎಲ್‌ನಲ್ಲಿ 11 ಪಂದ್ಯಗಳನ್ನಾಡಿ 140.58ರ ಸ್ಟ್ರೈಕ್‌ರೇಟ್‌ನಲ್ಲಿ 239 ರನ್ ಸಿಡಿಸಿದ್ದಾರೆ. ಈ ಪೈಕಿ ಅವರಿಂದ ಎರಡು ಆಕರ್ಷಕ 50+ ಇನ್ನಿಂಗ್ಸ್‌ ಕೂಡಾ ಮೂಡಿ ಬಂದಿವೆ.

ಆರ್‌ಸಿಬಿ ಬಲ ಹೆಚ್ಚಿಸಲಿದೆ ಪಾಟೀದಾರ್ ಎಂಟ್ರಿ!
ಈ ಮೊದಲು ನಿಗದಿಯಾಗಿದ್ದಕ್ಕಿಂತ ಐಪಿಎಲ್ ಟೂರ್ನಿ ಕೊಂಚ ಮುಂದೆ ಹೋಗಿರುವುದು, ಕೆಲ ವಿದೇಶಿ ಆಟಗಾರರು ಮತ್ತೆ ಐಪಿಎಲ್‌ಗೆ ತಮ್ಮ ತಂಡಗಳನ್ನು ಕೂಡಿಕೊಳ್ಳುವುದು ಅನುಮಾನ ಎನಿಸಿದೆ. ಹೀಗಿರುವಾಗ ರಜತ್ ಪಾಟೀದಾರ್ ಆರ್‌ಸಿಬಿ ತಂಡದ ಜತೆಗಿದ್ದರೇ ತಂಡದ ಮನೋಬಲ ಹೆಚ್ಚಲಿದೆ. ಇದೇ ಮೇ 29ರಿಂದ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವೆ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿ ಜರುಗಲಿದೆ. ಇದಾದ ಬಳಿಕ ಜೂನ್ 11ರಿಂದ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಕೂಡಾ ಆರಂಭವಾಗಲಿದೆ. ಹೀಗಾಗಿ ಯಾವೆಲ್ಲಾ ವಿದೇಶಿ ಆಟಗಾರರು ಐಪಿಎಲ್‌ಗೆ ಬರುತ್ತಾರೆ ಎನ್ನುವ ಕುತೂಹಲ ಕೂಡಾ ಜೋರಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ