
ಜೈಪುರ: ಕಳೆದ ಪಂದ್ಯದಲ್ಲಿ 14 ವರ್ಷದ ವೈಭವ್ ಸೂರ್ಯವಂಶಿ ಅಬ್ಬರದ ಶತಕದ ನೆರವಿನಿಂದ ಗುಜರಾತ್ ಟೈಟಾನ್ಸ್ ವಿರುದ್ಧ ಗೆದ್ದಿದ್ದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಗುರುವಾರ 5 ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸವಾಲು ಎದುರಾಗಲಿದೆ. ರಾಜಸ್ಥಾನಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಸೋತರೆ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ.
ವೈಭವ್ ಸೂರ್ಯವಂಶಿ ಅಮೋಘ ಆಟದ ಹೊರತಾಗಿ ರಾಜಸ್ಥಾನ ರಾಯಲ್ಸ್ ಈ ಬಾರಿ ತೀರಾ ಕಳಪೆ ಪ್ರದರ್ಶನ ನೀಡಿದೆ. ಆಡಿರುವ 10 ಪಂದ್ಯಗಳಲ್ಲಿ ಕೇವಲ 3ರಲ್ಲಿ ಗೆದ್ದಿದ್ದು, 7 ಸೋಲನುಭವಿಸಿದೆ. ಪ್ಲೇ-ಆಫ್‌ಗೇರಲು ಕನಿಷ್ಠ 7 ಗೆಲುವು ಬೇಕಿರುವ ಕಾರಣ, ಇನ್ನುಳಿದ ಎಲ್ಲಾ 4 ಪಂದ್ಯಗಳಲ್ಲೂ ಗೆಲ್ಲಬೇಕಿದೆ. ಹೀಗಾಗಿ ಮುಂಬೈ ವಿರುದ್ಧ ಸೋತರೆ ತಂಡ ಹೊರಬೀಳುವುದು ಖಚಿತ.
ಐಪಿಎಲ್ ಪ್ಲೇ ಆಫ್ ರೇಸ್‌ನಿಂದ ಚೆನ್ನೈ ಕಿಕೌಟ್; ಧೋನಿ ಪಡೆಗೆ ತವರಿನಲ್ಲೇ ಮುಖಭಂಗ
ಕಳೆದ ಕೆಲ ಪಂದ್ಯಗಳಿಂದ ರಾಜಸ್ಥಾನ ರಾಯಲ್ಸ್ ತಂಡದಿಂದ ಹೊರಗುಳಿದಿದ್ದ ಸಂಜು ಸ್ಯಾಮ್ಸನ್ ಫಿಟ್ ಆಗಿದ್ದು, ನೆಟ್ಸ್‌ನಲ್ಲಿ ಬೆವರು ಹರಿಸುತ್ತಿದ್ದಾರೆ. ಹೀಗಿದ್ದೂ ಇಂದಿನ ಪಂದ್ಯಕ್ಕೆ ಅವರು ಲಭ್ಯವಿದ್ದಾರೆಯೇ ಇಲ್ಲವೇ ಎನ್ನುವುದಕ್ಕೆ ಟಾಸ್ ವೇಳೆಯೇ ಉತ್ತರ ಸಿಗಬೇಕಿದೆ. ಇನ್ನು ಯಶಸ್ವಿ ಜೈಸ್ವಾಲ್ ಕೂಡಾ ಕಳೆದ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಸಿಡಿಸಿ ಮಿಂಚಿದ್ದರು. ಹೀಗಾಗಿ ಇಂದು ಜೈಸ್ವಾಲ್ ಅವರಿಂದ ದೊಡ್ಡ ಇನ್ನಿಂಗ್ಸ್ ನಿರೀಕ್ಷಿಸಲಾಗುತ್ತಿದೆ. ಇನ್ನುಳಿದಂತೆ ನಿತೀಶ್ ರಾಣಾ, ರಿಯಾನ್ ಪರಾಗ್, ಧೃವ್ ಜುರೆಲ್ ಹಾಗೂ ಶಿಮ್ರೊನ್ ಹೆಟ್ಮೇಯರ್ ಜವಾಬ್ದಾರಿಯುತ ಆಟ ಪ್ರದರ್ಶಿಸಬೇಕಿದೆ. ಇನ್ನು ಬೌಲಿಂಗ್‌ನಲ್ಲಿ ಜೋಫ್ರಾ ಆರ್ಚರ್ ಅವರನ್ನು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಹೆಚ್ಚಾಗಿ ನೆಚ್ಚಿಕೊಂಡಿದ್ದು, ಮಹೀಶ್ ತೀಕ್ಷಣ, ಸಂದೀಪ್ ಶರ್ಮಾ, ತುಷಾರ್ ದೇಶಪಾಂಡೆ ಹೊಣೆಯರಿತು ಪ್ರದರ್ಶನ ತೋರಿದರಷ್ಟೇ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಲು ಸಾಧ್ಯವಾಗುತ್ತದೆ.
ಮತ್ತೊಂದೆಡೆ ಮುಂಬೈ ತಂಡ ಕಳೆದ 5 ಪಂದ್ಯಗಳಲ್ಲೂ ಗೆದ್ದಿದ್ದು, ಸತತ 6ನೇ ಜಯದ ಕಾತರದಲ್ಲಿದೆ. ಆರಂಭಿಕ 5 ಪಂದ್ಯಗಳ ಪೈಕಿ 4ರಲ್ಲಿ ಸೋತು ಅಂಕಪಟ್ಟಿಯಲ್ಲಿ ಪಾತಾಳಕ್ಕಿಳಿದಿದ್ದ ತಂಡ ಬಳಿಕ ಪುಟಿದೆದ್ದು ಈಗ 3ನೇ ಸ್ಥಾನದಲ್ಲಿದ್ದು, ಮತ್ತೊಂದು ಗೆಲುವಿನ ಮೂಲಕ ಪ್ಲೇ-ಆಫ್‌ಗೆ ಮತ್ತಷ್ಟು ಹತ್ತಿರವಾಗುವ ವಿಶ್ವಾಸದಲ್ಲಿದೆ.
ಧೋನಿ ಪಡೆ ಮೇಲೆ ಸೇಡು ತೀರಿಸಿಕೊಂಡ ಚಹಲ್; ಹ್ಯಾಟ್ರಿಕ್ ಬಲಿ ಪಡೆದ ಯುಜಿ!
ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ಸದ್ಯ 10 ಪಂದ್ಯಗಳನ್ನಾಡಿ 6 ಗೆಲುವು ಹಾಗೂ 4 ಸೋಲು ಸಹಿತ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ ಗೆದ್ದರೇ, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ವಿಶ್ವಾಸದಲ್ಲಿದೆ.
ಆರಂಭದಲ್ಲಿ ಕೊಂಚ ಮಂಕಾಗಿದ್ದ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್, ಪ್ಲೇ ಆಫ್ ಲೆಕ್ಕಾಚಾರ ಸಮೀಪಿಸುತ್ತಿದ್ದಂತೆಯೇ ಎಚ್ಚೆತ್ತುಕೊಂಡಿದ್ದು, ಅದ್ಭುತ ಪ್ರದರ್ಶನ ನೀಡುತ್ತಿದೆ. ರಿಯನ್ ರಿಕೆಲ್ಟನ್ ಹಾಗೂ ರೋಹಿತ್ ಶರ್ಮಾ ಸ್ಪೋಟಕ ಆರಂಭ ಒದಗಿಸಿಕೊಡುತ್ತಿದ್ದಾರೆ. ಇನ್ನು ವಿಲ್ ಜ್ಯಾಕ್ಸ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ತಿಲಕ್ ವರ್ಮಾ ತಂಡದ ಬ್ಯಾಟಿಂಗ್ ಬೆನ್ನೆಲುಬು ಎನಿಸಿಕೊಂಡಿದ್ದಾರೆ. ಬೌಲಿಂಗ್‌ನಲ್ಲಿ ದೀಪಕ್ ಚಹರ್, ಟ್ರೆಂಟ್ ಬೌಲ್ಟ್ ಹಾಗೂ ಜಸ್ಪ್ರೀತ್ ಬುಮ್ರಾ ಮಾರಕ ದಾಳಿ ನಡೆಸುತ್ತಿದ್ದು, ಟೂರ್ನಿಯಲ್ಲಿ ಸತತ ಗೆಲುವಿನ ನಾಗಾಲೋಟ ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದೆ.
ಇತಿಹಾಸದ ಎದುರು ಈಜಬೇಕಿದೆ ಮುಂಬೈ: ಇಂದಿನ ಪಂದ್ಯಕ್ಕೆ ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂ ಆತಿಥ್ಯ ವಹಿಸಿದೆ. ಮುಂಬೈ ಇಂಡಿಯನ್ಸ್ ತಂಡವು 2012ರಿಂದೀಚಗೆ ಜೈಪುರದಲ್ಲಿ ರಾಜಸ್ಥಾನ ಎದುರು ಗೆದ್ದಿಲ್ಲ. 2012ರಿಂದೀಚಗೆ ಉಭಯ ತಂಡಗಳು ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ 4 ಬಾರಿ ಮುಖಾಮುಖಿಯಾಗಿದ್ದು, ನಾಲ್ಕು ಬಾರಿಯು ಮುಂಬೈಗೆ ಸೋಲು ಎದುರಾಗಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಶತಾಯಗತಾಯ ಗೆಲುವು ಸಾಧಿಸಲು ಹಾರ್ದಿಕ್ ಪಾಂಡ್ಯ ಪಡೆ ಎದುರು ನೋಡುತ್ತಿದೆ.
ಪಂದ್ಯ: ಸಂಜೆ 7.30ಕ್ಕೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.