
ಲಖನೌ: ಐಪಿಎಲ್ ಟಾಪ್-2 ದುಬಾರಿ ಆಟಗಾರರಾದ ರಿಷಭ್ ಪಂತ್ ಹಾಗೂ ಶ್ರೇಯಸ್ ಅಯ್ಯರ್, ಮಂಗಳವಾರ ತಮ್ಮ ತಮ್ಮ ತಂಡಗಳನ್ನು ಪರಸ್ಪರ ಜಿದ್ದಾಜಿದ್ದಿಗೆ ಕಣಕ್ಕಿಳಿಸಲಿದ್ದಾರೆ. ಪಂತ್‌ರ ಲಖನ್ ಸೂಪರ್ ಜೈಂಟ್ಸ್ ತಂಡವು ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ವೀರೋಚಿತ ಸೋಲು ಅನುಭವಿಸಿದರೆ, 2ನೇ ಪಂದ್ಯದಲ್ಲಿ ಘಟಾನುಘಟಿ ಬ್ಯಾಟರ್ ಗಳನ್ನು ಹೊಂದಿರುವ ಸನ್‌ರೈಸರ್ಸ್ ವಿರುದ್ಧ ನಿರಾಯಾಸವಾಗಿ ಜಯಿಸಿತ್ತು. ಆತ್ಮವಿಶ್ವಾಸದೊಂದಿಗೆ ಪಂಜಾಬ್ ಪಡೆಯನ್ನೂ ಹಣಿಯಲು ಕಾತರಿಸುತ್ತಿದೆ.
ಲಖನೌ ಸೂಪರ್ ಜೈಂಟ್ಸ್ ಪರ ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್ ಭರ್ಜರಿ ಫಾರ್ಮ್‌ನಲ್ಲಿದ್ದು, ಪಂಜಾಬ್ ಬೌಲರ್‌ಗಳ ಮೇಲೆ ಸವಾರಿ ಮಾಡಲು ಸಜ್ಜಾಗಿದ್ದಾರೆ. ಲಖನೌ ಬ್ಯಾಟಿಂಗ್‌ಗೆ ಹೋಲಿಸಿದರೆ ಬೌಲಿಂಗ್ ಕೊಂಚ ದುರ್ಬಲವಾಗಿ ಕಾಣಿಸುತ್ತಿದ್ದು, ಶಾರ್ದೂಲ್ ಠಾಕೂರ್ ಮತ್ತೊಮ್ಮೆ ಜವಾಬ್ದಾರಿಯುತ ಪ್ರದರ್ಶನ ತೋರಬೇಕಿದೆ. ಇನ್ನು ನಾಯಕ ರಿಷಭ್ ಪಂತ್ ಮೇಲೆ ತಂಡ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದೆ.
ಇದನ್ನೂ ಓದಿ: ಧೋನಿ ಆರ್‌ಸಿಬಿ ಎದುರು 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದೇಕೆ? ಅಚ್ಚರಿ ಮಾಹಿತಿ ಬಿಚ್ಚಿಟ್ಟ ಕೋಚ್ ಫ್ಲೆಮಿಂಗ್!
ಅದೇ ಮತ್ತೊಂದೆಡೆ, ಗುಜರಾತ್ ಟೈಟಾನ್ಸ್ ವಿರುದ್ಧ 243 ರನ್ ಚಚ್ಚಿದ್ದ ಪಂಜಾಬ್ ಮತ್ತೊಂದು ದೊಡ್ಡ ಸ್ಕೋರ್ ದಾಖಲಿಸಿ ಜಯದ ಪತಾಕೆ ಹಾರಿಸಲು ಎದುರು ನೋಡುತ್ತಿದೆ. ಆದರೆ, ಪಂದ್ಯಕ್ಕೆ ಆತಿಥ್ಯ ವಹಿಸಲಿರುವ ಇಲ್ಲಿನ ಏಕನಾ ಕ್ರೀಡಾಂಗಣದ ಪಿಚ್ ಸ್ಪಿನ್ ಸ್ನೇಹಿಯಾಗಿದ್ದು, ಬ್ಯಾಟರ್‌ಗಳಿಗೆ ರನ್ ಕಲೆ ಹಾಕಲು ಸವಾಲು ಎದುರಾಗಲಿದೆ. ಹೀಗಾಗಿ, ಎರಡೂ ತಂಡಗಳು ತಮ್ಮಲ್ಲಿರುವ ಸ್ಪಿನ್ ಅಸ್ತ್ರಗಳನ್ನು ಸಮರ್ಪಕವಾಗಿ ಬಳಕೆ ಮಾಡಲು ರಣತಂತ್ರ ರೂಪಿಸಿವೆ.
ಇನ್ನೊಂದೆಡೆ ಪಂಜಾಬ್ ಕಿಂಗ್ಸ್ ತಂಡವು ನಾಯಕ ಶ್ರೇಯಸ್ ಅಯ್ಯರ್ ಅವರನ್ನೇ ಹೆಚ್ಚಾಗಿ ಬ್ಯಾಟಿಂಗ್‌ನಲ್ಲಿ ನೆಚ್ಚಿಕೊಂಡಿದೆ. ಇದರ ಜತೆ ಓಮರ್‌ಝೈ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಜತೆಗೆ ಮಾರ್ಕಸ್ ಸ್ಟೋನಿಸ್ ಆಲ್ರೌಂಡ್ ಆಟ ಪ್ರದರ್ಶನ ತೋರಬೇಕಿದೆ. ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಯುಜುವೇಂದ್ರ ಚಹಲ್ ಯಾವ ರೀತಿ ಪ್ರದರ್ಶನ ತೋರಲಿದ್ದಾರೆ ಕಾದು ನೋಡಬೇಕಿದೆ.
ಇದನ್ನೂ ಓದಿ: ಆಟದ ನಡುವೆ ಕ್ರೀಡಾಪಟುಗಳು ಬಾಳೆಹಣ್ಣು ತಿನ್ನಲು ಕಾರಣವೇನು?
ಒಂದು ವೇಳೆ ಪಂಜಾಬ್ ಹೆಚ್ಚುವರಿ ಸ್ಪಿನ್ನರ್ ಅನ್ನು ಕಣಕ್ಕಿಳಿಸಲು ನಿರ್ಧರಿಸಿದರೆ, ಕಳೆದ ಪಂದ್ಯದಲ್ಲಿ ತಂಡದ ಗೆಲುವಿಗೆ ಕಾರಣರಾಗಿದ್ದ ಕರ್ನಾಟಕದ ವೈಶಾಖ್‌ಗೆ ಅವಕಾಶ ಕೈತಪ್ಪಬಹುದು.
ಸಂಭಾವ್ಯ ಆಟಗಾರರ ಪಟ್ಟಿ:
ಲಖನೌ ಸೂಪರ್‌ಜೈಂಟ್ಸ್:
ಏಯ್ಡನ್ ಮಾರ್ಕ್‌ರಮ್, ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್, ರಿಷಭ್ ಪಂತ್(ನಾಯಕ), ಆಯುಷ್ ಬದೋನಿ, ಡೇವಿಡ್ ಮಿಲ್ಲರ್, ಶಾಬಾಜ್ ಅಹಮದ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್, ಪ್ರಿನ್ಸ್ ಯಾದವ್, ಆವೇಶ್ ಖಾನ್, ದಿಗ್ವೇಶ್ ರಾಠಿ.
ಪಂಜಾಬ್ ಕಿಂಗ್ಸ್:
ಪ್ರಿಯಾನ್ಶ್ ಆರ್ಯ, ಪ್ರಭ್‌ಸಿಮ್ರನ್ ಸಿಂಗ್, ಶ್ರೇಯಸ್ ಅಯ್ಯರ್(ನಾಯಕ), ಅಝ್ಮತುಲ್ಲಾ ಓಮರ್‌ಝೈ, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೋಯ್ನಿಸ್, ಶಶಾಂಕ್ ಸಿಂಗ್, ಸೂರ್ಯಾನ್ಶ್ ಶೆಡ್ಗೆ, ಮಾರ್ಕೊ ಯಾನ್ಸೆನ್, ಆರ್ಶದೀಪ್ ಸಿಂಗ್, ಯುಜುವೇಂದ್ರ ಚಹಲ್, ವೈಶಾಕ್ ವಿಜಯ್‌ಕುಮಾರ್/ಹರ್ಪ್ರೀತ್ ಬ್ರಾರ್
ಪಂದ್ಯ: ಸಂಜೆ 7.30ಕ್ಕೆ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.