
ಕೋಲ್ಕತಾ: ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಕೇವಲ 112 ರನ್ ಗುರಿ ಪಡೆದಿದ್ದರೂ, ಕೋಲ್ಕತಾ 95 ರನ್‌ಗೆ ಆಲೌಟಾಗಿತ್ತು. ಅಸ್ಥಿರ ಹೆಸರು ವಾಸಿಯಾಗಿರುವ ಕೋಲ್ಕತಾ ಗೆಲುವಿನ ಹಳಿಗೆ ಮರಳಲು ಕಾಯುತ್ತಿದ್ದು, ಸೋಮವಾರ ಗುಜರಾತ್ ಟೈಟಾನ್ಸ್ ವಿರುದ್ಧ ಸೆಣಸಾಡಲಿದೆ.
ಹಾಲಿ ಚಾಂಪಿಯನ್ ಕೋಲ್ಕತಾ ಈ ಬಾರಿ 7 ಪಂದ್ಯಗಳನ್ನಾಡಿದ್ದು, 3ರಲ್ಲಿ ಗೆದ್ದು 4 ಪಂದ್ಯಗಳಲ್ಲಿ ಸೋಲನುಭವಿಸಿದೆ. ತಂಡ ಸತತವಾಗಿ 2 ಪಂದ್ಯಗಳನ್ನು ಗೆದ್ದೇ ಇಲ್ಲ. ಮತ್ತೊಂದೆಡೆ ಗುಜರಾತ್ 7ರಲ್ಲಿ 5 ಗೆಲುವು ಪಡೆದಿದ್ದು, ಅಗ್ರಸ್ಥಾನದಲ್ಲಿದೆ. ಅಭಿಷೇಕ್ ನಾಯರ್ ಮತ್ತೆ ಕೆಕೆಆರ್ ಸೇರ್ಪಡೆಗೊಂಡಿದ್ದು, ಮಾರ್ಗದರ್ಶನದಲ್ಲಿ ತಂಡ ಗೆಲ್ಲುವ ನಿರೀಕ್ಷೆಯಲ್ಲಿದೆ.
ಲಯ ಕಳೆದುಕೊಂಡಿರುವ ಬ್ಯಾಟರ್‌ಗಳು ತಂಡಕ್ಕೆ ಹೆಚ್ಚಿನ ತಲೆನೋವು ತಂದಿಟ್ಟಿದ್ದಾರೆ. ನಾಯಕ ಅಜಿಂಕ್ಯಾ ರಹಾನೆ(221 ರನ್) ಹಾಗೂ ಯುವ ಬ್ಯಾಟರ್ ರಘುವಂಶಿ(170) ಮಾತ್ರ ಅಲ್ಪಮಿಂಚಿದ್ದು, ವೆಂಕಟೇಶ್ ಅಯ್ಯರ್ 121, ಆ್ಯಂಡ್ರೆ ರಸೆಲ್ 34, ರಿಂಕು ಸಿಂಗ್ ಕೇವಲ 116 ರನ್ ಗಳಿಸಿದ್ದಾರೆ. ಬೌಲಿಂಗ್‌ನಲ್ಲಿ ಹರ್ಷಿತ್, ವೈಭವ್, ನರೈನ್, ವರುಣ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಇದನ್ನೂ ಓದಿ: ಪಂಜಾಬ್‌ಗೆ ನುಗ್ಗಿ ಹೊಡೆದ ಬೆಂಗಳೂರು ಬಾಯ್ಸ್; ತವರಿನಾಚೆ ಸತತ 5 ಮ್ಯಾಚ್ ಗೆದ್ದ ಆರ್‌ಸಿಬಿ!
ಮತ್ತೊಂದೆಡೆ ಗುಜರಾತ್ ಟೈಟಾನ್ಸ್ ಎಲ್ಲಾ ವಿಭಾಗದಲ್ಲೂ ಬಲಿಷ್ಠವಾಗಿದೆ. ಜೋಸ್ ಬಟ್ಲರ್, ಸಾಯಿ ಸುದರ್ಶನ್ ಅಬ್ಬರಿಸುತ್ತಿದ್ದಾರೆ. ಬೌಲಿಂಗ್‌ನಲ್ಲಿ ಸಿರಾಜ್, ಕರ್ನಾಟಕದ ಪ್ರಸಿದ್ಧ ಕೃಷ್ಣ, ಕಿಶೋರ್ ತಂಡದ ಆಧಾರಸ್ತಂಭ ಎನಿಸಿಕೊಂಡಿದ್ದಾರೆ.
ಪಂದ್ಯ: ಸಂಜೆ 7.30ಕ್ಕೆ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್ 116 ರನ್ ಗಳಿಸಿದ್ದಾರೆ.
ಮುಂಬೈಗೆ ಮಂಡಿಯೂರಿದ ಸಿಎಸ್‌ಕೆ
ಮುಂಬೈ: 5 ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಟೂರ್ನಿಯಲ್ಲಿ 6ನೇ ಸೋಲನುಭವಿಸಿದೆ. ಭಾನುವಾರ ಮುಂಬೈ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಧೋನಿ ಪಡೆಗೆ 09 ವಿಕೆಟ್ ಸೋಲು ಎದುರಾಯಿತು. ಸಿಎಸ್‌ಕೆ ವಿರುದ್ಧ ಸತತ 5 ಪಂದ್ಯಗಳಲ್ಲಿ ಸೋತಿದ್ದ ಮುಂಬೈ ಕೊನೆಗೂ ಗೆಲುವಿನ ಹಳಿಗೆ ಮರಳಿ, ಟೂರ್ನಿಯಲ್ಲಿ 4ನೇ ಗೆಲುವು ದಾಖಲಿಸಿತು. ಅತ್ತ ಚೆನ್ನೈ ಇನ್ನುಳಿದ ಎಲ್ಲಾ ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
ಮೊದಲು ಬ್ಯಾಟ್ ಮಾಡಿದ ಚೆನ್ನೈ 5 ವಿಕೆಟ್ ಕಳೆದುಕೊಂಡು ಗಳಿಸಿದ್ದು 176 ರನ್. ಇದು ವಾಂಖೆಡೆಯಲ್ಲಿ ಸಣ್ಣ ಮೊತ್ತ. ಅದನ್ನು ನಿಜವಾಗಿಸುವಂತೆ ಬ್ಯಾಟ್ ಬೀಸಿದ ಮುಂಬೈ 15.4 ಓವರ್‌ಗಳಲ್ಲಿ ಗೆಲುವು ತನ್ನದಾಗಿಸಿಕೊಂಡಿತು.
ಇದನ್ನೂ ಓದಿ: 8ನೇ ತರಗತಿ ಹುಡುಗನ ಐಪಿಎಲ್ ಅಟ ನೋಡಲು ರಾತ್ರಿಯಿಡಿ ಎಚ್ಚರವಿದ್ದೆ: google CEO ಸುಂದರ್ ಪಿಚೈ
ಮೊದಲ ವಿಕೆಟ್‌ಗೆ ರೋಹಿತ್ ಶರ್ಮಾ ಹಾಗೂ ರ್‍ಯಾನ್ ರಿಕೆಲ್ಟನ್ 62 ರನ್ ಸೇರಿಸಿದರು. ಪವರ್-ಪ್ಲೇ ಮುಕ್ತಾಯಗೊಂಡ ಬೆನ್ನಲ್ಲೇ ರಿಕೆಲ್ಟನ್(24)ಗೆ ಜಡೇಜಾ ಪೆವಿಲಿಯನ್ ಹಾದಿ ತೋರಿದರು. ಬಳಿಕ ಸೂರ್ಯಕುಮಾರ್ ಜೊತೆಗೂಡಿ ಇನ್ನಿಂಗ್ಸ್ ಕಟ್ಟಿದ ರೋಹಿತ್, ತಂಡಕ್ಕೆ ದೊಡ್ಡ ಗೆಲುವು ತಂದುಕೊಟ್ಟರು. ರನ್ ಬರ ಎದುರಿಸುತ್ತಿದ್ದ ರೋಹಿತ್, 45 ಎಸೆತಗಳಲ್ಲಿ76 ರನ್ ಬಾರಿಸಿದರು. ಸೂರ್ಯ 68 ರನ್ ಗಳಿಸಿದರು.
ದುಬೆ, ಜಡೇಜಾ ಫಿಫ್ಟಿ: ಇದಕ್ಕೂ ಮುನ್ನ ಚೆನ್ನೈಗೆ ಆಸರೆಯಾಗಿದ್ದು ಶಿವಂ ದುಬೆ, ಜಡೇಜಾ. ಚೊಚ್ಚಲ ಪಂದ್ಯವಾಡಿದ ಆಯುಶ್ ಮಾಥ್ರೆ ಕೇವಲ 15 ಎಸೆತಗಳಲ್ಲೇ 32 ರನ್ ಸಿಡಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. 11 ಓವರಲ್ಲಿ 73 ರನ್ ಗಳಿಸಿದ್ದ ತಂಡ ಬಳಿಕ ಪುಟಿದೆದ್ದಿತು. ಜಡೇಜಾ 35 ಎಸೆತಕ್ಕೆ ಔಟಾಗದೆ 53, ಶಿವಂ ದುಬೆ 32 ಎಸೆತಕ್ಕೆ 50 ರನ್ ಗಳಿಸಿ ತಂಡಕ್ಕೆ ಆಸರೆಯಾದರು.
ಸ್ಕೋರ್: ಚೆನ್ನೈ 20 ಓವರಲ್ಲಿ 176/5 (ಜಡೇಜಾ ಔಟಾಗದೆ 53, ಶಿವಂ ದುಬೆ 50, ಆಯುಶ್ 32, ಬುಮ್ರಾ 2-25)
ಮುಂಬೈ 15.4 ಓವರಲ್ಲಿ 177/1 (ರೋಹಿತ್ ಔಟಾಗದೆ 76, ಸೂರ್ಯ ಔಟಾಗದೆ 68, ಜಡೇಜಾ 28/1 )
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.