7 ಮ್ಯಾಚ್ ಸೋತರೂ ಸಿಎಸ್‌ಕೆಗಿದೆ ಇನ್ನೂ ಇದೇ ಪ್ಲೇ ಆಫ್‌ಗೇರುವ ಲಾಸ್ಟ್‌ ಚಾನ್ಸ್! ಇಲ್ಲಿದೆ ಲೆಕ್ಕಾಚಾರ

Published : Apr 26, 2025, 01:36 PM ISTUpdated : Apr 26, 2025, 02:17 PM IST
7 ಮ್ಯಾಚ್ ಸೋತರೂ ಸಿಎಸ್‌ಕೆಗಿದೆ ಇನ್ನೂ ಇದೇ ಪ್ಲೇ ಆಫ್‌ಗೇರುವ ಲಾಸ್ಟ್‌ ಚಾನ್ಸ್! ಇಲ್ಲಿದೆ ಲೆಕ್ಕಾಚಾರ

ಸಾರಾಂಶ

ಐಪಿಎಲ್ 2025ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 7 ಪಂದ್ಯಗಳನ್ನು ಸೋತಿದ್ದು, ಪ್ಲೇ ಆಫ್ ಪ್ರವೇಶಿಸಲು ಉಳಿದ 5 ಪಂದ್ಯಗಳನ್ನು ಗೆಲ್ಲಲೇಬೇಕಿದೆ. ನಾಯಕ ಋತುರಾಜ್ ಗಾಯಕ್ವಾಡ್ ಗಾಯಗೊಂಡು ಹೊರಬಿದ್ದಿರುವುದು ತಂಡಕ್ಕೆ ಹೊಡೆತ ನೀಡಿದೆ. ಧೋನಿ ನಾಯಕತ್ವದಲ್ಲಿ ತಂಡ ಗೆಲುವಿನ ಹಾದಿಗೆ ಮರಳಬೇಕಿದೆ.

ಬೆಂಗಳೂರು: 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮೊದಲಾರ್ಧ ಮುಕ್ತಾಯವಾಗಿದ್ದು, ಇದೀಗ ದ್ವಿತಿಯಾರ್ಧದ ಪಂದ್ಯಾವಳಿಗಳು ನಡೆಯುತ್ತಿವೆ. 5 ಬಾರಿಯ ಐಪಿಎಲ್ ಚಾಂಪಿಯನ್ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇದೀಗ ಸನ್‌ರೈಸರ್ಸ್ ಹೈದರಾಬಾದ್ ಎದುರು ಮುಗ್ಗರಿಸುತ್ತಿದ್ದಂತೆಯೇ ಪ್ಲೇ ಆಫ್‌ ಕನಸಿಗೆ ಬಹುತೇಕ ಎಳ್ಳುನೀರು ಬಿಟ್ಟಿದೆ. ಹಾಗಂತ ಅಧಿಕೃತವಾಗಿ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿಲ್ಲ. 

ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇದೀಗ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 7 ಪಂದ್ಯಗಳನ್ನು ಸೋಲುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿಯೇ ಉಳಿದುಕೊಂಡಿದೆ. ಆಡಿದ ಒಂಬತ್ತು ಪಂದ್ಯಗಳ ಪೈಕಿ ಧೋನಿ ಪಡೆ ಕೇವಲ ಎರಡು ಪಂದ್ಯಗಳನ್ನಷ್ಟೇ ಜಯಿಸಿದೆ. ಅದರಲ್ಲೂ ತವರಿನಲ್ಲೇ ನಡೆದ ಸನ್‌ರೈಸರ್ಸ್ ಹೈದರಾಬಾದ್ ಎದುರಿನ ಸೋಲು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ.

ಟೂರ್ನಿಯ ಮಧ್ಯದಲ್ಲೇ ನಾಯಕ ಋತುರಾಜ್ ಗಾಯಕ್ವಾಡ್ ಗಾಯದ ಸಮಸ್ಯೆಯಿಂದಾಗಿ ಐಪಿಎಲ್ ಟೂರ್ನಿಯಿಂದಲೇ ಹೊರಬಿದ್ದಿದ್ದು, ಚೆನ್ನೈ ಪಾಲಿಗೆ ದೊಡ್ಡ ಹೊಡೆತ ಎನಿಸಿಕೊಂಡಿತು. ಹೀಗಾಗಿ ಧೋನಿ ಮತ್ತೊಮ್ಮೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ. ಆದರೆ ಗಾಯಕ್ವಾಡ್ ಹೋಗಿ ಧೋನಿ ಕ್ಯಾಪ್ಟನ್ ಆದ್ರೂ ಚೆನ್ನೈ ಅದೃಷ್ಟ ಬದಲಾದಂತೆ ಕಾಣಿಸುತ್ತಿಲ್ಲ. ಒಂದು ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಪ್ಲೇ ಆಫ್ ಪ್ರವೇಶಿಸಬೇಕಿದ್ದರೇ ಇನ್ನುಳಿದ ಐದಕ್ಕೆ ಐದೂ ಪಂದ್ಯಗಳನ್ನು ಗೆಲ್ಲಬೇಕಿದೆ. ಇದರ ಜತೆಗೆ ಕ್ಯಾಲ್ಯೂಕ್ಯುಲೇಟರ್‌ಗೂ ಕೆಲಸ ಕೊಡಬೇಕಿದೆ. ಜತೆಗೆ ಲಕ್ ಕೂಡಾ ಕೈಹಿಡಿಯಬೇಕಿದೆ.

ಬರೀ ಗೆದ್ದರಷ್ಟೇ ಸಾಕಾಗುವುದಿಲ್ಲ ಸಿಎಸ್‌ಕೆಗೆ:
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇದೀಗ 7 ಪಂದ್ಯಗಳನ್ನು ಸೋತಿರುವುದರಿಂದ ಇನ್ನುಳಿದ 5 ಪಂದ್ಯಗಳನ್ನು ಗೆಲ್ಲಬೇಕಿದೆ. ಇದರ ಜತೆ ಜತೆಗೆ ಬೇರೆ ಟೀಂಗಳ ಫಲಿತಾಂಶದ  ಮೇಲೂ ಕಣ್ಣಿಡಬೇಕಿದೆ. ಸಧ್ಯ ಧೋನಿ ಪಡೆಯ ಬಳಿಕ ಎರಡು ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 4 ಅಂಕಗಳಿವೆ. ಇನ್ನುಳಿದ 5 ಪಂದ್ಯಗಳನ್ನು ಜಯಿಸಿದರೆ, ಸಿಎಸ್‌ಕೆ ಬಳಿ 14 ಅಂಕಗಳು ಆಗಲಿವೆ. ಹೀಗಾಗಿ ಉಳಿದ ತಂಡಗಳು 14ಕ್ಕಿಂತ ಹೆಚ್ಚು ಅಂಕ ಕಲೆಹಾಕದೇ ಹೋದರೆ, ಸಿಎಸ್‌ಕೆ ಪ್ಲೇ ಆಫ್‌ಗೇರುವ ಚಾನ್ಸ್ ಹೆಚ್ಚಾಗಲಿದೆ.

ನೆಟ್‌ ರನ್‌ರೇಟ್ ಸುಧಾರಿಸುಕೊಳ್ಳಬೇಕು ಸಿಎಸ್‌ಕೆ:
ಕಳೆದ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೇವಲ 14 ಅಂಕ ಗಳಿಸಿ ಪ್ಲೇ ಆಫ್‌ಗೆ ಎಂಟ್ರಿಕೊಟ್ಟಿತ್ತು. ಕಳೆದ ವರ್ಷದ ಆರ್‌ಸಿಬಿ ತಂಡದ ಪ್ರದರ್ಶನದಿಂದ ಸ್ಪೂರ್ತಿ ಪಡೆದು ಪ್ಲೇ ಆಫ್‌ಗೇರುವ ಕನಸು ಕಾಣುತ್ತಿದೆ ಚೆನ್ನೈ ಸೂಪರ್ ಕಿಂಗ್ಸ್. ಇದು ಸಾಧ್ಯವಾಗಬೇಕಿದ್ದರೇ, ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ತಮ್ಮ ಪಾಲಿನ ಪಂದ್ಯಗಳನ್ನು ಗೆಲ್ಲುತ್ತಲೇ ಹೋಗಬೇಕು. ಸಿಎಸ್‌ಕೆ ತಂಡವು ಉಳಿದ 5 ಪಂದ್ಯಗಳನ್ನು ಗೆಲ್ಲುವುದರ ಜತೆಗೆ -1.302 ನೆಟ್‌ ರನ್‌ರೇಟ್‌ ಸುಧಾರಿಸಿಕೊಳ್ಳಬೇಕು. ಇದರ ಜತೆಗೆ ಅದೃಷ್ಟ ಕೈಹಿಡಿದರಷ್ಟೇ ಧೋನಿ ಪಡೆ ಈಗಲೂ ಪ್ಲೇ ಆಫ್‌ಗೇರಲು ಕೊನೆಯ ಅವಕಾಶ ಇದೆ. ಆದರೆ ಧೋನಿ ಪಡೆಯ ಇನ್ನೊಂದು ಸೋಲು ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಪ್ಲೇ ಆಫ್‌ ಕನಸು ಅಧಿಕೃತವಾಗಿ ನುಚ್ಚುನೂರಾಗಲಿದೆ.

ಸದ್ಯ ಗುಜರಾತ್ ಟೈಟಾನ್ಸ್, ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಟಾಪ್ 4 ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸೈಲೆಂಟ್ ಆದ ಸೌತ್ ಆಫ್ರಿಕಾ , 74 ರನ್‌ಗೆ ಆಲೌಟ್ ಮಾಡಿ 101 ರನ್ ಗೆಲುವು ದಾಖಲಿಸಿದ ಭಾರತ
100 ಸಿಕ್ಸರ್ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ, ಸೌತ್ ಆಫ್ರಿಕಾಗೆ 176 ರನ್ ಟಾರ್ಗೆಟ್