
ಜೆಡ್ಡಾ: 2024ರ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ಶ್ರೇಯಸ್ ಅಯ್ಯರ್ ಪಂಜಾಬ್ ಕಿಂಗ್ಸ್ ತೆಕ್ಕೆಗೆ ಜಾರಿದ್ದಾರೆ. ಇದೀಗ 2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ಶ್ರೇಯಸ್ ಅಯ್ಯರ್ ಅಂತಿಮವಾಗಿ 26.75 ಕೋಟಿ ರುಪಾಯಿಗೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತಿಹೆಚ್ಚು ಮೊತ್ತಕ್ಕೆ ಹರಾಜಾದ ಆಟಗಾರ ಎನ್ನುವ ದಾಖಲೆಗೆ ಶ್ರೇಯಸ್ ಅಯ್ಯರ್ ಪಾತ್ರರಾಗಿದ್ದಾರೆ. ಕಳೆದ ಆವೃತ್ತಿಯ ಐಪಿಎಲ್ ಹರಾಜಿನಲ್ಲಿ ಕೆಕೆಆರ್ ಫ್ರಾಂಚೈಸಿಯು ಮಿಚೆಲ್ ಸ್ಟಾರ್ಕ್ ಅವರನ್ನು 24.75 ಕೋಟಿ ರುಪಾಯಿಗೆ ಖರೀದಿಸಿದ್ದು ಇಲ್ಲಿಯವರೆಗಿನ ದಾಖಲೆಯಾಗಿತ್ತು.
ಐಪಿಎಲ್‌ನಲ್ಲಿ ಯಶಸ್ವಿ ನಾಯಕನಾಗಿ ಹೊರಹೊಮ್ಮಿರುವ ಶ್ರೇಯಸ್ ಅಯ್ಯರ್ ಅವರನ್ನು ಖರೀದಿಸಲು ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯಿತು. ಆರಂಭದಲ್ಲಿ ಕೆಕೆಆರ್ ಫ್ರಾಂಚೈಸಿ ಕೂಡಾ ಶ್ರೇಯಸ್ ಅಯ್ಯರ್‌ಗೆ ಬಿಡ್ ಮಾಡಿತು. ಆದರೆ ಆ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಪೈಪೋಟಿ ನಡೆಯಿತು.
ಎರಡು ತಂಡಗಳು ತಮಗೆ ನಾಯಕನ ಹುಡುಕಾಟ ಇರುವುದರಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ 19 ಕೋಟಿ ರುಪಾಯಿ ಬಿಡ್ ಮಾಡಿತು. ಆದರೆ ಪಂಜಾಬ್ ಕಿಂಗ್ಸ್ ತಂಡವು 20.75 ಕೋಟಿ ರುಪಾಯಿ ಬಿಡ್ ಮಾಡಿತು. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಬರೋಬ್ಬರಿ 22 ಕೋಟಿ ರುಪಾಯಿಗೆ ಬಿಡ್ ಮಾಡಿತು. ಆ ಬಳಿಕವೂ ಎರಡು ಫ್ರಾಂಚೈಸಿಗಳ ನಡುವೆ ಬಿಡ್ಡಿಂಗ್ ನಡೆಯಿತು. ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ದಾಖಲೆಯ 25 ಕೋಟಿ ರುಪಾಯಿ ಬಿಡ್ ಮಾಡಿತು. ಅಂತಿಮವಾಗಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು 26.75 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಯಿತು.
ಐಪಿಎಲ್ ಇತಿಹಾಸದಲ್ಲಿ 51 ಪಂದ್ಯಗಳನ್ನಾಡಿರುವ ಮುಂಬೈ ಮೂಲದ ಶ್ರೇಯಸ್ ಅಯ್ಯರ್, 8 ಅರ್ಧಶತಕ ಸಹಿತ 1104 ರನ್ ಬಾರಿಸಿದ್ದಾರೆ.
ಪಂಜಾಬ್ ಕಿಂಗ್ಸ್ ಧಾರಣ ಪಟ್ಟಿ : ಶಶಾಂಕ್ ಸಿಂಗ್ - 5.5 ಕೋಟಿ, ಪ್ರಭ್ಸಿಮ್ರಾನ್ ಸಿಂಗ್ - 4 ಕೋಟಿ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.