ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ ಖರೀದಿ ಹೆಚ್ಚು ಆಕ್ರಮಣಕಾರಿಯಾಗಿದೆ. ಲಿಸ್ಟ್ ಮಾಡಿದ ಆಟಗಾರರ ಹರಾಜಿಗೆ ಬಂದಾಗ ಹಿಂದೂ ಮುಂದೂ ನೋಡದೆ ದುಬಾರಿ ಮೊತ್ತಕ್ಕೆ ಖರೀದಿಸುತ್ತಿದೆ.
ಜೆಡ್ಡಾ(ನ.24) ಐಪಿಎಲ್ ಹರಾಜು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಆರಂಭದಲ್ಲೇ ಹಲವು ದಾಖಲೆಗಳು ಪುಡಿಯಾಗಿದೆ. ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಸೇಲ್ ಆದ ಆಟಗಾರ ಅನ್ನೋ ಹೆಗ್ಗಳಿಕೆಗೆ ಶ್ರೇಯಸ್ ಅಯ್ಯರ್ ಪಾತ್ರರಾಗಿದ್ದಾರೆ. ಅಯ್ಯರ್ 26.75 ಕೋಟಿ ರೂಪಾಯಿಗೆ ಮಾರಾಟವಾಗಿದ್ದಾರೆ. ಇತ್ತ ಗುಜರಾತ್ ಟೈಟಾನ್ಸ್ ಈ ಬಾರಿಯ ಹರಾಜಿನಲ್ಲಿ ಅಗ್ರೆಸ್ಸೀವ್ ಆಗಿ ಆಟಗಾರರ ಖರೀದಿ ಮಾಡುತ್ತಿದೆ. ತಾನು ಯಾರನ್ನು ಖರೀದಿಸಬೇಕು ಎಂದು ಮೊದಲೇ ಪಟ್ಟಿ ಮಾಡಿರುವ ಆಟಗಾರರ ಹೆಸರು ಹರಾಜಿಗೆ ಬಂದಾಗ ಜಿದ್ದಿಗೆ ಬಿದ್ದು ಖರೀದಿ ಮಾಡುತ್ತಿದೆ. ಕಗಿಸೋ ರಬಡಾ ಖರೀದಿಸಿದ ಬೆನ್ನಲ್ಲೇ ಗುಜರಾತ್ ಟೈಟಾನ್ಸ್ ಇದೀಗ ಇಂಗ್ಲೆಂಡ್ ಸ್ಫೋಟಕ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಖರೀದಿಸಿದೆ.
ಜೋಸ್ ಬಟ್ಲರ್ ಬರೋಬ್ಬರಿ 15.75 ಕೋಟಿ ರೂಪಾಯಿಗೆ ಮಾರಾಟವಾಗಿದ್ದಾರೆ. ಜೋಸ್ ಬಟ್ಲರ್ ಖರೀದಿಸಲು ಹಲವು ತಂಡಗಳು ಪೈಪೋಟಿ ನಡೆಸಿತ್ತು. ಆದರೆ ಗಜುರಾತ್ ಟೈಟಾನ್ಸ್ ತನ್ನ ತೆಕ್ಕೆಗೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದೀಗ ಗುಜರಾತ್ ಟೈಟಾನ್ಸ್ ಆರಂಭದಲ್ಲಿ ಮಾಡಿರುವ 2 ಪಿಕ್ ಉತ್ತಮ ಕಾಂಬಿನೇಷನ್ ಎಂದೇ ಹೇಳಲಾಗುತ್ತಿದೆ. ಬಲಿಷ್ಠ ತಂಡ ಕಟ್ಟುವ ನಿಟ್ಟಿನಲ್ಲಿ ಗುಜರಾತ್ ಟೈಟಾನ್ಸ್ ಖರೀದಿ ಸರಿಯಾದ ದಿಕ್ಕಿನಲ್ಲಿದೆ ಎಂದು ಕ್ರಿಕೆಟ್ ವಿಶ್ಲೇಷಕರು ಹೇಳಿದ್ದಾರೆ.
ಐಪಿಎಲ್ ಹರಾಜಿನ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಶ್ರೇಯಸ್ ಅಯ್ಯರ್!
ಮೊದಲ ಖರೀದಿಯಲ್ಲಿ ಸೌತ್ ಆಫ್ರಿಕಾ ವೇಗಿ ಕಗಿಸೋ ರಬಾಡಗೆ 10.75 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತ್ತು. ಇದರ ಬೆನ್ನಲ್ಲೇ ಬಟ್ಲರ್ ಖರೀದಿಸಿದೆ. ಈ ಮೂಲಕ ಗುಜರಾತ್ ಈ ಬಾರಿಯ ಟ್ರೋಫಿ ಗೆದ್ದೇ ಗೆಲ್ಲುವ ಛಲದಲ್ಲಿದೆ.
ಐಪಿಎಲ್ ಆಟಗಾರರ ಮೆಗಾ ಹರಾಜಿಗೆ ಒಟ್ಟು 1574 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದರು. ಈ ಪೈಕಿ ಬಿಸಿಸಿಐ 574 ಆಟಗಾರರನ್ನು ಶಾರ್ಟ್‌ಲಿಸ್ಟ್ ಮಾಡಿತ್ತು. ಇನ್ನು ಕೊನೆಯ ಕ್ಷಣದಲ್ಲಿ ಜೋಫ್ರಾ ಆರ್ಚರ್ ಸೇರಿದಂತೆ ಮೂವರು ಆಟಗಾರರು ಸೇರ್ಪಡೆಯಾಗಿದ್ದು, ಒಟ್ಟು 577 ಆಟಗಾರರು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಅಂತಾರಾಷ್ಟ್ರೀಯ ಪಂದ್ಯವಾಡಿದ 48 ಭಾರತೀಯರು, 195 ವಿದೇಶಿ ಆಟಗಾರರು ಪಟ್ಟಿಯಲ್ಲಿದ್ದಾರೆ. ಭಾರತದ 319 ಅನ್‌ಕ್ಯಾಪ್ಡ್, ವಿದೇಶದ 12 ಅನ್‌ಕ್ಯಾಪ್ಡ್ ಆಟಗಾರರ ಜೊತೆಗೆ 3 ಐಸಿಸಿ ಅಸೋಸಿಯೇಟ್ ರಾಷ್ಟ್ರಗಳ ಆಟಗಾರರೂ ಹರಾಜಿನಲ್ಲಿ ಪಾಲ್ಗೊಂಡಿದ್ದಾರೆ. 10 ತಂಡಗಳಲ್ಲಿ ಒಟ್ಟು 204 ಕ್ರಿಕೆಟ್ ಆಟಗಾರರನ್ನು ಖರೀದಿಸಲು ಅವಕಾಶವಿದೆ. ಇವರಲ್ಲಿ 70 ವಿದೇಶಿ ಆಟಗಾರರನ್ನು ಖರೀದಿಸಬಹುದಾಗಿದೆ.