Latest Videos

IPL 2024 ಫೈನಲ್‌ಗೇರಲು ಸನ್‌ರೈಸರ್ಸ್‌ vs ರಾಯಲ್ಸ್‌ ಹಣಾಹಣಿ

By Kannadaprabha NewsFirst Published May 24, 2024, 9:53 AM IST
Highlights

ಗುಂಪು ಹಂತದಲ್ಲಿ 2ನೇ ಸ್ಥಾನಿಯಾಗಿದ್ದ ಸನ್‌ರೈಸರ್ಸ್‌ ಕ್ವಾಲಿಫೈಯರ್‌-1ರಲ್ಲಿ ಕೋಲ್ಕತಾ ವಿರುದ್ಧ ಸೋತಿತ್ತು. ಅತ್ತ ರಾಜಸ್ಥಾನ ಎಲಿಮಿನೇಟರ್‌ ಪಂದ್ಯದಲ್ಲಿ ಆರ್‌ಸಿಬಿಯನ್ನು ಸೋಲಿಸಿ 2ನೇ ಕ್ವಾಲಿಫೈಯರ್‌ ಪ್ರವೇಶಿಸಿದೆ.

ಚೆನ್ನೈ(ಮೇ.24): 17ನೇ ಆವೃತ್ತಿ ಐಪಿಎಲ್‌ನಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ಈಗಾಗಲೇ ಫೈನಲ್‌ಗೇರಿದ್ದು, ಪ್ರಶಸ್ತಿ ಸುತ್ತಿಗೇರುವ ಮತ್ತೊಂದು ತಂಡ ಯಾವುದು ಎಂಬುದು ಶುಕ್ರವಾರ ನಿರ್ಧಾರವಾಗಲಿದೆ. 2ನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ಮುಖಾಮುಖಿಯಾಗಲಿದ್ದು, ಗೆಲ್ಲುವ ತಂಡ ಫೈನಲ್‌ ಪ್ರವೇಶಿಸಲಿದೆ. ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ.

ಗುಂಪು ಹಂತದಲ್ಲಿ 2ನೇ ಸ್ಥಾನಿಯಾಗಿದ್ದ ಸನ್‌ರೈಸರ್ಸ್‌ ಕ್ವಾಲಿಫೈಯರ್‌-1ರಲ್ಲಿ ಕೋಲ್ಕತಾ ವಿರುದ್ಧ ಸೋತಿತ್ತು. ಅತ್ತ ರಾಜಸ್ಥಾನ ಎಲಿಮಿನೇಟರ್‌ ಪಂದ್ಯದಲ್ಲಿ ಆರ್‌ಸಿಬಿಯನ್ನು ಸೋಲಿಸಿ 2ನೇ ಕ್ವಾಲಿಫೈಯರ್‌ ಪ್ರವೇಶಿಸಿದೆ.

ಆರ್‌ಸಿಬಿ ಟೀಮ್‌ನ ಕಾಲೆಳೆದು 'Bengaluru Cant' ಪೋಸ್ಟ್‌ ಮಾಡಿದ ತುಷಾರ್‌ ದೇಶಪಾಂಡೆ, ಬಳಿಕ ಡಿಲೀಟ್‌!

ತೀವ್ರ ಪೈಪೋಟಿ: ಈ ಪಂದ್ಯ ಚೆನ್ನೈನ ಚೆಪಾಕ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರಣ ಕುತೂಹಲ ಹೆಚ್ಚಿಸಿದ್ದು, ಸನ್‌ರೈಸರ್ಸ್‌ನ ಸ್ಫೋಟಕ ಬ್ಯಾಟರ್‌ಗಳು ಹಾಗೂ ರಾಜಸ್ಥಾನದ ತಾರಾ ಸ್ಪಿನ್ನರ್‌ಗಳ ನಡುವೆ ತೀವ್ರ ಪೈಪೋಟಿ ಕಂಡುಬರುವ ನಿರೀಕ್ಷೆಯಿದೆ.

ಸನ್‌ರೈಸರ್ಸ್‌ ಆಕ್ರಮಣಕಾರಿ ಆಟದ ಮೂಲಕವೇ ಗಮನ ಸೆಳೆಯುತ್ತಿದೆ. ಆದರೆ ಚೆನ್ನೈ ಪಿಚ್‌ ಬೌಲಿಂಗ್‌ ಸ್ನೇಹಿಯಾಗಿರುವ ಕಾರಣ ತಂಡ ಯಾವ ರೀತಿ ಪ್ರದರ್ಶನ ನೀಡಲಿದೆ ಎಂಬ ಕುತೂಹಲಿದೆ. ಅಲ್ಲದೆ ಇದೇ ಕ್ರೀಡಾಂಗಣದಲ್ಲಿ ಸಿಎಸ್‌ಕೆ ವಿರುದ್ಧ ಲೀಗ್‌ ಹಂತದಲ್ಲಿ ಸನ್‌ರೈಸರ್ಸ್‌ ಕೇವಲ 134ಕ್ಕೆ ಆಲೌಟಾಗಿತ್ತು.

ಹೀಗಾಗಿ ಸ್ಫೋಟಕ ಬ್ಯಾಟರ್‌ಗಳಾದ ಟ್ರ್ಯಾವಿಸ್‌ ಹೆಡ್‌(533 ರನ್‌), ಅಭಿಷೇಲ್‌ ಶರ್ಮಾ(470), ಹೆನ್ರಿಚ್‌ ಕ್ಲಾಸೆನ್‌(413)ಗೆ ರಾಜಸ್ಥಾನದಿಂದ ಪ್ರಬಲ ಸವಾಲು ಎದುರಾಗುವುದು ಖಚಿತ. ಅಲ್ಲದೆ ಆರಂಭಿಕರು ವಿಫಲರಾದರೆ ಬಳಿಕ ತಂಡ ಹೀನಾಯ ಪ್ರದರ್ಶನ ತೋರಿದ ಉದಾಹರಣೆ ಇದ್ದು, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದರೆ ತಂಡದ ಫೈನಲ್‌ ಹಾದಿ ಕಷ್ಟವಾಗಲಿದೆ. ಬೌಲರ್‌ಗಳೂ ತಂಡದ ಕೈಹಿಡಿಯಬೇಕಾದ ಅಗತ್ಯವಿದೆ.

ಆರ್‌ಸಿಬಿಯ ಹೊಸ ಅಧ್ಯಾಯ ಮುಕ್ತಾಯ; ರಾಜಸ್ಥಾನ ಎದುರು ಹೋರಾಡಿ ಸೋತ ಬೆಂಗಳೂರು

ರಾಯಲ್ಸ್‌ಗೂ ಸವಾಲು: ಲೀಗ್‌ ಹಂತದ ಕೊನೆಯಲ್ಲಿ ಸತತ 4 ಪಂದ್ಯ ಗೆದ್ದರೂ ಆರ್‌ಸಿಬಿ ವಿರುದ್ಧ ಅಬ್ಬರಿಸಿದ್ದ ರಾಜಸ್ಥಾನ ಸದ್ಯ ಗೆಲುವಿನ ಹುಮ್ಮಸ್ಸಿನಲ್ಲಿದೆ. ಆದರೆ ತಂಡ ಸನ್‌ರೈಸರ್ಸ್‌ನ ಕಡೆಗಣಿಸುವ ಸ್ಥಿತಿಯಲ್ಲಿಲ್ಲ. ಚೆನ್ನೈ ವಿರುದ್ಧ ಚೆಪಾಕ್‌ನಲ್ಲೇ ನಡೆದಿದ್ದ ಪಂದ್ಯದಲ್ಲಿ ರಾಜಸ್ಥಾನ ಕೇವಲ 141 ರನ್‌ ಗಳಿಸಿತ್ತು. ಪ್ರಮುಖ ಬ್ಯಾಟರ್‌ಗಳಾದ ಜೈಸ್ವಾಲ್‌, ಸಂಜು ಸ್ಯಾಮ್ಸನ್‌, ರಿಯಾನ್‌ ಪರಾಗ್‌ ನಿರ್ಣಾಯಕ ಘಟ್ಟದಲ್ಲಿ ಕೈಕೊಡುವ ಭಯವಿದೆ.

ಆರ್‌.ಅಶ್ವಿನ್‌ ಹಾಗೂ ಚಹಲ್‌ರಂತದ ವಿಶ್ವ ಶ್ರೇಷ್ಠ ಸ್ಪಿನ್ನರ್‌ಗಳಿದ್ದರೂ ರಾಯಲ್ಸ್‌ಗೆ ಸನ್‌ರೈಸರ್ಸ್‌ ಬ್ಯಾಟರ್‌ಗಳಿಂದ ಸವಾಲು ಎದುರಾಗಬಹುದು. ಆರ್‌ಸಿಬಿ ವಿರುದ್ಧ ತಂಡವನ್ನು ಗೆಲ್ಲಿಸಿದ್ದ ಅಶ್ವಿನ್, ಈ ಬಾರಿ ತವರಿನಲ್ಲಿ ಉತ್ತಮ ಪ್ರದರ್ಶನ ತೋರಿ ಫೈನಲ್‌ಗೇರಿಸುವ ಕಾತರದಲ್ಲಿದ್ದಾರೆ.

ಒಟ್ಟು ಮುಖಾಮುಖಿ: 19

ರಾಜಸ್ಥಾನ: 09

ಹೈದ್ರಾಬಾದ್‌: 10

ಸಂಭವನೀಯ ಆಟಗಾರರ ಪಟ್ಟಿ

ರಾಜಸ್ಥಾನ: ಜೈಸ್ವಾಲ್‌, ಕೊಹ್ಲೆರ್‌, ಸಂಜು(ನಾಯಕ), ರಿಯಾನ್‌, ಪೊವೆಲ್‌, ಜುರೆಲ್‌, ಅಶ್ವಿನ್‌, ಬೌಲ್ಟ್‌, ಸಂದೀಪ್‌, ಆವೇಶ್‌, ಚಹಲ್‌.

ಹೈದ್ರಾಬಾದ್‌: ಹೆಡ್‌, ಅಭಿಷೇಕ್‌, ತ್ರಿಪಾಠಿ, ಕ್ಲಾಸೆನ್‌, ನಿತೀಶ್‌, ಸಮದ್‌, ಶಾಬಾಜ್‌, ಕಮಿನ್ಸ್(ನಾಯಕ), ಭುವನೇಶ್ವರ್‌, ನಟರಾಜನ್‌, ವಿಜಯಕಾಂತ್‌.

ಪಂದ್ಯ: ಸಂಜೆ 7.30ಕ್ಕೆ

ಪಿಚ್ ರಿಪೋರ್ಟ್‌: ಚೆನ್ನೈ ಪಿಚ್‌ ಸ್ಪಿನ್‌ ಸ್ಪೇಹಿಯಾಗಿದ್ದು, ದೊಡ್ಡ ಮೊತ್ತ ದಾಖಲಾದ ಉದಾಹರಣೆ ಕಡಿಮೆ. ಲೀಗ್‌ ಹಂತದ 14 ಇನ್ನಿಂಗ್ಸ್‌ಗಳ ಪೈಕಿ 4 ಬಾರಿ ಮಾತ್ರ 200+ ಮೊತ್ತ ದಾಖಲಾಗಿದೆ. ಮೊದಲು ಬ್ಯಾಟ್‌ ಮಾಡುವ ತಂಡ 180+ ಹೊಡೆದರೆ ಚೇಸ್‌ ಮಾಡುವ ತಂಡಕ್ಕೆ ಕಷ್ಟವಾಗಲಿದೆ.

ತಲಾ 2 ಬಾರಿ ಫೈನಲ್‌ ಪ್ರವೇಶಿಸಿರುವ ಇತ್ತಂಡ

ರಾಜಸ್ಥಾನ ಹಾಗೂ ಸನ್‌ರೈಸರ್ಸ್‌ ತಂಡಗಳು 3ನೇ ಬಾರಿ ಫೈನಲ್‌ಗೇರಲು ಕಾತರಿಸುತ್ತಿವೆ. 2008ರ ಚೊಚ್ಚಲ ಆವೃತ್ತಿಯ ಚಾಂಪಿಯನ್‌ ರಾಜಸ್ಥಾನ 2022ರಲ್ಲೂ ಫೈನಲ್‌ಗೇರಿತ್ತು. ಸನ್‌ರೈಸರ್ಸ್‌ 2016ರಲ್ಲಿ ಪ್ರಶಸ್ತಿ ಗೆದ್ದು, 2018ರಲ್ಲಿ ಫೈನಲ್‌ನಲ್ಲಿ ಸೋತಿತ್ತು.
 

click me!