
ಅಹಮದಾಬಾದ್(ಮೇ.22): ಸತತ ಆರು ಪಂದ್ಯಗಳನ್ನು ಗೆದ್ದು ಐಪಿಎಲ್ ಟ್ರೋಫಿ ಗೆಲ್ಲುವ ಕನಸು ಜೀವಂತವಾಗಿರಿಸಿಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎಲಿಮಿನೇಟರ್ ಪಂದ್ಯದಲ್ಲೇ ತನ್ನ ಅಭಿಯಾನ ಅಂತ್ಯಗೊಳಿಸಿಕೊಂಡಿದೆ. ಹೊಸ ಅಧ್ಯಾಯ ಎನ್ನುವಂತೆ ಟೂರ್ನಿಯ ದ್ವಿತಿಯಾರ್ಧದಲ್ಲಿ ಆರ್ಭಟಿಸಿದ್ದ ಆರ್‌ಸಿಬಿ ತಂಡವು ಇದೀಗ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು 4 ವಿಕೆಟ್ ಅಂತರದ ಸೋಲು ಅನುಭವಿಸಿದೆ. ಇದರೊಂದಿಗೆ 17ನೇ ಆವೃತ್ತಿಯಲ್ಲೂ ಬೆಂಗಳೂರು ತಂಡವು ಬರಿಗೈನಲ್ಲೇ ವಾಪಾಸ್ಸಾಗಿದೆ. ಇನ್ನು ರಾಜಸ್ಥಾನ ರಾಯಲ್ಸ್ ತಂಡವು ಇದೀಗ ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆದಿದೆ.
ಗೆಲ್ಲಲು 173 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ತಂಡವು ಎಚ್ಚರಿಕೆಯ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ಕೊಹ್ಲಲ್ ಹಾಗೂ ಜೈಸ್ವಾಲ್ ಜೋಡಿ 5.3 ಓವರ್‌ಗಳಲ್ಲಿ 46 ರನ್‌ಗಳ ಜತೆಯಾಟವಾಡಿದರು. ಕೊಹ್ಲರ್ ಕ್ಯಾಡ್ಮೋರ್ 20 ರನ್ ಗಳಿಸಿ ಲಾಕಿ ಫರ್ಗ್ಯೂಸನ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಹಾದಿ ಹಿಡಿದರು. ಇನ್ನು ಮತ್ತೋರ್ವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ 30 ಎಸೆತಗಳನ್ನು ಎದುರಿಸಿ 8 ಬೌಂಡರಿ ಸಹಿತ 45 ರನ್ ಬಾರಿಸಿ ಕ್ಯಾಮರೋನ್ ಗ್ರೀನ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಇದರ ಬೆನ್ನಲ್ಲೇ 17 ರನ್ ಬಾರಿಸಿದ್ದ ನಾಯಕ ಸಂಜು ಸ್ಯಾಮ್ಸನ್ ಕರ್ಣ್ ಶರ್ಮಾ ಬೌಲಿಂಗ್‌ನಲ್ಲಿ ಮುನ್ನುಗ್ಗಿ ಬಾರಿಸುವ ಯತ್ನದಲ್ಲಿ ಸ್ಟಂಪೌಟ್ ಆಗಿ ಪೆವಿಲಿಯನ್ ಹಾದಿ ಹಿಡಿದರು. ಇನ್ನು ಜುರೆಲ್ 8 ರನ್ ಗಳಿಸಿ ರನೌಟ್ ಆಗಿ ಪೆವಿಲಿಯನ್ ಸೇರಿದರು.
ರಾಯಲ್ಸ್‌ಗೆ ಪರಾಗ್ ಆಸರೆ: ಒಂದು ಕಡೆ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ರಿಯಾನ್ ಪರಾಗ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. 5ನೇ ವಿಕೆಟ್‌ಗೆ ಶಿಮ್ರೊನ್ ಹೆಟ್ಮೇಯರ್ ಹಾಗೂ ರಿಯಾನ್ ಪರಾಗ್ ಜೋಡಿ ಕೇವಲ 25 ಎಸೆತಗಳಲ್ಲಿ 45 ರನ್‌ಗಳ ಜತೆಯಾಟವಾಡಿದರು. ಈ ಇಬ್ಬರನ್ನು ಒಂದೇ ಓವರ್‌ನಲ್ಲಿ ಪೆವಿಲಿಯನ್ನಿಗಟ್ಟುವಲ್ಲಿ ಸಿರಾಜ್ ಯಶಸ್ವಿಯಾದರು. ಪರಾಗ್ 26 ಎಸೆತಗಳಲ್ಲಿ 36 ರನ್ ಬಾರಿಸಿ ಕ್ಲೀನ್ ಬೌಲ್ಡ್ ಆದರೆ, ಹೆಟ್ಮೇಯರ್ 14 ಎಸೆತಗಳಲ್ಲಿ 26 ರನ್ ಬಾರಿಸಿ ಫಾಫ್ ಹಿಡಿದ ಅದ್ಭುತ ಕ್ಯಾಚ್‌ಗೆ ಪೆವಿಲಿಯನ್ ಸೇರಿದರು.
ಕೊನೆಯ ಎರಡು ಓವರ್‌ನಲ್ಲಿ 13 ರನ್ ಅಗತ್ಯವಿತ್ತು. ರೋವ್ಮನ್ ಪೋವೆಲ್ ಸತತ ಎರಡು ಎಸೆತಗಳಲ್ಲಿ ಎರಡು ಬೌಂಡರಿ ಬಾರಿಸುವ ಮೂಲಕ ರಾಯಲ್ಸ್ ಗೆಲುವನ್ನು ಖಚಿತಪಡಿಸಿದರು.
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ರಾಜಸ್ಥಾನ ರಾಯಲ್ಸ್ ಸಂಘಟಿತ ಬೌಲಿಂಗ್ ಎದುರು ರನ್ ಗಳಿಸಲು ಪರದಾಡಿತು. ವಿರಾಟ್ ಕೊಹ್ಲಿ(33), ಕ್ಯಾಮರೋನ್ ಗ್ರೀನ್(27), ರಜತ್ ಪಾಟೀದಾರ್(34) ಹಾಗೂ ಮಹಿಪಾಲ್ ಲೋಮ್ರಾರ್(32) ದಿಟ್ಟ ಹೋರಾಟ ನಡೆಸಿದರು. ಆದರೆ ನಾಯಕ ಫಾಫ್, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ದಿನೇಶ್ ಕಾರ್ತಿಕ್ ಅವರ ಬ್ಯಾಟ್‌ನಿಂದ ನಿರೀಕ್ಷಿತ ರನ್ ಮೂಡಿ ಬರಲಿಲ್ಲ. ಪರಿಣಾಮ ಆರ್‌ಸಿಬಿ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 172 ರನ್ ಕಲೆಹಾಕಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.