IPL 2024: ಮುಸ್ತಾಫಿಜುರ್‌ ಮಿಂಚಿನ ದಾಳಿ ನಡುವೆ ಅಬ್ಬರಿಸಿದ ಅನುಜ್‌!

By Santosh NaikFirst Published Mar 22, 2024, 9:44 PM IST
Highlights

ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್‌ ರೆಹಮಾನ್‌ ಅವರ ಆಕರ್ಷಕ ಬೌಲಿಂಗ್‌ ದಾಳಿಗೆ ಆರ್‌ಸಿಬಿಯ ಅಗ್ರ ಕ್ರಮಾಂಕದ ಬ್ಯಾಟಿಂಗ್‌ ಪಡೆ ಕುಸಿದಿದೆ. ಕೊನೆಗೆ ಅನುಜ್‌ ರಾವತ್‌ ಅರ್ಧಶತಕದಿಂದ ಸವಾಲಿನ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಗಿದೆ.

ಚೆನ್ನೈ (ಮಾ.22): ಮುಸ್ತಾಫಿಜುರ್‌ ರೆಹಮಾನ್‌ ಬೌಲಿಂಗ್‌ ದಾಳಿಯ ನಡುವೆಯೂ ಮಧ್ಯಮ ಕ್ರಮಾಂಕದಲ್ಲಿ ದಿನೇಶ್‌ ಕಾರ್ತಿಕ್‌ ಹಾಗೂ ಅನುಜ್‌ ರಾವತ್‌ ಭರ್ಜರಿ ಇನ್ನಿಂಗ್ಸ್‌ ಆಡಿದ್ದರಿಂದ  ಐಪಿಎಲ್‌ 2024ರ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ತಂಡ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಗೆಲುವಿಗೆ ಸವಾಲಿನ ಗುರಿ ನಿಗದಿ ಮಾಡಿದೆ ಒಂದು ಹಂತದಲ್ಲಿ 78 ರನ್‌ಗೆ 5 ವಿಕೆಟ್‌ ಕಳೆದುಕೊಂಡು ತೀರಾ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ವಿಕೆಟ್‌ ಕೀಪರ್‌ ಅನುಜ್‌ ರಾವತ್‌ ಭರ್ಜರಿ ಇನ್ನಿಂಗ್ಸ್‌ ಆಡುವ ಮೂಲಕ ತಂಡದ ಹೋರಾಟಕಾರಿ ಮೊತ್ತಕ್ಕೆ ಕಾರಣರಾದರು. ಭರ್ಜರಿ ದಾಳಿ ನಡೆಸಿದ ಮುಸ್ತಾಫಿಜುರ್‌ ರೆಹಮಾನ್‌ ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ 30 ರನ್‌ ನೀಡಿ ನಾಲ್ಕು ವಿಕೆಟ್‌ ಉರುಳಿಸಿ ಮಿಂಚಿದರು. ಚಿದಂಬರಂ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಆರ್‌ಸಿಬಿ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 173 ರನ್‌ ಪೇರಿಸಿತು. 

ಆರ್‌ಸಿಬಿಯ ಆರಂಭ ಉತ್ತಮವಾಗಿತ್ತು. ನಾಯಕ ಫಾಫ್‌ ಡು ಪ್ಲೆಸಿಸ್‌ ಹಾಗೂ ಅನುಭವಿ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿ ಮೊದಲ ವಿಕೆಟ್‌ಗೆ 41 ರನ್‌ ಜೊತೆಯಾಟವಾಡಿದರು. ಇದರಲ್ಲಿ ಬಹುಪಾಲು ರನ್‌ ಅನ್ನು ಫಾಫ್‌ ಡು ಪ್ಲೆಸಿಸ್‌ ಅವರೇ ಬಾರಿಸಿದ್ದರು. 23 ಎಸೆತ ಎದುರಿಸಿದ ಡು ಪ್ಲೆಸಿಸ್‌ 35 ರನ್‌ ಸಿಡಿಸಿದ್ದರು. ಆದರೆ, ಐದನೇ ಓವರ್‌ ವೇಳೆ ಬೌಲಿಂಗ್‌ ಬದಲಾವಣೆ ಮಾಡಿ ಮುಸ್ತಾಫಿಜುರ್‌ ರೆಹಮಾನ್‌ಗೆ ಚೆಂಡು ನೀಡುವ ನಿರ್ಧಾರ ಮಾಡಿದ ಚೆನ್ನೈ ನಾಯಕ ರುತುರಾಜ್‌ ಗಾಯಕ್ವಾಡ್ ಅದಕ್ಕೆ ಫಲ ಪಡೆದುಕೊಂಡರು. ಬಲಗೈ ಬ್ಯಾಟ್ಸ್‌ಮನ್‌ಗಳಿಗೆ ಸಿಂಹಸ್ವಪ್ನವಾಗಿ ಕಾಡುವ ಮುಸ್ತಾಫಿಜುರ್‌ ರೆಹಮಾನ್‌ ತಮ್ಮ ಮೊದಲ ಓವರ್‌ನ ಮೂರೇ ಎಸೆತಗಳ ಅಂತರದಲ್ಲಿ ಡು ಪ್ಲೆಸಿಸ್‌ ಹಾಗೂ ರಜತ್‌ ಪಾಟಿದಾರ್‌ ವಿಕೆಟ್‌ ಉರುಳಿಸಿ ಚೆನ್ನೈಗೆ ಸಂಭ್ರಮ ತಂದರು.

ಒಂದೇ ಓವರ್‌ನಲ್ಲಿ ಎರಡು ವಿಕೆಟ್‌ ಕಳೆದುಕೊಂಡು ಆಘಾತದಲ್ಲಿದ್ದ ತಂಡಕ್ಕೆ 6ನೇ ಓವರ್‌ನಲ್ಲಿ ಅನುಭವಿ ಆಲ್ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಮೊದಲ ಎಸೆತದ ಶೂನ್ಯಕ್ಕೆ ನಿರ್ಗಮಿಸಿದರು. ಆ ಬಳಿಕ ಕ್ರೀಸ್‌ನಲ್ಲಿ ವಿರಾಟ್‌ ಕೊಹ್ಲಿಗೆ (21 ರನ್‌, 20 ಎಸೆತ, 1 ಸಿಕ್ಸರ್‌) ಜೊತೆಯಾದ ಕ್ಯಾಮರೂನ್‌ ಗ್ರೀನ್‌ (18 ರನ್‌22 ಎಸೆತ, 1 ಬೌಂಡರಿ) ತಂಡದ ಮೊತ್ತವನ್ನು 75 ರ ಗಡಿ ದಾಟಿಸುವವರೆಗೆ ಉಳಿದುಕೊಂಡಿದ್ದರು. 12ನೇ ಓವರ್‌ನಲ್ಲಿ ಮತ್ತೆ ದಾಳಿಗಿಳಿದ ಮುಸ್ತಾಫಿಜುರ್‌ ಎರಡೇ ಎಸೆತಗಳ ಅಂತರದಲ್ಲಿ ವಿರಾಟ್‌ ಕೊಹ್ಲಿ ಹಾಗೂ ಕ್ಯಾಮರೂನ್‌ ಗ್ರೀನ್‌ ಇಬ್ಬರನ್ನೂ ಡಗ್‌ಔಟ್‌ಗೆ ಅಟ್ಟಿದ್ದರು.

ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ಭೇಟಿಕೊಟ್ಟ ಕೇಶವ್ ಮಹಾರಾಜ್..! ಜೈ ಶ್ರೀರಾಮ್ ಎಂದು ಘರ್ಜಿಸಿದ ದಕ್ಷಿಣ ಆಫ್ರಿಕಾ ಕ್ರಿಕೆಟಿಗ

78 ರನ್‌ಗೆ 5 ವಿಕೆಟ್‌ ಕಳೆದುಕೊಂಡಿದ್ದ ಹಂತದಲ್ಲಿ ಜೊತೆಯಾದ ಅನುಜ್‌ ರಾವತ್‌ (48 ರನ್‌, 25 ಎಸೆತ, 4 ಬೌಂಡರಿ, 3 ಸಿಕ್ಸರ್‌) ಹಾಗೂ ವಿಕೆಟ್‌ ಕೀಪರ್‌ ದಿನೇಶ್‌ ಕಾರ್ತಿಕ್‌ (38 ರನ್‌, 26 ಎಸೆತ, 3 ಬೌಂಡರಿ, 2 ಸಿಕ್ಸರ್‌) ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. 6ನೇ ವಿಕೆಟ್‌ಗೆ ಈ ಜೋಡಿ ಅಮೂಲ್ಯ 95 ರನ್‌ ಜೊತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಗಿದ್ದು ಮಾತ್ರವಲ್ಲದೆ, ಚೆನ್ನೈನ ಬಲಿಷ್ಠ ಬ್ಯಾಟಿಂಗ್‌ ಪಡೆಗೆ ಸವಾಲಿನ ಮೊತ್ತ ನಿಗದಿ ಮಾಡಲು ನೆರವಾದರು. ಇನ್ನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ತುಷಾರ್‌ ದೇಶಪಾಂಡೆ ಬಿಗಿ ದಾಳಿ ನಡೆಸಿದ್ದರಿಂದ ಆರ್‌ಸಿಬಿ 173 ಮೊತ್ತ ಬಾರಿಸಲಷ್ಟೇ ಸಾಧ್ಯವಾಯಿತು.

ವಿರಾಟ್ ಕೊಹ್ಲಿಗೆ ಸಪೋರ್ಟ್ ಮಾಡಲು ಮಗ ಅಕಾಯ್ ಜತೆ ಅನುಷ್ಕಾ ಶರ್ಮಾ ಭಾರತಕ್ಕೆ ಬರ್ತಾರಾ?

click me!