ಕೊಹ್ಲಿ ಸೆಂಚುರಿ ಬಾರಿಸಿದ್ರೂ ಗೆಲ್ಲಲಿಲ್ಲ ಆರ್‌ಸಿಬಿ...! ರಾಯಲ್ಸ್‌ಗೆ 4ನೇ ಜಯ, ಬೆಂಗಳೂರಿಗೆ 4ನೇ ಸೋಲು

By Naveen Kodase  |  First Published Apr 6, 2024, 11:13 PM IST

100ನೇ ಐಪಿಎಲ್ ಪಂದ್ಯವನ್ನಾಡಿದ ಜೋಸ್ ಬಟ್ಲರ್ ಅಜೇಯ ಶಯಕ ಸಿಡಿಸಿ ಸಂಭ್ರಮಿಸಿದರು. ಒಂದು ತುದಿಯಲ್ಲಿ ಆರ್‌ಸಿಬಿ ಬೌಲರ್‌ಗಳನ್ನು ಚೆಂಡಾಡಿದ ಬಟ್ಲರ್ 58 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 100 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.


ಜೈಪುರ(ಏ.06): ವಿರಾಟ್ ಕೊಹ್ಲಿ ಬಾರಿಸಿದ ಅದ್ಭುತ ಶತಕದ ಹೊರತಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ರಾಜಸ್ಥಾನ ರಾಯಲ್ಸ್‌ಗೆ ಶರಣಾಗಿದೆ. ಇದು ಹೊಸ ಅಧ್ಯಾಯ ಎಂಬ ಘೋಷಣೆಯೊಂದಿಗೆ ಟೂರ್ನಿ ಆರಂಭಿಸಿದ್ದ ಆರ್‌ಸಿಬಿ ತಂಡವು ಇದೀಗ ಹಳೆ ಚಾಳಿಯನ್ನೇ ಮುಂದುವರೆಸಿದೆ. ಇನ್ನು ಆರ್‌ಸಿಬಿ ಬೌಲರ್‌ಗಳ ದಯನೀಯ ಪ್ರದರ್ಶನ ಮತ್ತೊಮ್ಮೆ ಅನಾವರಣವಾಗಿದೆ. ಜೋಸ್ ಬಟ್ಲರ್ ಅಜೇಯ ಶತಕ ಹಾಗೂ ಸಂಜು ಸ್ಯಾಮ್ಸನ್ ಆರ್ಭಟದ ಮುಂದೆ ಆರ್‌ಸಿಬಿ ಮಕಾಡೆ ಮಲುಗಿತು. ಆರ್‌ಸಿಬಿ ಎದುರು ಭರ್ಜರಿ ಗೆಲುವು ಸಾಧಿಸಿದ ಸಂಜು ಸ್ಯಾಮ್ಸನ್ ಪಡೆ ಟೂರ್ನಿಯಲ್ಲಿ ಸತತ 4ನೇ ಗೆಲುವು ದಾಖಲಿಸಿದರೆ, ಆರ್‌ಸಿಬಿ ತಂಡವು 4ನೇ ಸೋಲು ಅನುಭವಿಸಿತು.

ಇಲ್ಲಿನ ಸವಾಯಿ ಮಾನ್‌ಸಿಂಗ್‌ ಮೈದಾನದಲ್ಲಿ ಗೆಲ್ಲಲು 184 ರನ್ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ತಂಡವು ಮೊದಲ ಓವರ್‌ನ ಎರಡನೇ ಎಸೆತದಲ್ಲೇ ಯಶಸ್ವಿ ಜೈಸ್ವಾಲ್ ವಿಕೆಟ್ ಕಳೆದುಕೊಂಡಿತು. ಜೈಸ್ವಾಲ್ ಖಾತೆ ತೆರೆಯುವ ಮುನ್ನವೇ ರೀಸ್ ಟಾಪ್ಲೆಗೆ ವಿಕೆಟ್ ಒಪ್ಪಿಸಿ ಬಂದಷ್ಟೇ ವೇಗದಲ್ಲಿ ಪೆವಿಲಿಯನ್ ಹಾದಿ ಹಿಡಿದರು. ಆಮೇಲೆ ನಡೆದದ್ದು ಸಂಜು-ಬಟ್ಲರ್ ಶೋ. ಪರಿಣಾಮ ಆರ್‌ಸಿಬಿ ಎದುರು ರಾಜಸ್ಥಾನಕ್ಕೆ 6 ವಿಕೆಟ್ ಭರ್ಜರಿ ಗೆಲುವು ಸಾಧಿಸಿತು.

4⃣ wins in 4⃣ matches for the 🩷

And with that victory, the move to the 🔝 of the Points Table 😎💪

Scorecard ▶️ https://t.co/IqTifedScU | pic.twitter.com/cwrUr2vmJN

— IndianPremierLeague (@IPL)

Tap to resize

Latest Videos

ಸಂಜು-ಬಟ್ಲರ್ ಜುಗಲ್ಬಂದಿ: ಆರಂಭದಲ್ಲೇ ಜೈಸ್ವಾಲ್ ವಿಕೆಟ್ ಕಳೆದುಕೊಂಡ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಎರಡನೇ ವಿಕೆಟ್‌ಗೆ ನಾಯಕ ಸಂಜು ಸ್ಯಾಮ್ಸನ್ ಹಾಗೂ ಜೋಸ್ ಬಟ್ಲರ್ ಶತಕದ ಜತೆಯಾಟವಾಡುವ ಮೂಲಕ ಆರ್‌ಸಿಬಿ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಅದರಲ್ಲೂ ಕಳೆದ ಮೂರು ಪಂದ್ಯಗಳಲ್ಲಿ ರನ್ ಬರ ಎದುರಿಸಿದ್ದ ಜೋಸ್ ಬಟ್ಲರ್ ಕೊನೆಗೂ ಫಾರ್ಮ್‌ಗೆ ಮರಳುವಲ್ಲಿ ಯಶಸ್ವಿಯಾದರು. ಬಟ್ಲರ್‌ಗೆ ಸಂಜು ಸ್ಯಾಮ್ಸನ್ ಉತ್ತಮ ಸಾಥ್ ನೀಡಿದರು. ಈ ಜೋಡಿ ಎರಡನೇ ವಿಕೆಟ್‌ಗೆ 86 ಎಸೆತಗಳನ್ನು ಎದುರಿಸಿ 148 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ಸಮೀಪ ಕೊಂಡೊಯ್ಯಿತು. ಸಂಜು ಸ್ಯಾಮ್ಸನ್ 42 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 69  ರನ್ ಬಾರಿಸಿ ಸಿರಾಜ್‌ಗೆ ವಿಕೆಟ್ ಒಪ್ಪಿಸಿದರು. 

IPL 2024 ಕೊಹ್ಲಿ ಸೆಂಚುರಿ ಆಟಕ್ಕೆ ಸೃಷ್ಟಿಯಾಯ್ತು ದಾಖಲೆ, ರಾಜಸ್ಥಾನಕ್ಕೆ 184 ರನ್ ಟಾರ್ಗೆಟ್!

100ನೇ ಪಂದ್ಯದಲ್ಲಿ ಬಟ್ಲರ್ 100: ಇನ್ನು 100ನೇ ಐಪಿಎಲ್ ಪಂದ್ಯವನ್ನಾಡಿದ ಜೋಸ್ ಬಟ್ಲರ್ ಅಜೇಯ ಶಯಕ ಸಿಡಿಸಿ ಸಂಭ್ರಮಿಸಿದರು. ಒಂದು ತುದಿಯಲ್ಲಿ ಆರ್‌ಸಿಬಿ ಬೌಲರ್‌ಗಳನ್ನು ಚೆಂಡಾಡಿದ ಬಟ್ಲರ್ 58 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 100 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದೀಗ 100ನೇ ಐಪಿಎಲ್ ಪಂದ್ಯದಲ್ಲಿ ಶತಕ ಸಿಡಿಸಿದ ಎರಡನೇ ಕ್ರಿಕೆಟಿಗ ಎನ್ನುವ ಹಿರಿಮಗೆ ಬಟ್ಲರ್ ಪಾತ್ರರಾಗಿದ್ದಾರೆ. ಈ ಮೊದಲು ಕನ್ನಡಿಗ ಕೆ ಎಲ್ ರಾಹುಲ್ ಈ ಸಾಧನೆ ಮಾಡಿದ್ದರು. 

ಇಂಪ್ಯಾಕ್ಟ್ ಮಾಡದ ಹಿಮಾಂಶು ಶರ್ಮಾ: ಇನ್ನು ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದ ಹಿಮಾಂಶು ಶರ್ಮಾ ಯಾವುದೇ ಮ್ಯಾಜಿಕ್ ಮಾಡಲಿಲ್ಲ. 2 ಓವರ್ ಮಾಡಿದ ಹಿಮಾಂಶು 29 ರನ್ ಚಚ್ಚಿಸಿಕೊಂಡರು. ಇನ್ನು ಕನ್ನಡದ ವೇಗಿ ವೈಶಾಕ್ ವಿಜಯ್‌ಕುಮಾರ್ ಅವರನ್ನು ಇಂಪ್ಯಾಕ್ಟ್ ಆಟಗಾರನಾಗಿ ಯಾಕೆ ಕಣಕ್ಕಿಳಿಸಲಿಲ್ಲ ಎನ್ನುವುದು ಮತ್ತೊಮ್ಮೆ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. 

IPL 2024 ರಾಜಸ್ಥಾನ ವಿರುದ್ಧ ಸೆಂಚುರಿ ಸಾಧನೆ,ಹೊಸ ದಾಖಲೆ ಬರೆದ ವಿರಾಟ್ ಕೊಹ್ಲಿ!

ಇನ್ನು ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಆರ್‌ಸಿಬಿ ತಂಡಕ್ಕೆ ನಾಯಕ ಫಾಫ್ ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಭರ್ಜರಿ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 125 ರನ್‌ಗಳ ಜತೆಯಾಟವಾಡಿತು. ಫಾಫ್ 44 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ವಿರಾಟ್ ಕೊಹ್ಲಿ 72 ಎಸೆತಗಳನ್ನು ಎದುರಿಸಿ 12 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 113 ರನ್ ಬಾರಿಸಿದರು. ಹೀಗಿದ್ದೂ ಆರ್‌ಸಿಬಿ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ.

click me!