
ಬೆಂಗಳೂರು(ಮೇ.04): ಬೌಲರ್‌ಗಳ ಶಿಸ್ತುಬದ್ದ ದಾಳಿ ಹಾಗೂ ಮಿಂಚಿನ ಕ್ಷೇತ್ರರಕ್ಷಣೆಯ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಟೈಟಾನ್ಸ್ ತಂಡವನ್ನು ಕೇವಲ 147 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಟೈಟಾನ್ಸ್ ತಂಡವು 19.3 ಓವರ್‌ಗಳಲ್ಲಿ 147 ರನ್‌ಗಳಿಗೆ ಸರ್ವಪತನ ಕಂಡಿದೆ. ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಲು ಆರ್‌ಸಿಬಿ 148 ರನ್ ಗಳಿಸಬೇಕಿದೆ
ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ಫಾಫ್ ಡು ಪ್ಲೆಸಿಸ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡುವಲ್ಲಿ ಆರ್‌ಸಿಬಿ ಬೌಲರ್‌ಗಳು ಸಫಲತೆ ಕಂಡರು. ಸ್ವಪ್ನಿಲ್ ಸಿಂಗ್ ಮೊದಲ ಓವರ್‌ನಲ್ಲಿ ಒಂದು ರನ್ ನೀಡಿದರೆ, ಸಿರಾಜ್ ಎರಡನೇ ಓವರ್‌ನಲ್ಲಿ ಎರಡು ರನ್ ನೀಡಿ ವೃದ್ದಿಮಾನ್ ಸಾಹ ವಿಕೆಟ್ ಕಬಳಿಸಿದರು. ಮೂರನೇ ಓವರ್‌ನಲ್ಲಿ ಯಶ್ ದಯಾಳ್ 4 ರನ್ ನೀಡಿದರೆ, 4ನೇ ಓವರ್ ಮಾಡಿದ ಸಿರಾಜ್ 7 ರನ್ ನೀಡಿ ನಾಯಕ ಗಿಲ್ ಅವರನ್ನು ಪೆವಿಲಿಯನ್ನಿಗಟ್ಟಿದರು.
IPL 2024 ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗುಜರಾತ್ ಎದುರು ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಆಯ್ಕೆ
ಆರನೇ ಓವರ್ ಮಾಡಿದ ಗ್ರೀನ್ ಕೇವಲ 5 ರನ್ ನೀಡಿ ಸಾಯಿ ಸುದರ್ಶನ್‌ಗೆ ಪೆವಿಲಿಯನ್ ಹಾದಿ ತೋರಿಸಿದರು. ಪವರ್ ಪ್ಲೇ ಅಂತ್ಯದ ವೇಳೆಗೆ ಗುಜರಾತ್ ಟೈಟಾನ್ಸ್ 3 ವಿಕೆಟ್ ಕಳೆದುಕೊಂಡು 23 ರನ್ ಗಳಿಸಲಷ್ಟೇ ಶಕ್ತವಾಯಿತು. ಇದು ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪವರ್ ಪ್ಲೇನಲ್ಲಿ ತಂಡವೊಂದು ದಾಖಲಿಸಿದ ಕನಿಷ್ಠ ಮೊತ್ತ ಎನಿಸಿಕೊಂಡಿತು. ಈ ಮೊದಲು ಸನ್‌ರೈಸರ್ಸ್ ಹೈದರಾಬಾದ್ ಎದುರು ಪಂಜಾಬ್ ಕಿಂಗ್ಸ್ ಪವರ್ ಪ್ಲೇನಲ್ಲಿ 3 ವಿಕೆಟ್ ಕಳೆದುಕೊಂಡು 27 ರನ್ ಗಳಿಸಿತ್ತು.
ಶಾರುಕ್-ಮಿಲ್ಲರ್ ಆಸರೆ: ಕೇವಲ 19 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಗುಜರಾತ್ ಟೈಟಾನ್ಸ್ ತಂಡಕ್ಕೆ 4ನೇ ವಿಕೆಟ್‌ಗೆ ಶಾರುಕ್ ಖಾನ್ ಹಾಗೂ ಡೇವಿಡ್ ಮಿಲ್ಲರ್ ಆಸರೆಯಾದರು. ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಈ ಜೋಡಿ ಚುರುಕಾಗಿ ಜತೆಯಾಟ ನಿಭಾಯಿಸಿತು.ಈ ಜೋಡಿ ಕೇವಲ 37 ಎಸೆತಗಳನ್ನು ಎದುರಿಸಿ 61 ರನ್‌ಗಳ ಜತೆಯಾಟವಾಡಿತು. 20 ಎಸೆತಗಳಲ್ಲಿ 30 ರನ್ ಬಾರಿಸಿ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದ್ದ ಮಿಲ್ಲರ್ ಅವರನ್ನು ಬಲಿ ಪಡೆಯುವಲ್ಲಿ ಕರ್ಣ್ ಶರ್ಮಾ ಯಶಸ್ವಿಯಾದರು. ಇನ್ನು ಇದರ ಬೆನ್ನಲ್ಲೇ ಶಾರುಕ್ ಖಾನ್ 37 ರನ್ ಸಿಡಿಸಿ ಕೊಹ್ಲಿಯ ಅದ್ಭುತ ರನೌಟ್‌ಗೆ ಪೆವಿಲಿಯನ್ ಹಾದಿ ಹಿಡಿದರು.
ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡಕ್ಕೆ ಆಯ್ಕೆಯಾದ ಬೆನ್ನಲ್ಲೇ ಅರ್ಧ ಡಜನ್ ಆಟಗಾರರು ಫೇಲ್..!
ಇನ್ನು ಆರನೇ ವಿಕೆಟ್‌ಗೆ ರಶೀದ್ ಖಾನ್ ಹಾಗೂ ರಾಹುಲ್ ತೆವಾಟಿಯಾ 29 ಎಸೆತಗಳಲ್ಲಿ ಅಮೂಲ್ಯ 44 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 130ರ ಗಡಿ ದಾಟಿಸಿದರು. ರಶೀದ್ ಖಾನ್ 18 ರನ್ ಬಾರಿಸಿ ಯಶ್ ದಯಾಳ್‌ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ರಾಹುಲ್ ತೆವಾಟಿಯಾ ಕೂಡಾ 35 ರನ್ ಬಾರಿಸಿ ಯಶ್ ದಯಾಳ್‌ಗೆ ವಿಕೆಟ್ ಒಪ್ಪಿಸಿದರು. ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದ ವಿಜಯ್ ಶಂಕರ್ ಕೇವಲ 10 ರನ್ ಗಳಿಸಿ ಕೊನೆಯವರಾಗಿ ವಿಕೆಟ್ ಒಪ್ಪಿಸಿದರು.
ಆರ್‌ಸಿಬಿ ತಂಡದ ಪರ ಮೊಹಮ್ಮದ್ ಸಿರಾಹ್, ಯಶ್ ದಯಾಳ್ ಹಾಗೂ ವೈಶಾಕ್ ವಿಜಯ್ ಕುಮಾರ್ ತಲಾ 2 ವಿಕೆಟ್ ಪಡೆದರೆ, ಕರ್ಣ್ ಶರ್ಮಾ ಹಾಗೂ ಕ್ಯಾಮರೋನ್ ಗ್ರೀನ್ ತಲಾ ಒಂದೊಂದು ವಿಕೆಟ್ ಪಡೆದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.