ಇಡೀ ಐಪಿಎಲ್‌ನಲ್ಲಿ ಬ್ಯಾಟಿಂಗ್ ಮೂಲಕ ಅಬ್ಬರಿಸಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡ, ತನ್ನ ಅತ್ಯಂತ ಮಹತ್ವದ ಪಂದ್ಯದಲ್ಲಿ ದಯನೀಯ ಬ್ಯಾಟಿಂಗ್ ವೈಫಲ್ಯ ಕಂಡಿದೆ. ಇನ್ನೊಂದೆಡೆ ಕೆಕೆಆರ್ ತಂಡ ಐಪಿಎಲ್ ಫೈನಲ್ ಗೆಲುವಿಗೆ ಸರಳ ಗುರಿ ಪಡೆದುಕೊಂಡಿದೆ.
ಚೆನ್ನೈ (ಮೇ.26): ಕೋಲ್ಕತ್ತ ನೈಟ್ ರೈಡರ್ಸ್ ತಂಡ ಮೂರನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗುವ ನಿಟ್ಟಿನಲ್ಲಿ 114 ರನ್‌ಗಳ ಸವಾಲು ಪಡೆದುಕೊಂಡಿದೆ. ಹಾಲಿ ವರ್ಷದ ಐಪಿಎಲ್‌ನಲ್ಲಿ ಸರಾಗವಾಗಿ ರನ್‌ಗಳ ಮಳೆಗರೆಯುತ್ತಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟಿಂಗ್ ಐಪಿಎಲ್ ಫೈನಲ್‌ನಂಥ ಅತ್ಯಂತ ಪ್ರಮುಖ ಪಂದ್ಯದಲ್ಲಿಯೇ ಕೈಕೊಟ್ಟಿತ್ತು. ಮಿಚೆಲ್ ಸ್ಟಾರ್ಕ್, ವೈಭವ್ ಅರೋರಾ, ಹರ್ಷಿತ್ ರಾಣಾ, ಆಂಡ್ರೆ ರಸೆಲ್ ಹಾಗೂ ವರುಣ್ ಚಕ್ರವರ್ತಿ ನೇತೃತ್ವದಲ್ಲಿ ಘಾತಕ ದಾಳಿ ಸಂಘಟಿಸಿದ ಕೆಕೆಆರ್ ತಂಡ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಕೇವಲ 113 ರನ್‌ಗಳಿಗೆ ನಿಯಂತ್ರಿಸುವ ಮೂಲಕ ಸರಳ ಸವಾಲು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಐಪಿಎಲ್ ಪ್ಲೇ ಆಫ್‌ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆಡಿದ ರೀತಿಯಲ್ಲೇ ಬೌಲಿಂಗ್ ದಾಳಿ ನಡೆಸಿದ ಕೆಕೆಆರ್ ತಂಡ ಸನ್‌ರೈಸರ್ಸ್ ತಂಡದ ಬ್ಯಾಟಿಂಗ್‌ಅನ್ನು ಮೊದಲ ಓವರ್‌ನಿಂದಲೇ ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು. ಈ ಬಾರಿ ಕೂಡ ತಂಡ ಆರಂಭಿಕ ಯಶಸ್ಸಿಗೆ ಮಿಚೆಲ್ ಸ್ಟಾರ್ಕ್ ದೊಡ್ಡಮಟ್ಟದ ಕಾಣಿಕೆ ನೀಡಿದ್ದರು.
ಸನ್‌ರೈಸರ್ಸ್ ಬಾರಿಸಿದ 113 ರನ್ ಐಪಿಎಲ್ ಫೈನಲ್‌ನಲ್ಲಿ ತಂಡವೊಂದರ ಕನಿಷ್ಠ ಮೊತ್ತವಾಗಿದೆ. ಇದಕ್ಕೂ ಮುನ್ನ 2013ರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 9 ವಿಕೆಟ್‌ಗೆ 125 ರನ್ ಬಾರಿಸಿದ್ದು ಐಪಿಎಲ್ ಫೈನಲ್‌ನ ಕನಿಷ್ಠ ಮೊತ್ತವಾಗಿತ್ತು.
ಭಾನುವಾರ ಪಿ ಚಿದಂಬರಂ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಮರುಮಾತಿಲ್ಲದೆ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಟಾಸ್ ಗೆಲುವಿನ ನಿರೀಕ್ಷೆಯಲ್ಲಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡ ಈ ಹಂತದಲ್ಲಿಯೇ ಮೊದಲ ಸೋಲು ಕಂಡಿತ್ತು.
ಬ್ಯಾಟಿಂಗ್‌ಗೆ ಇಳಿದ ಸನ್‌ರೈಸರ್ಸ್ ತಂಡ 62 ರನ್ ಬಾರಿಸುವ ವೇಳೆ ತನ್ನ ಪ್ರಮುಖ ಐದು ಬ್ಯಾಟ್ಸ್‌ಮನ್‌ಗಳ ವಿಕೆಟ್ ಕಳೆದುಕೊಂಡಿತ್ತು. ಹಾಲಿ ಐಪಿಎಲ್‌ನಲ್ಲಿ ಒಂದೇ ಒಂದು ಪಂದ್ಯದಲ್ಲಿ 30ಕ್ಕಿಂತ ಹೆಚ್ಚಿನ ಬಾಲ್‌ಗಳನ್ನು ಎದುರಿಸದ ಅಭಿಷೇಕ್ ಶರ್ಮ 5 ಎಸೆತಗಳಲ್ಲಿ 2 ರನ್ ಬಾರಿಸಿ ಸ್ಟಾರ್ಕ್‌ಗೆ ಮೊದಲನೇ ಓವರ್‌ನಲ್ಲಿಯೇ ಬೌಲ್ಡ್ ಆದರು. ಕ್ವಾಲಿಫೈಯರ್-1 ಪಂದ್ಯದಲ್ಲಿ ಡಬಲ್ ಬಾಲ್ ಡಕ್ ಎದುರಿಸಿದ್ದ ಸನ್‌ರೈಸರ್ಸ್ ತಂಡದ ಬ್ಯಾಟಿಂಗ್ ಆಧಾರಸ್ತಂಭ ಟ್ರಾವಿಸ್ ಹೆಡ್ ಈ ಬಾರಿ ಗೋಲ್ಡನ್ ಡಕ್ ಕಂಡರು. ವೈಭವ್ ಅರೋರಾ ಅವರ ಮೊದಲ ಎಸೆತದಲ್ಲಿಯೇ ವಿಕೆಟ್ ಕೀಪರ್ ಗುರ್ಬಾಜ್‌ಗೆ ಕ್ಯಾಚ್ ನೀಡಿ ಹೊರನಡೆದರು.
2ನೇ ಓವರ್‌ನಲ್ಲೇ ಎದುರಿಸಿದ ದೊಡ್ಡ ಆಘಾತದಿಂದ ಸನ್‌ರೈಸರ್ಸ್‌ಗೆ ಚೇತರಿಸಿಕೊಳ್ಳುವ ಅವಕಾಶವನ್ನೇ ಕೆಕೆಆರ್ ನೀಡಲಿಲ್ಲ. ರಾಹುಲ್ ತ್ರಿಪಾಠಿ ಹಾಗೂ ಏಡೆನ್ ಮಾರ್ಕ್ರಮ್ (20 ರನ್, 23 ಎಸೆತ, 3 ಬೌಂಡರಿ) ಕೆಲ್ ರನ್‌ಗಳನ್ನು ಕಲೆಹಾಕುವ ಹೊತ್ತಿಗೆ ಮತ್ತೆ ದಾಳಿಗಿಳಿದ ಸ್ಟಾರ್ಕ್, ತ್ರಿಪಾಠಿಯನ್ನು ಡಗ್‌ಔಟ್‌ಗೆ ಅಟ್ಟಿದರು. 10 ಎಸೆತಗಳಲ್ಲಿ 1 ಬೌಂಡರಿ 1 ಸಿಕ್ಸರ್ ಇದ್ದ13 ರನ್ ಬಾರಿಸಿದ್ದ ನಿತೀಶ್ ರೆಡ್ಡಿ ಹಾಗೂ ಏಡೆನ್ ಮಾರ್ಕ್ರಮ್ ಕೂಡ ದೊಡ್ಡ ಮೊತ್ತ ಪೇರಿಸದೇ ಔಟಾದಾಗ ಸನ್ ಸಂಕಷ್ಟ ಎದುರಿಸಿತ್ತು.
ಈ ಹಂತದಲ್ಲಿ ಹೆನ್ರಿಕ್ ಕ್ಲಾಸೆನ್ ತಂಡವನ್ನು ಆಧರಿಸುವ ಪ್ರಯತ್ನ ಮಾಡಿದರಾದರೂ ಅವರಿಗೆ ಯಾರೂ ಸಾಥ್ ನೀಡಲಿಲ್ಲ. ಶಾಬಾಜ್ ಅಹ್ಮದ್ 8 ರನ್ ಬಾರಿಸಿ ಔಟಾದರೆ, ಅಬ್ದುಲ್ ಸಮದ್ ಕೇವಲ 4 ರನ್ ಗಳಿಸಿದರು. ಕೊನೆಯಲ್ಲಿ ನಾಯಕ ಪ್ಯಾಟ್ ಕಮ್ಮಿನ್ಸ್ ಉತ್ತಮ ಇನ್ನಿಂಗ್ಸ್ ಆಡಿದ್ದರಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡ 113 ರನ್ ಗಳಿಸಲು ಸಾಧ್ಯವಾಯಿತು.