IPL 2024 ಕುಲ್ದೀಪ್‌, ಜೇಕ್‌ ಅಬ್ಬರಕ್ಕೆ ಬೆಚ್ಚಿದ ಲಖನೌ!

By Kannadaprabha News  |  First Published Apr 13, 2024, 8:43 AM IST

ಮೊದಲು ಬ್ಯಾಟ್‌ ಮಾಡಿದ ಲಖನೌ ಲೆಕ್ಕಾಚಾರವನ್ನು ಕುಲ್ದೀಪ್‌ ಬುಡಮೇಲು ಮಾಡಿದರು. ಅಪಾಯಕಾರಿ ಬ್ಯಾಟರ್‌ಗಳಾದ ಸ್ಟೋಯ್ನಿಸ್‌, ಪೂರನ್‌ ಹಾಗೂ ರಾಹುಲ್‌ರ ವಿಕೆಟ್‌ ಕಬಳಿಸಿದ ಕುಲ್ದೀಪ್‌, 4 ಓವರಲ್ಲಿ ಒಂದೂ ಬೌಂಡರಿ, ಸಿಕ್ಸರ್‌ ಬಿಟ್ಟುಕೊಡದೆ ಕೇವಲ 20 ರನ್‌ಗೆ 3 ವಿಕೆಟ್‌ ಪಡೆದರು.


ಲಖನೌ: ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಲಖನೌ ಸೂಪರ್‌ ಜೈಂಟ್ಸ್‌ ನಡುವಿನ ಪಂದ್ಯ ಕೆಲ ಆಕರ್ಷಕ ಪ್ರದರ್ಶನಗಳಿಗೆ ಸಾಕ್ಷಿಯಾಯಿತು. ಕುಲ್ದೀಪ್‌ ಯಾದವ್‌ ಸ್ಪಿನ್‌ ಜಾದೂ ಪ್ರದರ್ಶಿಸಿದರೆ, ಯುವ ಬ್ಯಾಟರ್‌ಗಳಾದ ಲಖನೌದ ಆಯುಷ್‌ ಬದೋನಿ ಹಾಗೂ ಡೆಲ್ಲಿಯ ಜೇಕ್‌ ಫ್ರೇಸರ್‌-ಮೆಕ್‌ಗರ್ಕ್‌ ಸ್ಫೋಟಕ ಅರ್ಧಶತಕಗಳನ್ನು ಬಾರಿಸಿ ಗಮನ ಸೆಳೆದರು. ಮತ್ತೊಂದು ಗಮನಾರ್ಹ ಸಂಗತಿ ಎಂದರೆ, ಡೆಲ್ಲಿ ಈ ಆವೃತ್ತಿಯಲ್ಲಿ 2ನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಕೊನೆಯಿಂದ 2ನೇ ಸ್ಥಾನಕ್ಕೇರಿದರೆ, ಆರ್‌ಸಿಬಿ ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

ಮೊದಲು ಬ್ಯಾಟ್‌ ಮಾಡಿದ ಲಖನೌ ಲೆಕ್ಕಾಚಾರವನ್ನು ಕುಲ್ದೀಪ್‌ ಬುಡಮೇಲು ಮಾಡಿದರು. ಅಪಾಯಕಾರಿ ಬ್ಯಾಟರ್‌ಗಳಾದ ಸ್ಟೋಯ್ನಿಸ್‌, ಪೂರನ್‌ ಹಾಗೂ ರಾಹುಲ್‌ರ ವಿಕೆಟ್‌ ಕಬಳಿಸಿದ ಕುಲ್ದೀಪ್‌, 4 ಓವರಲ್ಲಿ ಒಂದೂ ಬೌಂಡರಿ, ಸಿಕ್ಸರ್‌ ಬಿಟ್ಟುಕೊಡದೆ ಕೇವಲ 20 ರನ್‌ಗೆ 3 ವಿಕೆಟ್‌ ಪಡೆದರು. 94 ರನ್‌ಗೆ 7 ವಿಕೆಟ್‌ ಕಳೆದುಕೊಂಡಿದ್ದ ಲಖನೌಗೆ ಆಯುಷ್‌ ಬದೋನಿ ಹಾಗೂ ಅರ್ಷದ್‌ ಖಾನ್‌ ಆಸರೆಯಾದರು. ಇವರಿಬ್ಬರು ಮುರಿಯದ 8ನೇ ವಿಕೆಟ್‌ಗೆ 73 ರನ್‌ ಜೊತೆಯಾಟವಾಡಿ, ತಂಡ ಸ್ಪರ್ಧಾತ್ಮಕ ಮೊತ್ತ ತಲುಪಲು ಕಾರಣರಾದರು.

Tap to resize

Latest Videos

ಸೋಲಿನಿಂದ ಕಂಗೆಟ್ಟ ಆರ್‌ಸಿಬಿ ಮತ್ತೊಂದು ಶಾಕ್, SRH ಪಂದ್ಯಕ್ಕೆ ಸ್ಟಾರ್ ಆಲ್ರೌಂಡರ್‌ ಡೌಟ್!

ಲಖನೌ 160ಕ್ಕಿಂತ ಹೆಚ್ಚು ರನ್‌ ಗಳಿಸಿದ್ದಾಗ ಸೋತ ಉದಾಹರಣೆಯೇ ಇರಲಿಲ್ಲ. ಹೀಗಾಗಿ, ಮತ್ತೊಮ್ಮೆ ತಮ್ಮ ಬೌಲರ್‌ಗಳ ಮೇಲೆ ನಾಯಕ ರಾಹುಲ್‌ ವಿಶ್ವಾಸವಿರಿಸಿದ್ದರು. ಆರಂಭದಲ್ಲೇ ವಾರ್ನರ್‌ (8) ವಿಕೆಟ್‌ ಪಡೆದರೂ, ಪೃಥ್ವಿ ಶಾ (32) ಹಾಗೂ ಚೊಚ್ಚಲ ಐಪಿಎಲ್‌ ಪಂದ್ಯವಾಡಿದ ಆಸ್ಟ್ರೇಲಿಯಾದ 22 ವರ್ಷದ ಜೇಕ್‌ ಫ್ರೇಸರ್‌ ಮೆಕ್‌ಗರ್ಕ್‌ರ ಅಬ್ಬರವನ್ನು ತಡೆಯಲಾಗಲಿಲ್ಲ.

ಶಾ ಔಟಾದ ಬಳಿಕ ಕ್ರೀಸ್‌ಗಿಳಿದ ರಿಷಭ್‌ ಪಂತ್‌ 24 ಎಸೆತದಲ್ಲಿ 41 ರನ್‌ ಚಚ್ಚಿದರು. ಜೇಕ್‌ 35 ಎಸೆತದಲ್ಲಿ 5 ಸಿಕ್ಸರ್‌, 2 ಬೌಂಡರಿಯೊಂದಿಗೆ 55 ರನ್‌ ಸಿಡಿಸಿ ತಂಡವನ್ನು ಜಯದ ಹೊಸ್ತಿಲಿಗೆ ಕೊಂಡೊಯ್ದರು. ಟ್ರಿಸ್ಟನ್‌ ಸ್ಟಬ್ಸ್‌ ಹಾಗೂ ಶಾಯ್‌ ಹೋಪ್‌, ಇನ್ನೂ 11 ಎಸೆತ ಬಾಕಿ ಇರುವಂತೆಯೇ ತಂಡವನ್ನು ಗೆಲ್ಲಿಸಿದರು.

'ನಾನು ನಿಮ್ಮ ಅತಿದೊಡ್ಡ ಚಿಯರ್ ಲೀಡರ್..': ಆಗಾಗ ಸುದ್ದಿಯಲ್ಲಿರುವ ಚಹಲ್ ಪತ್ನಿ ಹೀಗೆ ಹೇಳಿದ್ದು ಯಾರಿಗೆ?

ಸ್ಕೋರ್‌: 
ಲಖನೌ 20 ಓವರಲ್ಲಿ 167/7 (ಬದೋನಿ 55*, ರಾಹುಲ್‌ 39, ಕುಲ್ದೀಪ್‌ 3-20)
ಡೆಲ್ಲಿ 18.1 ಓವರಲ್ಲಿ 170/4 (ಜೇಕ್‌ 55, ಪಂತ್‌ 41, ಬಿಷ್ಣೋಯ್‌ 2-25) 
ಪಂದ್ಯಶ್ರೇಷ್ಠ: ಕುಲ್ದೀಪ್‌ ಯಾದವ್‌.

01ನೇ ಬಾರಿ: ಐಪಿಎಲ್‌ನಲ್ಲಿ ಲಖನೌ ಸೂಪರ್‌ ಜೈಂಟ್ಸ್‌ 160+ ರನ್‌ ರಕ್ಷಿಸಿಕೊಳ್ಳಲು ಇದೇ ಮೊದಲ ಬಾರಿಗೆ ವಿಫಲವಾಯಿತು. ಇದಕ್ಕೂ ಮುನ್ನ 13 ಪಂದ್ಯ ಗೆದ್ದಿತ್ತು.

73 ರನ್‌: ಐಪಿಎಲ್‌ನಲ್ಲಿ 8ನೇ ವಿಕೆಟ್‌ಗೆ ಗರಿಷ್ಠ ರನ್‌ ಜೊತೆಯಾಟದ ದಾಖಲೆಯನ್ನು ಬದೋನಿ-ಅರ್ಷದ್‌ ಬರೆದರು. ಇವರಿಬ್ಬರು 73 ರನ್‌ ಸೇರಿಸಿದರು. 2014ರಲ್ಲಿ ಫೌಕ್ನರ್‌-ಹಾಡ್ಜ್‌ 69 ರನ್‌ ಗಳಿಸಿದ್ದು ದಾಖಲೆ ಎನಿಸಿತ್ತು.


 

click me!