
ಅಹಮದಾಬಾದ್(ಮೇ.16): ಗುಜರಾತ್ ಟೈಟಾನ್ಸ್ ತಂಡದ ಪ್ರತಿಭಾನ್ವಿತ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್, ಇತ್ತೀಚಿಗಿನ ದಿನಗಳಲ್ಲಿ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಾ ಬಂದಿದ್ದಾರೆ. ಶುಭ್‌ಮನ್ ಗಿಲ್ ಭಾರತದ ಭವಿಷ್ಯದ ತಾರೆ ಎಂದು ಈಗಾಗಲೇ ಹಲವು ಕ್ರಿಕೆಟ್ ಪಂಡಿತರು ಷರಾ ಬರೆದಿದ್ದಾರೆ. ಇದೀಗ ಶುಭ್‌ಮನ್ ಗಿಲ್, ಸೋಮವಾರ ಸನ್‌ರೈಸರ್ಸ್ ಹೈದರಾಬಾದ್ ಎದುರು ಅತ್ಯದ್ಭುತ ಶತಕ ಬಾರಿಸುವ ಮೂಲಕ ತಮ್ಮ ಮೇಲಿಟ್ಟಿರುವ ನಿರೀಕ್ಷೆಯನ್ನು ಮತ್ತಷ್ಟು ಗಟ್ಟಿ ಮಾಡಿದ್ದಾರೆ.
ಹೌದು, ಭಾರತದ ತಾರಾ ಕ್ರಿಕೆಟಿಗ ಶುಭ್‌ಮನ್ ಗಿಲ್ ತಮ್ಮ ಅಮೋಘ ಬ್ಯಾಟಿಂಗ್ ಲಯವನ್ನು ಮುಂದುವರಿಸಿದ್ದು, ಐಪಿಎಲ್‌ನಲ್ಲಿ ಚೊಚ್ಚಲ ಶತಕ ಬಾರಿಸಿದ್ದಾರೆ. ಸೋಮವಾರ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಗಿಲ್ 56 ಎಸೆತದಲ್ಲಿ ಶತಕ ಪೂರೈಸಿದರು.
ಒಟ್ಟು 58 ಎಸೆತದಲ್ಲಿ 13 ಬೌಂಡರಿ, 1 ಸಿಕ್ಸರ್‌ನೊಂದಿಗೆ 101 ರನ್ ಗಳಿಸಿ ಔಟಾದರು. ಈ ಆವೃತ್ತಿಯಲ್ಲಿ ಗಿಲ್ 500 ರನ್ ಪೂರೈಸಿದ್ದು, ಅತಿಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಇದೇ ವೇಳೆ ಮೋದಿ ಕ್ರೀಡಾಂಗಣದಲ್ಲಿ ಗಿಲ್ ಅಮೋಘ ದಾಖಲೆ ಹೊಂದಿದ್ದು, ಕಳೆದ ಮಾರ್ಚ್‌ನಲ್ಲಿ ಆಸ್ಪ್ರೇಲಿಯಾ ವಿರುದ್ಧದ ಟೆಸ್ಟ್‌ನಲ್ಲಿ 128 ರನ್ ಗಳಿಸಿದ್ದರು. ಇನ್ನು ಫೆಬ್ರವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಔಟಾಗದೆ 126 ರನ್ ಗಳಿಸಿ ಅಂ.ರಾ.ಟಿ20ಯಲ್ಲಿ ತಮ್ಮ ಮೊದಲ ಶತಕ ದಾಖಲಿಸಿದ್ದರು.
ಇನ್ನು ಶುಭ್‌ಮನ್ ಗಿಲ್ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಹಾಗೂ ಮೊಹಮ್ಮದ್ ಶಮಿ ಮತ್ತು ಮೋಹಿತ್ ಶರ್ಮಾ ಮಾರಕ ದಾಳಿಯ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ಎದುರು ಗುಜರಾತ್ ಟೈಟಾನ್ಸ್ ತಂಡವು 34 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ಪ್ಲೇ ಆಫ್‌ಗೆ ಲಗ್ಗೆಯಿಟ್ಟಿದ್ದು ಮಾತ್ರವಲ್ಲದೇ ಸತತವಾಗಿ ಎರಡನೇ ಬಾರಿಗೆ ಮೊದಲ ಕ್ವಾಲಿಫೈಯರ್ ಪಂದ್ಯವನ್ನಾಡಲು ಅರ್ಹತೆ ಪಡೆದುಕೊಂಡಿದೆ.
IPL 2023 ಗಿಲ್ ಸೆಂಚುರಿ, ಶಮಿ ದಾಳಿ, ಹೈದರಾಬಾದ್ ಮಣಿಸಿ ಪ್ಲೇ ಆಫ್ ಸ್ಥಾನ ಖಚಿತಪಡಿಸಿದ ಗುಜರಾತ್!
ನಿರೀಕ್ಷೆಯಂತೆ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ 16ನೇ ಆವೃತ್ತಿಯ ಐಪಿಎಲ್‌ನ ಪ್ಲೇ-ಆಫ್‌ಗೆ ಲಗ್ಗೆಯಿಟ್ಟಿದೆ. 13 ಪಂದ್ಯಗಳಲ್ಲಿ 9 ಗೆಲುವುಗಳೊಂದಿಗೆ 18 ಅಂಕ ಕಲೆಹಾಕಿರುವ ಟೈಟಾನ್ಸ್, ಅಂಕಪಟ್ಟಿಯಲ್ಲಿ ಅಗ್ರ-2 ಸ್ಥಾನ ಖಚಿತಪಡಿಸಿಕೊಂಡಿದ್ದು ಕ್ವಾಲಿಫೈಯರ್-1 ಪಂದ್ಯಕ್ಕೆ ಅರ್ಹತೆ ಪಡೆದಿದೆ. ಇದೇ ವೇಳೆ ಸನ್‌ರೈಸರ್ಸ್ 12 ಪಂದ್ಯಗಳಲ್ಲಿ ಕೇವಲ 4 ಜಯದೊಂದಿಗೆ 8 ಅಂಕಗಳಲ್ಲೇ ಉಳಿದಿದ್ದು, ಪ್ಲೇ-ಆಫ್ ರೇಸ್‌ನಿಂದ ಹೊರಬಿದ್ದ 2ನೇ ತಂಡ ಎನಿಸಿದೆ.
ಗಿಲ್‌ಗೆ ವಿರಾಟ್ ಕೊಹ್ಲಿ ಸಂದೇಶ:
ಶುಭ್‌ಮನ್ ಗಿಲ್ ಆಡಿದ ಅದ್ಭುತ ಇನಿಂಗ್ಸ್‌ಗೆ ಕ್ರಿಕೆಟ್‌ನ ನಾನಾ ಮೂಲೆಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಅಭಿಮಾನಿಗಳಿಂದ ಕ್ರಿಕೆಟ್ ಪಂಡಿತರವರೆಗೆ ಶುಭ್‌ಮನ್ ಗಿಲ್‌ಗೆ ಸಾಮಾಜಿಕ ಜಾಲತಾಣಗಳ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಇನ್ನು ಟೀಂ ಇಂಡಿಯಾ ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ ಕೂಡಾ, ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿನೂತನವಾಗಿಯೇ ಗಿಲ್‌ಗೆ ಶುಭಹಾರೈಸಿದ್ದಾರೆ.
ಎಲ್ಲಿ ಸಾಮರ್ಥ್ಯವಿದೆಯೋ ಅಲ್ಲಿ ಶುಭ್‌ಮನ್ ಗಿಲ್ ಇದ್ದಾರೆ. ಮುಂದಿನ ತಲೆಮಾರನ್ನು ಆಳುವತ್ತ ಮುನ್ನಗ್ಗು. ದೇವರು ಒಳ್ಳೆಯದು ಮಾಡಲಿ ಎಂದು ಶುಭ್‌ಮನ್ ಗಿಲ್‌ಗೆ ಆರ್‌ಸಿಬಿ ರನ್ ಮಷೀನ್ ವಿರಾಟ್ ಕೊಹ್ಲಿ ಶುಭಹಾರೈಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.