
ಜೈಪುರ(ಏ.27): 16ನೇ ಆವೃತ್ತಿ ಐಪಿಎಲ್ನ ಮೊದಲಾರ್ಧದ ಪಂದ್ಯಗಳು ಮುಕ್ತಾಯಗೊಂಡಿದ್ದು, ಪ್ಲೇ-ಆಫ್ ಸ್ಥಾನಕ್ಕಾಗಿ ಪೈಪೋಟಿ ಹೆಚ್ಚಾಗುತ್ತಿದೆ. ಆರಂಭಿಕ ಹಂತದಲ್ಲಿ ಟೂರ್ನಿಯ ಬಲಿಷ್ಠ ತಂಡಗಳು ಎನಿಸಿಕೊಂಡಿರುವ, ಸ್ಫೋಟಕ ಬ್ಯಾಟರ್ಗಳು ಹಾಗೂ ಗುಣಮಟ್ಟದ ಸ್ಪಿನ್ನರ್ಗಳನ್ನು ಹೊಂದಿರುವ ಚೆನ್ನೈ ಹಾಗೂ ರಾಜಸ್ಥಾನ ಗುರುವಾರ ಪರಸ್ಪರ ಸೆಣಸಾಡಲಿದ್ದು, ಅಗ್ರಸ್ಥಾನಕ್ಕೇರಲು ಕಾಯುತ್ತಿವೆ. ಒಂದೆಡೆ ಮೊದಲ ಮುಖಾಮುಖಿಯ ಸೋಲಿಗೆ ಸೇಡು ತೀರಿಸಿಕೊಳ್ಳಲು ಚೆನ್ನೈ ಕಾಯುತ್ತಿದ್ದರೆ, ಸತತ 2 ಸೋಲಿನಿಂದ ಹೊರಬಂದು ತವರಿನಲ್ಲಿ ಜಯದ ಹಾದಿಗೆ ಮರಳಲು ರಾಜಸ್ಥಾನ ಕಾತರಿಸುತ್ತಿದೆ.
ಎರಡೂ ತಂಡಗಳು ಟೂರ್ನಿಯಲ್ಲಿ ಅಬ್ಬರದ ಬ್ಯಾಟಿಂಗ್ನಿಂದಾಗಿಯೇ ಹೆಚ್ಚಾಗಿ ಗಮನ ಸೆಳೆದಿದ್ದರೂ ಈ ಪಂದ್ಯ ಜೈಪುರದಲ್ಲಿ ನಡೆಯಲಿರುವ ಕಾರಣ ಸ್ಪಿನ್ನರ್ಗಳ ನಡುವೆ ಕದನ ಏರ್ಪಡುವುದು ಬಹುತೇಕ ಖಚಿತ. ಚೆನ್ನೈ ಪಾಲಿಗೆ ಜಡೇಜಾ, ಮೊಯೀನ್ ಅಲಿ, ತೀಕ್ಷಣ ಆಧಾರಸ್ತಂಭ ಎನಿಸಿಕೊಂಡಿದ್ದು, ಆರ್.ಅಶ್ವಿನ್, ಚಹಲ್, ಆ್ಯಡಂ ಜಂಪಾ ಅವರನ್ನೊಳಗೊಂಡ ರಾಜಸ್ಥಾನ, ತವರಿನ ಲಾಭವೆತ್ತುವ ವಿಶ್ವಾಸದಲ್ಲಿದೆ. ಆದರೆ ಎರಡೂ ತಂಡಗಳಲ್ಲಿ ಯಾವುದೇ ಕ್ಷಣದಲ್ಲಿ ಸಿಡಿಯಬಲ್ಲ ಬ್ಯಾಟರ್‌ಗಳಿದ್ದಾರೆ. ಹೀಗಾಗಿ ನಿಧಾನಗತಿ ಪಿಚ್ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ತಂಡಕ್ಕೆ ಯಶಸ್ಸು ಸಿಗುವ ಸಾಧ್ಯತೆ ಹೆಚ್ಚು.
ಆರ್‌ಸಿಬಿ ಕಪ್ ಗೆಲ್ಲೋವರೆಗೂ ಶಾಲೆ ಸೇರಲ್ಲ, ಪುಟಾಣಿ ಹಿಡಿದ ಪ್ಲಕಾರ್ಡ್ ವೈರಲ್!
ರಾಜಸ್ಥಾನದಲ್ಲಿ ಜೈಸ್ವಾಲ್, ಬಟ್ಲರ್, ಸ್ಯಾಮ್ಸನ್ ಹಾಗೂ ಹೆಟ್ಮೇಯರ್‌ರಂತಹ ಸ್ಫೋಟಕ ಬ್ಯಾಟರ್‌ಗಳಿದ್ದಾರೆ. ಇನ್ನೊಂದೆಡೆ ಗಾಯಕ್ವಾಡ್, ಕಾನ್‌ವೇ, ರಹಾನೆ, ದುಬೆ ಪ್ರಚಂಡ ಲಯದಲ್ಲಿದ್ದಾರೆ. ರಾಜಸ್ಥಾನ 7 ಪಂದ್ಯಗಳಲ್ಲಿ ಒಂದು ಬಾರಿ ಮಾತ್ರ 170ಕ್ಕಿಂತ ಕಡಿಮೆ ಮೊತ್ತ ಕಲೆಹಾಕಿದ್ದು, ಚೆನ್ನೈ ಮೊದಲು ಬ್ಯಾಟ್ ಮಾಡಿದ 4 ಪಂದ್ಯಗಳ ಪೈಕಿ 3ರಲ್ಲಿ 200+ ಮೊತ್ತ ಗಳಿಸಿದೆ. ಆದರೆ ಜೈಪುರದ ಪಿಚ್ನಲ್ಲಿ ಎರಡೂ ತಂಡಗಳ ಬ್ಯಾಟರ್ಗಳು ಎಷ್ಟರ ಮಟ್ಟಿಗೆ ಸಿಡಿಯಬಲ್ಲರು ಎನ್ನುವ ಕುತೂಹಲ ಎಲ್ಲರಲ್ಲಿದೆ.
ಒಟ್ಟು ಮುಖಾಮುಖಿ: 27
ಚೆನ್ನೈ: 15
ರಾಜಸ್ಥಾನ: 12
ಪಿಚ್ ರಿಪೋರ್ಚ್
ಸವಾಯ್ ಮಾನ್ಸಿಂಗ್ ಕ್ರೀಡಾಂಗಣ ಸ್ಪರ್ಧಾತ್ಮಕ ಕ್ರಿಕೆಟ್ಗೆ ಹೆಸರುವಾಸಿ. ಇಲ್ಲಿ ದೊಡ್ಡ ಮೊತ್ತ ದಾಖಲಾದ ಉದಾಹರಣೆ ಕಡಿಮೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಇತ್ತಂಡಗಳ ಒಟ್ಟು ರನ್ 300 ದಾಟಿರಲಿಲ್ಲ. ಬೌಲರ್ಗಳಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಟಾಸ್ ನಿರ್ಣಾಯಕ ಎನಿಸಬಹುದು.
IPL 2023: ಕೆಕೆಆರ್ ಸ್ಪಿನ್‌ಗೆ ಆರ್‌ಸಿಬಿ ಸ್ಟನ್!
ಅಂಕಪಟ್ಟಿ:
ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಸ್ಥಾನದಲ್ಲಿದೆ. ಚೆನ್ನೈ 7ರಲ್ಲಿ 5 ಗೆಲುವು ದಾಖಲಿಸಿದೆ. ಎರಡನೇ ಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ 7ರಲ್ಲಿ 5 ಗೆಲುವು ದಾಖಲಿಸಿ 2ನೇ ಸ್ಥಾನದಲ್ಲಿದೆ. ಇನ್ನು 3ನೇ ಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್ 7 ಪಂದ್ಯದಲ್ಲಿ 4 ಗೆಲುವು ದಾಖಲಿಸಿ 3ನೇ ಸ್ಥಾನದಲ್ಲಿದೆ. ಲಖನೌ ಸೂಪರ್ ಜೈಂಟ್ಸ್ 4ನೇ ಸ್ಥಾನದಲ್ಲಿದೆ. ಕಳೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಸೋಲು ಕಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು 5ನೇ ಸ್ಥಾನದಲ್ಲಿದೆ. ಆರ್‌ಸಿಬಿ 8 ಪಂದ್ಯದಲ್ಲಿ 4 ಗೆಲುವು 4 ಸೋಲು ಕಂಡಿದೆ. ಪಂಜಾಬ್ ಕಿಂಗ್ಸ್ 6, ಕೋಲ್ಕತಾ ನೈಟ್ ರೈಡರ್ಸ್ 7, ಮುಂಬೈ ಇಂಡಿಯನ್ಸ್ 8, ಸನ್‌ರೈಸರ್ಸ್ ಹೈದರಾಬಾದ್ 9 ಹಾಗೂ ಡೆಲ್ಲಿ ಕ್ಯಾಪಿಟಲ್ಸ್ 10ನೇ ಸ್ಥಾನದಲ್ಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.