
ಅಹಮದಾಬಾದ್(ಮೇ.30): ಕಳೆದ ಕೆಲ ವರ್ಷಗಳಿಂದಲೂ ರವೀಂದ್ರ ಜಡೇಜಾ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ಜಡೇಜಾ, ಧೋನಿ ನಾಯಕತ್ವದಡಿ ಭಾರತ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಇದೀಗ ಮೇ 29ರಂದು ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಎದುರು ಕೊನೆಯ ಎರಡು ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ ಬೌಂಡರಿ ಬಾರಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಜಡೇಜಾ ಯಶಸ್ವಿಯಾಗಿದ್ದಾರೆ. ಇದರ ಬೆನ್ನಲ್ಲೇ ರವೀಂದ್ರ ಜಡೇಜಾ ಮಾಡಿರುವ ಒಂದು ಟ್ವೀಟ್ ಇದೀಗ ಹಲವು ಗಾಳಿಸುದ್ದಿಗಳಿಗೆ ಬ್ರೇಕ್ ಬೀಳುವಂತೆ ಮಾಡಿದೆ.
ಮೀಸಲು ದಿನವಾದ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಹಾರ್ದಿಕ್ ಪಾಂಡ್ಯ (Hardik Pandya) ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು 214 ರನ್ ಬಾರಿಸಿತ್ತು. ಚೆನ್ನೈ ಮೂಲದ ಸಾಯಿ ಸುದರ್ಶನ್, ಗುಜರಾತ್ ಟೈಟಾನ್ಸ್ ಪರ 47 ಎಸೆತಗಳಲ್ಲಿ 96 ರನ್ ಸಿಡಿಸಿದರೆ, ವಿಕೆಟ್ ಕೀಪರ್ ಬ್ಯಾಟರ್ ವೃದ್ದಿಮಾನ್ ಸಾಹ 39 ಎಸೆತಗಳಲ್ಲಿ 54 ರನ್ ಚಚ್ಚಿದರು.
ಇನ್ನು ಸವಾಲಿನ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಕೇವಲ 3 ಎಸೆತ ಎದುರಿಸುತ್ತಿದ್ದಂತೆಯೇ ಮತ್ತೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಇದಾದ ಬಳಿಕ ಡೆಕ್ವರ್ತ್ ಲೂಯಿಸ್ ನಿಯಮದನ್ವಯ ಚೆನ್ನೈ ಸೂಪರ್ ಕಿಂಗ್ಸ್‌ಗೆ 15 ಓವರ್‌ಗಳಲ್ಲಿ 171 ರನ್‌ಗಳ ಗುರಿ ನೀಡಲಾಯಿತು. ಚೆನ್ನೈ ಪರ ಡೆವೊನ್ ಕಾನ್‌ವೇ(47), ಶಿವಂ ದುಬೆ(32*) ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಕೊನೆಯ ಎರಡು ಎಸೆತಗಳಲ್ಲಿ 10 ರನ್ ಅಗತ್ಯವಿದ್ದಾಗ ರವೀಂದ್ರ ಜಡೇಜಾ ಒಂದು ಸಿಕ್ಸ್ ಹಾಗೂ ಒಂದು ಬೌಂಡರಿ ಚಚ್ಚಿ ತಂಡವನ್ನ ರೋಚಕವಾಗಿ ಗೆಲುವಿನ ದಡ ಸೇರಿಸಿದರು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡವು 5ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ.
ಯಶಸ್ಸಿನ ಉತ್ತುಂಗಕ್ಕೆ ಏರಿದಾಗ ಧೋನಿಯಂತೆ ಬದುಕೋಣ!
ಇದಾದ ಬಳಿಕ ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಟ್ವೀಟ್ ಮಾಡಿರುವ ರವೀಂದ್ರ ಜಡೇಜಾ (Ravindra Jadeja), "ನಾವಿದನ್ನು ಮಾಡಿದ್ದು ಕೇವಲ ಮಹೇಂದ್ರ ಸಿಂಗ್ ಧೋನಿಗಾಗಿ ಮಾತ್ರ. ಮಹಿ ಬಾಯ್ ನಿಮಗಾಗಿ ಅಂದರೆ ಏನೂ ಬೇಕಾದರೂ' ಮಾಡುತ್ತೇವೆ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಹಲವು ಗಾಳಿ ಸುದ್ದಿಗಳಿಗೆ ಜಡ್ಡು ತೆರೆ ಎಳೆದಿದ್ದಾರೆ.
ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಜಡೇಜಾ, "ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗೆ ದೊಡ್ಡದಾದ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ಈ ಗೆಲುವನ್ನು ತಂಡದ ವಿಶೇಷ ವ್ಯಕ್ತಿಯಾದ ಮಹೇಂದ್ರ ಸಿಂಗ್ ಧೋನಿ ಅವರಿಗೆ ಅರ್ಪಿಸುತ್ತೇವೆ" ಎಂದು ಸ್ಟಾರ್ ಆಲ್ರೌಂಡರ್ ಹೇಳಿದ್ದಾರೆ.
ಈ ಮೊದಲು ಮಹೇಂದ್ರ ಸಿಂಗ್ ಧೋನಿ (MS Dhoni) ಹಾಗೂ ರವೀಂದ್ರ ಜಡೇಜಾ ನಡುವೆ ಮನಸ್ತಾಪ ಏರ್ಪಟ್ಟಿದ್ದು, ಇಬ್ಬರ ಸಂಬಂಧದಲ್ಲಿ ಬಿರುಕುಬಿಟ್ಟಿದೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಇದರ ನಡುವೆ ಜಡೇಜಾ ಮಾಡುತ್ತಿದ್ದ ಕೆಲವು ಟ್ವೀಟ್‌ಗಳು ಅನುಮಾನ ಎನ್ನುವ ಬೆಂಕಿಗೆ ತುಪ್ಪ ಸುರಿದಂತೆ ಭಾಸವಾಗುತ್ತಿದ್ದವು. ಆದರೆ ಇದೀಗ ಧೋನಿಗಾಗಿ ತಾವು ಏನು ಬೇಕಾದರು ಮಾಡಲು ಸಿದ್ದ ಎನ್ನುವ ಮೂಲಕ ಧೋನಿ ಹಾಗೂ ಜಡ್ಡು ನಡುವೆ ಎಲ್ಲವು ಚೆನ್ನಾಗಿದೆ ಎನ್ನುವುದು ಜಗಜ್ಜಾಹೀರಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.