
ಮುಂಬೈ(ಏ.15): 2ನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್) ತವರು, ತವರಿನಾಚೆ ಮಾದರಿಯಲ್ಲಿ ಇದೇ ವರ್ಷ ದೀಪಾವಳಿ ಸಮಯದಲ್ಲಿ ನಡೆಸಲು ಚಿಂತನೆ ನಡೆಸುತ್ತಿದ್ದೇವೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ. ಆದರೆ ವರ್ಷದಲ್ಲಿ 2 ಆವೃತ್ತಿ ನಡೆಸುವ ಉದ್ದೇಶವಿಲ್ಲ ಎಂದು ಅವರು ಖಚಿತಪಡಿಸಿದ್ದು, ಬಿಡುವಿನ ಸಮಯ ನೋಡಿಕೊಂಡು ಟೂರ್ನಿಯನ್ನು ಆಯೋಜಿಸಲಿದ್ದೇವೆ ಎಂದು ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಡಬ್ಲ್ಯುಪಿಎಲ್ ಈಗ ತನ್ನದೇ ಆದ ಅಭಿಮಾನಿಗಳ ಬಳಗ ಹೊಂದಿದೆ. ಅಭಿಮಾನಿಗಳ ಸಂಖ್ಯೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ. ಈ ವರ್ಷದ ಟೂರ್ನಿ ಮಾರ್ಚ್ 4ರಿಂದ 26ರ ವರೆಗೆ ಮುಂಬೈನ ಡಿ.ವೈ.ಪಾಟೀಲ್ ಹಾಗೂ ಬ್ರೆಬೋರ್ನ್ ಕ್ರೀಡಾಂಗಣಗಳಲ್ಲಿ ಆಯೋಜಿಸಲಾಗಿತ್ತು. ಡೆಲ್ಲಿ ತಂಡವನ್ನು ಫೈನಲ್ನಲ್ಲಿ ಸೋಲಿಸಿ ಮುಂಬೈ ಚಾಂಪಿಯನ್ ಆಗಿತ್ತು.
ಏಷ್ಯಾಕಪ್ ಸ್ಥಳಾಂತರಕ್ಕೆ ಅಭಿಪ್ರಾಯ ಸಂಗ್ರಹ
ಏಷ್ಯಾಕಪ್ ಸ್ಥಳಾಂತರದ ಬಗ್ಗೆ ಇತರ ದೇಶಗಳ ಜೊತೆ ಮಾತುಕತೆ ನಡೆಸುತ್ತಿದ್ದೇವೆ. ಎಲ್ಲರ ಅಭಿಪ್ರಾಯ ಆಧರಿಸಿ ಟೂರ್ನಿ ನಡೆಯುವ ಸ್ಥಳ ಹಾಗೂ ಭಾರತ-ಪಾಕಿಸ್ತಾನ ಪಂದ್ಯ ಆಯೋಜನೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಏಷ್ಯನ್ ಕ್ರಿಕೆಟ್ ಸಮಿತಿ(ಎಸಿಸಿ) ಮುಖ್ಯಸ್ಥರೂ ಆಗಿರುವ ಜಯ್ ಶಾ ಪ್ರತಿಕ್ರಿಯಿಸಿದ್ದಾರೆ. ಈ ಮೊದಲು ಶಾ ಭಾರತ ತಂಡ ಪಾಕಿಸ್ತಾನಕ್ಕೆ ತೆರಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೆ ಪಾಕ್ ಕ್ರಿಕೆಟ್ ಮಂಡಳಿ ಟೂರ್ನಿ ಪಾಕ್ನಲ್ಲೇ ನಡೆಯಲಿದೆ ಎಂದು ಖಚಿತಪಡಿಸಿದೆ. ಈ ಬಗ್ಗೆ ಎಸಿಸಿ ಸದ್ಯದಲ್ಲೇ ಅಂತಿಮ ನಿರ್ಧಾರ ಕೈಗೊಳ್ಳಲಿದೆ.
IPL 2023 ಕುಗ್ಗಿರುವ ಡೆಲ್ಲಿಯನ್ನು ಬಗ್ಗುಬಡಿಯುತ್ತಾ ಆರ್‌ಸಿಬಿ?
ಹಾರ್ದಿಕ್ ಪಾಂಡ್ಯಗೆ 12 ಲಕ್ಷ ರುಪಾಯಿ ದಂಡ
ಮೊಹಾಲಿ: ಐಪಿಎಲ್ನ ಪಂಜಾಬ್ ಕಿಂಗ್‌್ಸ ವಿರುದ್ಧದ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್ಗಾಗಿ ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯಗೆ 12 ಲಕ್ಷ ರುಪಾಯಿ ದಂಡ ವಿಧಿಸಲಾಗಿದೆ. ಇದು ಗುಜರಾತ್ನ ಮೊದಲ ನಿಯಮ ಉಲ್ಲಂಘನೆಯಾಗಿದ್ದು, 2ನೇ ಬಾರಿ ನಿಯಮ ಉಲ್ಲಂಘಿಸಿದರೆ ನಾಯಕನಿಗೆ 24 ಲಕ್ಷ ರುಪಾಯಿ ದಂಡ ಹಾಕಲಾಗುತ್ತದೆ. 3ನೇ ಬಾರಿ ಉಲ್ಲಂಘಿಸಿದರೆ ಹಾರ್ದಿಕ್ ಒಂದು ಪಂದ್ಯ ನಿಷೇಧಕ್ಕೊಳಗಾಗಲಿದ್ದಾರೆ.
ಏಪ್ರಿಲ್ 23ರಂದು ಹಸಿರು ಜೆರ್ಸಿ ಧರಿಸಿ ಆಡಲಿರುವ ಆರ್‌ಸಿಬಿ
ಬೆಂಗಳೂರು: ಏಪ್ರಿಲ್ 23ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಆಟಗಾರರು ಹಸಿರು ಜೆರ್ಸಿ ಧರಿಸಿ ಆಡಲಿದ್ದಾರೆ. ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಹಸಿರು ಜೆರ್ಸಿ ಧರಿಸಿರುವ ಫೋಟೋವನ್ನು ಆರ್‌ಸಿಬಿ ಈಗಾಗಲೇ ಟ್ವೀಟರ್ನಲ್ಲಿ ಹಂಚಿಕೊಂಡಿದೆ.
ಪರಿಸರ ಜಾಗೃತಿಗಾಗಿ ಹಲವು ವರ್ಷಗಳಿಂದಲೂ ಆರ್‌ಸಿಬಿ ಆಟಗಾರರು ಟೂರ್ನಿಯ ಒಂದು ಪಂದ್ಯದಲ್ಲಿ ಹಸಿರು ಜೆರ್ಸಿ ಧರಿಸಿ ಆಡುವ ಸಂಪ್ರದಾಯ ಬೆಳೆಸಿಕೊಂಡಿದ್ದಾರೆ. 2021ರಲ್ಲಿ ಕೋವಿಡ್ ವಾರಿಯರ್ಸ್ಗಾಗಿ ನೀಲಿ ಜೆರ್ಸಿ ಧರಿಸಿ ಆಡಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.