
ಮೊಹಾಲಿ(ಏ.01): ಗಾಯಾಳುಗಳ ಸಮಸ್ಯೆ ಹಾಗೂ ಕೆಲ ವಿದೇಶಿ ಆಟಗಾರರ ಗೈರು ಹಾಜರಿಯ ಹೊರತಾಗಿಯೂ ಪಂಜಾಬ್ ಕಿಂಗ್ಸ್ ಹಾಗೂ ಕೋಲ್ಕತ ನೈಟ್‌ರೈಡರ್ಸ್ ತಂಡಗಳು 16ನೇ ಆವೃತ್ತಿಯಲ್ಲಿ ಶುಭಾರಂಭ ಮಾಡಲು ಎದುರು ನೋಡುತ್ತಿವೆ.
ಈ ಎರಡೂ ತಂಡಗಳು ಕಳೆದ ಕೆಲ ಆವೃತ್ತಿಗಳಲ್ಲಿ ಅಸ್ಥಿರ ಪ್ರದರ್ಶನ ತೋರಿದ್ದು, ಆಟಗಾರರ ಆಯ್ಕೆಯಲ್ಲೂ ಪದೇ ಪದೇ ಎಡವಿವೆ. ಕಳೆದ ವರ್ಷ ಪಂಜಾಬ್ 6ನೇ ಸ್ಥಾನ ಪಡೆದರೆ, ಕೆಕೆಆರ್ 7ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಈ ಬಾರಿ ಎರಡೂ ತಂಡಗಳು ಹೊಸ ನಾಯಕರೊಂದಿಗೆ ಸುಧಾರಿತ ಪ್ರದರ್ಶನ ತೋರಲು ಎದುರು ನೋಡುತ್ತಿವೆ.
ಪಂಜಾಬ್ ತಂಡಕ್ಕೆ ಶಿಖರ್ ಧವನ್ ನೂತನ ನಾಯಕನಾಗಿ ನೇಮಕಗೊಂಡಿದ್ದು, ಶ್ರೇಯಸ್ ಅಯ್ಯರ್ ಗಾಯಗೊಂಡು ಹೊರಬಿದ್ದ ಕಾರಣ ಕೆಕೆಆರ್ ತಂಡವನ್ನು ನಿತೀಶ್ ರಾಣಾ ಮುನ್ನಡೆಸಲಿದ್ದಾರೆ. ಪಂಜಾಬ್‌ಗೆ ಜಾನಿ ಬೇರ್‌ಸ್ಟೋವ್ ಅನುಪಸ್ಥಿತಿ ಕಾಡುವ ಸಾಧ್ಯತೆ ಇದ್ದು, ಮೊದಲ ಪಂದ್ಯಕ್ಕೆ ಕಗಿಸೋ ರಬಾಡ ಅವರ ಸೇವೆಯೂ ಲಭ್ಯವಾಗುವುದಿಲ್ಲ. ಐಪಿಎಲ್‌ನ ದುಬಾರಿ ಆಟಗಾರ ಸ್ಯಾಮ್ ಕರ್ರನ್ ಮೇಲೆ ಪಂಜಾಬ್ ಹೆಚ್ಚಿನ ನಿರೀಕ್ಷೆ ಇರಿಸಿದೆ.
ಮತ್ತೊಂದೆಡೆ ಶಕೀಬ್ ಅಲ್ ಹಸನ್, ಲಿಟನ್ ದಾಸ್ ಮೊದಲ ಪಂದ್ಯಕ್ಕೆ ಗೈರಾಗಲಿದ್ದು, ಕೆಕೆಆರ್ ತನ್ನ ಹಿರಿಯ ಆಲ್ರೌಂಡರ್‌ಗಳಾದ ಆ್ಯಂಡ್ರೆ ರಸೆಲ್, ಸುನಿಲ್ ನರೇನ್ ಮೇಲೆ ಹೆಚ್ಚು ವಿಶ್ವಾಸವಿರಿಸಿದೆ.
IPL 2023 ಉದ್ಘಟನಾ ಪಂದ್ಯದಲ್ಲಿ ಸಿಎಸ್‌ಕೆ ಮಣಿಸಿ ಶುಭಾರಂಭ ಮಾಡಿದ ಗುಜರಾತ್ ಟೈಟಾನ್ಸ್!
ಐಪಿಎಲ್ ಇತಿಹಾಸದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದು, ಈ ಪೈಕಿ ಪಂಜಾಬ್ ಎದುರು ಕೆಕೆಆರ್ ತಂಡವು ಸ್ಪಷ್ಟ ಮೇಲುಗೈ ಸಾಧಿಸಿದೆ. 30 ಪಂದ್ಯಗಳ ಪೈಕಿ ಕೆಕೆಆರ್ ತಂಡವು 20 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಪಂಜಾಬ್ ಕಿಂಗ್ಸ್ ತಂಡವು 10 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿವೆ.
ಸಂಭವನೀಯ ಆಟಗಾರರ ಪಟ್ಟಿ
ಕೆಕೆಆರ್: ಎನ್ ಜಗದೀಶನ್, ರೆಹಮಾನುಲ್ಲಾ ಗುರ್ಬಾಜ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ(ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೇನ್, ಶಾರ್ದೂಲ್ ಠಾಕೂರ್, ಲಾಕಿ ಫಗ್ರ್ಯೂಸನ್, ಉಮೇಶ್ ಯಾದವ್, ವರುಣ್ ಚಕ್ರವರ್ತಿ.
ಪಂಜಾಬ್: ಶಿಖರ್ ಧವನ್(ನಾಯಕ), ಪ್ರಭ್‌ಸಿಮ್ರನ್, ಭಾನುಕಾ ರಾಜಪಕ್ಸೆ, ಜಿತೇಶ್ ಶರ್ಮಾ, ಸಿಕಂದರ್ ರಾಜಾ, ಶಾರೂಖ್ ಖಾನ್, ಸ್ಯಾಮ ಕರ್ರನ್, ರಿಶಿ ಧವನ್, ಹಪ್ರೀತ್ ಸಿಂಗ್, ರಾಹುಲ್ ಚಹರ್, ಅಶ್‌ರ್‍ದೀಪ್ ಸಿಂಗ್.
ಪಂದ್ಯ: ಮ.3.30ರಿಂದ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ
ಪಿಚ್ ರಿಪೋರ್ಚ್
2019ರ ಬಳಿಕ ಮೊಹಾಲಿ ಮೊದಲ ಬಾರಿಗೆ ಐಪಿಎಲ್ ಪಂದ್ಯಕ್ಕೆ ಆತಿಥ್ಯ ವಹಿಸಲಿದ್ದು, ವೇಗಿಗಳಿಗೆ ಹೆಚ್ಚಿನ ನೆರವು ದೊರೆಯುವ ನಿರೀಕ್ಷೆ ಇದೆ. ಇಲ್ಲಿ 2019ರ ಐಪಿಎಲ್‌ನಲ್ಲಿ ಸರಾಸರಿ 8.7 ರನ್‌ರೇಟ್‌ನಲ್ಲಿ ತಂಡಗಳು ರನ್ ಕಲೆಹಾಕಿದ್ದವು. ಈ ಆಧಾರದಲ್ಲಿ ಮೊದಲ ಇನ್ನಿಂಗ್ಸಲ್ಲಿ ಅಂದಾಜು 160-170 ರನ್ ದಾಖಲಾಗುವ ಸಾಧ್ಯತೆ ಇದೆ. ಮಳೆ ಮುನ್ಸೂಚನೆ ಇದ್ದು, ಪಂದ್ಯಕ್ಕೆ ಅಡ್ಡಿಯಾಗಬಹುದು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.