RCB vs CSK: ಅರ್ಧ ನಿಜ, ಅರ್ಧ ಸುಳ್ಳಾದ ಆರ್ಯವರ್ಧನ್‌ ಗುರೂಜಿ ಭವಿಷ್ಯ..!

Published : Apr 18, 2023, 02:04 PM IST
RCB vs CSK: ಅರ್ಧ ನಿಜ, ಅರ್ಧ ಸುಳ್ಳಾದ ಆರ್ಯವರ್ಧನ್‌ ಗುರೂಜಿ ಭವಿಷ್ಯ..!

ಸಾರಾಂಶ

* ಚೆನ್ನೈ ಎದುರು ರೋಚಕ ಸೋಲು ಕಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು * ಆರ್ಯವರ್ಧನ್ ಗುರೂಜಿ ಭವಿಷ್ಯ ಅರ್ಧ ನಿಜಮ ಅರ್ಧ ಸುಳ್ಳು * ಸಾಕಷ್ಟು ರೋಚಕತೆ ಕಾಯ್ದುಕೊಂಡಿದ್ದ ಹೈವೋಲ್ಟೇಜ್ ಪಂದ್ಯ

ಬೆಂಗಳೂರು(ಏ.18): ಐಪಿಎಲ್‌ ಅಭಿಮಾನಿಗಳು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ ನಡುವಿನ ಪಂದ್ಯದಲ್ಲಿ ಕೊನೆಗೂ ಎಂ ಎಸ್ ಧೋನಿ ನೇತೃತ್ವದ ಸಿಎಸ್‌ಕೆ ತಂಡವು ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದೆ. ಇನ್ನು ಈ ಹೈವೋಲ್ಟೇಜ್ ಪಂದ್ಯ ಆರಂಭಕ್ಕೂ ಮುನ್ನ ಖ್ಯಾತ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಗುರೂಜಿ, ಈ ಪಂದ್ಯದ ಫಲಿತಾಂಶದ ಬಗ್ಗೆ ಭವಿಷ್ಯ ನುಡಿದಿದ್ದರು. ಆದರೆ ಆ ಭವಿಷ್ಯ ಅರ್ಧ ನಿಜವಾಗಿದ್ದರೇ, ಮತ್ತೆ ಅರ್ಧ ಸುಳ್ಳಾಗಿದೆ. 

ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮೆಗಾ ಫೈಟ್‌ನಲ್ಲಿ ಮೊದಲು ಬ್ಯಾಟ್‌ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ನಿಗದಿತ 20 ಓವರ್‌ಗಳಲ್ಲಿ ಡೆವೊನ್‌ ಕಾನ್‌ವೇ(83) ಹಾಗೂ ಶಿವಂ ದುಬೆ(52) ಸ್ಪೋಟಕ ಅರ್ಧಶತಕದ ನೆರವಿನಿಂದ 6 ವಿಕೆಟ್ ಕಳೆದುಕೊಂಡು 226 ರನ್ ಕಲೆಹಾಕಿತು. ಆರ್‌ಸಿಬಿ ಪರ ವೈಶಾಕ್ ವಿಜಯ್‌ಕುಮಾರ್ 4 ಓವರ್‌ನಲ್ಲಿ 60 ರನ್ ನೀಡಿ ದುಬಾರಿ ಬೌಲರ್ ಎನಿಸಿಕೊಂಡರು. 

ಇನ್ನು ಸವಾಲಿನ ಗುರಿ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಮೊದಲ ಓವರ್‌ನಲ್ಲೇ ಮಾಜಿ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡಿತು. ಎರಡನೇ ಓವರ್‌ ಅಂತ್ಯದ ವೇಳೆಗೆ ಮಹಿಪಾಲ್ ಲೋಮ್ರಾರ್ ಕೂಡಾ ಪೆವಿಲಿಯನ್ ಸೇರಿದರು. 15 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಗಿದ್ದ ಆರ್‌ಸಿಬಿ ತಂಡಕ್ಕೆ ಮೂರನೇ ವಿಕೆಟ್‌ಗೆ ನಾಯಕ ಫಾಫ್ ಡು ಪ್ಲೆಸಿಸ್‌ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್‌ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಗೆಲುವಿನ ಆಸೆ ಮೂಡಿಸಿದ್ದರು. ಆದರೆ ಈ ಇಬ್ಬರ ವಿಕೆಟ್ ಪತನವಾಗುತ್ತಿದ್ದಂತೆಯೇ ನಾಟಕೀಯ ಕುಸಿತ ಕಾಣುವ ಮೂಲಕ ಆರ್‌ಸಿಬಿ 8 ವಿಕೆಟ್ ಕಳೆದುಕೊಂಡು 218 ರನ್ ಗಳಿಸಲಷ್ಟೇ ಶಕ್ತವಾಯಿತು.

IPL 2023 ಈ ಇಬ್ಬರ ಮೇಲೆ ಕಣ್ಣಿಡಿ; RCB vs CSK ಪಂದ್ಯದ ಭವಿಷ್ಯ ನುಡಿದ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್..!

ಇನ್ನು ಪಂದ್ಯ ಆರಂಭಕ್ಕೂ ಮುನ್ನ ಆರ್ಯವರ್ಧನ್ ಗುರೂಜಿ, "ಇವತ್ತು ನನ್ನ ಬೆಂಬಲ RCB ಗೆ. ನನ್ನ ಪ್ರಕಾರ, ಇವತ್ತಿನ ಪಂದ್ಯದಲ್ಲಿ ವೆಯ್ನ ಪಾರ್ನೆಲ್ ಮೇಲೆ ತುಂಬಾ ಭರವಸೆ ಇಟ್ಟಿದ್ದಿನಿ. ಮ್ಯಾಕ್ಸವೇಲ್ ಸಹ ಇಂದಿನ ಪಂದ್ಯದಲ್ಲಿ ತುಂಬಾ ಒಳ್ಳೆಯ ಆಟ ಆಡಬಹುದು. ಇಂದಿನ ಪಂದ್ಯ ಬಹಳ ಕುತೂಹಲ ಪಂದ್ಯ, ಕೊನೆಯ ಓವರ್‌ವರೆಗೂ ಪಂದ್ಯ ಕುತೂಹಲವಾಗಿರಲಿದೆ" ಎಂದು ಭವಿಷ್ಯ ನುಡಿದಿದ್ದರು.

ಆರ್ಯವರ್ಧನ್ ಗುರೂಜಿ ಈ ಭವಿಷ್ಯದಲ್ಲಿ ನಿಜವೆಷ್ಟು? ಸುಳ್ಳೆಷ್ಟು?

ಚೆನ್ನೈ ಎದುರಿನ ಪಂದ್ಯದಲ್ಲಿ ವೇಗಿ ವೇಯ್ನ್ ಪಾರ್ನೆಲ್‌ ಪ್ರದರ್ಶನದ ಮೇಲೆ ತುಂಬಾ ನಂಬಿಕೆ ಇದೆ ಎಂದು ಭವಿಷ್ಯ ನುಡಿದಿದ್ದರು. ಆದರೆ ಪಾರ್ನೆಲ್‌ 4 ಓವರ್‌ ಬೌಲಿಂಗ್ ಮಾಡಿ 12ರ ಎಕಾನಮಿಯಲ್ಲಿ 48 ರನ್‌ ನೀಡಿ ಒಂದು ವಿಕೆಟ್ ಕಬಳಿಸುವ ಮೂಲಕ ಆರ್‌ಸಿಬಿ ಪರ ಎರಡನೇ ದುಬಾರಿ ಬೌಲರ್ ಆಗಿ ಹೊರಹೊಮ್ಮಿದ್ದರು. ಇನ್ನು ಗುರಿ ಬೆನ್ನತ್ತಿದ ಆರ್‌ಸಿಬಿ ಪರ ಕೊನೆಯಲ್ಲಿ ಪಾರ್ನೆಲ್‌ 5 ಮಹತ್ವದ ಎಸೆತಗಳನ್ನು ಎದುರಿಸಿ ಕೇವಲ 2 ರನ್ ಬಾರಿಸಿ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು. ಇದು ತಂಡದ ಹಿನ್ನಡೆಗೂ ಕಾರಣವೆನಿಸಿಕೊಂಡಿತು.

ಇನ್ನು ಆರ್‌ಸಿಬಿ ಆಲ್ರೌಂಡರ್ ಮ್ಯಾಕ್ಸ್‌ವೆಲ್‌ ಉತ್ತಮವಾಗಿ ಆಡಬಹುದು ಎನ್ನುವ ಆರ್ಯವರ್ಧನ್ ಗುರೂಜಿ ಭವಿಷ್ಯ ನಿಜವಾಗಿದೆ. ಬೌಲಿಂಗ್‌ನಲ್ಲಿ ಮ್ಯಾಕ್ಸ್‌ವೆಲ್ 2.4 ಓವರ್‌ ಬೌಲಿಂಗ್ ಮಾಡಿ 28 ರನ್ ನೀಡಿ ಒಂದು ವಿಕೆಟ್ ಪಡೆದರು. ಇನ್ನು ಬ್ಯಾಟಿಂಗ್‌ನಲ್ಲಿ ಆರ್‌ಸಿಬಿ ತಂಡವು ಕೇವಲ 15 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಸಂದರ್ಭದಲ್ಲಿ ಕ್ರೀಸ್‌ಗಿಳಿದ ಮ್ಯಾಕ್ಸ್‌ವೆಲ್‌ ಕೇವಲ 36 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 8 ಮುಗಿಲೆತ್ತರದ ಸಿಕ್ಸರ್ ಸಿಡಿಸುವ ಮೂಲಕ 76 ರನ್ ಬಾರಿಸಿ ಅಭಿಮಾನಿಗಳನ್ನು ರಂಜಿಸಿದರು. ಒಂದು ವೇಳೆ ಮ್ಯಾಕ್ಸ್‌ವೆಲ್‌ ಇನ್ನೆರಡು ಓವರ್ ಬ್ಯಾಟಿಂಗ್‌ನಲ್ಲಿ ಕ್ರೀಸ್‌ನಲ್ಲಿದ್ದಿದ್ದರೇ ಫಲಿತಾಂಶ ಬೇರೆಯದ್ದೇ ಆಗುತ್ತಿತ್ತು ಎನ್ನುವುದು ಅಭಿಮಾನಿಗಳ ಮಾತಾಗಿದೆ. ಇನ್ನು ಕೊನೆಯ ಓವರ್‌ವರೆಗೂ ರೋಚಕತೆಯಿಂದ ಕೂಡಿರಲಿದೆ ಎನ್ನುವ ಭವಿಷ್ಯ ಕೂಡಾ ನಿಜವಾಗಿದೆ.

ಇನ್ನು ಆರ್ಯವರ್ಧನ್‌ ಗುರೂಜಿ ಯಾವುದೇ ಭವಿಷ್ಯ ನುಡಿದಾಗ ಸಾಕಷ್ಟು  ಪರ-ವಿರೋಧ ವ್ಯಕ್ತವಾಗುತ್ತಲೇ ಇರುತ್ತವೆ. ಅದೇ ರೀತಿ ಈ ಬಾರಿ ಕೂಡಾ ಆರ್‌ಸಿಬಿ ಸೋಲುತ್ತಿದ್ದಂತೆಯೇ ಆರ್ಯವರ್ಧನ್‌ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌