
ಮುಂಬೈ(ಮೇ.09): ಈ ಬಾರಿ ಐಪಿಎಲ್ನ ಪ್ಲೇ-ಆಫ್ ರೇಸ್ ಹಿಂದೆಂಗಿಂತಲೂ ಹೆಚ್ಚಿನ ಪೈಪೋಟಿ ಸೃಷ್ಟಿಸಿದ್ದು, ಅಗ್ರ-4ರಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಎಲ್ಲಾ ತಂಡಗಳು ಹರಸಾಹಸ ಪಡುತ್ತಿವೆ. ಚೊಚ್ಚಲ ಕಪ್ ಗೆಲ್ಲುವ ನಿರೀಕ್ಷೆಯಲ್ಲಿರುವ ಆರ್‌ಸಿಬಿ ಕೂಡಾ ಇನ್ನಷ್ಟೇ ಪ್ಲೇ-ಆಫ್ ಹಾದಿಯನ್ನು ಸುಗಮಗೊಳಿಸಬೇಕಿದ್ದು, ನಿರ್ಣಾಯಕ ಪಂದ್ಯದಲ್ಲಿ ಮಂಗಳವಾರ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಾಡಲಿದೆ. ಸದ್ಯ ಎರಡೂ ತಂಡಗಳು ತಲಾ 10 ಪಂದ್ಯಗಳಲ್ಲಿ 5 ಗೆಲುವಿನೊಂದಿಗೆ 10 ಅಂಕಗಳನ್ನು ಸಂಪಾದಿಸಿದ್ದು, ಮುಂದಿನ ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಈ ಪಂದ್ಯದಲ್ಲಿ ಸೋತ ತಂಡದ ನಾಕೌಟ್ ರೇಸ್ ಮತ್ತಷ್ಟುಕಠಿಣಗೊಳ್ಳುವುದು ಖಚಿತ.
ಆರ್‌ಸಿಬಿ ತನ್ನ ತವರಿನಲ್ಲಿ ಮುಂಬೈ ವಿರುದ್ಧವೇ ಗೆದ್ದು ಟೂರ್ನಿಯಲ್ಲಿ ಅಭಿಯಾನ ಆರಂಭಿಸಿತ್ತು. 2020ರಿಂದ ಉಭಯ ತಂಡಗಳು 6 ಬಾರಿ ಮುಖಾಮುಖಿಯಾಗಿದ್ದು, 4 ಪಂದ್ಯಗಳಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದೆ. ಇದೇ ಲಯ ಮುಂದುವರಿಸಲು ಆರ್‌ಸಿಬಿ ಕಾಯುತ್ತಿದ್ದರೂ ಮುಂಬೈಯನ್ನು ಅದರದೇ ತವರಿನಲ್ಲಿ ಮಣಿಸುವುದು ಅಷ್ಟುಸುಲಭವಲ್ಲ.
ಟೂರ್ನಿ ನಿರ್ಣಾಯಕ ಘಟ್ಟತಲುಪಿದ್ದರೂ ಆರ್ಸಿಬಿಗೆ ಡು ಪ್ಲೆಸಿ, ಕೊಹ್ಲಿ, ಮ್ಯಾಕ್ಸ್‌ವೆಲ್ ಹಾಗೂ ಸಿರಾಜ್ರನ್ನು ಬಿಟ್ಟರೆ ಇತರ ಆಟಗಾರರ ಕೊಡುಗೆ ಲಭಿಸಿದ್ದು ಕಡಿಮೆ. ಡೆಲ್ಲಿ ವಿರುದ್ಧ ಮಹಿಪಾಲ್ ಲೊಮ್ರೊರ್ ಅಬ್ಬರಿಸಿದ್ದರೂ ಸ್ಥಿರತೆ ಕಾಯ್ದುಕೊಳ್ಳಬೇಕಾದ ಅಗತ್ಯವಿದೆ. ಉಳಿದಂತೆ ಮಧ್ಯಮ ಕ್ರಮಾಂಕದ ಸಮಸ್ಯೆ ಈ ಪಂದ್ಯದಲ್ಲೂ ಮುಂದುವರಿಸುವ ಸಾಧ್ಯತೆಯೇ ಹೆಚ್ಚು. ಇನ್ನು, ಬೌಲಿಂಗ್ ವಿಭಾಗದಲ್ಲಿ ಹೇಜಲ್ವುಡ್, ಸಿರಾಜ್ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಹಸರಂಗ ನೈಜ ಆಟ ಪ್ರದರ್ಶಿಸಬೇಕಾದ ಅಗತ್ಯವಿದ್ದು, ಹರ್ಷಲ್ ಪಟೇಲ್ ದುಬಾರಿಯಾಗುತ್ತಿರುವುದು ತಂಡಕ್ಕೆ ಮುಳುವಾಗುತ್ತಿದೆ. ಆರ್‌ಸಿಬಿ ತಂಡವು ಸಂಘಟಿತ ಪ್ರದರ್ಶನ ತೋರಿದರಷ್ಟೇ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಎದುರು ಗೆಲುವು ಸಾಧಿಸಲು ಸಾಧ್ಯ.
IPL 2023: ಕೊನೇ ಎಸೆತದಲ್ಲಿ ಗೆಲುವು ಕಂಡ ಕೆಕೆಆರ್!
ಬೌಲಿಂಗ್ ಸಮಸ್ಯೆ: ಮತ್ತೊಂದೆಡೆ ಮುಂಬೈ ಕೂಡಾ ಹಲವು ಸಮಸ್ಯೆಗಳಿಂದ ಬಳಲುತ್ತಿದೆ. ಮೊದಲು ಬೌಲಿಂಗ್ ಮಾಡಿದಾಗ ಕೊನೆ 4 ಪಂದ್ಯಗಳಲ್ಲೂ ತಂಡ 200+ ರನ್ ಬಿಟ್ಟುಕೊಟ್ಟಿದೆ. ಡೆತ್ ಬೌಲಿಂಗ್ ಕೂಡಾ ಪರಿಣಾಮಕಾರಿಯಾಗುತ್ತಿಲ್ಲ. ಜೋಫ್ರಾ ಆರ್ಚರ್ ನಿರೀಕ್ಷೆ ಉಳಿಸಿಕೊಳ್ಳುತ್ತಿಲ್ಲ. ಹೀಗಾಗಿ ಆರ್‌ಸಿಬಿ ಬ್ಯಾಟರ್ಗಳನ್ನು ಕಟ್ಟಿಹಾಕುವುದು ತಂಡಕ್ಕೆ ಸವಾಲಾಗಿ ಪರಿಣಮಿಸಬಹುದು. ಆದರೆ ಮುಂಬೈ ಬ್ಯಾಟಿಂಗ್ ವಿಭಾಗ ಉತ್ತಮವಾಗಿದ್ದು, ಕಳೆದ 4 ಪಂದ್ಯದಲ್ಲಿ ಎರಡಂಕಿ ಮೊತ್ತ ಗಳಿಸದ ರೋಹಿತ್ ಹೊರತುಪಡಿಸಿ ಇತರರು ಅಬ್ಬರಿಸುತ್ತಿದ್ದಾರೆ. ಟಿಮ್ ಡೇವಿಡ್, ಗ್ರೀನ್ ಆಲ್ರೌಂಡ್ ಆಟ ತಂಡಕ್ಕೆ ನಿರ್ಣಾಯಕ ಎನಿಸಿಕೊಂಡಿದೆ.
ಮುಖಾಮುಖಿ: 31
ಆರ್‌ಸಿಬಿ: 14
ಮುಂಬೈ: 17
ಸಂಭವನೀಯ ಆಟಗಾರರ ಪಟ್ಟಿ
ಆರ್‌ಸಿಬಿ: ಫಾಫ್ ಡು ಪ್ಲೆಸಿಸ್(ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೋಮ್ರಾರ್, ದಿನೇಶ್ ಕಾರ್ತಿಕ್, ಕೇದವ್ ಜಾಧವ್, ಪ್ರಭುದೇಸಾಯಿ, ವನಿಂದು ಹಸರಂಗ, ಹರ್ಷಲ್ ಪಟೇಲ್, ಕರ್ಣ್ ಶರ್ಮಾ, ಜೋಶ್ ಹೇಜಲ್ವುಡ್, ಮೊಹಮ್ಮದ್ ಸಿರಾಜ್.
ಮುಂಬೈ: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್, ಕ್ಯಾಮರೋನ್ ಗ್ರೀನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟ್ರಿಸ್ಟಿನ್ ಸ್ಟಬ್ಸ್, ನಿಹಾಲ್ ವಧೇರಾ, ಟಿಮ್ ಡೇವಿಡ್, ಜೋಪ್ರಾ ಆರ್ಚರ್, ಪೀಯೂಸ್ ಚಾವ್ಲಾ, ಆಕಾಶ್, ಅರ್ಶದ್ ಖಾನ್, ಕುಮಾರ್ ಕಾರ್ತಿಕೇಯ.
ಪಂದ್ಯ: ಸಂಜೆ 7.30ರಿಂದ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ
ಪಿಚ್ ರಿಪೋರ್ಟ್
ಬ್ಯಾಟಿಂಗ್ ಸ್ನೇಹಿ ವಾಂಖೇಡೆ ಕ್ರೀಡಾಂಗಣದ ಪಿಚ್‌ನಲ್ಲಿ ಮತ್ತೊಮ್ಮೆ ದೊಡ್ಡ ಮೊತ್ತ ದಾಖಲಾಗಬಹುದು. ಕಳೆದೆರಡು ಪಂದ್ಯದ 4 ಇನ್ನಿಂಗ್್ಸಗಳಲ್ಲೂ ತಂಡಗಳು 200+ ರನ್ ಗಳಿಸಿವೆ. ಚೇಸಿಂಗ್ ಮಾಡುವ ತಂಡಕ್ಕೆ ಹೆಚ್ಚಿನ ನೆರವು ಸಿಕ್ಕ ಉದಾಹರಣೆ ಇದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.