ಫಾಫ್‌, ಮ್ಯಾಕ್ಸಿ ಮತ್ತೊಮ್ಮೆ ಸಿಡಿಲಬ್ಬರದ ಬ್ಯಾಟಿಂಗ್‌; ರಾಯಲ್ಸ್‌ಗೆ ಸವಾಲಿನ ಗುರಿ ನೀಡಿದ ಆರ್‌ಸಿಬಿ

Published : Apr 23, 2023, 05:30 PM IST
ಫಾಫ್‌, ಮ್ಯಾಕ್ಸಿ ಮತ್ತೊಮ್ಮೆ ಸಿಡಿಲಬ್ಬರದ ಬ್ಯಾಟಿಂಗ್‌; ರಾಯಲ್ಸ್‌ಗೆ ಸವಾಲಿನ ಗುರಿ ನೀಡಿದ ಆರ್‌ಸಿಬಿ

ಸಾರಾಂಶ

ರಾಜಸ್ಥಾನ ರಾಯಲ್ಸ್‌ಗೆ 190 ರನ್ ಗುರಿ ನೀಡಿದ ಆರ್‌ಸಿಬಿ ಸ್ಪೋಟಕ ಅರ್ಧಶತಕ ಚಚ್ಚಿದ ಫಾಫ್, ಮ್ಯಾಕ್ಸ್‌ವೆಲ್‌ ಮತ್ತೆ ಕೈಕೊಟ್ಟ ಆರ್‌ಸಿಬಿ ಮಧ್ಯಮ ಕ್ರಮಾಂಕ

ಬೆಂಗಳೂರು(ಏ.23): ಆರಂಭಿಕ ಆಘಾತದ ಹೊರತಾಗಿಯೂ ಗ್ಲೆನ್ ಮ್ಯಾಕ್ಸ್‌ವೆಲ್‌ ಹಾಗೂ ಫಾಫ್ ಡು ಪ್ಲೆಸಿಸ್‌ ಸ್ಪೋಟಕ ಅರ್ಧಶತಕಗಳ ನೆರವಿನಿಂದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 189 ರನ್ ಬಾರಿಸಿದ್ದು, ರಾಜಸ್ಥಾನ ರಾಯಲ್ಸ್‌ಗೆ ಕಠಿಣ ಗುರಿ ನೀಡಿದೆ. 

ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಆರಂಭದಲ್ಲೇ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡಿತು. ಇನಿಂಗ್ಸ್‌ನ ಮೊದಲ ಎಸೆತದಲ್ಲೇ ಟ್ರೆಂಟ್‌ ಬೌಲ್ಟ್‌, ವಿರಾಟ್ ಕೊಹ್ಲಿಯನ್ನು ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು. ಇನ್ನು ಅಗ್ರಕ್ರಮಾಂಕಕ್ಕೆ ಬಡ್ತಿ ಪಡೆದು ಕಣಕ್ಕಿಳಿದ ಶಹಬಾಜ್ ಅಹಮ್ಮದ್(2) ಕೂಡಾ ಹೆಚ್ಚುಹೊತ್ತು ಕ್ರೀಸ್‌ನಲ್ಲಿರಲು ಟ್ರೆಂಟ್‌ ಬೌಲ್ಟ್‌ ಅವಕಾಶ ನೀಡಲಿಲ್ಲ. ಆರ್‌ಸಿಬಿ ತಂಡವು 12 ರನ್ ಗಳಿಸುವಷ್ಟರಲ್ಲಿ ಆರಂಭಿಕರಿಬ್ಬರೂ ಪೆವಿಲಿಯನ್ ಸೇರಿದ್ದರು.

ಫಾಫ್-ಮ್ಯಾಕ್ಸಿ ಜುಗಲ್ಬಂದಿ: ಚೆನ್ನೈ ಸೂಪರ್ ಕಿಂಗ್ಸ್‌ ಎದುರು ಶತಕದ ಜತೆಯಾಟವಾಡಿ ಮಿಂಚಿದ್ದ ಫಾಫ್ ಡು ಪ್ಲೆಸಿಸ್‌ ಹಾಗೂ ಗ್ಲೆನ್‌ ಮ್ಯಾಕ್ಸ್‌ವೆಲ್‌, ಇದೀಗ ಮತ್ತೊಮ್ಮೆ ರಾಜಸ್ಥಾನ ರಾಯಲ್ಸ್ ಎದುರು ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಆರಂಭದಿಂದಲೇ ರಾಯಲ್ಸ್ ಬೌಲರ್‌ಗಳ ಎದುರು ಸ್ಪೋಟಕ ಬ್ಯಾಟಿಂಗ್‌ ನಡೆಸಿದ ಈ ಜೋಡಿ ರನ್‌ ವೇಗಕ್ಕೆ ಚುರುಕು ಮುಟ್ಟಿಸಿದರು. 3ನೇ ವಿಕೆಟ್‌ಗೆ ಫಾಫ್ ಹಾಗೂ ಮ್ಯಾಕ್ಸ್‌ವೆಲ್ ಜೋಡಿ ಕೇವಲ 66 ಎಸೆತಗಳಲ್ಲಿ 127 ರನ್‌ಗಳ ಜತೆಯಾಟವಾಡುವ ತಂಡಕ್ಕೆ ಆಸರೆಯಾದರು.

ಮತ್ತೊಮ್ಮೆ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಫಾಫ್ ಡು ಪ್ಲೆಸಿಸ್‌ ಕೇವಲ 39 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 62 ರನ್‌ ಬಾರಿಸಿ ರನೌಟ್ ಆಗಿ ಪೆವಿಲಿಯನ್ ಸೇರಿದರು. ಇನ್ನು ಮತ್ತೊಂದು ತುದಿಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಗ್ಲೆನ್‌ ಮ್ಯಾಕ್ಸ್‌ವೆಲ್ ಕೇವಲ 44 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 77 ರನ್‌ ಬಾರಿಸಿ ರವಿಚಂದ್ರನ್ ಅಶ್ವಿನ್ ಬೌಲಿಂಗ್‌ನಲ್ಲಿ ರಿವರ್ಸ್‌ ಸ್ವೀಪ್‌ ಮಾಡುವ ಯತ್ನದಲ್ಲಿ ಹೋಲ್ಡರ್‌ಗೆ ಕ್ಯಾಚಿತ್ತು ಪೆವಿಲಿಯನ್‌ ಸೇರಿದರು.

ಮತ್ತೆ ಕೈಕೊಟ್ಟ ಮಧ್ಯಮ ಕ್ರಮಾಂಕ: ಒಂದು ಹಂತದಲ್ಲಿ 15 ಓವರ್ ಅಂತ್ಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 156 ರನ್‌ ಬಾರಿಸಿದ್ದ ಅರ್‌ಸಿಬಿ ತಂಡವು, ಮ್ಯಾಕ್ಸ್‌ವೆಲ್ ವಿಕೆಟ್ ಪತನದ ಬಳಿಕ ನಾಟಕೀಯ ಕುಸಿತ ಕಂಡಿತು. ಮ್ಯಾಕ್ಸ್‌ವೆಲ್, ಫಾಫ್ ಅಬ್ಬರಿಸಿದರೆ ಮಾತ್ರ ರನ್ ಎನ್ನುವುದು ಮತ್ತೊಮ್ಮೆ ಸಾಬೀತಾಯಿತು. ಕೊನೆಯ 5 ಓವರ್‌ನಲ್ಲಿ ಅರ್‌ಸಿಬಿ 5 ವಿಕೆಟ್ ಕಳೆದುಕೊಂಡು 43 ರನ್‌ ಗಳಿಸಲಷ್ಟೇ ಶಕ್ತವಾಯಿತು. ಮಹಿಪಾಲ್ ಲೋಮ್ರರ್(8), ಸುಯಾಶ್ ಪ್ರಭುದೇಸಾಯಿ(0), ಹಸರಂಗ(6) ಹಾಗೂ ದಿನೇಶ್ ಕಾರ್ತಿಕ್‌(16) ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಚುನಾವಣಾ ಫಲಿತಾಂಶ ಪ್ರಕಟ