
ಚೆನ್ನೈ(ಮೇ.24): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿಯೇ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ. ಇನ್ನು ಪ್ಲೇ ಆಫ್‌ನಲ್ಲಿ ಭರ್ಜರಿ ಅರ್ಧಶತಕ ಸಿಡಿಸುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿ ತನ್ನದಾಗಿಸಿಕೊಂಡ ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್, ತಂಡದಲ್ಲಿರುವ ಪ್ರತಿಯೊಬ್ಬರಿಗೂ ಮೊದಲ ಪಂದ್ಯದಿಂದಲೇ ತಾವೇನು ಮಾಡಬೇಕು ಎನ್ನುವ ಸ್ಪಷ್ಟ ಕಲ್ಪನೆ ಸಿಕ್ಕಿದೆ ಎಂದು ಹೇಳಿದ್ದಾರೆ.
ಫೈನಲ್ ಪ್ರವೇಶದ ಬಳಿಕ ಮಾತನಾಡಿರುವ ಗಾಯಕ್ವಾಡ್, 2022ರ ಐಪಿಎಲ್ ಟೂರ್ನಿಯಲ್ಲಿ ತಮ್ಮ ತಂಡವು ಪ್ಲೇ ಆಫ್‌ಗೇರಲು ವಿಫಲವಾದ ದಿನದಿಂದಲೇ ತಂಡದಲ್ಲಿ ಬದಲಾವಣೆಗಳು ಆರಂಭವಾದವು. ಆದರೆ ಈ ಆವೃತ್ತಿಯ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಲೀಗ್ ಹಂತದ ಅಂತ್ಯದ ವೇಳೆಗೆ ಅಂಕಪಟ್ಟಿಯಲ್ಲಿ ಎರಡನೇ ತಂಡವಾಗಿ ಸ್ಥಾನಗಿಟ್ಟಿಸಿಕೊಂಡಿತ್ತು. ಇದೀಗ ತವರಿನ ಚೆಪಾಕ್ ಮೈದಾನದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ಎದುರು 15 ರನ್ ಭರ್ಜರಿ ಜಯ ಸಾಧಿಸುವ ಮೂಲಕ ಮೊದಲ ತಂಡವಾಗಿ ಧೋನಿ ಪಡೆ ಫೈನಲ್‌ಗೆ ಲಗ್ಗೆಯಿಟ್ಟಿದೆ.
"ಈ ಯಶಸ್ಸಿನ ಹಿಂದೆ ಸಾಕಷ್ಟು ಪ್ರಯತ್ನಗಳು ನಡೆದಿದೆ. ಅದರು ನಾವು ಕಳೆದ ವರ್ಷ ಪ್ಲೇ ಆಫ್‌ಗೇರಲು ವಿಫಲವಾದ ದಿನದಿಂದಲೇ ಬದಲಾವಣೆಗಳು ಆರಂಭವಾಯಿತು. ಸಹಜವಾಗಿಯೇ ತಂಡದ ಮ್ಯಾನೇಜ್‌ಮೆಂಟ್, ನಾವು ಯಾವ ವಿಭಾಗದಲ್ಲಿ ಸುಧಾರಣೆ ಕಾಣಬೇಕು ಎನ್ನುವುದರತ್ತ ಗಮನ ಹರಿಸಿತು. ಈ ವರ್ಷ ನಾವಾಡಿದ ಮೊದಲ ಪಂದ್ಯದಿಂದಲೇ, ನಾವು ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದ್ಧೇವೆ. ಇದರ ಜತೆಗೆ ಯಾರು ತಂಡದೊಳಗೆ ಆಡುತ್ತಾರೆ ಹಾಗೂ ಮತ್ತೆ ಯಾರು ತಂಡದೊಳಗೆ ಆಡುವುದಿಲ್ಲ ಎನ್ನುವ ಸ್ಪಷ್ಟ ಪರಿಕಲ್ಪನೆ ತಂಡದಲ್ಲಿದೆ" ಎಂದು ಗಾಯಕ್ವಾಡ್ ಹೇಳಿದ್ದಾರೆ.
ಧೋನಿಯಿಂದ ಮಾತ್ರ ಚೆನ್ನೈಯನ್ನು ಫೈನಲ್‌ಗೆ ಕೊಂಡೊಯ್ಯಲು ಸಾಧ್ಯ: ಸೆಹ್ವಾಗ್
"ನನ್ನ ಪ್ರಕಾರ, ಮೊದಲ ಪಂದ್ಯದಿಂದಲೇ ಪ್ರತಿಯೊಬ್ಬರಿಗೂ ತಮ್ಮ ಪಾತ್ರವೇನೆಂಬುದು ಗೊತ್ತಿತ್ತು. ಇದು ಎಲ್ಲ ಆಟಗಾರರಿಗೂ ತಾವೇನು ಮಾಡಬೇಕು ಎನ್ನುವ ಪರಿಕಲ್ಪನೆಯಿದ್ದಿದ್ದರಿಂದ ಚೆನ್ನಾಗಿ ಆಡಲು ಸಾಧ್ಯವಾಯಿತು. ಇನ್ನು ಶ್ರೀಲಂಕಾದ ಆಟಗಾರರು ನಮ್ಮ ತಂಡ ಕೂಡಿಕೊಂಡ ಬಳಿಕ ಪತಿರಣ ಹಾಗೂ ತೀಕ್ಷಣ ಕೂಡಾ ತಾವಾಡಿದ ಮೊದಲ ಪಂದ್ಯದಿಂದಲೇ ಅತ್ಯುತ್ತಮ ಆಟ ಪ್ರದರ್ಶಿಸಿದರು. ಹೀಗಾಗಿ ನಾವು ಬಹುತೇಕ ಎಲ್ಲಾ ಪಂದ್ಯಗಳಲ್ಲೂ ಒಂದೇ ತಂಡವೇ ಕಣಕ್ಕಿಳಿದಿದೆ. ಪ್ರತಿಯೊಬ್ಬರಿಗೂ ಧನ್ಯವಾದಗಳು" ಎಂದು ಗಾಯಕ್ವಾಡ್ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.