'ಯುವ ಕ್ರಿಕೆಟಿಗರು 200 ಚೇಸ್‌ ಮಾಡುವುದನ್ನು ಸೂರ್ಯಕುಮಾರ್ ಯಾದವ್ ನೋಡಿ ಕಲಿಯಲಿ'

By Naveen KodaseFirst Published May 4, 2023, 6:44 PM IST
Highlights

* ಪಂಜಾಬ್ ಕಿಂಗ್ಸ್ ಎದುರು ಗೆದ್ದು ಬೀಗಿದ ಮುಂಬೈ ಇಂಡಿಯನ್ಸ್‌
* ಬೃಹತ್ ಮೊತ್ತ ಬೆನ್ನತ್ತಿ ಗೆದ್ದ ರೋಹಿತ್ ಶರ್ಮಾ ಪಡೆ
* ಮುಂಬೈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಸೂರ್ಯಕುಮಾರ್ ಯಾದವ್

ಮೊಹಾಲಿ(ಮೇ.04): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಸತತ ಎರಡನೇ ಬಾರಿಗೆ 200+ ರನ್‌ ಯಶಸ್ವಿಯಾಗಿ ಗುರಿ ಬೆನ್ನತ್ತುವಲ್ಲಿ ಸಫಲವಾಗಿದೆ. ಅದರಲ್ಲೂ ಗುರಿ ಬೆನ್ನತ್ತುವಾಗ ಸೂರ್ಯಕುಮಾರ್ ಯಾದವ್ ಅವರ ಪ್ರದರ್ಶನ, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಮೆಚ್ಚುಗೆಗೆ ಪಾತ್ರವಾಗಿದೆ. ಪಂಜಾಬ್‌ ಎದುರು 6 ವಿಕೆಟ್ ರೋಚಕ ಜಯ ಸಾಧಿಸಿದ ಬೆನ್ನಲ್ಲೇ ಮಾತನಾಡಿದ ಸುರೇಶ್ ರೈನಾ, 200+ ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತುವುದು ಹೇಗೆ ಎನ್ನುವುದನ್ನು ಯುವ ಕ್ರಿಕೆಟಿಗರು ಸೂರ್ಯಕುಮಾರ್ ಯಾದವ್ ಅವರನ್ನು ನೋಡಿ ಕಲಿಯಬೇಕು ಎಂದು ಕಿವಿಮಾತು ಹೇಳಿದ್ದಾರೆ.

ಜಿಯೋ ಸಿನಿಮಾದಲ್ಲಿ ಮಾತನಾಡಿದ ಸುರೇಶ್ ರೈನಾ, ಸೂರ್ಯಕುಮಾರ್ ಯಾದವ್ ತಮ್ಮ ಸಾಮರ್ಥ್ಯದ ಮೇಲೆ ಸಂಪೂರ್ಣ ವಿಶ್ವಾಸವಿಟ್ಟಿದ್ದಾರೆ. ಅವರು ಪಂಜಾಬ್‌ ಕೈಯಲ್ಲಿದ್ದ ಪಂದ್ಯವನ್ನು ಮೊಹಾಲಿಯಲ್ಲಿ ಮುಂಬೈ ಪಾಲಾಗುವಂಯೆ ಮಾಡಿದರು ಎಂದು ಹೇಳಿದರು. ಪಂಜಾಬ್ ಎದುರಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪರ ಸೂರ್ಯಕುಮಾರ್ ಯಾದವ್ ಕೇವಲ 31 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 66 ರನ್ ಸಿಡಿಸಿ ಮುಂಬೈ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು.

ಬೌಲರ್‌ಗಳು ಎಲ್ಲಿ ಬೌಲಿಂಗ್ ಮಾಡುತ್ತಾರೆ ಎನ್ನುವುದು ಸೂರ್ಯನಿಗೆ ಗೊತ್ತಿದೆ. ಅವರು ಹೀಗೆ ಪಂದ್ಯವನ್ನು ಪಂಜಾಬ್‌ ಕೈಯಿಂದ ಕಿತ್ತುಕೊಳ್ಳುವಂತೆ ಮಾಡಲು ಕಾರಣ ಅವರ ಮೇಲಿರುವ ಆತ್ಮವಿಶ್ವಾಸ. 200 ರನ್ ಹೇಗೆ ಚೇಸ್‌ ಮಾಡಬೇಕು ಎನ್ನುವ ಲೆಕ್ಕಾಚಾರದೊಂದಿಗೆ ಆಡಿದರು. ನಿಮ್ಮ ಮೆದುಳು, ಪಂದ್ಯ ಹೇಗೆ ಸಾಗುತ್ತಿದೆ ಎನ್ನುವುದರ ಬಗ್ಗೆ ಗಮನ ಕೇಂದ್ರೀಕೃತವಾಗಿರಬೇಕು. ಅವರು ಅತ್ಯುತ್ತಮವಾಗಿ ಹೇಗೆ ಆಡಬೇಕು ಎನ್ನುವುದರ ಬಗ್ಗೆ ಪ್ರತಿಬಾರಿ ಪ್ರಯತ್ನಿಸುತ್ತಾರೆ ಎಂದು ಸೂರ್ಯನ ಆಟವನ್ನು ಸುರೇಶ್ ರೈನಾ ಗುಣಗಾನ ಮಾಡಿದ್ದಾರೆ.

ಗೌತಮ್ ಗಂಭೀರ್ ಜತೆ ಕಿತ್ತಾಡಿಕೊಂಡ ಬೆನ್ನಲೇ ದೇವಸ್ಥಾನಕ್ಕೆ ಭೇಟಿ ನೀಡಿದ ವಿರುಷ್ಕಾ ಜೋಡಿ..!

ಸೂರ್ಯಕುಮಾರ್ ಯಾದವ್‌ ಮೈದಾನಕ್ಕಿಳಿಯುವಾಗ ಬೃಹತ್ ಗುರಿ ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್‌ ತಂಡವು 54 ರನ್‌ಗಳಿಗೆ ಎರಡು ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇದಾದ ಬಳಿಕ ಮೂರನೇ ವಿಕೆಟ್‌ಗೆ ಸೂರ್ಯಕುಮಾರ್ ಯಾದವ್‌ ಮತ್ತೋರ್ವ ಆರಂಭಿಕ ಬ್ಯಾಟರ್‌ ಇಶಾನ್ ಕಿಶನ್ ಜತೆಗೂಡಿ 116 ರನ್‌ ಜತೆಯಾಟವಾಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಪ್ರತಿಯೊಬ್ಬ ಯುವ ಬ್ಯಾಟರ್‌ಗಳು 200+ ರನ್ ಗುರಿ ಬೆನ್ನತ್ತುವುದು ಹೇಗೆ ಎನ್ನುವುದನ್ನು ಮುಂಬೈ ಇಂಡಿಯನ್ಸ್ ತಂಡದ ಸೂರ್ಯಕುಮಾರ್ ಯಾದವ್ ಅವರನ್ನು ನೋಡಿ ಕಲಿಯಬೇಕು ಎಂದು ರೈನಾ ಹೇಳಿದ್ದಾರೆ. ಮೊಹಾಲಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವು ಮುಂಬೈಗೆ ಗೆಲ್ಲಲು 215 ರನ್‌ಗಳ ಕಠಿಣ ಗುರಿ ನೀಡಿತ್ತು. 5 ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಕೇವಲ 4 ವಿಕೆಟ್ ಕಳೆದುಕೊಂಡು ಇನ್ನೂ ಏಳು ಎಸೆತಗಳು ಬಾಕಿ ಇರುವಂತೆಯೇ ಮುಂಬೈ ಇಂಡಿಯನ್ಸ್‌ ತಂಡವು ಗೆಲುವಿನ ನಗೆ ಬೀರಿತು. ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್‌ ತಂಡದ ಪ್ಲೇ ಆಫ್ ಪ್ರವೇಶದ ಕನಸಿಗೆ ಮತ್ತಷ್ಟು ಬಲ ಬಂದಂತೆ ಆಗಿದೆ.

click me!