
ಮುಂಬೈ(ಡಿ.02): ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ತಾರಾ ಆಲ್ರೌಂಡರ್ ಡ್ವೇನ್ ಬ್ರಾವೋ, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ವಿದಾಯ ಘೋಷಿಸಿದ್ದಾರೆ. ಆದರೆ ಬ್ರಾವೋ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲಿಂಗ್ ಕೋಚ್ ಆಗಿ ಮುಂದುವರೆಯಲಿದ್ದಾರೆ. 2023ರ ಐಪಿಎಲ್ ಆಟಗಾರರ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಡ್ವೇನ್ ಬ್ರಾವೋ ಅವರನ್ನು ತಂಡದಿಂದ ರಿಲೀಸ್ ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ಬ್ರಾವೋ, ಐಪಿಎಲ್‌ಗೆ ವಿದಾಯ ಘೋಷಿಸಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್‌ನ ಯಶಸ್ವಿ ತಂಡವಾಗಿ ಹೊರಹೊಮ್ಮಲು ಡ್ವೇನ್ ಬ್ರಾವೋ ತನ್ನದೇ ಆದ ಪಾತ್ರವನ್ನು ನಿಭಾಯಿಸಿದ್ದರು. ಇದೀಗ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು, ವಿಂಡೀಸ್ ಮಾಜಿ ಆಲ್ರೌಂಡರ್ ಡ್ವೇನ್ ಬ್ರಾವೋ ಅವರನ್ನು ತಂಡದ ನೂತನ ಬೌಲಿಂಗ್ ಕೋಚ್ ಆಗಿ ನೇಮಕ ಮಾಡಿದೆ. ಲಕ್ಷ್ಮಿಪತಿ ಬಾಲಾಜಿ ಒಂದು ವರ್ಷದ ಮಟ್ಟಿಗೆ ವಿಶ್ರಾಂತಿ ಪಡೆದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲಿಂಗ್ ಕೋಚ್ ಆಗಿ ನೇಮಕವಾಗಿರುವುದಕ್ಕೆ ಡ್ವೇನ್ ಬ್ರಾವೋ ಸಂತಸ ವ್ಯಕ್ತಪಡಿಸಿದ್ದಾರೆ.
"ನಾನು ಆಡುವ ದಿನಗಳು ಮುಗಿದಿದ್ದು, ಇದೀಗ ಹೊಸ ಪ್ರಯಾಣ ಆರಂಭಿಸಲು ಉತ್ಸುಕನಾಗಿದ್ದೇನೆ. ನಾನೀಗ ಬೌಲರ್‌ಗಳ ಜತೆ ಕೆಲಸ ಮಾಡಲು ಉತ್ಸುಕನಾಗಿದ್ಧೇನೆ. ಆಟಗಾರನಿಂದ ಕೋಚ್‌ಗೆ ಹೆಚ್ಚೇನೂ ಬದಲಾಯಿಸಿಕೊಳ್ಳಬೇಕು ಎಂದೆನಿಸುತ್ತಿಲ್ಲ. ಯಾಕೆಂದರೆ ನಾನಿನ್ನು ಆಡುತ್ತಿದ್ದೇನೆ. ಬ್ಯಾಟರ್‌ಗಳು ಏನೂ ಯೋಚಿಸುತ್ತಾರೆ ಎನ್ನುವುದಕ್ಕಿಂತ ಒಂದು ಹೆಜ್ಜೆ ಮುಂದೆ ಆಲೋಚಿಸುವಂತೆ ಬೌಲರ್‌ಗಳ ಜತೆ ಕೆಲಸ ಮಾಡಲು ಪ್ರಯತ್ನಿಸುತ್ತೇನೆ. ಆದರೆ ಒಂದು ವ್ಯತ್ಯಾಸವೇನೆಂದರೇ ಮಿಡ್ ಆನ್ ಹಾಗೂ ಮಿಡ್ ಆಫ್‌ನಲ್ಲಿ ನಿಲ್ಲಲು ಆಗುವುದಿಲ್ಲ" ಎಂದು ಬ್ರಾವೋ ಹೇಳಿದ್ದಾರೆ.
IPL ಹರಾಜಿಗೆ 991 ಆಟಗಾರರ ನೋಂದಣಿ; 21 ಆಟಗಾರರ ಮೂಲಬೆಲೆ 2 ಕೋಟಿ ರುಪಾಯಿ..!
"ನಾನು ಐಪಿಎಲ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಆಗಿಹೊರಹೊಮ್ಮುತ್ತೇನೆ ಎಂದು ನಾನು ಯಾವತ್ತೂ ಕಲ್ಪನೆಯನ್ನು ಮಾಡಿಕೊಂಡಿರಲಿಲ್ಲ. ನಾನು ಐಪಿಎಲ್‌ನ ಭಾಗವಾಗಿರುವುದಕ್ಕೆ ಸಂತೋಷವಾಗುತ್ತಿದೆ" ಎಂದು ಡ್ವೇನ್ ಬ್ರಾವೋ ಹೇಳಿದ್ದಾರೆ.
ಡ್ವೇನ್ ಬ್ರಾವೋ 161 ಐಪಿಎಲ್ ಪಂದ್ಯಗಳನ್ನಾಡಿ 183 ವಿಕೆಟ್ ಕಬಳಿಸುವ ಮೂಲಕ ಐಪಿಎಲ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಿದ್ದಾರೆ. 2011ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕೂಡಿಕೊಂಡಿದ್ದ ಬ್ರಾವೋ, ಸಿಎಸ್‌ಕೆ ತಂಡವು 2011,2018 ಹಾಗೂ 2021ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಧೋನಿ ಜತೆಗೆ ಬ್ರಾವೋ ಕೂಡಾ ಮಹತ್ತರ ಪಾತ್ರವಹಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.