Vijay Hazare Trophy: ಋತುರಾಜ್ ಗಾಯಕ್ವಾಡ್‌ ಅಕರ್ಷಕ ಶತಕ, ಸೌರಾಷ್ಟ್ರಗೆ ಸವಾಲಿನ ಗುರಿ

By Naveena K VFirst Published Dec 2, 2022, 1:31 PM IST
Highlights

ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಸೌರಾಷ್ಟ್ರಕ್ಕೆ ಸವಾಲಿನ ಗುರಿ
ಆಕರ್ಷಕ ಶತಕ ಸಿಡಿಸಿ ಮಿಂಚಿದ ಋತುರಾಜ್ ಗಾಯಕ್ವಾಡ್‌
ವಿಜಯ್ ಹಜಾರೆ ಟ್ರೋಫಿ ಗೆಲ್ಲಲು ಸೌರಾಷ್ಟ್ರಕ್ಕೆ 249 ರನ್ ಗುರಿ

ಅಹಮದಾಬಾದ್(ಡಿ.02): ನಾಯಕ ಋತುರಾಜ್ ಗಾಯಕ್ವಾಡ್‌(108) ಅತ್ಯಮೋಘ ಫಾರ್ಮ್‌ನಲ್ಲಿದ್ದು, ವಿಜಯ್ ಹಜಾರೆ ಟ್ರೋಫಿಯ ಫೈನಲ್‌ ಪಂದ್ಯದಲ್ಲಿ ಮತ್ತೊಮ್ಮೆ ಸೊಗಸಾದ ಇನಿಂಗ್ಸ್‌ ಆಡುವ ಮೂಲಕ ಗಮನ ಸೆಳೆದಿದ್ದಾರೆ. ಋತುರಾಜ್ ಗಾಯಕ್ವಾಡ್‌ ಬಾರಿಸಿದ ಸಮಯೋಚಿತ ಶತಕದ ನೆರವಿನಿಂದ ಮಹರಾಷ್ಟ್ರ ತಂಡವು ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 248 ರನ್ ಬಾರಿಸಿದ್ದು, ಟ್ರೋಫಿ ಗೆಲ್ಲಲು ಸೌರಾಷ್ಟ್ರ ತಂಡಕ್ಕೆ ಸವಾಲಿನ ಗುರಿ ನೀಡಿದೆ.

ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಮಹಾರಾಷ್ಟ್ರ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. 5ನೇ ಓವರ್‌ನಲ್ಲೇ ಪವನ್ ಶಾ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆಗುವ ಮೂಲಕ ಪೆವಿಲಿಯನ್ ಸೇರಿದರು. ಇದಾದ ಬಳಿಕ ಋತುರಾಜ್ ಗಾಯಕ್ವಾಡ್ ಹಾಗೂ ಸತ್ಯಜೀತ್ ಬಚ್ಚಾವ್ ಸಾಕಷ್ಟು ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದರು. ಈ ಜೋಡಿ 66 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಸತ್ಯಜೀತ್ 59 ಎಸೆತಗಳನ್ನು ಎದುರಿಸಿ 27 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಋತುರಾಜ್ ಗಾಯಕ್ವಾಡ್ ಕೂಡಾ ಮೊದಲ 19 ರನ್ ಗಳಿಸಲು ಬರೋಬ್ಬರಿ 61 ಎಸೆತಗಳನ್ನು ಬಳಸಿಕೊಂಡರು.

Vijay Hazare Trophy Final ಮಹಾರಾಷ್ಟ್ರ ಎದುರು ಟಾಸ್ ಗೆದ್ದ ಸೌರಾಷ್ಟ್ರ ಬೌಲಿಂಗ್ ಆಯ್ಕೆ

ನಾಯಕನಾಟವಾಡಿದ ಗಾಯಕ್ವಾಡ್‌: ಋತುರಾಜ್ ಗಾಯಕ್ವಾಡ್‌ ಸದ್ಯ ರೆಡ್ ಹಾಟ್‌ ಫಾರ್ಮ್‌ನಲ್ಲಿದ್ದು, ಕಳೆದ 4 ಪಂದ್ಯಗಳ ಪೈಕಿ ಒಂದು ದ್ವಿಶತಕ ಸೇರಿದಂತೆ 3 ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಗಾಯಕ್ವಾಡ್, ಪಿಚ್‌ಗೆ ಹೊಂದಿಕೊಂಡ ಬಳಿಕ ಮೈಚಳಿ ಬಿಟ್ಟು ಬ್ಯಾಟ್ ಬೀಸಿದರು. ಗಾಯಕ್ವಾಡ್ 131 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 108 ರನ್ ಬಾರಿಸಿ ರನೌಟ್ ಆಗಿ ಪೆವಿಲಿಯನ್ ಸೇರಿದರು. ಮಹಾರಾಷ್ಟ್ರ ಪರ ಆರಂಭಿಕ ಬ್ಯಾಟರ್‌ಗಳಿಬ್ಬರು ರನೌಟ್‌ ಆಗಿ ಪೆವಿಲಿಯನ್ ಸೇರಿದ್ದು ವಿಶೇಷ ಎನಿಸಿಕೊಂಡಿತು.

ಇನ್ನುಳಿದಂತೆ ಅಂಕಿತ್ ಬಾವ್ನೆ(16), ಅಜೀಂ ಖಾಜಿ(37), ನೌಶಾದ್ ಶೇಖ್(31*) ಉಪಯುಕ್ತ ರನ್ ಕಾಣಿಕೆ ನೀಡುವ ಮೂಲಕ ಮಹಾರಾಷ್ಟ್ರ ತಂಡವು ಸವಾಲಿನ ಮೊತ್ತ ಕಲೆಹಾಕಲು ನೆರವಾದರು. ಇನ್ನು ಸೌರಾಷ್ಟ್ರ ತಂಡದ ಪರ ಚಿರಾಗ್ ಜಾನಿ 3 ವಿಕೆಟ್ ಪಡೆದರೆ, ಪರ್ತ್ ಬೌತ್, ಪ್ರೇರಕ್ ಮಂಕಡ್ ಹಾಗೂ ನಾಯಕ ಜಯದೇವ್ ಉನಾದ್ಕತ್ ತಲಾ ಒಂದೊಂದು ವಿಕೆಟ್ ಪಡೆದರು.

click me!