
ಚೆನ್ನೈ(ಮೇ.06): 16ನೇ ಆವೃತ್ತಿ ಐಪಿಎಲ್‌ನ ಲೀಗ್ ಪಂದ್ಯಗಳು ಮುಕ್ತಾಯದ ಹಂತ ತಲುಪಿದರೂ ಇನ್ನಷ್ಟೇ ಪ್ಲೇ-ಆಫ್ ಸನಿಹಕ್ಕೆ ಬರಬೇಕಿರುವ ಐಪಿಎಲ್‌ನ ಅತ್ಯಂತ ಯಶಸ್ವಿ ತಂಡಗಳು ಹಾಗೂ ಬದ್ಧವೈರಿಗಳಾದ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಶನಿವಾರ ಮತ್ತೊಮ್ಮೆ ಮುಖಾಮುಖಿಯಾಗಲಿವೆ. ಪ್ಲೇ-ಆಫ್ ದೃಷ್ಟಿಯಿಂದ ಎರಡೂ ತಂಡಗಳಿಗೆ ಈ ಪಂದ್ಯ ಮಹತ್ವದ್ದು.
ಆರಂಭಿಕ 7 ಪಂದ್ಯಗಳಲ್ಲಿ 5ರಲ್ಲಿ ಗೆದ್ದಿದ್ದ ಚೆನ್ನೈ ಸೂಪರ್ ಕಿಂಗ್ಸ್ ಕಳೆದ ಮೂರು ಪಂದ್ಯಗಳಲ್ಲಿ ಗಳಿಸಿದ್ದು ಕೇವಲ ಒಂದು ಅಂಕ. ಅಂದರೆ ತಂಡ ಸದ್ಯ 10 ಪಂದ್ಯಗಳಲ್ಲಿ ಕೇವಲ 11 ಅಂಕ ಸಂಪಾದಿಸಿದ್ದು, ಅಗ್ರ-4ರಲ್ಲೇ ಉಳಿಯಬೇಕಾದರೆ ಇನ್ನುಳಿದ ಎಲ್ಲಾ 4 ಪಂದ್ಯಗಳನ್ನು ಗೆಲ್ಲಲೇಬೇಕಾಗಬಹುದು.
ಮತ್ತೊಂದೆಡೆ ಸತತ ಸೋಲಿನೊಂದಿಗೆ ಟೂರ್ನಿಗೆ ಕಾಲಿರಿಸಿದ್ದ ಮುಂಬೈ ಈಗ ಚಾಂಪಿಯನ್ ಆಟದಿಂದಲೇ ಎಲ್ಲರಲ್ಲೂ ನಡುಕ ಹುಟ್ಟಿಸುತ್ತಿದೆ. 9 ಪಂದ್ಯಗಳಲ್ಲಿ 10 ಅಂಕ ಸಂಪಾದಿಸಿರುವ ರೋಹಿತ್ ಶರ್ಮಾ ಪಡೆಗೂ ಈ ಪಂದ್ಯದ ಗೆಲುವು ಅನಿವಾರ್ಯ. ಜೊತೆಗೆ ಮೊದಲ ಮುಖಾಮುಖಿಯ ಸೋಲಿಗೂ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.
ಎರಡೂ ತಂಡದಲ್ಲಿದ್ದಾರೆ ಸ್ಪೋಟಕ ಬ್ಯಾಟರ್‌ಗಳ ದಂಡು: ಹೌದು, ಐಪಿಎಲ್‌ನ ಬದ್ದ ಎದುರಾಳಿಗಳೆಂದು ಬಿಂಬಿಸಲ್ಪಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್, ಹೀಗೆ ಎರಡೂ ತಂಡದಲ್ಲೂ ಸ್ಪೋಟಕ ಬ್ಯಾಟರ್‌ಗಳ ದಂಡೇ ಇದೆ. ಒಂದು ಕಡೆ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಡೆವೊನ್ ಕಾನ್‌ವೇ, ಋತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಮೋಯಿನ್ ಅಲಿ, ಶಿವಂ ದುಬೆ ಹಾಗೂ ಅಂಬಟಿ ರಾಯುಡು ಅವರಂತಹ ಸ್ಪೋಟಕ ಬ್ಯಾಟರ್‌ಗಳ ದಂಡೇ ಇದೆ. ಇನ್ನೊಂದೆಡೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ನಾಯಕ ರೋಹಿತ್ ಶರ್ಮಾ, ಇಶಾನ್ ಕಿಶನ್, ಕ್ಯಾಮರೋನ್ ಗ್ರೀನ್, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್ ಹಾಗೂ ತಿಲಕ್ ವರ್ಮಾ ಅವರಂತಹ ಟಿ20 ಸ್ಪೆಷಲಿಸ್ಟ್ ಆಟಗಾರರ ಪಡೆಯೇ ಇದ್ದು, ಇಂದು ಮತ್ತೊಮ್ಮೆ ಉಭಯ ತಂಡಗಳ ನಡುವೆ ರನ್ ಮಳೆ ಹರಿಯುವ ಸಾಧ್ಯತೆಯಿದೆ.
ಮುಖಾಮುಖಿ: 35
ಚೆನ್ನೈ: 15
ಮುಂಬೈ: 20
ಸಂಭವನೀಯ ಆಟಗಾರರ ಪಟ್ಟಿ
ಚೆನ್ನೈ: ಡೆವೊನ್ ಕಾನ್‌ವೇ, ಋತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಮೋಯಿನ್ ಅಲಿ, ಶಿವಂ ದುಬೆ, ಅಂಬಟಿ ರಾಯುಡು, ರವೀಂದ್ರ ಜಡೇಜಾ, ಎಂ ಎಸ್ ಧೋನಿ(ನಾಯಕ), ದೀಪಕ್ ಚಹರ್, ಮಹೀಶ್ ಪತಿರನ, ಮಕೇಶ್ ದೇಶಪಾಂಡೆ, ಮಹೀಶ್ ತೀಕ್ಷಣ.
ಮುಂಬೈ: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್, ಕ್ಯಾಮರೋನ್ ಗ್ರೀನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟಿಮ್ ಡೇವಿಡ್, ವಧೇರಾ, ಕುಮಾರ್ ಕಾರ್ತಿಕೇಯ, ಆಕಾಶ್, ಪೀಯೂಸ್ ಚಾವ್ಲಾ, ಅರ್ಶದ್ ಖಾನ್, ಜೋಫ್ರಾ ಆರ್ಚರ್.
ಪಂದ್ಯ: ಮಧ್ಯಾಹ್ನ 3.30ರಿಂದ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ
ಪಿಚ್ ರಿಪೋರ್ಟ್
ಚೆಪಾಕ್ ಕ್ರೀಡಾಂಗಣದ ಪಿಚ್ ಸ್ಪಿನ್ ಸ್ನೇಹಿಯಾಗಿದ್ದರೂ ಕಳೆದ 4 ಪಂದ್ಯಗಳಲ್ಲಿ 4 ಬಾರಿ 200+ ಮೊತ್ತ ದಾಖಲಾಗಿದೆ. ಮಧ್ಯಾಹ್ನದ ಪಂದ್ಯವಾಗಿರುವ ಕಾರಣ ಮತ್ತೊಮ್ಮೆ ದೊಡ್ಡ ಮೊತ್ತ ದಾಖಲಾಗುವ ಸಾಧ್ಯತೆ ಹೆಚ್ಚು ಮತ್ತು ಟಾಸ್ ಗೆಲ್ಲುವ ತಂಡದ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳಬಹುದು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.