ಇಂದು ಚೆನ್ನೈ ಕ್ರೀಡಾಂಗಣದಲ್ಲಿ ಮೊದಲ ಕ್ವಾಲಿಫೈಯರ್ ಪಂದ್ಯ
ಗೆದ್ದ ತಂಡ ನೇರ ಫೈನಲ್ಗೆ, ಸೋತ ತಂಡಕ್ಕಿದೆ ಮತ್ತೊಂದು ಚಾನ್ಸ್
ಚಾಂಪಿಯನ್ ಟೈಟಾನ್ಸ್ಗೆ ಸತತ 2ನೇ ಫೈನಲ್ ಗುರಿ
ಚೆನ್ನೈ(ಮೇ.23): 16ನೇ ಆವೃತ್ತಿ ಐಪಿಎಲ್ನ ನಾಕೌಟ್ ಹಣಾಹಣಿಗೆ ವೇದಿಕೆ ಸಜ್ಜುಗೊಂಡಿದ್ದು, ಮಂಗಳವಾರ ಮೊದಲ ಕ್ವಾಲಿಫೈಯರ್ನಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಹಾಗೂ 4 ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್್ಸ ತಂಡಗಳು ಸೆಣಸಾಡಲಿವೆ. ಇದರಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದ್ದು, ಸೋಲುವ ತಂಡಕ್ಕೆ ಫೈನಲ್ಗೇರಲು ಮತ್ತೊಂದು ಅವಕಾಶ ಸಿಗಲಿದೆ. ಕ್ವಾಲಿಫೈಯರ್-2ರಲ್ಲಿ ಗೆದ್ದು ತಂಡ ಫೈನಲ್ ಪ್ರವೇಶಿಸಬಹುದು. ಪಂದ್ಯಕ್ಕೆ ಸಿಎಸ್ಕೆ ತಂಡದ ತವರು ಚೆಪಾಕ್ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
ದಾಖಲೆಯ 12ನೇ ಬಾರಿ ಪ್ಲೇ-ಆಫ್ ಆಡುತ್ತಿರುವ ಎಂ ಎಸ್ ಧೋನಿ ನಾಯಕತ್ವದ ಚೆನ್ನೈ 10ನೇ ಬಾರಿ ಫೈನಲ್ಗೇರುವ ನಿರೀಕ್ಷೆಯಲ್ಲಿದ್ದರೆ, ಹಾರ್ದಿಕ್ ನೇತೃತ್ವದ ಗುಜರಾತ್ ಟೈಟಾನ್ಸ್ ಸತತ 2ನೇ ಬಾರಿ ಪ್ರಶಸ್ತಿ ಸುತ್ತು ಪ್ರವೇಶಿಸುವ ಕಾತರಲ್ಲಿದೆ. ಈ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ವಿರುದ್ಧ ಗೆದ್ದು ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದ ಗುಜರಾತ್ ಲೀಗ್ ಹಂತದಲ್ಲಿ ಆಡಿದ 14 ಪಂದ್ಯಗಳಲ್ಲಿ 10ರಲ್ಲಿ ಗೆದ್ದು ಅಗ್ರಸ್ಥಾನ ಪಡೆದರೆ, 8 ಪಂದ್ಯಗಳಲ್ಲಿ ಗೆದ್ದಿರುವ ಚೆನ್ನೈ 17 ಅಂಕದೊಂದಿಗೆ 2ನೇ ಸ್ಥಾನ ಪಡೆದಿದೆ.
ಚೆನ್ನೈಗೆ ಗಿಲ್ ಭಯ: ಎರಡೂ ತಂಡಗಳು ಸಮಬಲ ಹೊಂದಿದ್ದು, ಉಭಯ ಪಡೆಗಳ ತಂಡ ಸಂಯೋಜನೆಯೂ ಉತ್ತಮವಾಗಿದೆ. ಶುಭ್ಮನ್ ಗಿಲ್ ವೃತ್ತಿಬದುಕಿನ ಶ್ರೇಷ್ಠ ಫಾರ್ಮ್ನಲ್ಲಿದ್ದು, 2 ಭರ್ಜರಿ ಶತಕ ಸೇರಿ ಬರೋಬ್ಬರಿ 680 ರನ್ ಸಿಡಿಸಿ ಗರಿಷ್ಠ ರನ್ ಸರದಾರರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಅವರನ್ನು ಕಟ್ಟಿಹಾಕುವುದು ಸಿಎಸ್ಕೆ ಮುಂದಿರುವ ಮೊದಲ ಸವಾಲು. ತಂಡದ ಇತರ ಯಾವುದೇ ಬ್ಯಾಟರ್ 300+ ರನ್ ಸೇರಿಸದಿದ್ದರೂ ನಿರ್ಣಾಯಕ ಹಂತದಲ್ಲಿ ಕೈಕೊಟ್ಟ ಉದಾಹರಣೆ ಕಡಿಮೆ.
ಡೇವಿಡ್ ಮಿಲ್ಲರ್, ವಿಜಯ್ ಶಂಕರ್, ಹಾರ್ದಿಕ್ ಪಾಂಡ್ಯ, ವೃದ್ದಿಮಾನ್ ಸಾಹ ಯಾವ ಕ್ಷಣದಲ್ಲೂ ಸ್ಫೋಟಿಸಬಲ್ಲರು. ಅತ್ತ ರಶೀದ್ ಖಾನ್ರ ಸ್ಥಿರತೆ ಕೂಡಾ ಸ್ವಲ್ಪವೂ ಕಡಿಮೆಯಾಗಿಲ್ಲ. ಮೊಹಮ್ಮದ್ ಶಮಿ, ರಶೀದ್ ಖಾನ್ ಇಬ್ಬರೂ ತಲಾ 24 ವಿಕೆಟ್ ಕಬಳಿಸಿದ್ದು, ಇವರಿಬ್ಬರನ್ನು ಎದುರಿಸುವುದೇ ಎದುರಾಳಿ ಬ್ಯಾಟರ್ಗಳಿಗೆ ತಲೆನೋವಾಗಿ ಪರಿಣಮಿಸಿದೆ. ಮೋಹಿತ್ ಶರ್ಮಾ, ನೂರ್ ಅಹ್ಮದ್ ಕೂಡಾ ತಂಡದ ಟ್ರಂಪ್ಕಾರ್ಡ್ಗಳೆನಿಸಿದ್ದಾರೆ.
ಮತ್ತೊಂದೆಡೆ ಕಳೆದ ಆವೃತ್ತಿಯಲ್ಲಿ 9ನೇ ಸ್ಥಾನಿಯಾಗಿ, ಈ ಬಾರಿ ಹಲವು ಸಮಸ್ಯೆಗಳನ್ನು ಮೆಟ್ಟಿ ನಿಂತು ಪ್ಲೇ-ಆಫ್ಗೇರಿರುವ ಚೆನ್ನೈ ಪಯಣವೇ ರೋಚಕ. ತಂಡದಲ್ಲಿ ಈಗಲೂ ಹಲವು ಸಮಸ್ಯೆಗಳಿದ್ದರೂ ಸಂಘಟಿತ ಪ್ರದರ್ಶನ ತಂಡವನ್ನು ನಾಕೌಟ್ ತಲುಪಿಸಿದೆ. ಡೆವೊನ್ ಕಾನ್ವೇ, ಋತುರಾಜ್ ಗಾಯಕ್ವಾಡ್, ಶಿವಂ ದುಬೆ ಅತ್ಯುತ್ತಮ ಫಾರ್ಮ್ನಲ್ಲಿದ್ದು, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಎಂ ಎಸ್ ಧೋನಿ ಕೂಡಾ ಉಪಯುಕ್ತ ಕೊಡುಗೆ ನೀಡುತ್ತಿದ್ದಾರೆ. ದೀಪಕ್ ಚಹರ್, ಪತಿರನ, ದೇಶಪಾಂಡೆ ವೇಗದ ಬೌಲಿಂಗ್ಗೆ ಬಲ ತುಂಬುತ್ತಿದ್ದು, ಚೆನ್ನೈನ ಸ್ಪಿನ್ ಪಿಚ್ನಲ್ಲಿ ಜಡೇಜಾ, ಅಲಿ, ತೀಕ್ಷಣ ಮತ್ತೊಮ್ಮೆ ನಿರ್ಣಾಯಕ ಪಾತ್ರ ವಹಿಸುವ ನಿರೀಕ್ಷೆಯಲ್ಲಿದ್ದಾರೆ.
ಮುಖಾಮುಖಿ: 03
ಚೆನ್ನೈ: 00
ಗುಜರಾತ್: 03
ಸಂಭವನೀಯ ಆಟಗಾರರ ಪಟ್ಟಿ
ಚೆನ್ನೈ ಸೂಪರ್ ಕಿಂಗ್ಸ್: ಡೆವೊನ್ ಕಾನ್ವೇ, ಋುತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಮೋಯಿನ್ ಅಲಿ, ಅಂಬಟಿ ರಾಯುಡು, ಶಿವಂ ದುಬೆ, ಎಂ ಎಸ್ ಧೋನಿ(ನಾಯಕ), ರವೀಂದ್ರ ಜಡೇಜಾ, ದೀಪಕ್ ಚಹರ್, ತುಷಾರ್ ದೇಶಪಾಂಡೆ, ಮಹೀಶ್ ತೀಕ್ಷಣ, ಮತೀಶ್ ಪತಿರನ.
ಗುಜರಾತ್ ಟೈಟಾನ್ಸ್: ಶುಭ್ಮನ್ ಗಿಲ್, ವೃದ್ದಿಮಾನ್ ಸಾಹ, ಹಾರ್ದಿಕ್ ಪಾಂಡ್ಯ(ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ದಶುನ್ ಶಾನಕ, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹಮ್ಮದ್, ಮೊಹಮ್ಮದ್ ಶಮಿ, ಯಶ್ ದಯಾಳ್.
ಪಂದ್ಯ ಆರಂಭ: ಸಂಜೆ 7.30ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಹಾಗೂ ಜಿಯೋ ಸಿನಿಮಾ
ಪಿಚ್ ರಿಪೋರ್ಟ್
ಚೆಪಾಕ್ ಕ್ರೀಡಾಂಗಣದ ಪಿಚ್ ಸ್ಪಿನ್ ಸ್ನೇಹಿಯಾಗಿದ್ದರೂ ಈ ಬಾರಿ ಬ್ಯಾಟರ್ಗಳೂ ಮಿಂಚಿದ್ದಾರೆ. ಲೀಗ್ ಹಂತದ 7 ಪಂದ್ಯಗಳಲ್ಲಿ 4ರಲ್ಲಿ ಚೇಸ್ ಮಾಡಿದ ತಂಡ ಗೆಲುವು ಸಾಧಿಸಿದೆ. ರಾತ್ರಿ ವೇಳೆ ಇಬ್ಬನಿ ಬೀಳುವ ಸಾಧ್ಯತೆ ಇದ್ದು, ಟಾಸ್ ಗೆಲ್ಲುವ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳಬಹುದು.