ಸನ್‌ರೈಸರ್ಸ್‌ ಬಗ್ಗುಬಡಿದ ಮುಂಬೈ ಇಂಡಿಯನ್ಸ್‌, ಪ್ಲೇ ಆಫ್‌ಗೇರಲು ಬೇಕಿದೆ ಅದೃಷ್ಟದ ಸಾಥ್..!

Published : May 21, 2023, 07:32 PM ISTUpdated : May 21, 2023, 07:43 PM IST
ಸನ್‌ರೈಸರ್ಸ್‌ ಬಗ್ಗುಬಡಿದ ಮುಂಬೈ ಇಂಡಿಯನ್ಸ್‌, ಪ್ಲೇ ಆಫ್‌ಗೇರಲು ಬೇಕಿದೆ ಅದೃಷ್ಟದ ಸಾಥ್..!

ಸಾರಾಂಶ

ಸನ್‌ರೈಸರ್ಸ್‌ ಹೈದರಾಬಾದ್ ಎದುರು ಗೆದ್ದು ಬೀಗಿದ ಮುಂಬೈ ಇಂಡಿಯನ್ಸ್ ಐಪಿಎಲ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ಕ್ಯಾಮರೋನ್ ಗ್ರೀನ್‌ ಆರ್‌ಸಿಬಿ ಸೋಲು-ಗೆಲುವಿನ ಮೇಲೆ ಮುಂಬೈ ಪ್ಲೇ ಆಫ್ ಭವಿಷ್ಯ ನಿರ್ಧಾರ

ಮುಂಬೈ(ಮೇ.21): 5 ಬಾರಿಯ ಐಪಿಎಲ್ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡವು ತನ್ನ ಪಾಲಿನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ಎದುರು 8 ವಿಕೆಟ್‌ ಭರ್ಜರಿ ಜಯ ಸಾಧಿಸಿದೆ. ಕ್ಯಾಮರೋನ್ ಗ್ರೀನ್ ಬಾರಿಸಿದ ಅಜೇಯ ಶತಕ ಹಾಗೂ ನಾಯಕ ರೋಹಿತ್ ಶರ್ಮಾ ಬಾರಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ 12 ಎಸೆತ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿದೆ. ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡವು ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ಒಂದು ವೇಳೆ ಆರ್‌ಸಿಬಿ-ಗುಜರಾತ್ ನಡುವಿನ ಪಂದ್ಯ ಮಳೆಯಿಂದ ರದ್ದಾದರೇ,  ಆರ್‌ಸಿಬಿ ಸೋಲು ಕಂಡರೆ ಮುಂಬೈ ಇಂಡಿಯನ್ಸ್ ತಂಡವು ನಾಲ್ಕನೇ ತಂಡವಾಗಿ ಪ್ಲೇ ಆಫ್‌ ಪ್ರವೇಶಿಸಲಿದೆ. ಒಂದು ವೇಳೆ ಆರ್‌ಸಿಬಿ ಪಂದ್ಯ ಜಯಿಸಿದರೆ, ಮುಂಬೈ ಪ್ಲೇ ಆಫ್‌ ಕನಸು ಭಗ್ನವಾಗಲಿದೆ

ಇಲ್ಲಿನ ವಾಂಖೇಡೆ ಮೈದಾನದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ನೀಡಿದ್ದ 201 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು ಆರಂಭದಲ್ಲೇ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ವಿಕೆಟ್ ಕಳೆದುಕೊಂಡಿತು. ಇಶಾನ್ ಕಿಶನ್‌ 12 ಎಸೆತಗಳನ್ನು ಎದುರಿಸಿ ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 14 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಮುಂಬೈ ತಂಡವು 20 ರನ್ ಗಳಿಸುವಷ್ಟರಲ್ಲೇ ಮೊದಲ ವಿಕೆಟ್ ಕಳೆದುಕೊಂಡು ಕಂಗಾಲಾಗಿ ಹೋಯಿತು.

ರೋಹಿತ್-ಗ್ರೀನ್ ಸ್ಪೋಟಕ ಆಟ: ಎರಡನೇ ವಿಕೆಟ್‌ಗೆ ಜತೆಯಾದ ನಾಯಕ ರೋಹಿತ್ ಶರ್ಮಾ ಹಾಗೂ ಕ್ಯಾಮರೋನ್ ಗ್ರೀನ್ ಸ್ಪೋಟಕ ಶತಕದ ಜತೆಯಾಟವಾಡುವ ಮೂಲಕ ಸನ್‌ರೈಸರ್ಸ್‌ ಹೈದರಾಬಾದ್‌ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಅದರಲ್ಲೂ ಆರಂಭದಿಂದಲೇ ಚುರುಕಾಗಿ ರನ್ ಕಲೆಹಾಕಿದ ಕ್ಯಾಮರೋನ್ ಗ್ರೀನ್ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸುವಲ್ಲಿ ಸಫಲರಾದರು. ಮತ್ತೊಂದು ತುದಿಯಲ್ಲಿ ರೋಹಿತ್ ಶರ್ಮಾ ಕೂಡಾ ಉತ್ತಮ ಸಾಥ್ ನೀಡಿದರು. ಪರಿಣಾಮ ಮೊದಲ 10 ಓವರ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವು ಕೇವಲ ಒಂದು ವಿಕೆಟ್ ಕಳೆದುಕೊಂಡು 114 ರನ್ ಬಾರಿಸಿತು. ಎರಡನೇ ವಿಕೆಟ್‌ಗೆ ಈ ಜೋಡಿ 128 ರನ್‌ಗಳ ಜತೆಯಾಟ ನಿಭಾಯಿಸುವ ಮೂಲಕ ತಂಡಕ್ಕೆ ಆಸರೆಯಾಯಿತು.

ಮುಂಬೈ ಪರ ಆಕರ್ಷಕ ಬ್ಯಾಟಿಂಗ್ ನಡೆಸಿದ ರೋಹಿತ್ ಶರ್ಮಾ ಕೇವಲ 37 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 56 ರನ್ ಬಾರಿಸಿ ಮಯಾಂಕ್ ದಾಗರ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ರೋಹಿತ್ ಶರ್ಮಾ ವಿಕೆಟ್ ಪತನದ ಬಳಿಕ ಮತ್ತಷ್ಟು ಆಕ್ರಮಣಕಾರಿ ಆಟವಾಡಿದ ಕ್ಯಾಮರೋನ್ ಗ್ರೀನ್‌, ಮುಂಬೈ ಇಂಡಿಯನ್ಸ್ ಗೆಲುವನ್ನು ಮತ್ತಷ್ಟು ಸುಲಭಗೊಳಿಸಿದರು. ಗ್ರೀನ್‌ 47 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 8 ಸಿಕ್ಸರ್ 8 ಸಹಿತ ಅಜೇಯ ಶತಕ ಸಿಡಿಸಿದರು. ಮತ್ತೊಂದು ತುದಿಯಲ್ಲಿ ಸೂರ್ಯಕುಮಾರ್ ಯಾದವ್ 16 ಎಸೆತಗಳಲ್ಲಿ 4 ಬೌಂಡರಿ ಸಹಿತ ಅಜೇಯ 25 ರನ್ ಸಿಡಿಸಿದರು.

IPL 2023 ಆರ್‌ಸಿಬಿ-ಗುಜರಾತ್ ನಡುವಿನ ಪಂದ್ಯ ಮಳೆಯಿಂದ ರದ್ದಾದ್ರೆ ಪ್ಲೇ ಆಫ್‌ಗೇರೋ ತಂಡ ಯಾವುದು..?

ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ ಆರಂಭಿಕರಾದ ಮಯಾಂಕ್ ಅಗರ್‌ವಾಲ್ ಹಾಗೂ ವಿವ್ರಾಂತ್ ಶರ್ಮಾ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಭದ್ರಬುನಾಧಿ ಹಾಕಿಕೊಟ್ಟರು. ಆರಂಭದಲ್ಲಿ ಎಚ್ಚರಿಯ ಬ್ಯಾಟಿಂಗ್ ನಡೆಸಿದ ಈ ಜೋಡಿ, ಪಿಚ್‌ಗೆ ಹೊಂದಿಕೊಳ್ಳುತ್ತಿದ್ದಂತೆಯೇ ಮೈ ಚಳಿ ಬಿಟ್ಟು ಬ್ಯಾಟ್ ಬೀಸಲಾರಂಭಿಸಿದರು. 

ವಿವ್ರಾಂತ್ ಶರ್ಮಾ ತಾವಾಡಿದ ಮೊದಲ ಇನಿಂಗ್ಸ್‌ನಲ್ಲಿಯೇ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಐಪಿಎಲ್ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು. ವಿವ್ರಾಂತ್ 36 ಎಸೆತಗಳನ್ನು ಎದುರಿಸಿ ಚೊಚ್ಚಲ ಅರ್ಧಶತಕ ಪೂರೈಸಿದರು. ಮೊದಲ ವಿಕೆಟ್‌ಗೆ ವಿವ್ರಾಂತ್ ಶರ್ಮಾ ಹಾಗೂ ಮಯಾಂಕ್ ಅಗರ್‌ವಾಲ್ ಜೋಡಿ 13.5 ಓವರ್‌ಗಳಲ್ಲಿ 140 ರನ್‌ಗಳ ಜತೆಯಾಟವಾಡುವ ಮೂಲಕ ಭದ್ರ ಬುನಾದಿ ಹಾಕಿಕೊಟ್ಟಿತು.

 ವಿವ್ರಾಂತ್ ಶರ್ಮಾ, 47 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 69 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಮತ್ತೊಂದು ತುದಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಮಯಾಂಕ್ ಅಗರ್‌ವಾಲ್‌  46 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 83 ರನ್ ಬಾರಿಸಿ ಆಕಾಶ್ ಮದ್ವಾಲ್‌ಗೆ ಎರಡನೇ ಬಲಿಯಾದರು.

ಸನ್‌ರೈಸರ್ಸ್‌ ರನ್‌ ಗತಿಗೆ ಬ್ರೇಕ್‌ ಹಾಕಿದ ಮುಂಬೈ: ಸನ್‌ರೈಸರ್ಸ್‌ ಹೈದರಬಾದ್‌ ತಂಡವು 16 ಓವರ್ ಅಂತ್ತದ ವೇಳೆಗೆ ಕೇವಲ ಒಂದು ವಿಕೆಟ್ ಕಳೆದುಕೊಂಡು 168 ರನ್ ಬಾರಿಸಿತ್ತು. ಹೀಗಾಗಿ ಮುಂಬೈ ಎದುರು ಸನ್‌ರೈಸರ್ಸ್‌ ಹೈದರಾಬಾದ್ ತಂಡವು ಅನಾಯಾಸವಾಗಿ 200+ ರನ್ ದಾಖಲಿಸಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಆಕಾಶ್ ಮದ್ವಾಲ್‌ ಹಾಗೂ ಕ್ರಿಸ್ ಜೋರ್ಡನ್‌ ಮಾರಕ ದಾಳಿ ನಡೆಸುವ ಮೂಲಕ ಸನ್‌ರೈಸರ್ಸ್‌ ರನ್ ವೇಗಕ್ಕೆ ಬ್ರೇಕ್ ಹಾಕಿದರು. ಸನ್‌ರೈಸರ್ಸ್‌ ಹೈದರಾಬಾದ್ ತಂಡವು ಕೊನೆಯ 4 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಕೇವಲ 32 ರನ್ ಗಳಿಸಲಷ್ಟೇ ಶಕ್ತವಾಯಿತು. ಇದು ಪಂದ್ಯದ ಫಲಿತಾಂಶದ ಮೇಲೂ ಪರಿಣಾಮ ಬೀರಿತು. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌