IPL Auction 2022: ಮಿನಿ ಹರಾಜಿಗೂ ಮುನ್ನ ಯಾವ ತಂಡದ ಬಳಿ ಎಷ್ಟು ಹಣವಿದೆ..?

By Naveen KodaseFirst Published Dec 22, 2022, 4:57 PM IST
Highlights

ಐಪಿಎಲ್ ಮಿನಿ ಹರಾಜಿಗೆ ಕ್ಷಣಗಣನೆ ಆರಂಭ
ಡಿಸೆಂಬರ್ 23ರಂದು ಮಧ್ಯಾಹ್ನ 2.30ರಿಂದ ಮಿನಿ ಹರಾಜು ಆರಂಭ
ಮಿನಿ ಹರಾಜಿಗೂ ಮುನ್ನ ಫ್ರಾಂಚೈಸಿ ಪರ್ಸ್‌ನಲ್ಲಿರುವ ಹಣವೆಷ್ಟು?

ಬೆಂಗಳೂರು(ಡಿ.22): ಬಹುನಿರೀಕ್ಷಿತ 2023ನೇ ಸಾಲಿನ ಇಂಡಿಯನ್‌ ಪ್ರೀಮಿಯರ್ ಲೀಗ್ ಆಟಗಾರರ ಮಿನಿ ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. ಡಿಸೆಂಬರ್ 23ರಂದು ಕೊಚ್ಚಿಯಲ್ಲಿ 2.30ರಿಂದ ಮಿನಿ ಹರಾಜು ಆರಂಭವಾಗಲಿದೆ. 10 ಫ್ರಾಂಚೈಸಿಗಳು ಸಾಕಷ್ಟು ಅಳೆದು-ತೂಗಿ ತಮಗೆ ಬೇಕಾದ ಆಟಗಾರರನ್ನು ಖರೀದಿಸಲು ಎದುರು ನೋಡುತ್ತಿವೆ.

2023ನೇ ಸಾಲಿನ ಮಿನಿ ಹರಾಜಿಗೆ 991 ಆಟಗಾರರು ತಮ್ಮ ಹೆಸರು ನೋಂದಾಯಿಸಿದ್ದರು. ಈ ಪೈಕಿ ಐಪಿಎಲ್ ಆಡಳಿತ ಮಂಡಳಿಯು 405 ಆಟಗಾರರನ್ನು ಶಾರ್ಟ್‌ಲಿಸ್ಟ್‌ ಮಾಡಿದೆ. 991 ಆಟಗಾರರ ಪೈಕಿ 369 ಆಟಗಾರರನ್ನು ಮೊದಲಿಗೆ ಶಾರ್ಟ್‌ಲಿಸ್ಟ್ ಮಾಡಲಾಗಿತ್ತು. ಇದಾದ ಬಳಿಕ ಎಲ್ಲಾ 10 ಫ್ರಾಂಚೈಸಿಗಳ ಮನವಿಯ ಮೇರೆಗೆ ಹೆಚ್ಚುವರಿಯಾಗಿ 36 ಆಟಗಾರರು ಮಿನಿ ಹರಾಜಿಗೆ ಸೇರ್ಪಡೆ ಮಾಡಲಾಗಿದೆ.

ಈಗ ಅಂತಿಮಗೊಂಡಿರುವ 405 ಆಟಗಾರರ ಪಟ್ಟಿಯಲ್ಲಿ 273 ಆಟಗಾರರು ಭಾರತೀಯರಾಗಿದ್ದರೇ, 132 ಮಂದಿ ವಿದೇಶಿ ಆಟಗಾರರಾಗಿದ್ದಾರೆ. ಇನ್ನು ಈ ಪೈಕಿ 4 ಆಟಗಾರರು ಐಸಿಸಿ ಅಸೋಸಿಯೇಟ್‌ ದೇಶಗಳ ಆಟಗಾರರಾಗಿದ್ದಾರೆ. 405 ಆಟಗಾರರ ಪೈಕಿ ಎಲ್ಲಾ 10 ಫ್ರಾಂಚೈಸಿಗಳು ಸೇರಿ ಒಟ್ಟು ಗರಿಷ್ಠ 87 ಆಟಗಾರರನ್ನು ಖರೀದಿಸಲು ಅವಕಾಶವಿದೆ. ಇನ್ನು 87 ಆಟಗಾರರ ಪೈಕಿ 30 ವಿದೇಶಿ ಆಟಗಾರರನ್ನು ಖರೀದಿಸಲು ಫ್ರಾಂಚೈಸಿಗಳಿಗೆ ಅವಕಾಶವಿದೆ. 

IPL Auction 2023: ಕೊಚ್ಚಿಯಲ್ಲಿ ಐಪಿಎಲ್‌ ಮಿನಿ ಹರಾಜಿಗೆ ಕ್ಷಣಗಣನೆ..! ಇಲ್ಲಿದೆ ಸಂಪೂರ್ಣ ಮಾಹಿತಿ

ಈ ಬಾರಿ ಆಟಗಾರರನ್ನು ಖರೀದಿಸಲು ಪ್ರತಿ ಫ್ರಾಂಚೈಸಿಗೆ 95 ಕೋಟಿ ರುಪಾಯಿ ಮಿತಿಗೊಳಿಸಲಾಗಿದೆ. ಆಟಗಾರರ ರೀಟೈನ್ ಹಾಗೂ ರಿಲೀಸ್‌ ಬಳಿಕ ಇದೀಗ ಎಲ್ಲಾ 10 ಫ್ರಾಂಚೈಸಿಗಳು ಮಿನಿ ಹರಾಜಿಗೆ ರೆಡಿಯಾಗಿವೆ. ಕೊಚ್ಚಿಯಲ್ಲಿ ಡಿಸೆಂಬರ್ 23ರಂದು ನಡೆಯಲಿರುವ ಮಿನಿ ಹರಾಜಿಗೂ ಮುನ್ನ ಯಾವ ಫ್ರಾಂಚೈಸಿ ಬಳಿ ಎಷ್ಟು ಹಣವಿದೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ  

01. ಸನ್‌ರೈಸರ್ಸ್‌ ಹೈದರಾಬಾದ್: 42.25 ಕೋಟಿ ರುಪಾಯಿ

ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರಿದ್ದ ಸನ್‌ರೈಸರ್ಸ್ ತಂಡವು ಮೇಜರ್‌ ಸರ್ಜರಿಗೆ ಮುಂದಾಗಿದ್ದು ನಾಯಕ ಕೇನ್ ವಿಲಿಯಮ್ಸನ್ ಸೇರಿದಂತೆ 12 ಆಟಗಾರರನ್ನು ರಿಲೀಸ್‌ ಮಾಡಿದೆ. ಇದೀಗ ಆರೆಂಜ್ ಆರ್ಮಿ, ಮಿನಿ ಹರಾಜಿಗೆ ಗರಿಷ್ಠ(42.25 ಕೋಟಿ ರುಪಾಯಿ) ಹಣ ಉಳಿಸಿಕೊಂಡಿದೆ. ಸನ್‌ರೈಸರ್ಸ್ ಗರಿಷ್ಠ ನಾಲ್ವರು ವಿದೇಶಿ ಆಟಗಾರರನ್ನು ಖರೀದಿಸಲು ಅವಕಾಶವಿದೆ.

02. ಪಂಜಾಬ್ ಕಿಂಗ್ಸ್‌: 32.20 ಕೋಟಿ ರುಪಾಯಿ

ಚೊಚ್ಚಲ ಐಪಿಎಲ್ ಟ್ರೋಫಿ ಕನವರಿಕೆಯಲ್ಲಿರುವ ಪಂಜಾಬ್ ಕಿಂಗ್ಸ್ ತಂಡವು ನಾಯಕ ಮಯಾಂಕ್ ಅಗರ್‌ವಾಲ್ ಸೇರಿದಂತೆ 9 ಆಟಗಾರರನ್ನು ರಿಲೀಸ್ ಮಾಡಿದ್ದು, ಮಿನಿ ಹರಾಜಿಗೆ 32.2 ಕೋಟಿ ರುಪಾಯಿ ಉಳಿಸಿಕೊಂಡಿದೆ. ಇನ್ನು ಪಂಜಾಬ್ ಕಿಂಗ್ಸ್‌ ಫ್ರಾಂಚೈಸಿಯು ಮಿನಿ ಹರಾಜಿನಲ್ಲಿ ಗರಿಷ್ಠ ಮೂವರು ವಿದೇಶಿ ಆಟಗಾರರನ್ನು ಖರೀದಿಸಲು ಅವಕಾಶವಿದೆ.

03. ಲಖನೌ ಸೂಪರ್ ಜೈಂಟ್ಸ್: 23.35 ಕೋಟಿ ರುಪಾಯಿ

ಲಖನೌ ತಂಡವು ಮನೀಶ್ ಪಾಂಡೆ, ಜೇಸನ್ ಹೋಲ್ಡರ್, ಎವಿನ್ ಲೆವಿಸ್ ಸೇರಿದಂತೆ 7 ಆಟಗಾರರನ್ನು ರಿಲೀಸ್ ಮಾಡಿದ್ದು, ತನ್ನ ಖಾತೆಯಲ್ಲಿ 23.35 ಕೋಟಿ ರುಪಾಯಿ ಉಳಿಸಿಕೊಂಡಿದೆ. ಲಖನೌ ಫ್ರಾಂಚೈಸಿಯು ಗರಿಷ್ಠ 4 ವಿದೇಶಿ ಆಟಗಾರರನ್ನು ಖರೀದಿಸಲು ಅವಕಾಶವಿದೆ.

04. ಮುಂಬೈ ಇಂಡಿಯನ್ಸ್‌: 20.55 ಕೋಟಿ ರುಪಾಯಿ

ಐಪಿಎಲ್‌ನ ಯಶಸ್ವಿ ತಂಡ ಮುಂಬೈ ಇಂಡಿಯನ್ಸ್ ತನ್ನ ತಂಡದಲ್ಲಿ ಮೇಜರ್ ಸರ್ಜರಿ ಮಾಡಿದ್ದು, ಪೊಲ್ಲಾರ್ಡ್ ಸೇರಿದಂತೆ 13 ಆಟಗಾರರನ್ನು ರಿಲೀಸ್ ಮಾಡಿದ್ದು, ತನ್ನ ಪರ್ಸ್‌ನಲ್ಲಿ 20.55 ಕೋಟಿ ರುಪಾಯಿಗಳನ್ನು ಉಳಿಸಿಕೊಂಡಿದೆ. ಮುಂಬೈ ತಂಡವು ಗರಿಷ್ಠ 3 ವಿದೇಶಿ ಆಟಗಾರರನ್ನು ಖರೀದಿಸಲು ಅವಕಾಶವಿದೆ.

05. ಚೆನ್ನೈ ಸೂಪರ್ ಕಿಂಗ್ಸ್‌: 20.45 ಕೋಟಿ ರುಪಾಯಿ

ಐಪಿಎಲ್‌ನ ಯಶಸ್ವಿ ತಂಡಗಳಲ್ಲಿ ಒಂದು ಎನಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಡ್ವೇನ್ ಬ್ರಾವೋ, ಕ್ರಿಸ್ ಜೋರ್ಡನ್ ಸೇರಿದಂತೆ 8 ಆಟಗಾರರನ್ನು ರಿಲೀಸ್ ಮಾಡಿದ್ದು, ಮಿನಿ ಹರಾಜಿಗೆ 20.45 ಕೋಟಿ ರುಪಾಯಿ ಉಳಿಸಿಕೊಂಡಿದ್ದು, ಗರಿಷ್ಠ ಎರಡು ವಿದೇಶಿ ಆಟಗಾರರನ್ನು ಖರೀದಿಸಲು ಅವಕಾಶವಿದೆ.

06. ಡೆಲ್ಲಿ ಕ್ಯಾಪಿಟಲ್ಸ್:  19.45 ಕೋಟಿ ರುಪಾಯಿ

ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು 5 ಆಟಗಾರರನ್ನು ತಂಡದಿಂದ ರಿಲೀಸ್ ಮಾಡಿದ್ದು, 19.45  ಕೋಟಿ ರುಪಾಯಿಗಳನ್ನು ಹರಾಜಿಗೆ ಉಳಿಸಿಕೊಂಡಿದೆ. ಡೆಲ್ಲಿ ತಂಡವು ಗರಿಷ್ಠ 2 ವಿದೇಶಿ ಆಟಗಾರರನ್ನು ಖರೀದಿಸಲು ಅವಕಾಶವಿದೆ.
 
07. ಗುಜರಾತ್ ಟೈಟಾನ್ಸ್: 19.25 ಕೋಟಿ ರುಪಾಯಿ

ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು 6 ಆಟಗಾರರನ್ನು ರಿಲೀಸ್ ಮಾಡಿದ್ದು, ತನ್ನ ಪರ್ಸ್‌ನಲ್ಲಿ 19.25 ಕೋಟಿ ರುಪಾಯಿ ಉಳಿಸಿಕೊಂಡಿದೆ. ಸದ್ಯ ಟೈಟಾನ್ಸ್ ಗರಿಷ್ಠ 3 ವಿದೇಶಿ ಆಟಗಾರರನ್ನು ಖರೀದಿಸಲು ಅವಕಾಶವಿದೆ.

08. ರಾಜಸ್ಥಾನ ರಾಯಲ್ಸ್: 13.20 ಕೋಟಿ ರುಪಾಯಿ

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ಜೇಮ್ಸ್ ನೀಶಮ್, ಡೇರಲ್ ಮಿಚೆಲ್, ಕರುಣ್ ನಾಯರ್ ಸೇರಿದಂತೆ 9 ಆಟಗಾರರನ್ನು ರಿಲೀಸ್‌ ಮಾಡಿದ್ದು, ಮಿನಿ ಹರಾಜಿಗೂ ಮುನ್ನ 13.20 ಕೋಟಿ ರುಪಾಯಿ ಉಳಿಸಿಕೊಂಡಿದ್ದು, ಗರಿಷ್ಠ 4 ವಿದೇಶಿ ಆಟಗಾರರನ್ನು ಖರೀದಿಸಲು ಅವಕಾಶವಿದೆ.

09. ರಾಯಲ್ ಚಾಲೆಂಜರ್ಸ್ ಬೆಂಗಳೂರು: 8.75 ಕೋಟಿ ರುಪಾಯಿ

ಚೊಚ್ಚಲ ಐಪಿಎಲ್ ಟ್ರೋಫಿ ಕನವರಿಕೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಬಹತೇಕರನ್ನು ಉಳಿಸಿಕೊಂಡು 5 ಆಟಗಾರರನ್ನು ರಿಲೀಸ್ ಮಾಡಿದೆ. ಸದ್ಯ ಆರ್‌ಸಿಬಿ ಫ್ರಾಂಚೈಸಿ ಬಳಿಕ 8.75 ಕೋಟಿ ರುಪಾಯಿ ಹಣ ಉಳಿದಿದ್ದು, ಗರಿಷ್ಠ ಎರಡು ವಿದೇಶಿ ಆಟಗಾರರನ್ನು ಖರೀದಿಸಲು ಅವಕಾಶವಿದೆ.  

10. ಕೋಲ್ಕತಾ ನೈಟ್ ರೈಡರ್ಸ್‌: 7.05 ಕೋಟಿ ರುಪಾಯಿ

ಎರಡು ಬಾರಿಯ ಚಾಂಪಿಯನ್‌ ಕೋಲ್ಕತಾ ನೈಟ್ ರೈಡರ್ಸ್ ತಂಡವು 16 ಆಟಗಾರರನ್ನು ರಿಲೀಸ್ ಮಾಡಿದ್ದು, ಮೂವರನ್ನು ಟ್ರೇಡ್ ಮಾಡಿದೆ. ಇದೀಗ ಕೆಕೆಆರ್ ಬಳಿ ಕೇವಲ 7.05 ಕೋಟಿ ರುಪಾಯಿ ಬಾಕಿ ಉಳಿದಿದ್ದು, ಗರಿಷ್ಠ 3 ವಿದೇಶಿ ಆಟಗಾರರನ್ನು ಖರೀದಿಸಲು ಅವಕಾಶವಿದೆ. 

click me!