IPL 2022: ಹಸರಂಗ ಮ್ಯಾಜಿಕ್‌, ಸನ್‌ರೈಸರ್ಸ್‌ ಬಗ್ಗುಬಡಿದ ಆರ್‌ಸಿಬಿ..!

By Naveen Kodase  |  First Published May 8, 2022, 7:29 PM IST

* ಸನ್‌ರೈಸರ್ಸ್‌ ಹೈದರಾಬಾದ್‌ ಎದುರು ಭರ್ಜರಿ ಗೆಲುವು ಸಾಧಿಸಿದ ಆರ್‌ಸಿಬಿ

* ಸನ್‌ರೈಸರ್ಸ್‌ ಹೈದರಾಬಾದ್‌ ಎದುರು ಆರ್‌ಸಿಬಿಗೆ 67 ರನ್‌ಗಳ ಜಯ

* 5 ವಿಕೆಟ್ ಕಬಳಿಸಿ ಮಿಂಚಿದ ಸ್ಪಿನ್ನರ್‌ ವನಿಂದು ಹಸರಂಗ


ಮುಂಬೈ(ಮೇ.08): ವನಿಂದು ಹಸರಂಗ ಮಾರಕ ದಾಳಿ(18-5) ಹಾಗೂ ನಾಯಕ ಫಾಫ್ ಡು ಪ್ಲೆಸಿಸ್, ದಿನೇಶ್ ಕಾರ್ತಿಕ್ ಸ್ಪೋಟಕ ಬ್ಯಾಟಿಂಗ್‌ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ಎದುರು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು 67 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಏಪ್ರಿಲ್ 23ರಂದು ಆರೆಂಜ್ ಆರ್ಮಿ ಎದುರು ಅನುಭವಿಸಿದ್ದ 9 ವಿಕೆಟ್‌ಗಳ ಅಂತರದ ಹೀನಾಯ ಸೋಲಿಗೆ ಇಂದು ಆರ್‌ಸಿಬಿ ತನ್ನ ಸೇಡು ತೀರಿಸಿಕೊಂಡಿದೆ. ಈ ಗೆಲುವಿನೊಂದಿಗೆ ಆರ್‌ಸಿಬಿ ತನ್ನ 4ನೇ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ. 

ಇಲ್ಲಿನ ಮುಂಬೈನ ವಾಂಖೇಡೆ ಮೈದಾನದಲ್ಲಿ ಆರ್‌ಸಿಬಿ ನೀಡಿದ್ದ 193 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಕೂಡಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಇನಿಂಗ್ಸ್‌ನ ಮೊದಲ ಎಸೆತದಲ್ಲೇ ಕೇನ್ ವಿಲಿಯಮ್ಸನ್ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆಗುವ ಮೂಲ ಪೆವಿಲಿಯನ್ ಸೇರಿದರು. ಇನ್ನು ಮೊದಲ ಓವರ್‌ನ 5ನೇ ಎಸೆತದಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್‌, ಅಭಿಷೇಕ್ ಶರ್ಮಾ ಅವರನ್ನು ಬೌಲ್ಡ್‌ ಮಾಡುವ ಮೂಲಕ ಆರ್‌ಸಿಬಿಗೆ ಭರ್ಜರಿ ಆರಂಭ ಒದಗಿಸಿಕೊಟ್ಟರು. ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಆರಂಭಿಕರಿಬ್ಬರೂ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಸೇರಿದರು.

Tap to resize

Latest Videos

ಬೃಹತ್‌ ರನ್‌ ಗುರಿ ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಆರಂಭದಲ್ಲೇ ವಿಕೆಟ್ ಕಳೆದುಕೊಂಡಿದ್ದರಿಂದ ರಾಹುಲ್ ತ್ರಿಪಾಠಿ ಹಾಗೂ ಏಯ್ಡನ್ ಮಾರ್ಕ್‌ರಮ್ ಎಚ್ಚರಿಕೆಯ ಆಟಕ್ಕೆ ಮೊರೆ ಹೋದರು. ಈ ಜೋಡಿ ಮೂರನೇ ವಿಕೆಟ್‌ಗೆ 50 ರನ್‌ಗಳ ಜತೆಯಾಟ ನಿಭಾಯಿಸಿತು. ರಕ್ಷಣಾತ್ಮಕ ಆಟವಾಡುತ್ತಿದ್ದ ಮಾರ್ಕ್‌ರಮ್ ಅವರನ್ನು ಬಲಿ ಪಡೆಯುವಲ್ಲಿ ವನಿಂದು ಹಸರಂಗ ಯಶಸ್ವಿಯಾದರು. ಇನ್ನು ನಿಕೋಲಸ್ ಪೂರನ್‌ 19 ರನ್‌ ಬಾರಿಸಿ ಹಸರಂಗಗೆ ಎರಡನೇ ಬಲಿಯಾದರು.

That's that from Match 54. win by 67 runs and add two important points to their tally. pic.twitter.com/YOHIVDY3mT

— IndianPremierLeague (@IPL)

ರಾಹುಲ್ ತ್ರಿಪಾಠಿ ಏಕಾಂಗಿ ಹೋರಾಟ: ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಸನ್‌ರೈಸರ್ಸ್‌ಗೆ ಆಸರೆಯಾಗುವ ಯತ್ನವನ್ನು ರಾಹುಲ್ ತ್ರಿಪಾಠಿ ಮಾಡಿದರು. ರಾಹುಲ್ ತ್ರಿಪಾಠಿ ಕೇವಲ 37 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 58 ರನ್ ಬಾರಿಸುವ ಮೂಲಕ ತಂಡವನ್ನು ಸೋಲಿನಿಂದ ಪಾರು ಮಾಡಲು ಯತ್ನಿಸಿದರಾದರೂ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ತ್ರಿಪಾಠಿಗೆ ಸಿಗಲಿಲ್ಲ. ಮಾರ್ಕ್‌ರಮ್‌(21) ಹಾಗೂ ಪೂರನ್ (19) ಹೊರತುಪಡಿಸಿ ಸನ್‌ರೈಸರ್ಸ್‌ನ ಮತ್ತೆಯಾವ ಬ್ಯಾಟರ್‌ ಕೂಡಾ ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ.

ಹಸರಂಗ ಮ್ಯಾಜಿಕ್‌: ಕಳೆದ ಕೆಲ ಪಂದ್ಯಗಳಲ್ಲಿ ದುಬಾರಿಯಾಗಿದ್ದ ಲಂಕಾದ ಸ್ಪಿನ್ನರ್‌ ವನಿಂದು ಹಸರಂಗ ಮಹತ್ವದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರುವ ಮೂಲಕ ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಹಸರಂಗ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಇನಿಂಗ್ಸ್‌ವೊಂದರಲ್ಲಿ 5 ವಿಕೆಟ್‌ ಕಬಳಿಸಿ ಮಿಂಚಿದರು. ಮಾರ್ಕ್‌ರಮ್, ಪೂರನ್, ಶಶಾಂಕ್ ಸಿಂಗ್, ಜಗದೀಶ್ ಸಿಂಗ್ ಹಾಗೂ ಉಮ್ರಾನ್ ಮಲಿಕ್ ಅವರನ್ನು ಪೆವಿಲಿಯನ್ನಿಗಟ್ಟುವಲ್ಲಿ ಹಸರಂಗ ಯಶಸ್ವಿಯಾದರು.

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆರ್‌ಸಿಬಿ ತಂಡವು ಖಾತೆ ತೆರೆಯುವ ಮುನ್ನವೇ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡಿತು. ಅದರೆ ಫಾಫ್‌ ಡು ಪ್ಲೆಸಿಸ್‌ ಅಜೇಯ ಅರ್ಧಶತಕ(73*), ರಜತ್ ಪಾಟೀದಾರ್(48), ಮ್ಯಾಕ್ಸ್‌ವೆಲ್(33) ಹಾಗೂ ದಿನೇಶ್ ಕಾರ್ತಿಕ್ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ ತಂಡವು ಕೇವಲ 3 ವಿಕೆಟ್ ಕಳೆದುಕೊಂಡು 192 ರನ್ ಗಳಿಸಿತ್ತು.

click me!