
ಮುಂಬೈ(ಮೇ.08): ಆರಂಭಿಕ ಆಘಾತದ ಹೊರತಾಗಿಯೂ ನಾಯಕ ಫಾಫ್ ಡು ಪ್ಲೆಸಿಸ್ ಬಾರಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 3 ವಿಕೆಟ್ ಕಳೆದುಕೊಂಡು 192 ರನ್ ಬಾರಿಸಿದ್ದು, ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಸವಾಲಿನ ಗುರಿ ನೀಡಿದೆ. ಸನ್‌ರೈಸರ್ಸ್ ಹೈದರಾಬಾದ್ ಪರ ಕನ್ನಡಿಗ ಜಗದೀಶ ಸುಚಿತ್ 2 ವಿಕೆಟ್ ಕಬಳಿಸಿ ಗಮನ ಸೆಳೆದರು. ಈ ಮೊದಲಿನ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರು ಕೇವಲ 68 ರನ್‌ಗಳಿಗೆ ಆಲೌಟ್ ಆಗಿತ್ತು. ಆದರೆ ಇದೀಗ ಎರಡನೇ ಪಂದ್ಯದಲ್ಲಿ ಆರೆಂಜ್ ಆರ್ಮಿಗೆ ತಿರುಗೇಟು ನೀಡುವತ್ತ ದಿಟ್ಟ ಹೆಜ್ಜೆಯಿಟ್ಟಿದೆ.
ಟಾಸ್ ಗೆದ್ದ ಆರ್‌ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆದರೆ ಮೊದಲ ಓವರ್‌ನ ಮೊದಲ ಎಸೆತದಲ್ಲೇ ಜಗದೀಶ್ ಸುಚಿತ್, ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ಬಲಿ ಪಡೆಯುವಲ್ಲಿ ಯಶಸ್ವಿಯಾದರು. ವಿರಾಟ್ ಕೊಹ್ಲಿ ಟೂರ್ನಿಯಲ್ಲಿ ಮೂರನೇ ಬಾರಿಗೆ ಗೋಲ್ಡನ್ ಡಕ್ ಆಗಿ ಪೆವಿಲಿಯನ್ ಸೇರಿದರು.
ಫಾಫ್-ಪಾಟೀದಾರ್ ಜುಗಲ್ಬಂದಿ: ಆರ್‌ಸಿಬಿ ತಂಡವು ಖಾತೆ ತೆರೆಯುವ ಮುನ್ನವೇ ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದಾಗ ಜತೆಯಾದ ಫಾಫ್ ಡು ಪ್ಲೆಸಿಸ್ ಹಾಗೂ ರಜತ್ ಪಾಟೀದಾರ್ ಎರಡನೇ ವಿಕೆಟ್‌ಗೆ 105 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಸಮಯೋಚಿತ ಬ್ಯಾಟಿಂಗ್ ನಡೆಸಿದ ರಜತ್ ಪಾಟೀದಾರ್ 38 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 48 ರನ್ ಬಾರಿಸಿ ಜಗದೀಶ ಸುಚಿತ್‌ಗೆ ಎರಡನೇ ಬಲಿಯಾದರು. ಇದರೊಂದಿಗೆ ಶತಕದ ಜತೆಯಾಟಕ್ಕೆ ತೆರೆ ಬಿದ್ದಿತು. ಇನ್ನು ನಾಯಕನ ಆಟ ಪ್ರದರ್ಶಿಸಿದ ಫಾಫ್ ಡು ಪ್ಲೆಸಿಸ್ 50 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 73 ರನ್ ಸಿಡಿಸಿದರು.
IPL 2022: ಸನ್‌ರೈಸರ್ಸ್ ಹೈದರಾಬಾದ್ ಎದುರು ಟಾಸ್ ಗೆದ್ದ ಆರ್‌ಸಿಬಿ ಬ್ಯಾಟಿಂಗ್ ಆಯ್ಕೆ
ಇನ್ನು ಕೊನೆಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಗ್ಲೆನ್ ಮ್ಯಾಕ್ಸ್‌ವೆಲ್ 24 ಎಸೆತಗಳಲ್ಲಿ 33 ರನ್ ಬಾರಿಸಿದರೆ, ಜೀವದಾನದ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡ ದಿನೇಶ್ ಕಾರ್ತಿಕ್ ಕೇವಲ 8 ಎಸೆತಗಳಲ್ಲಿ 1 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 30 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 190ರ ಗಡಿ ದಾಟಿಸಿದರು.
ಗ್ರೀನ್ ಜೆರ್ಸಿ ತೊಟ್ಟು ಕಣಕ್ಕಿಳಿದಿದೆ ಆರ್‌ಸಿಬಿ:
ಇಂದಿನ ಹೈವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 'Go Green' ಅಭಿಯಾನದಡಿಯಲ್ಲಿ ('Go Green' initiative) ಹಸಿರು ಜೆರ್ಸಿ ತೊಟ್ಟು ಮೈದಾನಕ್ಕಿಳಿದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2011ರಿಂದಲೂ ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ಹಸಿರು ಜೆರ್ಸಿ ತೊಟ್ಟು ಜನರಲ್ಲಿ ಜಾಗೃತಿ ಮೂಡಿಸುತ್ತಾ ಬಂದಿದೆ. ಆರ್‌ಸಿಬಿ ತಂಡವು ಗ್ರೀನ್ ಜೆರ್ಸಿ ತೊಟ್ಟು ಕಣಕ್ಕಿಳಿಯುವ ಮೂಲಕ ಮುಂದಿನ ತಲೆಮಾರಿಗೆ ಸ್ವಚ್ಛ ಹಾಗೂ ಹಸಿರಿನಿಂದ ಕೂಡಿದ ಪರಿಸರವನ್ನು ಉಳಿಸಲು ಜಾಗೃತಿ ಮೂಡಿಸುವುದಾಗಿದೆ.
ಸಂಕ್ಷಿಪ್ತ ಸ್ಕೋರ್
ರಾಯಲ್ ಚಾಲೆಂಜರ್ಸ್ ಬೆಂಗಳೂರು: 192/3
ಫಾಫ್ ಡು ಪ್ಲೆಸಿಸ್: 73
ರಜತ್ ಪಾಟೀದಾರ್: 48
ಜಗದೀಶ್ ಸುಚಿತ್: 30/2
(* ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಮುಕ್ತಾಯದ ವೇಳೆಗೆ)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.