* ರಾಜಸ್ಥಾನ ರಾಯಲ್ಸ್ ಎದುರಿನ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ ರಿಂಕು ಸಿಂಗ್
* ಕೆಕೆಆರ್ ಸತತ ಆರನೇ ಸೋಲಿನಿಂದ ಬಚಾವ್ ಮಾಡಿದ ರಿಂಕು ಸಿಂಗ್
* ರಿಂಕು ಸಿಂಗ್ ಬೆಂಕಿಯಲ್ಲಿ ಅರಳಿದ ಹೂ
ಮುಂಬೈ(ಮೇ.04) : ವಯಸ್ಸು 24, ಹೆಸರು ರಿಂಕು ಸಿಂಗ್ (Rinku Singh). ಎಲ್ಲವೂ ಅಂದುಕೊಂಡಿದ್ದೇ ಆಗಿದ್ರೆ ಈ ಹೆಸರು ಈಗಾಗ್ಲೇ ಕ್ರಿಕೆಟ್ ಲೋಕದಲ್ಲಿ ಪ್ರಜ್ವಲಿಸಬೇಕಿತ್ತು. ಆದ್ರೆ ಅವಕಾಶಗಳ ಕೊರತೆ, ಆ ಸುವರ್ಣ ಅವಕಾಶವನ್ನ ಕಿತ್ತುಕೊಳ್ತು. ಲೇಟಾದ್ರು ಲೇಟೆಸ್ಟ್ ಆಗಿ ಅಲಿಘರ್ ಪುತ್ತರ್ ಐಪಿಎಲ್ನಲ್ಲಿ ಛಾಪು ಮೂಡಿಸಿದ್ದಾರೆ. ಜಸ್ಟ್ ಒಂದೇ ಒಂದು ಪಂದ್ಯದಿಂದ ರಿಂಕು ಫೇಮಸ್ ಆಗಿದ್ದಾರೆ.
ಹೌದು, ರಾಜಸ್ಥಾನ ರಾಯಲ್ಸ್(Rajasthan Royals) ವಿರುದ್ಧ ಪಂದ್ಯದಲ್ಲಿ ದಿಟ್ಟ ಪ್ರದರ್ಶನದಿಂದ ರಿಂಕು ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಅಂತಹ ಕ್ರೆಡಿಟ್ ಈತನಿಗೆ ಸಲ್ಲಲೇಬೇಕು ಬಿಡಿ. ಯಾಕಂದ್ರೆ ರಿಂಕು ಅನ್ನೋ ಲೆಫ್ಟಿ ಬ್ಯಾಟರ್ ಕೆಚ್ಚೆದೆಯ ಹೋರಾಟ ನೀಡದಿದ್ದಿದ್ರೆ ಕೆಕೆಆರ್ ಸತತ 6ನೇ ಸೋಲು ಕಾಣಬೇಕಿತ್ತು. ಅಂತಹ ಪರಿಸ್ಥಿತಿ ತಂಡಕ್ಕೆ ಬಂದೊದಗಿತ್ತು. ಆದ್ರೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ರಿಂಕು ಮ್ಯಾಜಿಕ್ ಸೃಷ್ಟಿಸಿದ್ರು. ಬರೀ 23 ಎಸೆತಗಳಲ್ಲಿ ಸ್ಪೋಟಕ 42 ರನ್ ಗಳಿಸಿ ತಂಡವನ್ನ ಸೋಲಿನಿಂದ ಪಾರು ಮಾಡಿ, ಗೆಲುವಿನ ಟ್ರ್ಯಾಕ್ಗೆ ಮರಳಿಸಿದ್ರು.
ಪಂದ್ಯದ ಬಳಿಕ ರಿಂಕು ನಿರ್ಭೀತಿ ಆಟದ ಬಗ್ಗೆ ಮೆಚ್ಚುಗೆ ವ್ಯಕ್ತವಾಯ್ತು. ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ ಹಾಗೂ ಚಹಲ್ರಂತ ಶ್ರೇಷ್ಠ ಬೌಲರ್ಗಳನ್ನ ದಂಡಿಸಿದ್ದು ನೋಡುಗರಿಗೆ ಸಖತ್ ಮಜಾ ಕೊಟ್ಟಿತ್ತು. ಇಂತಹ ಡೇರಿಂಗ್ ಬ್ಯಾಟರ್ ರಿಂಕು ಸಿಂಗ್ ಯಾರು ? ಇವರ ಹಿನ್ನಲೆ ಏನು ಅನ್ನೋದರ ಬಗ್ಗೆ ಎಲ್ಲರೂ ಚರ್ಚೆ ಮಾಡ್ತಿದ್ದಾರೆ. ನಾವೀಗ ಈ ಎಂಟೆದೆ ಬಂಟನ ಆ ಮನಮಿಡಿಯುವ ಕಹಾನಿಯನ್ನ ತೆರೆದಿಡ್ತೀವಿ ನೋಡಿ.
ತಂದೆ ಸಿಲಿಂಡರ್ ಡಿಸ್ಟ್ರಿಬ್ಯೂಟರ್, ಅಣ್ಣ ರಿಕ್ಷಾ ಡ್ರೈವರ್:
1997ರಲ್ಲಿ ಉತ್ತಪ್ರದೇಶದಲ್ಲಿ ಅಲಿಘರ್ನಲ್ಲಿ ಜನಿಸಿದ ರಿಂಕು ಸಿಂಗ್, ಕಡು ಬಡತನದಲ್ಲಿ ಬೆಳೆದವರು. ರಿಂಕು ತಂದೆ ಸಿಲಿಂಡರ್ ಡಿಸ್ಟ್ರಿಬ್ಯೂಟರ್. ಮನೆಮನೆಗೆ ತೆರಳಿ ಎಲ್ಪಿಜಿ ಸಿಲಿಂಡರ್ಗಳನ್ನ ಹಂಚಿಕೆ ಮಾಡ್ತಾರೆ. ಇನ್ನು ಅಣ್ಣ ಸಾಮಾನ್ಯ ಆಟೋ ಡ್ರೈವರ್. ಇಬ್ಬರ ದುಡಿಮೆಯಿಂದಲೇ ಮನೆ ಸಾಗಬೇಕಿತ್ತು. ಇಂತಹ ಬಡತನದ ಬೇಗುದಿಯಲ್ಲಿ ರಿಂಕು ಕ್ರಿಕೆಟರ್ ಆಗೋದು ನನಸಾಗದ ಮಾತಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಕುಟುಂಬದ ನಿರ್ವಹಣೆಗಾಗಿ ರಿಂಕು ಕೂಡ ಕಸ ಗುಡಿಸುವ ಹಾಗೂ ಕೋಚಿಂಗ್ ಸೆಂಟರ್ ಒರೆಸುವ ಕೆಲಸಕ್ಕೆ ಸೇರಿಕೊಂಡರು. ಆದ್ರೆ ದೊಡ್ಡ ಕ್ರಿಕೆಟರ್ ಆಗಬೇಕು ಅನ್ನೋ ಕನಸು ಹೊತ್ತಿದ್ದ ಲೆಫ್ಟಿ ಬ್ಯಾಟರ್ ಕೆಲಸವನ್ನ ಬಿಟ್ಟು, ಆಟದ ಕಡೆ ಗಮನ ಕೊಟ್ರು.
Rinku Singh: ಕಳೆದ 5 ವರ್ಷಗಳಿಂದ ಅವಕಾಶಕ್ಕಾಗಿ ಕಾಯುತ್ತಿದ್ದೆ ಎಂದ ಕೆಕೆಆರ್ ಆಟಗಾರ..!
ಅಪ್ಪನಿಂದ ಏಟು ತಿಂದ್ರೂ ಕ್ರಿಕೆಟ್ ಬಿಡದ ಲೆಫ್ಟಿಮ್ಯಾನ್:
ಹೌದು, ರಿಂಕು ಕೆಲಸ ಬಿಟ್ಟು ಕ್ರಿಕೆಟರ್ ಆಗ್ತೀನಿ ಅಂದಾಗ ಅವರ ತಂದೆಯಿಂದ ಅನೇಕ ಸಲ ಏಟು ತಿಂದಿದ್ರು. ಮಗ ಕ್ರಿಕೆಟ್ ಆಡೋದನ್ನ ಆರಂಭದಿಂದಲೇ ವಿರೋಧಿಸಿದ್ರು. ಆದ್ರೆ ಸಾಧಿಸುವ ಛಲತೊಟ್ಟ ರಿಂಕುಗೆ ಕೋಚ್ ಹಾಗೂ ಫ್ರೆಂಡ್ಸ್ ನಿಂದ ಸಹಾಯ ದೊರೆಕಿತು. ಅಂಡರ್-16 ಹಾಗೂ ಕಾಲೇಜು ಮಟ್ಟದಲ್ಲಿ ಉತ್ತಮ ಆಟವಾಡಿ ರಣಜಿ ಟ್ರೋಫಿಗೆ ಸೆಲೆಕ್ಟ್ ಆದ್ರು. ಡೊಮೆಸ್ಟಿಕ್ ಅದ್ಭುತ ಪ್ರದರ್ಶನ ತೋರಿ 2017ರಲ್ಲಿ ಐಪಿಎಲ್ಗೆ ಎಂಟ್ರಿ ಕೊಟ್ರು. ಆದ್ರೆ 4 ವರ್ಷ ಸರಿಯಾಗಿ ಚಾನ್ಸ್ ಸಿಗದೇ ಬೆಂಚ್ಗೆ ಸೀಮಿತವಾದ್ರು. ಈ ಸಲ ಕೆಕೆಆರ್ 55 ಲಕ್ಷ ರೂಪಾಯಿಗೆ ರಿಂಕುರನ್ನ ಕೊಂಡುಕೊಳ್ತು. ಆಡಿದ 3 ಪಂದ್ಯಗಳಲ್ಲಿ ಜಬರ್ದಸ್ತ್ ಆಟದ ಮೂಲಕ ಹಲ್ಚಲ್ ಎಬ್ಬಿಸಿದ್ದಾರೆ. ಇಂತಹ ಮತ್ತಷ್ಟು ಸೂಪರ್ ಇನ್ನಿಂಗ್ಸ್ ಛಲದಂಕ ರಿಂಕು ಸಿಂಗ್ರಿಂದ ಮೂಡಿ ಬರಲಿ.