ಕೆಕೆಆರ್ ಬ್ಯಾಟಿಂಗ್ ಗೆ ಕಡಿವಾಣ ಹಾಕಿದ ಆರ್ ಸಿಬಿ
ನಾಲ್ಕು ವಿಕೆಟ್ ಉರುಳಿಸಿದ ವಾನಿಂದು ಹಸರಂಗ
ಮೊದಲ ಗೆಲುವು ಕಾಣಲು ಯಶಸ್ವಿಯಾಗುತ್ತಾ ಆರ್ ಸಿಬಿ?
ಮುಂಬೈ (ಮಾ.30): ಶ್ರೀಲಂಕಾದ (Sri Lanka)ಸೂಪರ್ ಸ್ಪಿನ್ನರ್ ವಾನಿಂದು ಹಸರಂಗ (Wanindu Hasaranga) ಅವರ ಅದ್ಭುತ ದಾಳಿಯ ನೆರವಿನಿಂದ ಎರಡು ಬಾರಿಯ ಚಾಂಪಿಯನ್ ಕೋಲ್ಕತ ನೈಟ್ ರೈಡರ್ಸ್ (Kolkata Knight Rider) ತಂಡದ ಬ್ಯಾಟಿಂಗ್ ವಿಭಾಗವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ. ಮೊದಲ ಪಂದ್ಯದಲ್ಲಿ ಬೌಲಿಂಗ್ ವಿಭಾಗದ ನೀರಸ ನಿರ್ವಹಣೆಯ ಕಾರಣದಿಂದಾಗಿಯೇ 205 ರನ್ ಬಾರಿಸಿಯೂ ಸೋಲು ಕಂಡಿದ್ದ ಆರ್ ಸಿಬಿ (RCB), ಈ ಬಾರಿ ಶಿಸ್ತಿನ ದಾಳಿ ನಡೆಸಿತು.
ಡಿವೈ ಪಾಟೀಲ್ (DY Patil)ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್ ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್ (Faf Du Plesis) ಬೌಲಿಂಗ್ ಆಯ್ದುಕೊಂಡರು. ವಾನಿಂದು ಹಸರಂಗ (20ಕ್ಕೆ 4) ಭರ್ಜರಿ ದಾಳಿಯಿಂದ 15ನೇ ಆವೃತ್ತಿಯ ಐಪಿಎಲ್ ನಲ್ಲಿ ತನ್ನ ಮೊದಲ ಗೆಲುವಿಗೆ ಆರ್ ಸಿಬಿ ತಂಡ 129 ರನ್ ಗಳ ಸವಾಲು ಪಡೆದುಕೊಂಡಿದೆ. ಆರ್ ಸಿಬಿಯ ಶಿಸ್ತಿನ ದಾಳಿಯ ಮುಂದೆ ಕೆಕೆಆರ್ (KKR) 18.5 ಓವರ್ ಗಳಲ್ಲಿ 128 ರನ್ ಗೆ ಆಲೌಟ್ ಆಯಿತು.
ಪಂಜಾಬ್ ಕಿಂಗ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ನೀರಸ ಬೌಲಿಂಗ್ ನ ಕಾರಣದಿಂದಾಗಿಯೇ ಟೀಕೆಗೆ ಗುರಿಯಾಗಿದ್ದ ಆರ್ ಸಿಬಿ ತಂಡ, ಕೆಕೆಆರ್ ವಿರುದ್ಧ ಮೊದಲ ಎಸೆತದಿಂದಲೇ ಆಕ್ರಮಣಕಾರಿಯಾಗಿ ದಾಳಿ ನಡೆಸಿತು. ಮೊದಲ ವಿಕೆಟ್ ಗೆ ಅಜಿಂಕ್ಯ ರಹಾನೆ ಹಾಗೂ ವೆಂಕಟೇಶ್ ಅಯ್ಯರ್ ಆರ್ ಸಿಬಿ ಬೌಲಿಂಗ್ ಅನ್ನು ಎಚ್ಚರಿಕೆಯಿಂದ ಎದುರಿಸಿದರು. ಡೇವಿಡ್ ವಿಲ್ಲಿ ಹಾಗೂ ಮೊಹಮದ್ ಸಿರಾಜ್ ನಿರಂತರ ಒತ್ತಡದ ಬಳಿಕ, 4ನೇ ಓವರ್ ನಲ್ಲಿ ಮೊದಲ ಬಾರಿಗೆ ದಾಳಿಗೆ ಇಳಿದ ಅಕಾಶ್ ದೀಪ್ ಮೊದಲ ಎಸೆತದಲ್ಲಿಯೇ ವೆಂಕಟೇಶ್ ಅಯ್ಯರ್ ವಿಕೆಟ್ ಉರುಳಿಸಿದರು. ನಂತರ ಮೈದಾನಕ್ಕೆ ಇಳಿದ ನಾಯಕ ಶ್ರೇಯಸ್ ಅಯ್ಯರ್ ಜೊತೆ ಅಜಿಂಕ್ಯ ರಹಾನೆ ಕೆಲ ಹೊತ್ತು ಆಟವಾಡಿದರು.
ಕ್ರೀಸ್ ನಲ್ಲಿದ್ದಷ್ಟು ಹೊತ್ತು ಬೌಲಿಂಗ್ ಎದುರಿಸಲು ಪರದಾಟ ನಡೆಸಿದ ಅಜಿಂಕ್ಯ ರಹಾನೆ, ಸಿರಾಜ್ ಎಸೆತದಲ್ಲಿ ಡೀಪ್ ಸ್ಕ್ವೇರ್ ಲೆಗ್ ಅಲ್ಲಿ ಶಾಬಾಜ್ ಅಹ್ಮದ್ ಹಿಡಿದ ಕ್ಯಾಚ್ ಗೆ ಹೊರನಡೆದರು. ಇದಕ್ಕೂ ಮುನ್ನ ಶ್ರೇಯಸ್ ಅಯ್ಯರ್ ವಿಕೆಟ್ ಉರುಳಿಸುವ ಅವಕಾಶ ಸಿರಾಜ್ ಗೆ ಇತ್ತಾದರೂ, ಕಷ್ಟವಾಗಿದ್ದ ರಿಟರ್ನ್ ಕ್ಯಾಚ್ ಅವಕಾಶವನ್ನು ಕೈಚೆಲ್ಲಿದ್ದರು. ರಹಾನೆ ಔಟಾದ ಬಳಿಕ ಆಡಲು ಇಳಿದಿದ್ದ ನಿತೀಶ್ ರಾಣಾ ಹೆಚ್ಚು ಹೊತ್ತು ಮೈದಾನದಲ್ಲಿರಲಿಲ್ಲ. ಕೇವಲ 5 ಎಸೆತ ಆಡಿದ ರಾಣಾ 1 ಸಿಕ್ಸರ್, 1 ಬೌಂಡರಿ ಇದ್ದ 10 ರನ್ ಬಾರಿಸಿ, ಆಕಾಶ್ ದೀಪ್ ಎಸೆತದಲ್ಲಿ ಡೇವಿಡ್ ವಿಲ್ಲಿ ಹಿಡಿದ ಅದ್ಭುತ ಕ್ಯಾಚ್ ಗೆ ಬಲಿಯಾದರು.
3 ವಿಕೆಟ್ ಗೆ 44 ರನ್ ಬಾರಿಸಿ ಪವರ್ ಪ್ಲೇ ಮುಗಿಸಿದ್ದ ಕೆಕೆಆರ್ ಗೆ ಆ ಬಳಿಕವೂ ಆಘಾತ ಕಂಡಿತು. ವಾನಿಂದು ಹಸರಂಗ ಎಸೆದ ಮೊದಲ ಓವರ್ ನಲ್ಲಿಯೇ ಶ್ರೇಯಸ್ ಅಯ್ಯರ್ ದೊಡ್ಡ ಹೊಡೆತಕ್ಕೆ ಯತ್ನಿಸಿ ಔಟ್ ಆದರು. ಹಾಗಿದ್ದರೂ ಕೆಕೆಆರ್ ತಂಡ ರಕ್ಷಣಾತ್ಮಕ ಆಟಕ್ಕೆ ಮುಂದಾಗಲಿಲ್ಲ. ಸುನೀಲ್ ನಾರಾಯಣ್ ಗೆ ಭಡ್ತಿ ನೀಡಿತಾದರೂ ಇದರಲ್ಲಿ ಹೆಚ್ಚಿನ ಯಶಸ್ಸು ಕಾಣಲಿಲ್ಲ. 8 ಎಸೆತಗಳಲ್ಲಿ 1 ಬೌಂಡರಿ, 1 ಸಿಕ್ಸರ್ ಇದ್ದ 12 ರನ್ ಬಾರಿಸಿದ್ದ ಸುನೀಲ್ ನಾರಾಯಣ್, ಹಸರಂಗ ಎಸೆದ 9ನೇ ಓವರ್ ನಲ್ಲಿ ನಿರ್ಗಮಿಸಿದರು. ಅದರ ಮರು ಎಸೆತದಲ್ಲಿಯ ಶೆಲ್ಡನ್ ಜಾಕ್ಸನ್ ಬೌಲ್ಡ್ ಆಗಿದ್ದರಿಂದ ಕೆಕೆಆರ್ ಆಘಾತ ಕಂಡಿತು.
67 ರನ್ ಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಕೆಲ ಹೊತ್ತು ಸ್ಯಾಮ್ ಬಿಲ್ಲಿಂಗ್ಸ್ ಆಸರೆಯಾದರೆ, ಸ್ಫೋಟಕ ಬ್ಯಾಟ್ಸ್ ಮನ್ ಆಂಡ್ರೆ ರಸೆಲ್ ಕೂಡ ಬಿರುಸಿನ ಬ್ಯಾಟಿಂಗ್ ಮಾಡುವ ಮೂಲಕ ತಂಡದ ಮೊತ್ತವನ್ನು ಏರಿಸುವ ವಿಶ್ವಾಸ ಮೂಡಿಸಿದ್ದರು. 18 ಎಸೆತಗಳಲ್ಲಿ 3 ಅದ್ಭುತ ಸಿಕ್ಸರ್ ಹಾಗೂ 1 ಬೌಂಡರಿ ಬಾರಿಸಿ ಆರ್ ಸಿಬಿಗೆ ಅಪಾಯಕಾರಿ ಎನಿಸಿದ್ದ ರಸೆಲ್ ತಂಡದ ಮೊತ್ತ 99 ರನ್ ಆಗಿದ್ದಾಗ ನಿರ್ಗಮಿಸುವುದರೊಂದಿಗೆ ಕೆಕೆಆರ್ ನ ದೊಡ್ಡ ಮೊತ್ತದ ಆಸೆ ಕಮರಿತು. ಕೊನೆಯಲ್ಲಿ ಉಮೇಶ್ ಯಾದವ್ ಹಾಗೂ ವರುಣ್ ಚಕ್ರವರ್ತಿ ಕೆಲ ರನ್ ಗಳನ್ನು ಬಾರಿಸಿ ತಂಡದ ಮೊತ್ತವನ್ನು 125ರ ಗಡಿ ದಾಟಿಸಿದರು.