ಉತ್ತಮ ಆರಂಭದ ಹೊರತಾಗಿಯೂ ಇನ್ನಿಂಗ್ಸ್ ನ ಕೊನೆಯ ಓವರ್ ಗಳಲ್ಲಿ ಸಾಕಷ್ಟು ವಿಕೆಟ್ ಗಳನ್ನು ಕಳೆದುಕೊಂಡ ಆರ್ ಸಿಬಿ ತಂಡ ಚೆನ್ನೈ ವಿರುದ್ಧ ಬೃಹತ್ ಮೊತ್ತ ಬಾರಿಸುವ ಆಸೆಯನ್ನು ತಪ್ಪಿಸಿಕೊಂಡಿತು.
ಪುಣೆ (ಮೇ4): ಸತತ ಸೋಲುಗಳಿಂದ ಕಂಗೆಟ್ಟಿರುವ ಆರ್ ಸಿಬಿ (Royal Challengers Bangalore) ತಂಡ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ವಿರುದ್ಧ ಬೃಹತ್ ಮೊತ್ತ ಪೇರಿಸುವ ಆಸೆಯನ್ನು ಹಾಳು ಮಾಡಿಕೊಂಡಿದೆ. ಮೊದಲ ವಿಕೆಟ್ ಗೆ ಉತ್ತಮ ಜೊತೆಯಾಟದ ಹೊರತಾಗಿಯೂ ಸ್ಲಾಗ್ ಓವರ್ ಗಳಲ್ಲಿ ಸಾಲು ಸಾಲು ವಿಕೆಟ್ ಕಳೆದುಕೊಂಡ ಆರ್ ಸಿಬಿ ತಂಡ, ಚೆನ್ನೈ ಸೂಪರ್ ಕಿಂಗ್ಸ್ ಗೆ 174 ರನ್ ಸವಾಲು ನೀಡಿದೆ.
ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ (RCB) ತಂಡ, ಚೆನ್ನೈ (CSK) ತಂಡದ ಉತ್ತಮ ದಾಳಿಯ ಮುಂದೆ ರನ್ ಗಳಿಸಲು ಪರದಾಡಿತು. ಮಹಿಪಾಲ್ ಲೋಮ್ರರ್ ಆಡಿದ ಉತ್ತಮ ಇನ್ನಿಂಗ್ಸ್ ನೆರವಿನಿಂದ ಆರ್ ಸಿಬಿ ತಂಡ 8 ವಿಕೆಟ್ ಗೆ 173 ರನ್ ಪೇರಿಸಿತು. ಕೊನೇ ಓವರ್ ನಲ್ಲಿ ದಿನೇಶ್ ಕಾರ್ತಿಕ್ (24 ರನ್, 16 ಎಸೆತ, 1 ಬೌಂಡರಿ, 2 ಸಿಕ್ಸರ್) ಅಬ್ಬರಿಸಿದ್ದರಿಂದ ಸವಾಲಿನ ಮೊತ್ತವನ್ನು ಗುರಿಯಾಗಿ ನೀಡುವಲ್ಲಿ ಯಶಸ್ವಿಯಾಯಿತು.
ಬ್ಯಾಟಿಂಗ್ ಆರಂಭಿಸಿದ ಆರ್ ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ ಮೊದಲ ವಿಕೆಟ್ ಗೆ 62 ರನ್ ಗಳ ಉತ್ತಮ ಜೊತೆಯಾಟವಾಡಿದರು. ಮೊದಲ ಮೂರು ಓವರ್ ಗಳಲ್ಲಿ ಮೂರು ಬೌಂಡರಿಗಳನ್ನು ಸಿಡಿಸಿದ್ದ ಈ ಜೋಡಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿತು. ಇನ್ನೊಂದೆಡೆ ಚೆನ್ನೈ ಕೂಡ ವಿಭಿನ್ನ ರಣತಂತ್ರ ರೂಪಿಸಿತು. ಸಾಮಾನ್ಯವಾಗಿ ಮೊದಲ ಕೆಲ ಓವರ್ ಗಳಲ್ಲಿಯೇ ಸ್ಪಿನ್ ಬೌಲರ್ ಗಳನ್ನು ದಾಳಿಗೆ ಇಳಿಸುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ , ಹಾಲಿ ಋತುವಿನಲ್ಲಿ ಇದೇ ಮೊದಲ ಬಾರಿಗೆ ಮೊದಲ ನಾಲ್ಕು ಓವರ್ ಗಳಲ್ಲಿ ಒಂದು ಓವರ್ ಗಳನ್ನೂ ಸ್ಪಿನ್ನರ್ ಗೆ ನೀಡಿರಲಿಲ್ಲ.
ಇದರ ಲಾಭ ಪಡೆದುಕೊಂಡ ಫಾಫ್ ಡು ಪ್ಲೆಸಿಸ್ (38 ರನ್, 22 ಎಸೆತ, 4 ಬೌಂಡರಿ, 1 ಸಿಕ್ಸರ್) ಹಾಗೂ ವಿರಾಟ್ ಕೊಹ್ಲಿ (30 ರನ್, 33 ಎಸೆತ, 3 ಬೌಂಡರಿ, 1 ಸಿಕ್ಸರ್) ಚೆನ್ನೈ ಬೌಲರ್ ಗಳನ್ನು ದಂಡಿಸುವ ಮೂಲಕ ಹಾಲಿ ಆವೃತ್ತಿಯ ಐಪಿಎಲ್ ನಲ್ಲಿ ಪವರ್ ಪ್ಲೇಯಲ್ಲಿ ತನ್ನ ಗರಿಷ್ಠ ಮೊತ್ತ ಹಾಗೂ ಹಾಲಿ ಲೀಗ್ ನಲ್ಲಿ ತನ್ನ ಮೂರನೇ ಗರಿಷ್ಠ ಆರಂಭಿಕ ಜೊತೆಯಾಟವನ್ನು ಆಡಿತು. ಅಪಾಯಕಾರಿಯಾಗುತ್ತಿದ್ದ ಈ ಜೋಡಿಯನ್ನು 8ನೇ ಓವರ್ ನಲ್ಲಿ ಮೋಯಿನ್ ಅಲಿ ಬೇರ್ಪಡಿಸಿದರು. ಮೋಯಿನ್ ಅಲಿ ಎಸೆತದಲ್ಲಿ ಪ್ಲೆಸಿಸ್ ನೀಡಿ ಕ್ಯಾಚ್ ಅನ್ನು ರವೀಂದ್ರ ಜಡೇಜಾ ಡೀಪ್ ಮಿಡ್ ವಿಕೆಟ್ ನಲ್ಲಿ ಪಡೆದುಕೊಂಡರು. ಅಚ್ಚರಿ ಎನ್ನುವಂತೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ಗ್ಲೆನ್ ಮ್ಯಾಕ್ಸ್ ವೆಲ್, ಮಿಂಚುವಲ್ಲಿ ವಿಫಲರಾದರು. 9ನೇ ಓವರ್ ನ ಕೊನೆಯ ಎಸೆತದಲ್ಲಿ ಉತ್ತಮ ಹಾಗೂ ಎಂಎಸ್ ಧೋನಿ ಚಾಣಾಕ್ಷತೆಯಿಂದ ಮ್ಯಾಕ್ಸ್ ವೆಲ್ ರನೌಟ್ ಆಗಿ ನಿರ್ಗಮಿಸಿದರು. ಇದರ ಬೆನ್ನಲ್ಲಿಯೇ ವಿರಾಟ್ ಕೊಹ್ಲಿ ಕೂಡ ನಿರ್ಗಮಿಸಿದಾಗ ಆರ್ ಸಿಬಿ ಅಘಾತ ಕಂಡಿತ್ತು.
IPL 2022 ಆರ್‌ಸಿಬಿ ವಿರುದ್ಧ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್, ಮಹತ್ತರ ಬದಲಾವಣೆ!
79 ರನ್ ಗಳಿಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ, ನಾಲ್ಕನೇ ವಿಕೆಟ್ ಗೆ ಮಹಿಪಾಲ್ ಲೋಮ್ರರ್ (42ರನ್, 27 ಎಸೆತ, 3 ಬೌಂಡರಿ, 2 ಸಿಕ್ಸರ್) ಹಾಗೂ ರಜತ್ ಪಾಟೀದಾರ್ ( 21 ರನ್, 15 ಎಸೆತ, 1 ಬೌಂಡರಿ, 1 ಸಿಕ್ಸರ್) 44 ರನ್ ಗಳ ಬಿರುಸಿನ ಜೊತೆಯಾಟವಾಡಿ ತಂಡದ ಮೊತ್ತವನ್ನು 120ರ ಗಡಿ ದಾಟಿಸಿದರು. ತಂಡದ ಮೊತ್ತ 123 ರನ್ ಆಗಿದ್ದಾಗ ಡ್ವೈನ್ ಪ್ರಿಟೋರಿಯಸ್, ರಜತ್ ಪಾಟೀದಾರ್ ರನ್ನು ಹೊರಗಟ್ಟಿದರು.
ಬಾಂದ್ರಾದಲ್ಲಿ 10.5 ಕೋಟಿಯ ಮನೆ ಖರೀದಿಸಿದ 22 ವರ್ಷದ ಪೃಥ್ವಿ ಶಾ!
ಕೊನೆಯ ಓವರ್ ಗಳಲ್ಲಿ ಅಬ್ಬರಿಸಿದ ಮಹಿಪಾಲ್ ಲೋಮ್ರರ್ ತಂಡದ ಮೊತ್ತವನ್ನು 150ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರ ನಿಭಾಯಿಸಿದರು. ಆದರೆ, 19ನೇ ಓವರ್ ನಲ್ಲಿ ಮಹೇಶ್ ತೀಕ್ಷಣ ಮೂರು ವಿಕೆಟ್ ಉರುಳಿಸಿ ಆರ್ ಸಿಬಿ ತಂಡದ ದೊಡ್ಡ ಮೊತ್ತದ ಆಸೆಯನ್ನು ಭಗ್ನ ಮಾಡಿದರು.