ಬಾಂದ್ರಾದಲ್ಲಿ 10.5 ಕೋಟಿಯ ಮನೆ ಖರೀದಿಸಿದ 22 ವರ್ಷದ ಪೃಥ್ವಿ ಶಾ!

By Santosh Naik  |  First Published May 4, 2022, 8:34 PM IST

ದೆಹಲಿ ಕ್ಯಾಪಿಟಲ್ಸ್‌ನ ಸ್ಟಾರ್ ಕ್ರಿಕೆಟಿಗ ಪೃಥ್ವಿ ಶಾ ಕೇವಲ 22 ನೇ ವಯಸ್ಸಿನಲ್ಲಿ ತಮ್ಮ ಮನೆಯನ್ನು ಖರೀದಿಸಿದ್ದಾರೆ. ಮುಂಬೈನ ಬಾಂದ್ರಾ ಪ್ರದೇಶದಲ್ಲಿ, ಪೃಥ್ವಿ ತಮ್ಮ ಹೆಸರಿನಲ್ಲಿ ಕೋಟಿ ಮೌಲ್ಯದ ಮನೆಯನ್ನು ಖರೀದಿ ಮಾಡಿದ್ದಾರೆ.


ಮುಂಬೈ (ಮೇ.4):  ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಯುವ ಆರಂಭಿಕ ಆಟಗಾರ ಪೃಥ್ವಿ ಶಾ (Prithvi Shaw), ದೇಶದ ಅತ್ಯುತ್ತಮ ಯುವ ಆಟಗಾರರ ಪೈಕಿ ಒಬ್ಬರು. ಪಸ್ತುತ ಪೃಥ್ವಿ ಶಾ ಡೆಲ್ಲಿ ಕ್ಯಾಪಿಟಲ್ಸ್  (Dehli Capitals)ತಂಡದ ಪರವಾಗಿ ಆಡುತ್ತಿದ್ದಾರೆ. ಐಪಿಎಲ್ (IPL 2022) ಮಧ್ಯದಲ್ಲಿಯೇ ಬಹಳ ದಿನಗಳಿಂದ ತಯಾರಿ ನಡೆಸುತ್ತಿದ್ದ ಮನೆ ಖರೀದಿ ಪ್ರಕ್ರಿಯೆಯನ್ನೂ ಮುಕ್ತಾಯ ಮಾಡಿದ್ದಾರೆ.

22 ವರ್ಷದ ಪೃಥ್ವಿ ಶಾ ಮುಂಬೈನ (Mumbai ) ಬಾಂದ್ರಾ (Bandra)ಪ್ರದೇಶದಲ್ಲಿ ತಮ್ಮ ಮನೆಯನ್ನು ಖರೀದಿಸಿದ್ದಾರೆ. ಇದರ ಬೆಲೆ 10.5 ಕೋಟಿ ರೂಪಾಯಿ ಎಂದು ವರದಿಯಾಗಿದೆ. ಕಳೆದ ಐದು ವರ್ಷಗಳಲ್ಲಿ ಐಪಿಎಲ್ ನಿಂದ ಬಂದ ಎಲ್ಲಾ ವೇತನವನ್ನೂ ಅವರು ತಮ್ಮ ಮನೆಗೆ ಸುರಿದಿದ್ದಾರೆ ಎಂದು ಕೆಲ ಪತ್ರಿಕೆಗಳು ವರದಿ ಮಾಡಿದೆ. 2209 ಚದರ ಅಡಿ ಪ್ರದೇಶದಲ್ಲಿ ನಿರ್ಮಿಸಲಾದ ಈ ಮನೆ ಬಾಂದ್ರಾದ ಐಷಾರಾಮಿ ಸೊಸೈಟಿಯ ಎಂಟನೇ ಮಹಡಿಯಲ್ಲಿದೆ.

ಈ ಮನೆಯೊಂದಿಗೆ ಪೃಥ್ವಿ ಶಾ ಮೂರು ಕಾರುಗಳನ್ನು ನಿಲ್ಲಿಸಲು ಜಾಗವನ್ನೂ ಪಡೆದಿದ್ದಾರೆ. ವರದಿಯ ಪ್ರಕಾರ, ಮಾರ್ಚ್ 31 ರಂದು ಪೃಥ್ವಿ ಶಾ 52.50 ಲಕ್ಷ ರೂಪಾಯಿ ಸ್ಟ್ಯಾಂಪ್ ಡ್ಯೂಟಿ ನೀಡಿದ್ದರು, ಏಪ್ರಿಲ್ 28 ರಂದು ಈ ಮನೆ ಪೃಥ್ವಿ ಶಾ ಅವರ ಹೆಸರಿನಲ್ಲಿ ನೋಂದಣಿಯಾಗಿದೆ. ಆಸ್ತಿಯನ್ನು ಪಿರಮಿಡ್ ಡೆವಲಪರ್‌ಗಳು ಮತ್ತು ಅಲ್ಟ್ರಾ ಲೈಫ್‌ಸ್ಪೇಸ್ ಅಭಿವೃದ್ಧಿಪಡಿಸಿದೆ.
ಪೃಥ್ವಿ ಶಾ ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿದ್ದಾರೆ ಮತ್ತು ಅವರು ತಂಡದಿಂದ ಪ್ರತಿ ಸೀಸನ್‌ಗೆ 7.50 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ. 2018 ರಲ್ಲಿ, ಪೃಥ್ವಿ ಶಾ ನಾಯಕತ್ವದಲ್ಲಿ, ಭಾರತವು ಅಂಡರ್-19 ವಿಶ್ವಕಪ್ ನಲ್ಲಿ ಚಾಂಪಿಯನ್ ಆಗಿತ್ತು. ಅಂದಿನಿಂದ ಕ್ರಿಕೆಟ್ ವಲಯದಲ್ಲಿ ಗಮನಸೆಳೆದಿರುವ ಪೃಥ್ವಿ ಶಾ, ಟೀಮ್ ಇಂಡಿಯಾದ ಟೆಸ್ಟ್ ತಂಡದ ಭಾಗವಾಗಿದ್ದಾರೆ.

ಈ ಬಾರಿಯ ಐಪಿಎಲ್  ಋತುವಿನಲ್ಲಿ ಪೃಥ್ವಿ ಶಾ ದಾಖಲೆಯ ಬಗ್ಗೆ ಹೇಳುವುದಾದರೆ, ಅವರು 9 ಪಂದ್ಯಗಳಲ್ಲಿ 259 ರನ್ ಗಳಿಸಿದ್ದಾರೆ. ಇವರ ಸರಾಸರಿ 28 ಆಗಿದೆ. ಅವರು ಎರಡು ಅರ್ಧ ಶತಕಗಳನ್ನು ಗಳಿಸಿದ್ದಾರೆ. ಪೃಥ್ವಿ ಶಾ ಪ್ರಸ್ತುತ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದು, ಅವರ ಫಿಟ್ ನೆಸ್ ಬಗ್ಗೆ ಹೆಚ್ಚಿನ ಚರ್ಚೆಗಳು ನಡೆದಿದ್ದವು.

2018ರಲ್ಲಿ ಟೀಮ್ ಇಂಡಿಯಾ ಪರವಾಗಿ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಅಡಿದ್ದ ಪೃಥ್ವಿ ಶಾ ಇಲ್ಲಿಯವರೆಗೂ ಐದು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಈ ಪಂದ್ಯಗಳಿಂದ 339 ರನ್ ಬಾರಿಸಿದ್ದಾರೆ. 6 ಏಕದಿನ ಪಂದ್ಯಗಳನ್ನೂ ಆಡಿದ್ದು 189 ರನ್ ಸಿಡಿಸಿದ್ದಾರೆ. ಐಪಿಎಲ್ ನಲ್ಲಿ ಆಡಿದ 62 ಪಂದ್ಯಗಳಿಂದ 1564 ರನ್ ಬಾರಿಸಿದ್ದಾರೆ. ಪೃಥ್ವಿ ಶಾ ಈವರೆಗೂ ಆಡಿರುವ ಐಪಿಎಲ್ ಋತುಗಳಿಂದ 12.30 ಕೋಟಿ ರೂಪಾಯಿ ವೇತನವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. 

IPL 2022 ಚೆನ್ನೈ ಸೂಪರ್ ಕಿಂಗ್ಸ್ ಗೆ 174 ರನ್ ಗುರಿ ನೀಡಿದ ಆರ್ ಸಿಬಿ

ಈಗಾಗಲೇ ಟೀಮ್ ಇಂಡಿಯಾದ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ರೋಹಿತ್‌ ಶರ್ಮ ಮುಂಬೈನಲ್ಲಿ ಐಷಾರಾಮಿ ಮನೆಗಳನ್ನು ಹೊಂದಿದ್ದಾರೆ. ಮಾಜಿ ಆಟಗಾರ ಎಂಎಸ್ ಧೋನಿ ಕೂಡ ಮುಂಬೈನಲ್ಲಿ ಆಸ್ತಿಯನ್ನು ಹೊಂದಿದ್ದಾರೆ. ಈಗ ಇವರ ಸಾಲಿಗೆ ಯುವ ಕ್ರಿಕೆಟಿಗರ ಪೃಥ್ವಿ ಶಾ ಕೂಡ ಸೇರಿಕೊಂಡಿದ್ದಾರೆ. ಬಾಂದ್ರಾವನ್ನು  'ಉಪನಗರಗಳ ರಾಣಿ' ಎಂದೂ ಕರೆಯಲಾಗುತ್ತದೆ. ದೇಶಗಳ ಅನೇಕ  ಪ್ರಸಿದ್ಧ ವ್ಯಕ್ತಿಗಳ ಮನೆಗಳು ಈ ಪ್ರದೇಶದಲ್ಲಿದೆ. 

Rinku Singh ಸಿಲಿಂಡರ್ ಸೆಲ್ಲರ್​ ಮಗ ಇಂದು IPLನ​ ಸೆನ್ಷೆಷನಲ್​ ಸ್ಟಾರ್​..!

ರಾಷ್ಟ್ರೀಯ ತಂಡಕ್ಕೆ ಮರಳುವ ಗುರಿಯನ್ನು ಉದಯೋನ್ಮುಖ ಆಟಗಾತ ಪೃಥ್ವಿ ಶಾ ಹೊಂದಿದ್ದಾರೆ. ಐಪಿಎಲ್ ನ  ಉಳಿದ ಪಂದ್ಯಗಳಲ್ಲಿ ಇರುವ ಅವಕಾಶಗಳನ್ನು ಹೆಚ್ಚು ಬಳಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಮೇ 5 ರಂದು ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್,  ಸನ್ ರೈಸರ್ಸ್ ಹೈದರಾಬಾದ್ ಅನ್ನು ಎದುರಿಸಲಿದೆ.

click me!