IPL 2022: ಕ್ಷೌರಿಕನ ಮಗ ಕುಲ್ದೀಪ್‌ ಸೆನ್‌ ಮಿಂಚು!

By Kannadaprabha NewsFirst Published Apr 12, 2022, 9:07 AM IST
Highlights

* ಐಪಿಎಲ್‌ನಲ್ಲಿ ಮಿಂಚುತ್ತಿದ್ದಾರೆ ರಾಜಸ್ಥಾನ ರಾಯಲ್ಸ್‌ನ ಕುಲ್ದೀಪ್ ಸೆನ್

* ಲಖನೌ ಎದುರಿನ ಪಂದ್ಯದಲ್ಲಿ ರಾಯಲ್ಸ್‌ಗೆ ಗೆಲುವು ತಂದಿತ್ತ ಕುಲ್ದೀಪ್

* ಐಪಿಎಲ್‌ನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಮಿಂಚಿದ ಸೆನ್‌

ಮುಂಬೈ(ಏ.12): ಪ್ರತಿ ಬಾರಿಯೂ ಹಲವು ಉದಯೋನ್ಮುಖ ಆಟಗಾರರನ್ನು ಬೆಳಕಿಗೆ ತರುವ ಐಪಿಎಲ್‌ನಲ್ಲಿ (IPL 2022) ಈ ವರ್ಷವೂ ಕೆಲ ಆಟಗಾರರು ಎಲ್ಲರ ಗಮನ ಸೆಳೆದಿದ್ದಾರೆ. ಭಾನುವಾರ ಲಖನೌ ಸೂಪರ್‌ ಜೈಂಟ್ಸ್‌(Lucknow Super Giants) ವಿರುದ್ಧದ ಪಂದ್ಯದ ಕೊನೆ ಓವರಲ್ಲಿ 15 ರನ್‌ ರಕ್ಷಿಸಿ ರಾಜಸ್ಥಾನ ರಾಯಲ್ಸ್‌ಗೆ ಗೆಲುವು ತಂದುಕೊಟ್ಟ ಕುಲ್ದೀಪ್‌ ಸೆನ್‌ (Kuldeep Sen) ಕೂಡಾ ಅವರಲ್ಲಿ ಒಬ್ಬರು.ಐಪಿಎಲ್‌ನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಮಿಂಚಿದ ಸೆನ್‌ ಮಧ್ಯಪ್ರದೇಶದ ಹರಿಹರಪುರ ಮೂಲದವರು. ಅವರ ತಂದೆ ಒಬ್ಬ ಕ್ಷೌರದ ಅಂಗಡಿ ಇಟ್ಟುಕೊಂಡಿದ್ದಾರೆ. 

ಬಡತನದ ಹೊರತಾಗಿಯೂ ಕುಲ್ದೀಪ್‌ರ ಪ್ರತಿಭೆಗೆ ನೀರೆರೆದು ಪೋಷಿಸಿದ ಅವರ ತಂದೆ, ಮಗ ಐಪಿಎಲ್‌ನ ಮೊದಲ ಪಂದ್ಯದಲ್ಲೇ ಆಕರ್ಷಕ ಪ್ರದರ್ಶನ ನೀಡುವುದು ತಮ್ಮ ಅಂಗಡಿಯಲ್ಲಿರುವ ಟೀವಿಯಲ್ಲೇ ನೋಡಿ ಖುಷಿಪಟ್ಟರು. ಆ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿವೆ. ದೇಸಿ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ತೋರುತ್ತ ಕೋಚ್‌ಗಳ ಗಮನ ಸೆಳೆದ ಸೆನ್‌, 2018ರಲ್ಲಿ ಮಧ್ಯಪ್ರದೇಶ ರಣಜಿ ತಂಡಕ್ಕೆ ಆಯ್ಕೆಯಾಗಿದ್ದರು.

Latest Videos

ಮೊದಲ ಪಂದ್ಯದಲ್ಲೇ 5 ವಿಕೆಟ್‌ ಕಿತ್ತ ಅವರು, ಆ ಋುತುವಿನಲ್ಲಿ 25 ವಿಕೆಟ್‌ ಕಬಳಿಸಿದ್ದರು. ಬ್ಯಾಟಿಂಗ್‌ನಲ್ಲೂ ಉಪಯುಕ್ತ ಕೊಡುಗೆ ನೀಡುವ ಅವರನ್ನು ಮೆಗಾ ಹರಾಜಿನಲ್ಲಿ ರಾಜಸ್ಥಾನ ತಂಡ 20 ಲಕ್ಷ ರು. ನೀಡಿ ಖರೀದಿಸಿತ್ತು. ಗಂಟೆಗೆ 135-140 ಕಿ.ಮೀ. ವೇಗದಲ್ಲಿ ಬೌಲ್‌ ಮಾಡುವ ಸೆನ್‌ಗೆ ಉತ್ತಮ ಭವಿಷ್ಯವಿದೆ ಎಂದು ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳು ಕೊಂಡಾಡಿದ್ದಾರೆ.

ಐಪಿಎಲ್‌ನಲ್ಲಿ 100 ಸಿಕ್ಸರ್‌ ಪೂರೈಸಿದ ಹಾರ್ದಿಕ್‌

ಮುಂಬೈ: ಗುಜರಾತ್‌ ಟೈಟಾನ್ಸ್‌ ನಾಯಕ ಹಾರ್ದಿಕ್‌ ಪಾಂಡ್ಯ (Hardik Pandya) ಐಪಿಎಲ್‌ನಲ್ಲಿ 100 ಸಿಕ್ಸರ್‌ ಪೂರೈಸಿದ್ದು, ಅತಿ ಕಡಿಮೆ ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪಿದ ಮೊದಲ ಭಾರತೀಯ ಎನ್ನುವ ದಾಖಲೆ ಬರೆದಿದ್ದಾರೆ. ಸನ್‌ರೈಸ​ರ್ಸ್‌ ಹೈದರಾಬಾದ್ (Sunrisers Hyderabad) ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ಗುಜರಾತ್‌ ನಾಯಕ ಹಾರ್ದಿಕ್‌ ಒಂದು ಸಿಕ್ಸರ್‌ ಬಾರಿಸಿದರು.

IPL 2022 ಸನ್ ರೈಸರ್ಸ್ ಗೆ ಭರ್ಜರಿ ಜಯ, ಮೊದಲ ಸೋಲು ಕಂಡ ಗುಜರಾತ್

ಇದು ಒಟ್ಟಾರೆ ಮೂರನೇ ವೇಗದ 100ನೇ ಸಿಕ್ಸರ್‌. ಹಾರ್ದಿಕ್‌ 96 ಪಂದ್ಯಗಳಲ್ಲಿ 1046 ಎಸೆತಗಳಲ್ಲಿ ಈ ಮೈಲಿಗಲ್ಲು ಸಾಧಿಸಿದ್ದು, ಆ್ಯಂಡ್ರೆ ರಸೆಲ್‌(657 ಎಸೆತ), ಕ್ರಿಸ್‌ ಗೇಲ್‌(943 ಎಸೆತ) ಈ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಲ್ಲಿದ್ದಾರೆ. ಇನ್ನು, ಹಾರ್ದಿಕ್‌ ಐಪಿಎಲ್‌ನಲ್ಲಿ ನಾಯಕರಾಗಿ ಮೊದಲ ಅರ್ಧಶತಕ ಬಾರಿಸಿದರು. ಬ್ಯಾಟಿಂಗ್‌ ಜೊತೆ ಬೌಲಿಂಗ್‌ನಲ್ಲೂ ಅವರು ಈ ಬಾರಿ ಸ್ಥಿರ ಪ್ರದರ್ಶನ ನೀಡುತ್ತಿದ್ದು, ಟೀಂ ಇಂಡಿಯಾದಲ್ಲಿ ಮರಳಿ ಸ್ಥಾನ ಗಿಟ್ಟಿಸಲು ಎದುರು ನೋಡುತ್ತಿದ್ದಾರೆ.

ಐಪಿಎಲ್‌: ಈ ಆವೃತ್ತಿಯ ವೇಗದ ಎಸೆತ ಬೌಲ್ ಮಾಡಿದ ಉಮ್ರಾನ್

ನವಿ ಮುಂಬೈ: ಸನ್‌ರೈಸರ್ಸ್‌ ಹೈದರಾಬಾದ್‌ ವೇಗಿ, ಜಮ್ಮು-ಕಾಶ್ಮೀರದ ಉಮ್ರಾನ್ ಮಲಿಕ್ 15ನೇ ಆವೃತ್ತಿಯ ಐಪಿಎಲ್‌ನಲ್ಲಿ ಅತಿ ವೇಗದ ಎಸೆತ ದಾಖಲಿಸಿದ್ದಾರೆ. ಸೋಮವಾರ ಗುಜರಾತ್ ಟೈಟಾನ್ಸ್ ವಿರುದ್ದದ ಪಂದ್ಯದ 15ನೇ ಓವರ್‌ನಲ್ಲಿ ಉಮ್ರಾನ್ ಮಲಿಕ್ ಗಂಟೆಗೆ 153.3 ಕಿಲೋ ಮೀಟರ್ ವೇಗದಲ್ಲಿ ಬೌಲ್ ಮಾಡಿ ಗಮನ ಸೆಳೆದಿದ್ದಾರೆ. ಇನ್ನು 2011ರಲ್ಲಿ ಆಸ್ಟ್ರೇಲಿಯಾದ ಶಾನ್ ಟೈಟ್ ಗಂಟೆಗೆ 157.7 ಕಿಲೋ ಮೀಟರ್ ವೇಗದಲ್ಲಿ ಬೌಲ್ ಮಾಡಿದ್ದು, ಐಪಿಎಲ್ ಇತಿಹಾಸದಲ್ಲಿ ಅತಿವೇಗದ ಎಸೆತ ಎನಿಸಿಕೊಂಡಿದೆ.

ಸನ್‌ರೈಸ​ರ್ಸ್‌ಗೆ 8 ವಿಕೆಟ್‌ ಜಯ: ಐಪಿಎಲ್‌ನಲ್ಲಿ ಗುಜರಾತ್‌ ಟೈಟಾನ್ಸ್‌ ಮೊದಲ ಸೋಲು ಕಂಡಿದೆ. ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆಡುತ್ತಿರುವ ಗುಜರಾತ್‌, ತನ್ನ ಮೊದಲ 3 ಪಂದ್ಯಗಳಲ್ಲಿ ಗೆದ್ದು ಸಂಭ್ರಮಿಸಿತ್ತು. ಆದರೆ ಗೆಲುವಿನ ಓಟಕ್ಕೆ ಸನ್‌ರೈಸರ್ಸ್‌ ಹೈದರಾಬಾದ್‌ ಅಡ್ಡಿಯಾಗಿದೆ. 8 ವಿಕೆಟ್‌ಗಳ ಜಯ ಸಾಧಿಸಿದ ಸನ್‌ರೈಸ​ರ್ಸ್ಸ್‌, ತನ್ನ ಲಯ ಕಾಯ್ದುಕೊಂಡಿದೆ.

click me!