* 15ನೇ ಆವೃತ್ತಿಯ ಐಪಿಎಲ್ ಮೇಲೆ ಕೊರೋನಾ ವೈರಸ್ ಕೆಂಗಣ್ಣು
* ಐಪಿಎಲ್ ಪ್ಲಾನ್ 'ಬಿ' ಮೇಲೆ ಕಣ್ಣಿಟ್ಟ ಬಿಸಿಸಿಐ
* ಇಡೀ ಐಪಿಎಲ್ ಟೂರ್ನಿ ಮುಂಬೈನಲ್ಲೇ ನಡೆಯುವ ಸಾಧ್ಯತೆ
ನವದೆಹಲಿ(ಜ.08): ಕಳೆದೆರಡು ಆವೃತ್ತಿಗಳಂತೆಯೇ ಈ ಬಾರಿಯೂ ಐಪಿಎಲ್‌ಗೆ (Indian Premier League) ಕೊರೋನಾ ಸೋಂಕಿನ ಭೀತಿ ಎದುರಾಗಿದೆ. 15ನೇ ಆವೃತ್ತಿಯ ಐಪಿಎಲ್ (IPL 2022) ಭಾರತದಲ್ಲೇ ನಡೆಸಬೇಕು ಎಂದು ಪಟ್ಟು ಹಿಡಿದಿರುವ ಬಿಸಿಸಿಐಗೆ (BCCI) ಈಗ ಹಲವು ಸವಾಲುಗಳು ಎದುರಾಗಿದ್ದು, ಇಡೀ ಟೂರ್ನಿಯನ್ನು ಮುಂಬೈನಲ್ಲಿ ಆಯೋಜಿಸಲು ಚಿಂತನೆ ನಡೆಸಿದೆ ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. 2020ರಲ್ಲಿ ಕೋವಿಡ್ (Coronavirus) ಕಾರಣದಿಂದ ಐಪಿಎಲ್ ಯುಎಇಯಲ್ಲಿ ನಡೆದಿತ್ತು.
2021ರ ಟೂರ್ನಿಯನ್ನು ಭಾರತದಲ್ಲೇ ಆರಂಭಿಸಿದ್ದರೂ ಬಯೋಬಬಲ್‌ನಲ್ಲಿ (Bio-Bubble) ಕೋವಿಡ್ ಪತ್ತೆಯಾದ ಕಾರಣ ಟೂರ್ನಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸಿ, ಬಳಿಕ ಶಾರ್ಜಾ, ದುಬೈ, ಅಬುಧಾಬಿಯಲ್ಲಿ ಪಂದ್ಯಾವಳಿ ಪೂರ್ತಿಗೊಳಿಸಲಾಗಿತ್ತು. ಆದರೆ 10 ತಂಡಗಳು ಪಾಲ್ಗೊಳ್ಳುವ 15ನೇ ಆವೃತ್ತಿಯ ಐಪಿಎಲ್ ವಿದೇಶಗಳಲ್ಲಿ ನಡೆಸುವ ಬದಲು ಭಾರತದಲ್ಲೇ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಕೂಡಾ ಭಾರತದಲ್ಲೇ ಟೂರ್ನಿ ನಡೆಸುತ್ತೇವೆಂದು ಹಲವು ಬಾರಿ ಹೇಳಿಕೆ ನೀಡಿದ್ದಾರೆ.
ಆದರೆ ಸದ್ಯ ಕೋವಿಡ್ ದೇಶದಲ್ಲಿ ಏರಿಕೆಯಾಗುತ್ತಿರುವುದು ಬಿಸಿಸಿಐ ತಲೆನೋವಿಗೆ ಕಾರಣವಾಗಿದೆ. ವಿವಿಧ ನಗರಗಳಿಗೆ ಪ್ರವೇಶಿಸಲು ಪ್ರಯಾಣ ನಿರ್ಬಂಧ, ಬಯೋಬಬಲ್, ಕ್ವಾರಂಟೈನ್ ಸಮಸ್ಯೆ ಎದುರಾಗುವ ಕಾರಣ ಇಡೀ ಟೂರ್ನಿಯನ್ನು ಮುಂಬೈನಲ್ಲಿ ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ. ಇನ್ನು ಒಂದೇ ದಿನ ಎರಡು ಪಂದ್ಯಗಳನ್ನು ಹೆಚ್ಚು ಬಾರಿ ನಡೆಸುವುದನ್ನು ತಪ್ಪಿಸಲು ಬಿಸಿಸಿಐ ಒಂದು ವಾರ ಮುಂಚಿತವಾಗಿ ಟೂರ್ನಿ ಆರಂಭಿಸಲು ಯೋಜನೆ ರೂಪಿಸುತ್ತಿದೆ. ಏಪ್ರಿಲ್ 2ರಂದು ಟೂರ್ನಿ ಆರಂಭಿಸಲು ಬಿಸಿಸಿಐ ಉದ್ದೇಶಿಸಿತ್ತು ಎನ್ನಲಾಗಿದ್ದು, ಅದರ ಬದಲು ಮಾ.25ಕ್ಕೇ ಪಂದ್ಯಾವಳಿಗೆ ಚಾಲನೆ ಸಿಗಬಹುದು ಎನ್ನಲಾಗುತ್ತಿದೆ. ಮೇ 25ಕ್ಕೆ ಫೈನಲ್ ನಿಗದಿಯಾಗುವ ನಿರೀಕ್ಷೆ ಇದೆ.
ಮುಂಬೈನಲ್ಲಿ ಆಯೋಜನೆ ಹೇಗೆ?
ಮುಂಬೈನಲ್ಲಿ 3 ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಗಳಿವೆ. ವಾಂಖೇಡೆ, ಬ್ರಾಬೋನ್ ಹಾಗೂ ಡಿ.ವೈ.ಪಾಟೀಲ್ ಕ್ರೀಡಾಂಗಣಗಳು ಐಪಿಎಲ್ ಪಂದ್ಯಗಳಿಗೆ ಆತಿಥ್ಯ ವಹಿಸಬಹುದು. ಅಗತ್ಯವಿದ್ದರೆ ಪುಣೆ ಸ್ಟೇಡಿಯಂನಲ್ಲೂ ಕೆಲ ಪಂದ್ಯಗಳನ್ನು ನಡೆಸಬಹುದು. ಮುಂಬೈನಿಂದ ಪುಣೆಗೆ ರಸ್ತೆ ಮಾರ್ಗದಲ್ಲಿ ಪ್ರಯಾಣಿಸಬಹುದು. ಅಲ್ಲದೇ 10 ತಂಡಗಳಿಗೆ ಉಳಿದುಕೊಳ್ಳಲು ಹೋಟೆಲ್‌ಗಳ ಕೊರತೆಯೂ ಇಲ್ಲ. ಹೀಗಾಗಿ ಬಿಸಿಸಿಐ ಮುಂಬೈನಲ್ಲಿ ಆಯೋಜಿಸಬಹುದು ಎನ್ನಲಾಗುತ್ತಿದೆ.
IPL 2022: ಕೊನೆಗೂ ಸನ್‌ರೈಸರ್ಸ್ ವಿರುದ್ದ ಬೇಸರ ಹೊರಹಾಕಿದ ಡೇವಿಡ್ ವಾರ್ನರ್..!
ಕೊರೋನಾ ಸೋಂಕು: ಬಿಸಿಸಿಐ ಕಚೇರಿ 3 ದಿನ ಬಂದ್
ಮುಂಬೈ: ಸಿಬ್ಬಂದಿಯಲ್ಲಿ ಕೊರೋನಾ ದೃಢಪಟ್ಟ ಕಾರಣ ಶುಕ್ರವಾರ ಮುಂಬೈನ ವಾಂಖೇಡೆ ಕ್ರೀಡಾಂಗಣದ ಆವರಣದಲ್ಲಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪ್ರಧಾನ ಕಚೇರಿಯನ್ನು ಮುಚ್ಚಲಾಗಿದೆ. ಮಂಡಳಿಯ ಮೂವರಲ್ಲಿ ಸೋಂಕು ಪತ್ತೆಯಾಗಿದ್ದು, ಹೀಗಾಗಿ 3 ದಿನಗಳ ಕಾಲ ಕಚೇರಿ ಮುಚ್ಚಲಾಗುತ್ತದೆ ಎಂದು ಮಾಹಿತಿ ನೀಡಿದೆ. ಇನ್ನು, ಬಿಸಿಸಿಐ ಕಚೇರಿ ಇರುವ ಕಟ್ಟಡದಲ್ಲೇ ಇರುವ ಮುಂಬೈ ಕ್ರಿಕೆಟ್ ಸಂಸ್ಥೆ(ಎಂಸಿಎ)ಯ ಕಚೇರಿಯ 15 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 3 ದಿನಕ್ಕೆ ಬಂದ್ ಮಾಡಲಾಗಿದೆ.
ಬೆಂಗಳೂರು ಸಾಯ್‌ನಲ್ಲಿ 35 ಕ್ರೀಡಾಳುಗಳಿಗೆ ಸೋಂಕು
ಬೆಂಗಳೂರು: ಬೆಂಗಳೂರಿನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್) ಕೇಂದ್ರದಲ್ಲಿರುವ 35 ಕ್ರೀಡಾಪಟುಗಳಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದರ ಬೆನ್ನಲ್ಲೇ ವೈದ್ಯರ ಸಮಿತಿಯೊಂದನ್ನು ರಚಿಸಲಾಗಿದ್ದು, ಕ್ರೀಡಾಪಟುಗಳ ಮೇಲೆ ನಿಗಾ ಇಡಲಿದೆ. ವಿವಿಧ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದ 175 ಕ್ರೀಡಾಪಟುಗಳು, 35 ಕೋಚ್‌ಗಳಿಗೆ ರ‍್ಯಾಂಡಮ್ ಪರೀಕ್ಷೆ ನಡೆಸಲಾಗಿತ್ತು. ಈ ಪೈಕಿ 35 ಕ್ರೀಡಾಳುಗಳಲ್ಲಿ ಸೋಂಕು ಪತ್ತೆಯಾಗಿದೆ ಎಂದು ಗೊತ್ತಾಗಿದೆ. ಎಲ್ಲರನ್ನೂ ಐಸೋಲೇಸನ್‌ಗೆ ಒಳಪಡಿಸಲಾಗಿದ್ದು, ನೆಗೆಟಿವ್ ಬಂದ ಕ್ರೀಡಾಪಟುಗಳಿಗೆ ರಾಷ್ಟ್ರೀಯ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಸಾಯ್ ಅನುಮತಿ ನೀಡಿದೆ.